Site icon Vistara News

HD Revanna : ಕೋಳಿ ಹಂಚಿ ಗೆದ್ದರಾ ಎಚ್‌.ಡಿ ರೇವಣ್ಣ?: ಹೈಕೋರ್ಟ್‌ನಿಂದ ಮತ್ತೆ ಸಮನ್ಸ್‌ ಜಾರಿ

HD Revanna and High court

ಬೆಂಗಳೂರು: ಹೊಳೆನರಸೀಪುರದ ಶಾಸಕ (Holenarasipura MLA) ಜೆಡಿಎಸ್‌ ನಾಯಕ ಎಚ್.ಡಿ ರೇವಣ್ಣ (HD Revanna) ಅವರಿಗೆ ಸಮನ್ಸ್‌ ಜಾರಿ ಮಾಡುವಂತೆ ರಾಜ್ಯ ಹೈಕೋರ್ಟ್‌ (Karnataka High court) ಎರಡನೇ ಬಾರಿ ಆದೇಶ ಹೊರಡಿಸಿದೆ. ಕಳೆದ ಆಗಸ್ಟ್‌ 2ರಂದು ನಡೆದ ವಿಚಾರಣೆಯ ವೇಳೆ ಸಮನ್ಸ್‌ ಜಾರಿಗೊಳಿಸುವಂತೆ ನೀಡಿದ ಸೂಚನೆ ಪಾಲನೆ ಆಗಿರಲಿಲ್ಲ. ಇದನ್ನು ಗಮನಕ್ಕೆ ತರುತ್ತಿದ್ದಂತೆಯೇ ಕೋರ್ಟ್‌ ಮತ್ತೊಮ್ಮೆ ಆದೇಶ ನೀಡಿದೆ.

ರೇವಣ್ಣ ಅವರು 2023ರ ಚುನಾವಣೆಯಲ್ಲಿ ಮತದಾರರಿಗೆ ಕೋಳಿ ಮತ್ತು ತಲಾ 2000 ರೂ. ಹಂಚಿ ಗೆಲುವು ಸಾಧಿಸಿದ್ದಾರೆ. ಇದು ಚುನಾವಣಾ ಅಕ್ರಮವಾಗಿದ್ದು (Election Irregularity), ಇದನ್ನು ಪರಿಗಣಿಸಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಬೇಕು ಎನ್ನುವುದು ಅರ್ಜಿದಾರ, ಪರಾಜಿತ ಬಿಜೆಪಿ ಅಭ್ಯರ್ಥಿ ಜಿ.ದೇವರಾಜೇಗೌಡ ಅವರ ವಾದವಾಗಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ಎಚ್.ಡಿ. ರೇವಣ್ಣ ಅವರಿಗೆ ನೋಟಿಸ್‌ ನೀಡುವಂತೆ ಸೂಚಿಸಿತ್ತು. ಅದರೆ, ಅದು ಪಾಲನೆಯಾಗಿರಲಿಲ್ಲ. ಇದನ್ನು ವಕೀಲರಾದ ಪ್ರಮೀಳಾ ನೇಸರ್ಗಿ ಅವರು ಕೋರ್ಟ್‌ ಗಮನಕ್ಕೆ ತಂದಿದ್ದರು. ಇದೀಗ ಕೋರ್ಟ್‌ ಸಮನ್ಸ್‌ ಜಾರಿ ಮಾಡಿದ್ದು ಮುಂದಿನ ವಿಚಾರಣೆಯನ್ನು ನವೆಂಬರ್ 29ಕ್ಕೆ ನಿಗದಿಪಡಿಸಲಾಗಿದೆ.

ಎಚ್‌.ಡಿ ರೇವಣ್ಣ ಮೇಲೆ ಇರುವ ಆರೋಪಗಳೇನು? ಏನಿದು ವಿವಾದ?

-ಹೊಳೆನರಸೀಪುರ ಕ್ಷೇತ್ರದಿಂದ ಕಣಕ್ಕಿಳಿದಿದ್ದ ಜೆಡಿಎಸ್‌ ಅಭ್ಯರ್ಥಿ ಎಚ್ ಡಿ ರೇವಣ್ಣ ಅವರು ಅಕ್ರಮ ಎಸಗಿ ಜಯ ಗಳಿಸಿದ್ದಾರೆ. ಮತಗಳಿಕೆಯಲ್ಲಿ 2ನೇ ಸ್ಥಾನದಲ್ಲಿದ್ದ ಕಾಂಗ್ರೆಸ್‌ನ ಶ್ರೇಯಸ್ ಪಟೇಲ್ ಕೂಡ ಮತದಾರರಿಗೆ ಆಮಿಷ ಒಡ್ಡಿದ್ದಾರೆ. ಹೀಗಾಗಿ, ಇವರಿಬ್ಬರ ಮತಗಳಿಕೆಯನ್ನು ಅಸಿಂಧುಗೊಳಿಸಬೇಕು ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ಜಿ.ದೇವರಾಜೇಗೌಡ ನ್ಯಾಯಾಲಯವನ್ನು ಕೋರಿದ್ದರು.

ಇದನ್ನೂ ಓದಿ: Prajwal Revanna : ಪ್ರಜ್ವಲ್‌ ರೇವಣ್ಣಗೆ ಸುಪ್ರೀಂಕೋರ್ಟ್ ರಿಲೀಫ್‌; ಸಂಸದ ಸ್ಥಾನಕ್ಕೆ ಚ್ಯುತಿಯಿಲ್ಲ, ಚುನಾವಣೆ ಸ್ಪರ್ಧೆಗೂ ಅಡ್ಡಿಇಲ್ಲ

– ಆಗಸ್ಟ್‌ 2ರಂದು ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯವು ಶಾಸಕ ಎಚ್ ಡಿ ರೇವಣ್ಣ, ಶ್ರೇಯಸ್ ಎಂ ಪಟೇಲ್, ಗೀತಾ ಶಿವಸ್ವಾಮಿ, ಬಿ ಕೆ ನಾಗರಾಜ, ಎಚ್ ಎಸ್ ತಾರೇಶ್, ಡಿ ಆರ್ ರಂಗಸ್ವಾಮಿ ಅವರಿಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಸೆಪ್ಟೆಂಬರ್‌ 4ಕ್ಕೆ ಮುಂದೂಡಿತ್ತು.

-ಚುನಾವಣೆಯಲ್ಲಿ ಎಚ್ ಡಿ ರೇವಣ್ಣ 88,103, ಎರಡನೇ ಅಭ್ಯರ್ಥಿ ಶ್ರೇಯಸ್‌ ಎಂ.ಪಟೇಲ್ 84,951 ಹಾಗೂ ಅರ್ಜಿದಾರರು 4,850 ಮತಗಳನ್ನು ಪಡೆದಿದ್ದಾರೆ. ಉಳಿದ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡಿದ್ದರು.

– ಪ್ರಜಾಪ್ರತಿನಿಧಿ ಕಾಯಿದೆ 1951, ನೀತಿ ಸಂಹಿತೆ ಮತ್ತು ನಿಯಮ 1961 ಹಾಗೂ 2006ರ ಮಾರ್ಗಸೂಚಿಯಲ್ಲಿ ಆಮಿಷ ಒಡ್ಡಲು, ಅಕ್ರಮ ಎಸಗಲು ಅವಕಾಶವಿಲ್ಲ. ಹೀಗಾಗಿ, ಅವರ ಆಯ್ಕೆಯನ್ನು ಅಸಿಂಧುಗೊಳಿಸಬೇಕು ಮತ್ತು ಅರ್ಜಿದಾರರನ್ನು ಆಯ್ಕೆಯಾಗಿದ್ದಾರೆ ಎಂದು ಘೋಷಿಸಬೇಕು ಎಂದು ಕೋರಲಾಗಿತ್ತು.

– ರೇವಣ್ಣ ಅವರ ಬೆಂಬಲಿಗರು ಅಣ್ಣೆಹಳ್ಳಿಯಲ್ಲಿ ಪ್ರತಿಯೊಬ್ಬ ಮತದಾರರಿಗೆ ಎರಡು ಕೋಳಿ ಮತ್ತು 2,000 ರೂಪಾಯಿ ನಗದನ್ನು  ಹಂಚಿದ್ದಾರೆ.  ಶಾಂತಿಗ್ರಾಮದ ಬಳಿ ಜನರಿಗೆ ಅಮಿಷವೊಡ್ಡುತ್ತಿದ್ದುದನ್ನು ತಡೆಯಲು ಹೋದಾಗ ರೇವಣ್ಣ ಅವರ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿತ್ತು.

Exit mobile version