ಹಾಸನ: ಸಾಮಾನ್ಯ ಕಾರ್ಯಕರ್ತ ಎಂದರೆ ಯಾರು? ಪಕ್ಷದಿಂದ ಯಾವುದೇ ಅನುಕೂಲ ಪಡೆಯವದನು. ಸಾಮಾನ್ಯ ಕಾರ್ಯಕರ್ತ ಯಾರು ಅಂತ ದೇವೇಗೌಡರು ತೀರ್ಮಾನ ಮಾಡುತ್ತಾರೆ. ಜನವರಿಯಲ್ಲೇ ಈ ಬಗ್ಗೆ ಅವರು ತೀರ್ಮಾನ ಮಾಡಿದ್ದಾರೆ ಎಂದು ಹೇಳುವ ಮೂಲಕ ಕಾರ್ಯಕರ್ತನಿಗೆ (ಸ್ವರೂಪ್) ಹಾಸನ ಟಿಕೆಟ್ ನೀಡುವುದಾಗಿ ಹೇಳುತ್ತಿರುವ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಪರೋಕ್ಷವಾಗಿ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದಾರೆ.
ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಆನೆಕೆರೆಯ ಆನೆಕೆರೆಯಮ್ಮ ದೇವಾಲಯದಲ್ಲಿ ಪತ್ನಿ ಭವಾನಿ, ಪುತ್ರ ಡಾ.ಸೂರಜ್ ರೇವಣ್ಣ ಜತೆಗೆ ಪೂಜೆ ಸಲ್ಲಿಸಿ ಮಾತನಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತ ಎಂದರೆ ಪಕ್ಷದ ಫಲಾನುಭವಿ ಆಗಿರಬಾರದು. ಆದರೆ, ಮಾಜಿ ಶಾಸಕ ಎಚ್.ಎಸ್. ಪ್ರಕಾಶ್ ಅವರ ಪುತ್ರ ಎಚ್.ಪಿ. ಸ್ವರೂಪ್ ಅದು ಹೇಗೆ ಸಾಮಾನ್ಯ ಕಾರ್ಯಕರ್ತನಾಗುತ್ತಾನೆ ಎಂಬರ್ಥದಲ್ಲಿ ರೇವಣ್ಣ ಹೇಳಿದ್ದಾರೆ.
ಇದನ್ನೂ ಓದಿ | BJP Karnataka: ನರೇಂದ್ರ ಮೋದಿ-ಬಿ.ಎಸ್. ಯಡಿಯೂರಪ್ಪ, ಜನರ ನಡುವಿನಿಂದ ಬಂದ ನಾಯಕರು: ಶೋಭಾ ಕರಂದ್ಲಾಜೆ
ಎರಡು ಕಡೆ ಸ್ಪರ್ಧೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ʻʻನಾನ್ಯಾಕೆ ಎರಡು ಕಡೆ ನಿಲ್ಲುವುದಕ್ಕೆ ಹೋಗಲಿ. ನನ್ನ ಕ್ಷೇತ್ರ ಹೊಳೆನರಸೀಪುರ, ಕಳೆದ 30 ವರ್ಷಗಳಿಂದ ಈ ಕ್ಷೇತ್ರದ ಜನ ನನ್ನು ಸಾಕಿದ್ದಾರೆ. ಈ ಜನರನ್ನು ನನ್ನ ಜೀವನದಲ್ಲಿ ಎಂದೂ ಮರೆಯುವುದಿಲ್ಲ. ನಾನಾಗಲಿ, ನನ್ನ ಕುಟುಂಬ ಆಗಲಿ ಬಿಡುವ ಪ್ರಶ್ನೆಯೇ ಇಲ್ಲ. ಹೊಳೆನರಸೀಪುರ ವಿಧಾನಸಭಾ ಕ್ಷೇತ್ರವೇ ನನ್ನ ಮೊದಲ ಪ್ರಾಮುಖ್ಯತೆʼʼ ಎಂದು ತಿಳಿಸಿದ್ದಾರೆ.
ನಾನು ಹಿಂದಿನಿಂದಲೂ ಯಾವುದೇ ಕ್ಷೇತ್ರದ ಟಿಕೆಟ್ ಕೇಳಿಲ್ಲ. ದೇವೇಗೌಡರೇ ಎಲ್ಲಾ ಕ್ಷೇತ್ರಗಳ ಟಿಕೆಟ್ ನಿರ್ಧಾರ ಮಾಡುತ್ತಿದ್ದಾರೆ. ಹಿಂದೆಯೂ ಅವರ ಮಾತು ಕೇಳಿದ್ದೇನೆ, ಈಗಲೂ ಕೇಳುತ್ತೇನೆ, ಮುಂದೆಯೂ ಕೇಳುತ್ತೇನೆ. ದೇವೇಗೌಡರೇ ನಮ್ಮ ಸ್ವರ್ವೋಚ್ಚ ನಾಯಕರು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.
ಹಾಸನ ಟಿಕೆಟ್ ಹಂಚಿಕೆ ಯಾವಾಗ ಪರಿಹಾರವಾಗುತ್ತೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ, ಅದರ ಬಗ್ಗೆ ದೇವೇಗೌಡರನ್ನೇ ಕೇಳಿ. ನೀವು ಸುಮ್ಮನೆ ಪ್ರಚಾರ ಮಾಡುತ್ತಿದ್ದೀರಿ, ನಿಮ್ಮದು ಡೂಪ್ ಆಗುತ್ತದೆ, ಹೋಗಿ ಎಂದು ಮಾಧ್ಯಮದವರ ಬಗ್ಗೆ ವ್ಯಂಗ್ಯವಾಡಿದ್ದಾರೆ.
ಹಾಸನ ಟಿಕೆಟ್ ಕಲಹಕ್ಕೆ ಮನೆ ಹಾಳ ಶಕುನಿಗಳೇ ಕಾರಣ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಾನು ಅದಕ್ಕೆ ರಿಯಾಕ್ಟ್ ಮಾಡಲ್ಲ, ಅದೇನೋ ನನಗೆ ಗೊತ್ತಿಲ್ಲಪ್ಪಾ. ದೇವೇಗೌಡರಿಗೆ ಈ ಜಿಲ್ಲೆಯ ಬಗ್ಗೆ ಎಲ್ಲಾ ಗೊತ್ತಿದೆ. ಅವರು ಏನು ಹೇಳುತ್ತಾರೋ ಅದನ್ನು ನಾವು ಕೇಳುತ್ತೇವೆ. ಹಾಸನ ಜಿಲ್ಲೆಯಲ್ಲಿ ಏಳು ಕ್ಷೇತ್ರಗಳಲ್ಲೂ ಜೆಡಿಎಸ್ ಗೆಲ್ಲಬೇಕು. ನಮ್ಮ ಜನ ಉಳಿಯಬೇಕು. ಕುಮಾರಸ್ವಾಮಿ ಸಿಎಂ ಆಗಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.
ಇದನ್ನೂ ಓದಿ | BJP Karnataka: ರಾಜಕೀಯದಿಂದ ಕೆ.ಎಸ್. ಈಶ್ವರಪ್ಪ ನಿವೃತ್ತಿ: ಜೆ.ಪಿ. ನಡ್ಡಾಗೆ ಪತ್ರ ಬರೆದ ಹಿರಿಯ ನಾಯಕ?
ಹಾಸನ ಟಿಕೆಟ್‌ಗಾಗಿ ಭವಾನಿ ರೇವಣ್ಣ ಹಾಗೂ ಎಚ್.ಪಿ. ಸ್ವರೂಪ್ ನಡುವೆ ಪೈಪೋಟಿ ಏರ್ಪಟ್ಟಿದೆ. ಆದರೆ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಪರೋಕ್ಷವಾಗಿ ಸ್ವರೂಪ್‌ಗೆ ಟಿಕೆಟ್ ನೀಡಲು ಒಲವು ಹೊಂದಿದ್ದಾರೆ. ಮತ್ತೊಂದೆಡೆ ಎಚ್.ಡಿ. ರೇವಣ್ಣ ಮಾತ್ರ ಪತ್ನಿ ಭವಾನಿಗೆ ಹಾಸನ ಟಿಕೆಟ್ ಕೊಡಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಸಿಗುವುದೋ ಎಂಬ ಕುತೂಹಲ ಮೂಡಿದೆ.