ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ವರಿಷ್ಠ ಎಚ್ ಡಿ ಕುಮಾರಸ್ವಾಮಿ (HD Kumaraswamy) ಅವರ ಫೇಸ್ಬುಕ್ ಪೇಜ್ನಲ್ಲಿ (Facebook page) ಶನಿವಾರ ಮಧ್ಯಾಹ್ನದ ವೇಳೆಗೆ ಏಕಾಏಕಿ ಎದೆ ಸೀಳು ಪ್ರದರ್ಶಿದ ಯುವತಿಯ (Girl photo) ಫೋಟೊವೊಂದು ಕಾಣಿಸಿಕೊಂಡಿತು. ಆ ಹುಡುಗಿಯ ಚಹರೆಯು ನಮ್ಮದೇಶದವಳು ಅಲ್ಲ ಎಂಬುದು ಸ್ಪಷ್ಟವಾಗಿ ಗುರುತಿಸುವಂತಿತ್ತು. ಏನಾಯಿತೆಂದು ಅವರ ಅಭಿಮಾನಿಗಳು ಹಾಗೂ ಹಿತೈಷಿಗಳು ಆತಂಕ ವ್ಯಕ್ತಪಡಿಸುವಷ್ಟರಲ್ಲಿ ಅದು ಕಿಡಿಗೇಡಿ ಹ್ಯಾಕರ್ಗಳ ಕೃತ್ಯ ಎಂಬುದು ಬಹಿರಂಗಗೊಂಡಿದೆ. ತಕ್ಷಣವೇ ಅವರು ಫೇಸ್ಬುಕ್ಗೆ ವರದಿ ನೀಡಿ ತಮ್ಮ ಪ್ರೊಫೈಲ್ ಫೋಟೊವನ್ನು ಮರುಸ್ಥಾಪಿಸಿದ್ದಾರೆ. ಅಲ್ಲಿಗೆ ಪ್ರಕರಣ ಸುಖಾಂತ್ಯಗೊಂಡಿದೆ. ಅಭಿಮಾನಿಗಳು ಸೇರಿದಂತೆ ನೋಡುಗರ ಬಳಗದ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಪತಿಷ್ಠರ ಸಾಮಾಜಿಕ ಜಾಲತಾಣದ ಖಾತೆಗಳ ಬಗ್ಗೆ ಹ್ಯಾಕರ್ಗಳಿಗೊಂದು ಕಣ್ಣಿರುತ್ತದೆ. ಪ್ರತಿಷ್ಠಿತ ವ್ಯಕ್ತಿಗಳ ಸೋಶಿಯಲ್ ಮೀಡಿಯಾ ಅಕೌಂಟ್ಗಳನ್ನು ಹ್ಯಾಕ್ ಮಾಡಿಕೊಂಡು ಹಣಕ್ಕಾಗಿ ಬೇಡಿಕೆ ಇಡುವುದು ಹ್ಯಾಕರ್ಗಳ ಪ್ರವೃತ್ತಿಯಾಗಿರುತ್ತದೆ. ಅಶ್ಲೀಲ ಹಾಗೂ ತಮಗೆ ಸಂಬಂಧಪಡದ ಫೋಟೋ ಬಂದಾಗ ಮುಜುಗರಕ್ಕೆ ಒಳಗಾಗುವ ವ್ಯಕ್ತಿಗಳು ಸಮಸ್ಯೆಯಿಂದ ಪರಿಹಾರ ಪಡೆಯಲು ಕೇಳಿದಷ್ಟು ಹಣ ಕೊಡುತ್ತಾರೆ ಎಂಬುದೇ ಆನ್‌ಲೈನ್ ಕಳ್ಳರ ಅಂದಾಜು. ಕೊಂಚ ನುಸುಳಲು ಅವಕಾಶ ಸಿಕ್ಕರೂ ಹ್ಯಾಕ್ ಮಾಡಿ ಒತ್ತೆಯಿಟ್ಟು ಹಣಕ್ಕೆ ಬೇಡಿಕೆ ಇಡುತ್ತಾರೆ. ಹಿತೈಷಿಗಳ ಕರೆ ಹಾಗೂ ಮಾನಸಿಕ ಕಿರುಕುಳವನ್ನು ಸಹಿಸಲು ಸಾಧ್ಯವಾಗದ ಕಾರಣ ಪ್ರತಿಷ್ಠಿತ ವ್ಯಕ್ತಿಗಳು ಹಣ ನೀಡಿದ ಹಲವಾರು ಪ್ರಕರಣಗಳಿವೆ. ಅಂತೆಯೇ ಕುಮಾರಸ್ವಾಮಿ ಅವರ ಖಾತೆಗೂ ಹ್ಯಾಕರ್ಗಳು ನುಗ್ಗಿ ಕೋಲಾಹಲ ಸೃಷ್ಟಿಸಲು ಯತ್ನಿಸಿದ್ದಾರೆ. ಆದರೆ, ಉಪದ್ರವಿಗಳ ಯೋಜನೆಯನ್ನು ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳ ನಿರ್ವಹಣಾ ತಂಡ ವಿಫಲಗೊಳಿಸಿದೆ. ಸೂಕ್ತ ಮಾರ್ಗದ ಮೂಲಕ ಖಾತೆಯನ್ನು ಸರಿಪಡಿಸಿಕೊಂಡಿದೆ.
ಮಾಜಿ ಸಿಎಂ ಅವರ ಖಾತೆಯಲ್ಲೂ ಹುಡುಗಿಯೊಬ್ಬಳ ಚಿತ್ರವನ್ನು ಹಾಕಿ ಬೆದರಿಸಲು ಯತ್ನಿಸಿರಬಹುದು ಎನ್ನಲಾಗಿದೆ. ಆದರೆ, ಕುಮಾರಸ್ವಾಮಿ ಅವರ ಜಾಲತಾಣ ನಿರ್ವಹಣಾ ತಂಡವನ್ನು ತಕ್ಷಣ ಅಲರ್ಟ್ ಆಗಿ ಖಾತೆಯನ್ನು ಮತ್ತೆ ತೆಕ್ಕೆಗೆ ತೆಗೆದುಕೊಳ್ಳಲು ಯಶಸ್ವಿಯಾಗಿದೆ.
ಇದನ್ನೂ ಓದಿ: Honey Trap: ಯುನಿಫಾರ್ಮ್‌ನಲ್ಲಿ ಪೋಸ್ಟ್, ವಿಡಿಯೋ ಹಾಕಬೇಡಿ, ಆನ್‌ಲೈನ್ ಗೆಳೆತನ ಬೇಡ: ಪೊಲೀಸರಿಗೆ ಕಟ್ಟುನಿಟ್ಟಿನ ಸೂಚನೆ
ಕುಮಾರಸ್ವಾಮಿ ಅವರು ಫೇಸ್ಬುಕ್ ಖಾತೆ ಬ್ಲೂ ಟಿಕ್ ಹೊಂದಿದೆ. ಹೀಗಾಗಿ ಫೇಸ್ಬುಕ್ ತಂಡವು ಇಂತಹ ಖಾತೆಗಳ ಸುರಕ್ಷತೆ ಹೆಚ್ಚಿನ ಆದ್ಯತೆ ನೀಡುತ್ತವೆ. ಹೀಗಾಗಿ ಕುಮಾರಸ್ವಾಮಿ ಅವರ ಖಾತೆಯನ್ನು ತಕ್ಷಣದಲ್ಲೇ ಹ್ಯಾಕರ್ಗಳ ಕಡೆಯಿಂದ ವಾಪಸ್ ಪಡೆಯಲು ಸಾಧ್ಯವಾಗಿದೆ ಎನ್ನಲಾಗಿದೆ.
ಫೇಸ್ಬುಕ್ ಹ್ಯಾಕ್ ಆಗದ ಹಾಗೆ ತಡೆಯುವುದು ಹೇಗೆ?
- ನಿಮ್ಮ ಪಾಸ್ ವರ್ಡ್ ಸುರಕ್ಷಿತವಾಗಿರಲಿ. ಎಲ್ಲಿಯೂ ರಿಮೆಂಬರ್ ಆಯ್ಕೆ ಕೊಡಬಾರದು. ಎಲ್ಲೂ ಸೇವ್ ಮಾಡಬಾರದು.
ನಿಮ್ಮ ಲಾಗಿನ್ ಮಾಹಿತಿಯನ್ನು ಎಂದಿಗೂ ಯಾರೊಂದಿಗೂ ಹಂಚಿಕೊಳ್ಳಬಾರದು. ಅದು ತೀರಾ ಖಾಸಗಿಯಾಗಿ ಇಟ್ಟುಕೊಳ್ಳಬೇಕು.
ಇತರ ವ್ಯಕ್ತಿಗಳು ಹಂಚಿಕೊಳ್ಳುವ ಕಂಪ್ಯೂಟರ್ ಅನ್ನು ಬಳಸುವಾಗ Facebook ನಿಂದ ಪ್ರತಿಬಾರಿಯೂ ಲಾಗ್ ಔಟ್ ಆಗಬೇಕು.
ನಿಮಗೆ ಗೊತ್ತಿಲ್ಲದ ಜನರಿಂದ ಫ್ರೆಂಡ್ಸ್ ರಿಕ್ವೆಸ್ಟ್ ಸ್ವೀಕರಿಸಬಾರದು. - ದುರುದ್ದೇಶಪೂರಿತ ಸಾಫ್ಟ್ ವೇರ್ ನಿಮ್ಮ ಕಂಪ್ಯೂಟರ್ ಅಥವಾ ಮೊಬೈಲ್ಗೆ ಬಂದಿದ್ದರೆ ತಕ್ಷಣ ಅಳಿಸಿ ಹಾಕಿ.