Site icon Vistara News

Karnataka Election 2023: ಹಾಸನ ಟಿಕೆಟ್ ಸಾಮಾನ್ಯ ಕಾರ್ಯಕರ್ತನಿಗೇ ಎಂದು ದೇವೇಗೌಡರು ಹೇಳಿದ್ರೆ ಒಪ್ಪುವೆ: ಎಚ್‌.ಡಿ. ರೇವಣ್ಣ

HD Revanna says If Deve Gowda says Hassan ticket is for an ordinary worker, I will agree

ಹಾಸನ: ಹಾಸನ ಟಿಕೆಟ್ ವಿಚಾರವಾಗಿ ಯಾವ ಗೊಂದಲವೂ ಇಲ್ಲ. ಸಾಮಾನ್ಯ ಕಾರ್ಯಕರ್ತನಿಗೇ ಟಿಕೆಟ್ ಎಂದು ದೇವೇಗೌಡರು ಹೇಳಿದರೆ ಒಪ್ಪುವೆ. ಅವರು ನಮಗೆ ಸುಪ್ರೀಂ ನಾಯಕರು, ಅವರು ಏನೇ ತೀರ್ಮಾನ ಮಾಡಿದರೂ ಅದಕ್ಕೆ ನಾನು ಬದ್ಧ. ನಾನು ಪಕ್ಷೇತರವಾಗಿ ನಿಲ್ಲುವೆ (Karnataka Election 2023) ಎಂದು ಎಲ್ಲೂ ಹೇಳಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ. ರೇವಣ್ಣ ತಿಳಿಸಿದರು.

ಜಿಲ್ಲೆ ಹೊಳೆನರಸೀಪುರದಲ್ಲಿ ಬುಧವಾರ ಆಯೋಜಿಸಿದ್ದ ಜೆಡಿಎಸ್ ಸಮಾವೇಶದಲ್ಲಿ ಅವರು ಮಾತನಾಡಿ, ಈ ಬಾರಿಯೂ ನಮ್ಮ ಪಕ್ಷದ ಅಭ್ಯರ್ಥಿಗೆ ಲೀಡ್‌ನಲ್ಲಿ ಮತ ನೀಡಬೇಕು ಎಂದು ಮನವಿ ಮಾಡಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ರೇವಣ್ಣ, ಕಾಂಗ್ರೆಸ್ ನಾಯಕರ ಜತೆ ಸಂಪರ್ಕ ವಿಚಾರದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿದ್ದರಾಮಯ್ಯ ಹಾಗೂ ನನ್ನ ಬಾಂಧವ್ಯ ಬೇರೆ. ನಾನೇಕೆ ಕಾಂಗ್ರೆಸ್ ಸೇರುವುದಕ್ಕೆ ಹೋಗಲಿ. ಎಚ್.ಡಿ. ದೇವೇಗೌಡರು, ಎಚ್.ಡಿ. ಕುಮಾರಸ್ವಾಮಿ ಇಲ್ಲವೇ? ನಾನೇಕೆ ಕಾಂಗ್ರೆಸ್‌ಗೆ ಹೋಗಲಿ. ಹಾಸನ ಟಿಕೆಟ್ ವಿಚಾರವಾಗಿ ಯಾವ ಗೊಂದಲವೂ ಇಲ್ಲ. ನಾನು ಕುಮಾರಣ್ಣ ಮೊದಲೇ ಮಾತನಾಡಿಕೊಂಡಿದ್ದೇವೆ ಎಂದು ಹೇಳಿದರು.

ಶಕುನಿಗಳು ತಲೆಕೆಡಿಸುತ್ತಿದ್ದಾರೆ ಎಂಬ ಎಚ್‌ಡಿಕೆ ಹೇಳಿಕೆಗೆ ಪ್ರತಿಕ್ರಿಯಿಸಿ, ನಾನು ತಲೆಕೆಡಿಸಿಕೊಳ್ಳುವಂತಹ ವ್ಯಕ್ತಿಯಲ್ಲ, ಯಾರೂ ನನ್ನ ಹಾಗೂ ಕುಮಾರಸ್ವಾಮಿ ನಡುವೆ ಜಗಳ ತಂದಿಡಲು ಸಾಧ್ಯವಿಲ್ಲ. ಏನೇ ಆದರೂ ನಾನು, ಕುಮಾರಣ್ಣ ಬೆಳಗಾಗುವುದರೊಳಗೆ ಒಂದಾಗುತ್ತೇವೆ ಎಂದು ತಿಳಿಸಿದರು.

ಇದನ್ನೂ ಓದಿ | Karnataka ELection: ಸಾವಿರಾರು ಬಿಜೆಪಿ ನಾಯಕರು ಕಾಂಗ್ರೆಸ್‌ ಸೇರಲಿದ್ದಾರೆ: ಪದ್ಮರಾಜ್‌ ಸೇರ್ಪಡೆ ಕಾರ್ಯಕ್ರಮದಲ್ಲಿ ಡಿ.ಕೆ. ಶಿವಕುಮಾರ್‌

ನಮ್ಮಲ್ಲೇ ಇದ್ದು ತಿಂದು ತೇಗಿ ಈಗ ಕೆಲವರು ಅಪ ಪ್ರಚಾರ ಮಾಡುತ್ತಿದ್ದಾರೆ. ಹುಣಸೆ ಬೀಜ ಆಯುತ್ತಿದ್ದವರನ್ನು ಕರೆತಂದು ನಗರಸಭೆ ಸದಸ್ಯನಾಗಿ ಮಾಡಿದೆ ಎಂದು ವಿರೋಧಿಗಳ ವಿರುದ್ಧ ಹರಿಹಾಯ್ದ ಅವರು, 30 ದಿನ ಯಾರೂ ಅಪ ಪ್ರಚಾರಕ್ಕೆ ಕಿವಿಕೊಡಬೇಡಿ. ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ಕರೆ ನೀಡಿದರು.

ಎ. ಮಂಜಣ್ಣ ಕಾಂಗ್ರೆಸ್‌ನಲ್ಲಿ ಟಿಕೆಟ್‌ ಕೊಡುತ್ತೇವೆ ಎಂದರೂ ದೇವೇಗೌಡರ ಜತೆ ಬಂದಿದ್ದಾರೆ. ಅವರಿಗೆ ನಮ್ಮ ತಾಲೂಕಿನ ಹಳ್ಳಿ ಮೈಸೂರು ಹೋಬಳಿಯಲ್ಲಿ 10 ಸಾವಿರ ಲೀಡ್ ನೀಡಬೇಕು. ನಾನು ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸುತ್ತೇನೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಆಗಮಿಸಬೇಕು ಎಂದು ಕೋರಿದರು.

ಸಮಾವೇಶದಲ್ಲಿ ಭವಾನಿ ರೇವಣ್ಣ ಮಾತನಾಡಿ, ಕ್ಷೇತ್ರದಲ್ಲಿ ರೇವಣ್ಣ ಅವರು ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಆರೋಗ್ಯ, ಶಿಕ್ಷಣ ಕ್ಷೇತ್ರದ ಅಭಿವೃದ್ಧಿಯಲ್ಲಿ ಅವರ ಶ್ರಮವಿದೆ. ತಾಲೂಕಿನಲ್ಲಿ ಕಾನೂನು ಕಾಲೇಜು, 28 ಹಾಸ್ಟೆಲ್‌ಗಳನ್ನು ನಿರ್ಮಿಸಲಾಗಿದೆ. ರೇವಣ್ಣ ಅವರು ಇಂತಹ ಒಂದು ಕೆಲಸ ಮಾಡಿಲ್ಲ ಎಂದು ಹೇಳುವ ಹಾಗಿಲ್ಲ, ಎಲ್ಲವನ್ನೂ ಅವರು ಮಾಡಿದ್ದಾರೆ ಎಂದು ಹೊಗಳಿದರು.

ಕೆಲವರು 10 ರೂಪಾಯಿ ಕೆಲಸ ಮಾಡದೆ ಅಪ ಪ್ರಚಾರ ಮಾಡಲು ಹೊರಟಿದ್ದಾರೆ ಎಂದು ವಿರೋಧಿಗಳ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನಾವೆಲ್ಲರೂ ರೇವಣ್ಣಗೇ ಮತ ನೀಡಬೇಕು ಎಂದು ನಿರ್ಧಾರ ಮಾಡಬೇಕು. ಜಿಲ್ಲೆಯಲ್ಲಿ 7ಕ್ಕೆ 7 ಕ್ಷೇತ್ರಗಳಲ್ಲೂ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸಬೇಕು ಎಂದು ಅವರು ಹೊರಟಿದ್ದಾರೆ. ಹಾಗಾಗಿ ನಾವೆಲ್ಲರೂ ಅವರಿಗೆ ಬೆಂಬಲ ನೀಡಬೇಕು ಎಂದು ಹೇಳಿದರು.

ಇದನ್ನೂ ಓದಿ | BJP Karnataka: ಟಿಕೆಟ್‌ ಘೋಷಣೆ ಬೆನ್ನಲ್ಲೇ ಧರ್ಮಸ್ಥಳ, ಸುಬ್ರಹ್ಮಣ್ಯ, ಕೊಲ್ಲೂರು ದೇವರ ಮೊರೆ ಹೋದ ಸಿಎಂ ಬಸವರಾಜ ಬೊಮ್ಮಾಯಿ

ಜೆಡಿಎಸ್ ಬೆಂಬಲವಿಲ್ಲದೆ ಸರ್ಕಾರ ರಚಿಸಲು ಯಾರಿಗೂ ತಾಕತ್ತು ಇಲ್ಲ: ಎ.ಮಂಜು

ಸಮಾವೇಶದಲ್ಲಿ ಮಾಜಿ ಸಚಿವ ಎ.ಮಂಜು ಮಾತನಾಡಿ, ಈ ಬಾರಿ ಜೆಡಿಎಸ್, ಕುಮಾರಣ್ಣ ಇಲ್ಲದೆ ಯಾವುದೇ ಸರ್ಕಾರ ಮಾಡಲು ಯಾರಿಗೂ ತಾಕತ್ತು ಇಲ್ಲ. ಕುಮಾರಣ್ಣ ಅವರು ಚುನಾವಣೆ ಘೋಷಣೆಗೂ ಮುನ್ನವೇ 90 ಕ್ಷೇತ್ರದಲ್ಲಿ ಜನರ ಮನಸ್ಸು ಗೆದ್ದ ನಾಯಕರಾಗಿದ್ದಾರೆ. ಅವರು ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕೊಟ್ಟ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದ್ದರು. ರೈತರನ್ನು ಆರ್ಥಿಕವಾಗಿ ಸದೃಢ ಮಾಡಬೇಕು ಎಂಬುವುದು ಅವರ ಕನಸು. ರೈತರ ಬಗ್ಗೆ ಚಿಂತನೆ ಮಾಡುವವರು ಮಾತ್ರ ಜನ ನಾಯಕ ಆಗಲು ಸಾಧ್ಯ. ಬೇರೆ ರಾಜ್ಯದಂತೆ ನಮ್ಮ ರಾಜ್ಯ ಅಭಿವೃದ್ಧಿ ಆಗಬೇಕಾದರೆ ಪ್ರಾದೇಶಿಕ ಪಕ್ಷ ಬೆಳೆಯಬೇಕು. ಇದಕ್ಕಾಗಿ ಜನರು ಬೆಂಬಲ ನೀಡಬೇಕು ಎಂದು ಕೋರಿದರು.

Exit mobile version