ಮಂಡ್ಯ: ರಾಜ್ಯಪಾಲರಿಗೆ ಸಲ್ಲಿಕೆಯಾದ ಪತ್ರದಲ್ಲಿ ಸಹಿ ಮಾಡಿರುವ ಏಳು ಅಧಿಕಾರಿಗಳು ನಮ್ಮ ಇಲಾಖೆಯವರಲ್ಲ. ಅವರ ನಂಬರ್ ಹಾಗೂ ವಿಳಾಸ ಸಿಕ್ಕಿಲ್ಲ. ಗವರ್ನರ್ ಆಫೀಸ್‌ಗೆ ಪತ್ರ ಹೇಗೆ ಬಂತು ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಸಹಿ ಒಂದೇ ಪೆನ್‌ನಲ್ಲಿ ಒಂದೇ ರೀತಿಯಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ನಾನೇ ಬರೆದು ಸಹಿ ಮಾಡಿ ಕಳುಹಿಸಿದ್ದೇನೆ ಎಂದರೆ ಒಪ್ಪಬಹುದು. ಐದು ಸಹಿ ನಾನೇ ಮಾಡಿದ್ದೀನಿ ಎಂದು ಎಚ್‌ಡಿಕೆ ಒಪ್ಪಿಕೊಳ್ಳಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದರು.
ಲಂಚಕ್ಕೆ ಬೇಡಿಕೆ ಆರೋಪ ಮಾಡಿ ರಾಜ್ಯಪಾಲರಿಗೆ ಪತ್ರ ವಿಚಾರಕ್ಕೆ ನಾಗಮಂಗಲದಲ್ಲಿ ಪ್ರತಿಕ್ರಿಯಿಸಿರುವ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು, ಕುಮಾರಸ್ವಾಮಿಗೆ ಕನಿಷ್ಠ ಸೌಜನ್ಯ, ಜ್ಞಾನ ಹಾಗೂ ತಿಳಿವಳಿಕೆ ಇರಬೇಕು. ಮಂಡ್ಯ ಜಿಲ್ಲೆಯನ್ನು ಅವರು ದತ್ತು ತೆಗೆದುಕೊಂಡಿದ್ದಾರಾ? ಅವರು ಒಕ್ಕಲಿಗರ ಬೆಳವಣಿಗೆ ಸಹಿಸಲ್ಲವೋ, ಇನ್ನೊಬ್ಬರ ಜಾತಿ ಸಹಿಸಲ್ಲವೋ ಅವರಿಗೆ ಬಿಟ್ಟದ್ದು. ಅವರ ಬೆದರಿಕೆಗಳಿಗೆ ಇಲ್ಲಿ ಯಾರೂ ಹೆದರಿಕೊಳ್ಳುವವರಿಲ್ಲ ಎಂದು ತಿಳಿಸಿದರು.
ಇದನ್ನೂ ಓದಿ | Minister Chaluvarayaswamy: ಲಂಚದ ಸುಳಿಯಲ್ಲಿ ಸಚಿವ ಚೆಲುವರಾಯ ಸ್ವಾಮಿ; ಕೃಷಿ ಅಧಿಕಾರಿಗಳಿಂದಲೇ ರಾಜ್ಯಪಾಲರಿಗೇ ದೂರು
ಸಚಿವರ ವಿರುದ್ಧ ಸುಳ್ಳು ದೂರು ಎಂದು ಆಕ್ರೋಶ; ಮಂಡ್ಯದಲ್ಲಿ ಕಾಂಗ್ರೆಸ್ ಪ್ರತಿಭಟನೆ
ರಾಜ್ಯಪಾಲರಿಗೆ ಕೃಷಿ ಅಧಿಕಾರಿಗಳ ಹೆಸರಿನಲ್ಲಿ ಸಚಿವ ಚಲುವರಾಯಸ್ವಾಮಿ ವಿರುದ್ಧ ನಕಲಿ ದೂರು ನೀಡಲಾಗಿದೆ. ನಕಲಿ ದೂಡಿನ ಪತ್ರ ಸಲ್ಲಿಸಿದವರನ್ನು ಪತ್ತೆ ಹಚ್ಚಿ ಕಿಡಿಗೇಡಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕರಿಂದ 6ರಿಂದ 8 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ವಿರುದ್ಧ ಸುಳ್ಳು ಆರೋಪ ಮಾಡಲಾಗುತ್ತಿದೆ. ಸಚಿವರ ಏಳಿಗೆ ಸಹಿಸಲು ಸಾಧ್ಯವಾಗದೆ ಕೆಲವರು ರಾಜ್ಯಪಾಲರಿಗೆ ನಕಲಿ ಪತ್ರ ಬರೆದು ಲಂಚದ ಆರೋಪ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದರು. ಮಹಿಳೆಯರು ಪೊರಕೆ ಹಿಡಿದು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚ ಆರೋಪ; ಸಿಐಡಿ ತನಿಖೆಗೆ ನಿರ್ಧಾರ
ಬೆಂಗಳೂರು: ಕೃಷಿ ಸಚಿವ ಚಲುವರಾಯಸ್ವಾಮಿ (Minister Chaluvarayaswamy) ಅವರು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಸ್ವತಃ ಕೃಷಿ ಇಲಾಖೆಯ ಅಧಿಕಾರಿಗಳು (Agriculture department officers) ನೇರವಾಗಿ ರಾಜ್ಯಪಾಲರಿಗೇ ದೂರು (Complaint to Governor) ನೀಡಿದ್ದಾರೆನ್ನಲಾದ ಪ್ರಕರಣವನ್ನು ಸಿಐಡಿ ತನಿಖೆಗೆ (CID Investigation) ಒಪ್ಪಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಈ ಸಂಬಂಧ ಮುಖ್ಯಮಂತ್ರಿಯವರು ಸೂಚನೆ ನೀಡಿದ್ದಾರೆ.
ಮಂಡ್ಯ ಜಿಲ್ಲೆ ಕೃಷಿ ಅಧಿಕಾರಿಗಳು ಕೃಷಿ ಸಚಿವರ ವಿರುದ್ಧ ಬರೆದಿದ್ದಾರೆನ್ನಲಾದ ಪತ್ರದ ಕುರಿತು ಗೃಹ ಸಚಿವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚರ್ಚೆ ನಡೆಸಿದ್ದಾರೆ. ಬಳಿಕ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವ ನಿರ್ಧಾರಕ್ಕೆ ಸಿಎಂ ಬಂದಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ | DK Shivakumar : ಡಿಕೆಶಿ ಮೇಲೆ ಬಿಬಿಎಂಪಿ ಕಮಿಷನ್ ಆರೋಪ; ಅಜ್ಜಯ್ಯನ ಮೇಲೆ ಪ್ರಮಾಣಕ್ಕೆ ಸವಾಲು
ಏನಿದು ದೂರು?
ಮಂಡ್ಯ ಜಿಲ್ಲೆಯ 7 ಸಹಾಯಕ ಕೃಷಿ ನಿರ್ದೇಶಕರು ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿದ್ದಾರೆ ಎಂದು ಹೇಳಲಾಗಿತ್ತು. ಕೃಷಿ ಸಚಿವರು 6 ರಿಂದ 8 ಲಕ್ಷ ರೂ. ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಅವರ ಕಿರಿಕಿರಿ ಸಹಿಸಲು ಸಾಧ್ಯವಾಗುತ್ತಿಲ್ಲ ಎಂದು ನೇರವಾಗಿ ರಾಜ್ಯಪಾಲರಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿತ್ತು. ಈ ರೀತಿ ಅಧಿಕಾರಿಗಳೇ ನೇರವಾಗಿ ರಾಜಭವನಕ್ಕೆ ದೂರು ಸಲ್ಲಿಸಿರುವುದು ಅತ್ಯಂತ ವಿಶೇಷವಾಗಿದೆ. ಅಷ್ಟೇ ಅಲ್ಲ, ಲಂಚದ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕದಿದ್ದರೆ ಅಧಿಕಾರಿಗಳು ಕುಟುಂಬ ಸಮೇತ ವಿಷ ಕುಡಿಯುವುದಾಗಿ ದೂರಿನಲ್ಲಿ ಹೇಳಲಾಗಿತ್ತು
ರಾಜಭವನದಿಂದ ಸರ್ಕಾರಕ್ಕೆ ಪತ್ರ
ರಾಜಭವನವು ಈ ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ್ದು, ರಾಜ್ಯಪಾಲರ ಕಚೇರಿಯಿಂದ ಸರ್ಕಾರಕ್ಕೆ ಈ ಬಗ್ಗೆ ಪತ್ರ ಬರೆಯಲಾಗಿದೆ. ರಾಜ್ಯಪಾಲರ ಅಧೀನ ಕಾರ್ಯದರ್ಶಿಗಳು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಈ ಪತ್ರದ ಬಗ್ಗೆ ಕ್ರಮವಹಿಸುವಂತೆ ಸೂಚಿಸಲಾಗಿತ್ತು.