ಬೆಂಗಳೂರು: ರಾಜ್ಯ ವಿಧಾನಸಭೆಯಲ್ಲಿ (Legislative assembly) ಬುಧವಾರ 10 ಮಂದಿ ಬಿಜೆಪಿ ಶಾಸಕರನ್ನು ಅಮಾನತು (BJP MLAs Suspension) ಮಾಡಿದ್ದು, ಅವರನ್ನು ಅಮಾನುಷವಾಗಿ ಎತ್ತಿ ಹೊರಗೆ ಹಾಕಿದ್ದು ಮತ್ತು ಇದಕ್ಕೆ ಕಾರಣವಾದ ಘಟನಾವಳಿಗಳ ವಿವರದೊಂದಿಗೆ ಭಾರತೀಯ ಜನತಾ ಪಕ್ಷ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ (Governor Thavarchand gehlot) ಅವರಿಗೆ ದೂರು ನೀಡಿದೆ. ಇದಕ್ಕೆ ಜೆಡಿಎಸ್ ಕೂಡಾ ಬೆಂಬಲ ನೀಡಿದೆ. ಆದರೆ, ಅಚ್ಚರಿ ಎಂದರೆ ಬಿಜೆಪಿಯ ಲೆಟರ್ ಹೆಡ್‌ನಲ್ಲಿ ನೀಡಲಾಗಿರುವ ಈ ದೂರಿನಲ್ಲಿ ಮೊದಲ ಸಹಿ (HD Kumaraswamy signature in BJP Letterhead) ಇರುವುದೇ ಜೆಡಿಎಸ್ ಶಾಸಕಾಂಗ ಪಕ್ಷ ನಾಯಕ ಎಚ್.ಡಿ ಕುಮಾರಸ್ವಾಮಿ (HD Kumaraswamy) ಅವರದ್ದು. ಹಾಗಿದ್ದರೆ ಕುಮಾರಸ್ವಾಮಿ ಅವರು ಬಿಜೆಪಿ ಸೇರಿಯೇ ಬಿಟ್ರಾ ಎಂಬ ಕುತೂಹಕಾರಿ ಚರ್ಚೆ ನಡೆಯುತ್ತಿದೆ.
ಇತ್ತೀಚೆಗೆ ನಡೆದ ವಿಪಕ್ಷಗಳ ಮೈತ್ರಿ ಕೂಟದ ಸಭೆಗೆ ಬಂದಿದ್ದ ರಾಷ್ಟ್ರ ಮಟ್ಟದ ರಾಜಕಾರಣಿಗಳನ್ನು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿ ಕರೆತಂದು ಅವರ ದೇಖರೇಖಿಗಳನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಕೆಲವು ಐಎಎಸ್ ಅಧಿಕಾರಿಗಳಿಗೆ ವಹಿಸಿದ್ದು ಶಿಷ್ಟಾಚಾರದ ಉಲ್ಲಂಘನೆ ಎಂದು ಬಿಜೆಪಿ ಮತ್ತು ಜೆಡಿಎಸ್ ಎರಡೂ ಪಕ್ಷಗಳು ಆರೋಪಿಸಿದ್ದವು. ಬುಧವಾರ ವಿಧಾನಭೆಯಲ್ಲಿ ಇದರ ಬಗ್ಗೆ ಚರ್ಚೆ ನಡೆಯುತ್ತಿದ್ದ ವೇಳೆ ಆಕ್ರೋಶಗೊಂಡ ಬಿಜೆಪಿ ಸದಸ್ಯರು ತಮ್ಮ ಕೈಯಲ್ಲಿದ್ದ ವಿಧೇಯಕಗಳ ಪ್ರತಿಯನ್ನು ಹರಿದು ಪೇಪರ್ ಚೂರುಗಳನ್ನು ಸ್ಪೀಕರ್ ಅವರತ್ತ ಎಸೆದಿದ್ದರು. ಇದು ಸ್ಪೀಕರ್ ಸ್ಥಾನದಲ್ಲಿದ್ದ ಉಪ ಸ್ಪೀಕರ್ ರುದ್ರಪ್ಪ ಲಮಾಣಿ ಅವರಿಗೆ ತಾಕಿತ್ತು. ಇದು ಸ್ಪೀಕರ್ ಸ್ಥಾನಕ್ಕೆ ಮಾಡಿದ ಅಪಮಾನ ಎಂದು ಪರಿಗಣಿಸಿದ ಸ್ಪೀಕರ್ ಯು.ಟಿ. ಖಾದರ್ ಅವರು ಬಿಜೆಪಿಯ 10 ಮಂದಿ ಶಾಸಕರನ್ನು ಅಮಾನತುಗೊಳಿಸಿದ್ದರು. ಈ ಹಂತದಲ್ಲಿ ಅಮಾನತುಗೊಂಡ ಶಾಸಕರನ್ನು ಮಾರ್ಷಲ್‌ಗಳು ಎತ್ತಿಕೊಂಡು ಹೋಗಿ ಹೊರಗೆ ಹೋಗಿದ್ದರು. ಆಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಅವರಿಗೆ ಸ್ವಲ್ಪ ಆರೋಗ್ಯ ಸಮಸ್ಯೆಯೂ ಉಂಟಾಗಿತ್ತು.
ಇದಾದ ಬಳಿಕ ಬಿಜೆಪಿ ಮತ್ತು ಜೆಡಿಎಸ್‌ಗಳು ಸೇರಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿವೆ. ಗುರುವಾರ ಬೆಳಗ್ಗೆ ಗಾಂಧಿ ಪ್ರತಿಮೆಯ ಮುಂದೆ ಬಿಜೆಪಿಯ ಪ್ರತಿಭಟನೆ ನಡೆದಿತ್ತು. ಅಲ್ಲಿಗೆ ಆಗಮಿಸಿದ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ತಮ್ಮ ಬೆಂಬಲ ಸಾರಿದರು. ಇದಾದ ಬಳಿಕ ಅವರೆಲ್ಲರೂ ಜತೆಯಾಗಿ ರಾಜಭವನಕ್ಕೆ ತೆರಳಿದರು. ಅಲ್ಲಿ ಬಿಜೆಪಿ ಶಾಸಕರ ಜತೆಗೆ ನಿಂತುಕೊಂಡೇ ಎಚ್.ಡಿ ಕುಮಾರಸ್ವಾಮಿ ಅವರು ಕೂಡಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಇದ್ಯಾವುದೂ ವಿಶೇಷ ಅವನಿಸಲಿಲ್ಲ. ಆದರೆ, ಅಚ್ಚರಿಯಾಗಿ ಕಂಡ ಅಂಶವೇನೆಂದರೆ ಬಿಜೆಪಿಯ ಲೆಟರ್ ಹೆಡ್‌ನಲ್ಲಿ ಸಲ್ಲಿಸಲಾಗಿರುವ ಈ ಮನವಿ ಪತ್ರದಲ್ಲಿ ಮೊದಲ ಹೆಸರಿರುವುದೇ ಜೆಡಿಎಸ್ ನಾಯಕ, ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರದ್ದು. ಅದಾದ ಬಳಿಕ ಆರ್. ಅಶೋಕ್, ಬಸವರಾಜ ಬೊಮ್ಮಾಯಿ ಅವರು ಸಹಿ ಮಾಡಿದ್ದಾರೆ.
ವಿಪಕ್ಷ ನಾಯಕ ಕುಮಾರಸ್ವಾಮಿ ಎಂಬ ಗುಸುಗುಸು
ರಾಜ್ಯದಲ್ಲಿ ಬಿಜೆಪಿ ಅಧಿಕೃತ ವಿರೋಧ ಪಕ್ಷವಾಗಿದ್ದರೂ ಇನ್ನೂ ವಿರೋಧ ಪಕ್ಷದ ನಾಯಕನ ಆಯ್ಕೆ ಮಾಡಿಲ್ಲ. ಕೇಂದ್ರದ ನಾಯಕರು ಯಾವುದೋ ಒಂದು ಬೆಳವಣಿಗೆಗಾಗಿ ಕಾಯುತ್ತಿದ್ದಾರೆ ಎಂಬ ಸುದ್ದಿಯೂ ಹರಡಿದೆ. ಈ ನಡುವೆ ಕುಮಾರಸ್ವಾಮಿ ಅವರೇ ವಿರೋಧ ಪಕ್ಷದ ನಾಯಕನಂತೆ ಹೊಸ ಹೊಸ ವಿಚಾರಗಳನ್ನು ಎತ್ತುತ್ತಿದ್ದಾರೆ. ಬಿಜೆಪಿ ಅದನ್ನು ಬೆಂಬಲಿಸುತ್ತಿದೆ.
ಎಚ್.ಡಿ ಕುಮಾರಸ್ವಾಮಿ ಅವರು ಶೀಘ್ರವೇ ಬಿಜೆಪಿ ಸೇರಲಿದ್ದಾರೆ/ ಜೆಡಿಎಸ್- ಬಿಜೆಪಿ ವಿಲೀನವಾಗಲಿದೆ/ ಏನೂ ಆಗದಿದ್ದರೆ ಹೊಂದಾಣಿಕೆಯಂತೂ ಆಗುತ್ತದೆ ಎಂಬೆಲ್ಲ ಸುದ್ದಿಗಳು ಹರಿದಾಡುತ್ತಿರುವ ನಡುವೆ ಕುಮಾರಸ್ವಾಮಿ ಅವರ ಸಹಿ ಚರ್ಚೆಗೆ ಕಾರಣವಾಗಿದೆ.
ಹಾಗಂತ ಕುಮಾರಸ್ವಾಮಿ ಅವರು ಈ ಯಾವ ವಿಚಾರಗಳನ್ನು ಮುಚ್ಚಿಟ್ಟಿಲ್ಲ. ಏನೋ ಒಂದು ನಡೆಯುತ್ತಿದೆ ಎಂಬುದನ್ನು ಸೂಚ್ಯವಾಗಿ ಹೇಳುತ್ತಲೇ ಅವರು ಅಡ್ಡಗೋಡೆಯ ಮೇಲೆ ದೀಪವಿಡುತ್ತಿದ್ದಾರೆ. ಆದರೆ, ಇವತ್ತು ಬಿಜೆಪಿ ಲೆಟರ್‌ಹೆಡ್‌ನಲ್ಲಿ ಸಹಿ ಹಾಕಿರುವುದು ನೋಡಿದರೆ ಇದು ಬಿಜೆಪಿ ಸೇರ್ಪಡೆಗೆ ಹಾಕಿದ ಒಪ್ಪಿಗೆಯ ಸಹಿ ಇರಬಹುದು ಎಂಬ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ: Speaker UT Khader : ಬಿಜೆಪಿ ದೂರಿಗೆ ಮುನ್ನವೇ ಖಾದರ್ ಅಲರ್ಟ್: ರಾಜ್ಯಪಾಲರಿಗೆ ಅಮಾನತು ವರದಿ ಸಲ್ಲಿಕೆ