ಮೈಸೂರು: ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ (Prajwal Revanna Case) ಸಿಲುಕಿರುವ ಪ್ರಜ್ವಲ್ ರೇವಣ್ಣ 33 ದಿನಗಳ ಬಳಿಕ ಭಾರತಕ್ಕೆ ಬರುತ್ತಿದ್ದಾರೆ. ಜರ್ಮನಿಯ ಮ್ಯೂನಿಕ್‌ನಿಂದ ಪ್ರಜ್ವಲ್ ಬೆಂಗಳೂರಿಗೆ ಆಗಮಿಸುತ್ತಿದ್ದು, ವಿಮಾನ ನಿಲ್ದಾಣದಲ್ಲಿಯೇ ಅವರನ್ನು ಬಂಧಿಸಲು ಎಸ್‌ಐಟಿ ಅಧಿಕಾರಿಗಳು ಸಿದ್ಧರಾಗಿದ್ದಾರೆ. ಇದರ ಬೆನ್ನಲ್ಲೇ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಅಂತರ ಕಾಯ್ದುಕೊಂಡಿದ್ದಾರೆ. ಕುಟುಂಬಸ್ಥರ ಜತೆ ಅವರು ಕಬಿನಿಯಲ್ಲಿ ಬೋಟಿಂಗ್ ತೆರಳಿರುವ ವಿಡಿಯೊ ಈಗ ಲಭ್ಯವಾಗಿದೆ.
ಹೌದು, ಪೆನ್‌ಡ್ರೈವ್ ತಲೆಬಿಸಿಯ ಮಧ್ಯೆಯೇ ಎಚ್.ಡಿ.ಕುಮಾರಸ್ವಾಮಿ ಅವರು ಪತ್ನಿ ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಕುಮಾರಸ್ವಾಮಿ, ಸೊಸೆ ರೇವತಿ ಹಾಗೂ ಮೊಮ್ಮಗ ಅವ್ಯಾನ್ ಜತೆಗೂಡಿ ಕಬಿನಿಯ ಜಂಗಲ್ ಲಾಡ್ಜ್‌ಗೆ ತೆರಳಿದ್ದಾರೆ. ಕುಟುಂಬಸ್ಥರ ಜತೆಗೂಡಿ ಕುಮಾರಸ್ವಾಮಿ ಅವರು ಬೋಟಿಂಗ್ ಹೋಗಿರುವ ವಿಡಿಯೊ ಲಭ್ಯವಾಗಿದೆ. ಇನ್ನು, ಗುರುವಾರ ರಾತ್ರಿ ಕಬಿನಿಯ ರೆಸಾರ್ಟ್‌ನಲ್ಲಿಯೇ ಕುಮಾರಸ್ವಾಮಿ ಉಳಿಯಲಿದ್ದಾರೆ ಎಂದು ತಿಳಿದುಬಂದಿದೆ. ಗುರುವಾರ ತಡರಾತ್ರಿ ಪ್ರಜ್ವಲ್ ರೇವಣ್ಣ ಭಾರತಕ್ಕೆ ಆಗಮಿಸುತ್ತಿದ್ದು, ಮುಜುಗರದಿಂದ ತಪ್ಪಿಸಿಕೊಳ್ಳಲು ಕುಮಾರಸ್ವಾಮಿ ಅವರು ರೆಸಾರ್ಟ್‌ಗೆ ತೆರಳಿದ್ದಾರೆ ಎನ್ನಲಾಗಿದೆ.
ಏರ್‌ಪೋರ್ಟ್‌ಗೆ ಎಸ್‌ಐಟಿ ಅಧಿಕಾರಿಗಳ ಲಗ್ಗೆ
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಈಗಾಗಲೇ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ಇಮಿಗ್ರೇಷನ್ ಡೆಸ್ಕ್ ಬಳಿ ಎಸ್‌ಐಟಿ ಅಧಿಕಾರಿಗಳು ತೆರಳಿದ್ದಾರೆ. ವಿಮಾನ ಲ್ಯಾಂಡಿಂಗ್ ಕುರಿತು, ವಿಮಾನದಲ್ಲಿ ಯಾರಿದ್ದಾರೆ ಎಂಬುದು ಸೇರಿ ವಿವಿಧ ಮಾಹಿತಿಯನ್ನು ಎಸ್‌ಐಟಿ ಅಧಿಕಾರಿಗಳು ಪಡೆಯುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಲೇ ಅವರ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಇಮಿಗ್ರೇಷನ್ ಅಧಿಕಾರಿಗಳು ಸ್ಟ್ಯಾಂಪ್ ಹಾಕುತ್ತಾರೆ. ಸ್ಟ್ಯಾಂಪ್ ಹಾಕಿ, ಪರಿಶೀಲನೆ ಮುಗಿದ ಬಳಿಕವೇ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಅವರನ್ನು ವಶಕ್ಕೆ ಪಡೆಯಲಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜ್ವಲ್ ಕರೆದೊಯ್ಯಲು ಎಸ್‌ಐಟಿ 4 ಪ್ಲಾನ್
ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸುತ್ತಲೇ ಮಹಿಳೆಯರ ಪ್ರತಿಭಟನೆ, ಬೆಂಬಲಿಗರ ಘೋಷಣೆ, ಪತ್ರಕರ್ತರು ಹಾಗೂ ವಕೀಲರ ಕಣ್ತಪ್ಪಿಸಿ ಕರೆದುಕೊಂಡು ಹೋಗಲು ಎಸ್‌ಐಟಿ 4 ಪ್ಲಾನ್ ಮಾಡಿದೆ ಎಂದು ತಿಳಿದುಬಂದಿದೆ. ಟರ್ಮಿನಲ್ 2 ಆಗಮನದ ಗೇಟ್, ಟರ್ಮಿನಲ್ 2 ವಿಐಪಿ ಎಕ್ಸಿಟ್ ಗೇಟ್, ಟರ್ಮಿನಲ್ 2 ಒಳಭಾಗದಿಂದ ಟರ್ಮಿನಲ್ 1ರ ಮೂಲಕ ಹೊರತರುವುದು ಇಲ್ಲವೇ ಟರ್ಮಿನಲ್ 1 ಬಳಿಯ ಆಲ್ಫಾ ಗೇಟ್‌ನಿಂದ ಪ್ರಜ್ವಲ್ ರೇವಣ್ಣ ಅವರನ್ನು ಕರೆದುಕೊಂಡು ಹೋಗಲು ಎಸ್‌ಐಟಿ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಬಂಧಿಸಲು ಆಗ್ರಹಿಸಿ ಹಾಸನದಲ್ಲಿ ಬೃಹತ್ ಪ್ರತಿಭಟನೆ