ಹಾಸನ: ಕರ್ನಾಟಕ ವಿಧಾನಸಭಾ ಚುನಾವಣೆಯ (Karnataka Election 2023) ಕಾವು ನಿಧಾನವಾಗಿ ಏರತೊಡಗಿದೆ. ಈ ನಡುವೆ ತೀವ್ರ ಕುತೂಹಲ ಕೆರಳಿಸಿರುವ ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಬಗ್ಗೆ ಜೆಡಿಎಸ್‌ನಲ್ಲಿ ಮೂಡಿರುವ ಗೊಂದಲ, ಗದ್ದಲಕ್ಕೆ ತೆರೆ ಬೀಳುವ ಸಾಧ್ಯತೆಯನ್ನು ಸದ್ಯಕ್ಕೆ ನಿರೀಕ್ಷೆ ಮಾಡುವಂತಿಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ. ಆದರೆ, ಹಾಸನವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ರೇವಣ್ಣ ತಮಗೆ ಇಲ್ಲವೇ ಪತ್ನಿ ಭವಾನಿಗೆ ಟಿಕೆಟ್ ನೀಡಬೇಕೆಂದು ಪಟ್ಟುಹಿಡಿದಿದ್ದಾರೆ. ಇದರ ಭಾಗವಾಗಿ ಗುರುವಾರ ಮುಂಜಾನೆಯಿಂದಲೇ ಟೆಂಪಲ್ ರನ್ ಶುರು ಮಾಡಿದ್ದು, ಪತ್ನಿ ಭವಾನಿಯನ್ನೂ ಜತೆಗೆ ಕರೆದೊಯ್ಯುತ್ತಿದ್ದಾರೆ. ಈ ಮಧ್ಯೆ ಸುದ್ದಿಗೋಷ್ಠಿ ನಡೆಸಿರುವ ಅವರು, ನಾನು ಇದರ ಬಗ್ಗೆ ಏನೂ ಹೇಳಲಾರೆ. ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ನಿರ್ಧಾರವೇ ಅಂತಿಮ ಎಂದು ಹೇಳಿದ್ದಾರೆ.
ಇಡೀ ರಾಜ್ಯದಲ್ಲಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಪ್ರವಾಸ ಮಾಡುತ್ತಿದ್ದಾರೆ. ಜೆಡಿಎಸ್ ಅನ್ನು ಮತ್ತೆ ಅಧಿಕಾರಕ್ಕೆ ತರಲು ಅವರಿಬ್ಬರೂ ಶ್ರಮಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹಾಸನ ವಿಧಾನಸಭಾ ಚುನಾವಣೆಯಲ್ಲಿ ಅವರ ನಿರ್ಧಾರವೇ ಅಂತಿಮವಾಗಿದೆ. ಜಿಲ್ಲೆಯೊಳಗೆ ಜೆಡಿಎಸ್ ಸದೃಢವಾಗಿದೆ. ಏಳು ಕ್ಷೇತ್ರಗಳಲ್ಲಿಯೂ ಜೆಡಿಎಸ್ ಗೆಲ್ಲುವ ವಾತಾವರಣವಿದೆ. ಯಾರೂ ಸಹ ತಲೆ ಕೆಡಿಸಿಕೊಳ್ಳುವುದು ಬೇಡ. ಎಲ್ಲರೂ ಆರಾಮವಾಗಿರಿ ಎಂದು ಸುದ್ದಿಗೋಷ್ಠಿಯಲ್ಲಿ ರೇವಣ್ಣ ಕಿವಿಮಾತು ಹೇಳಿದರು.
ಹಾಸನ ಟಿಕೆಟ್ ಬಗ್ಗೆ ಇಂದು ನಾನೇನೂ ಮಾತನಾಡುವುದಿಲ್ಲ. ಕುಮಾರಸ್ವಾಮಿ ನೀಡುವ ನಿರ್ದೇಶನದ ಪ್ರಕಾರ ನಾವೆಲ್ಲರೂ ನಡೆದುಕೊಳ್ಳುತ್ತೇವೆ. ಇಂದು, ನಾಳೆ ಮತ್ತು ನಾಡಿದ್ದು ಪಕ್ಷದ ಕಾರ್ಯಕರ್ತರ ಸಭೆಯನ್ನು ಕರೆದಿದ್ದೇವೆ. ಭವಾನಿ ಅವರು ಯಾವುದೇ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿಲ್ಲ. ನಾನೇ ಎಲ್ಲ ಕಡೆ ಹೋಗುತ್ತಿದ್ದೇನೆ. ನಾನೇ ಖುದ್ದಾಗಿ ಮೂರು ದಿನ ಎಲ್ಲ ಪಂಚಾಯ್ತಿಗಳಿಗೆ ಹೋಗುತ್ತೇವೆ. ಅಲ್ಲಿ ಎಲ್ಲರ ಅಭಿಪ್ರಾಯ ತಗೆದುಕೊಂಡು ಹೈಕಮಾಂಡ್‌ಗೆ ಕೊಡುತ್ತೇನೆ. ಅವರು ಏನು ತೀರ್ಮಾನ ಮಾಡುತ್ತಾರೋ ಅದೇ ಅಂತಿಮ. ನನ್ನ ಸ್ಪರ್ಧೆ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಮೂರು ದಿನದ ನನ್ನ ಪ್ರವಾಸದಲ್ಲಿ ಸಂಸದ ಪ್ರಜ್ವಲ್ ರೇವಣ್ಣ, ಭವಾನಿ ರೇವಣ್ಣ, ಸ್ವರೂಪ್ ಹಾಗೂ ಎಲ್ಲ ಮುಖಂಡರು ಜತೆಗೆ ಇರುತ್ತಾರೆ ಎಂದು ಹೇಳಿದರು.
ಇದನ್ನೂ ಓದಿ: B. Sriramulu: ಸಂಡೂರಿನಲ್ಲಿಯೂ ಸ್ಪರ್ಧೆ ಕುರಿತು ಗೊಂದಲದ ಹೇಳಿಕೆ ನೀಡಿದ ಸಚಿವ ಬಿ. ಶ್ರೀರಾಮುಲು
ಹಾಸನ ಅಭಿವೃದ್ಧಿ ಬಗ್ಗೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಜೆ.ಪಿ. ನಡ್ಡಾ ಅವರಿಗೆ ಅವರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೊಬ್ಬರು ತಪ್ಪು ತಪ್ಪಾಗಿ ಹೇಳಿ ಕೊಟ್ಟಿದ್ದಾರೆ. ಹಾಸನ ಜಿಲ್ಲೆಯ ಅಭಿವೃದ್ಧಿ ಕಾರ್ಯಗಳನ್ನು ತಡೆಯುವರು ರಾಷ್ಟ್ರೀಯ ಪಕ್ಷ ಬಿಜೆಪಿಯವರಾಗಿದ್ದಾರೆ. ಅಭಿವೃದ್ಧಿಯನ್ನು ತಡೆ ಹಿಡಿಯುವುದರಲ್ಲಿ ಬಿಜೆಪಿಯವರು ಎಕ್ಸ್‌ಪರ್ಟ್ ಇದ್ದಾರೆ. ನಾನು ದಾಖಲೆಗಳನ್ನು ತೆಗೆದು ಮಾತನಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಮಾಜಿ ಸಚಿವ ಎಚ್.ಡಿ.ರೇವಣ್ಣ, ಹಾಸನ-ಬೇಲೂರು ಚತುಷ್ಪಥ ರಸ್ತೆಯು ದೇವೇಗೌಡರು ಇಲ್ಲದಿದ್ದರೆ ಆಗುತ್ತಿತ್ತಾ ಎಂದು ಪ್ರಶ್ನೆ ಮಾಡಿದ್ದಾರೆ.
ಬೇಲೂರು-ಬಿಳಿಕೆರೆ ರಸ್ತೆ ಯೋಜನೆಯನ್ನು ತಂದಿದ್ದು ಯಾರು? ಕದಬಹಳ್ಳಿಯಿಂದ 28 ಫ್ಲೈಓವರ್ ಆಗುತ್ತಿದೆ. ಇದೆಲ್ಲವನ್ನು ಮಾಡಿದ್ದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರಾಗಿದ್ದಾರೆ. ಈಗ ಬಿಜೆಪಿಯವರು ನಾವೇ ಮಾಡಿದ್ದು ಎಂದು ಹೇಳುತ್ತಿದ್ದಾರೆ. ದಾಖಲೆ ಸಮೇತ ವಿವರವನ್ನು ಕೊಡುತ್ತೇನೆ. ಹೀಗೆ ಹೇಳುವವರು ಓದಿಕೊಳ್ಳಲಿ.
ಮಂಗಳೂರಿನಲ್ಲಿ ಜನರು ಬಿಜೆಪಿಗೆ ಹೆಚ್ಚು ಸೀಟ್ ಅನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹಾಸನ ಬಿ.ಸಿ.ರೋಡ್ ಕಾಮಗಾರಿಗೆ ನಾನೇ ಮಂತ್ರಿಯಾಗಿದ್ದಾಗ ಡಿಪಿಆರ್ ಮಾಡಲಾಗಿದೆ. ಹಾಸನ-ಮಂಗಳೂರು ರಸ್ತೆಯಲ್ಲಿ ಎಷ್ಟು ಜನ ಸತ್ತಿದ್ದಾರೆ? ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆಕಾಶದಲ್ಲಿ ಹೋಗುತ್ತಿದ್ದಾರೆ. ನೆಲದ ಮೇಲೆ ಅವರು ಬಂದಿದ್ದರೆ ಗೊತ್ತಾಗುತ್ತದೆ. ಇವರು ಬೆಳಗ್ಗೆ ಎದ್ದರೆ ದೇವೇಗೌಡರು, ನಮ್ಮ ಕುಟುಂಬದ ಬಗ್ಗೆ ಭಜನೆ ಮಾಡುತ್ತಾರೆ. ಇದೇನು ಈ ರೀತಿ ಭಜನೆ ಮಾಡುತ್ತಿದ್ದಾರೆ ಎಂದು ರಾಜ್ಯದ ಜನರೂ ನೋಡುತ್ತಿದ್ದಾರೆ ಎಂದು ಕಿಡಿಕಾರಿದರು.
ಬೇಲೂರಿಗೆ ಜೆ.ಪಿ.ನಡ್ಡಾ, ನಳಿನ್ ಕುಮಾರ್ ಕಟೀಲ್, ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಏನು ಕೊಡುಗೆ ಕೊಟ್ಟಿದ್ದಾರೆ. ಈಗ ಇಲ್ಲಿಗೆ ಬಂದು ದೇವೇಗೌಡರು, ರೇವಣ್ಣ ಕೊಡುಗೆ ಏನು ಎಂದು ಕೇಳುತ್ತಿದ್ದಾರೆ. ನಡ್ಡಾ ಅವರೇ ಯಾವ ಮುಖ ಇಟ್ಟುಕೊಂಡು ಮತ ಕೇಳುತ್ತೀರಿ? ಬೆಂಗಳೂರು-ಹಾಸನ, ಬೆಂಗಳೂರು-ಕಡೂರು ರೈಲ್ವೆ ಮಾರ್ಗವನ್ನು ಮಾಡಿದ್ದೂ ದೇವೇಗೌಡರಾಗಿದ್ದಾರೆ. ಇವೆಲ್ಲವನ್ನು ಮಾಡಿದ್ದು ಈ ರೇವಣ್ಣ ಅವರ ಅಪ್ಪನೇ ಎಂಬುದನ್ನು ನಡ್ಡಾ ಅವರು ತಿಳಿದುಕೊಳ್ಳಬೇಕು. ಇಲ್ಲಿ ಯಾರೋ ಹೇಳಿದ್ದನ್ನು ಕೇಳಿಕೊಂಡು ಹೇಳುವುದು ಸರಿಯಲ್ಲ ಎಂದು ರೇವಣ್ಣ ಕಿಡಿಕಾರಿದರು.
ಇದನ್ನೂ ಓದಿ: Co-Op Bank Scam : ಶ್ರೀ ಗುರು ರಾಘವೇಂದ್ರ ಕೋ ಆಪರೇಟೀವ್ ಬ್ಯಾಂಕ್ ಹಗರಣ; ಸಾಲಗಾರ ರಾಜೇಶ್ ಬಂಧಿಸಿದ ಇಡಿ
ಹಾಸನದಿಂದ ರೇವಣ್ಣ ಸ್ಪರ್ಧೆ?
ಹಾಸನ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಭವಾನಿ ರೇವಣ್ಣ ಅವರು ಈಗ ಮೌನವಾಗಿದ್ದರೂ ಪತಿ ರೇವಣ್ಣ ಅವರ ಮೂಲಕ ಒತ್ತಡ ಹೇರುತ್ತಿದ್ದಾರೆ. ಇತ್ತ ರೇವಣ್ಣ ಸಹ ಗಂಭೀರವಾಗಿ ಪರಿಗಣಿಸಿದ್ದಾರೆ. ಇದೇ ವೇಳೆ ಹಾಸನ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ದೊಡ್ಡಪುರ ಗ್ರಾಮದಲ್ಲಿ ಪೂಜೆ ಸಲ್ಲಿಸಲಿರುವ ಭವಾನಿ ರೇವಣ್ಣ ಮಧ್ಯಾಹ್ನ 3.30ರಿಂದ ಪ್ರಚಾರ ಆರಂಭಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ರೇವಣ್ಣ ಸಹ ಒಂದು ತಾವು ಹಾಸನದಲ್ಲಿ ಸ್ಪರ್ಧೆ ಮಾಡಬೇಕು, ಇಲ್ಲವೇ ಭವಾನಿಗೇ ಟಿಕೆಟ್ ಕೊಡಬೇಕು ಎಂದು ದೇವೇಗೌಡ ಹಾಗೂ ಕುಮಾರಸ್ವಾಮಿ ಬಳಿ ಚರ್ಚೆ ನಡೆಸಿದ್ದು, ಒಂದು ಹಂತದಲ್ಲಿ ಮನವೊಲಿಸಿದ್ದಾರೆ ಎಂದೇ ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.