Site icon Vistara News

JDS Politics : ಜೆಡಿಎಸ್‌ನಲ್ಲಿ ಕುಮಾರಸ್ವಾಮಿ ನಿರ್ಧಾರವೇ ಅಂತಿಮ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದ ರೇವಣ್ಣ

Revanna is trying to get Hassan JDS ticket Karnataka Election 2023 updates

ಹಾಸನ: ಕುಮಾರಣ್ಣ ನಮ್ಮ ಸರ್ವೋಚ್ಚ ನಾಯಕ. ಎಚ್‌.ಡಿ.ದೇವೇಗೌಡರು, ಎಚ್‌.ಡಿ. ಕುಮಾರಸ್ವಾಮಿ ಹಾಗೂ ಜಿಲ್ಲೆಯ ಶಾಸಕರು ಕುಳಿತು ಟಿಕೆಟ್‌ ನೀಡುವ ಬಗ್ಗೆ ತೀರ್ಮಾನ ಮಾಡುತ್ತಾರೆ. ನಾನು ಬದುಕಿರುವವರೆಗೂ ಕುಮಾರಸ್ವಾಮಿ ಹಾಗೂ ನಾನು ಹೊಡೆದಾಡುವ ಪ್ರಶ್ನೆಯೇ ಇಲ್ಲ, ನಮ್ಮಿಬ್ಬರನ್ನು ಬೇರ್ಪಡಿಸಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ (JDS Politics) ಹೇಳಿದ್ದಾರೆ.

ಹಾಸನ ಕ್ಷೇತ್ರ ಟಿಕೆಟ್‌ ಫೈಟ್ ಬಗ್ಗೆ ನಗರದಲ್ಲಿ ಭಾನುವಾರ ಪ್ರತಿಕ್ರಿಯಿಸಿದ ಅವರು, ದೇವೇಗೌಡರ ಕುಟುಂಬದವರಾದ ಕುಮಾರಣ್ಣ, ರೇವಣ್ಣ ಹೊಡೆದಾಡುತ್ತಾರೆ ಎಂದು ತಿಳಿದುಕೊಂಡಿದ್ದರೆ ಅಂತಹವರಿಗೆ ಭ್ರಮನಿರಸನ ಆಗುತ್ತದೆ. ಆತನಿಗೆ ಎರಡು ಬಾರಿ ಬೈಪಾಸ್ ಸರ್ಜರಿ ಆಗಿದೆ, ಹಗಲು ರಾತ್ರಿ ಎನ್ನದೆ ಪಕ್ಷಕ್ಕಾಗಿ ಹೋರಾಟ ಮಾಡುತ್ತಿದ್ದಾನೆ. ಅದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಹೇಳಿದರು.

ʻʻನಮ್ಮ ಜಿಲ್ಲೆಯ ಏಳು ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಂತಿಮವಾಗಿ ತೀರ್ಮಾನ ಮಾಡುವುದು ದೇವೇಗೌಡರು, ಕುಮಾರಸ್ವಾಮಿ, ಸಿ.ಎಂ ಇಬ್ರಾಹಿಂ ಅವರು. ಪ್ರಜ್ವಲ್ ಹೇಳಿದರೂ ಅಷ್ಟೇ, ರೇವಣ್ಣ ಹೇಳಿದರೂ ಅಷ್ಟೇ ಎಂದ ಅವರು, ಬೇಲೂರಲ್ಲಿ, ಕೆ.ಆರ್.ಪೇಟೆಯಲ್ಲಿ ನಿಲ್ಲುತ್ತಾರೆ ಎನ್ನುತ್ತಾರೆ, ಸೀಟ್ ಕೊಟ್ಟೇವಾ? ಇವತ್ತು ಅರಕಲಗೂಡಿನಲ್ಲಿ ಟಿಕೆಟ್ ಕೊಡಿ ಎನ್ನುತ್ತಾರೆ, ಕೊಡುತ್ತೇವಾ? ಪಾಪ ಭವಾನಿ ಅವರನ್ನು ಕಾರ್ಯಕ್ರಮಕ್ಕೆ ಕರೆಯುತ್ತಾರೆ ಹೋಗಬೇಕು. ಪ್ರಜ್ವಲ್‌ ಹಾಗೂ ದೇವೇಗೌಡರಿಗೆ ಓಟು ಹಾಕಿದ್ದಾರೆ. ಆದ್ದರಿಂದ ಹೋಗಬೇಕಾಗುತ್ತದೆʼʼ ಎಂದರು.

ಇದನ್ನೂ ಓದಿ | Karnataka Politics : ಬಿಜೆಪಿಯಿಂದಲೂ ರಥಯಾತ್ರೆ ಪ್ಲಾನ್‌: ಅರುಣ್‌ ಸಿಂಗ್‌ ಸುಳಿವು

ʻʻಕಳೆದ ಮೂರು ದಿನದಿಂದ ಹಾಸನ ಟಿಕೆಟ್‌ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮ ಜಿಲ್ಲೆಯ ಎಲ್ಲಾ ಸೀಟ್ ಬಗ್ಗೆ ಕುಮಾರಸ್ವಾಮಿ, ಶಾಸಕರು, ಅಧ್ಯಕ್ಷರು, ದೇವೇಗೌಡರ ಎಲ್ಲರ ಅಭಿಪ್ರಾಯ ಪಡೆದು ತೀರ್ಮಾನ ಮಾಡುತ್ತೇವೆ. ನಾನಾಗಲಿ, ಪ್ರಜ್ವಲ್ ಆಗಲಿ ಏನು ಹೇಳುತ್ತೇವೆ ಎಂಬುವುದು ಮುಖ್ಯವಲ್ಲ ಎಂದು ಟಿಕೆಟ್ ಹಂಚಿಕೆ ಗೊಂದಲಕ್ಕೆ ತೆರೆ ಎಳೆದರು.

ʻʻಕುಟುಂಬ ರಾಜಕಾರಣ ಎನ್ನುವುದಾದರೆ ಎಲ್ಲ ರಾಜಕೀಯ ಪಕ್ಷದ ನಾಯಕರು, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಎಂದು ಕಾನೂನು ಮಾಡಲಿ. ಬೇಕಿದ್ದರೆ ಪ್ರಜ್ವಲ್, ಸೂರಜ್‌ ರಾಜಿನಾಮೆ ಕೊಡಿಸುತ್ತೇನೆ. ಕುಮಾರಸ್ವಾಮಿ ಏನು ಹೇಳುತ್ತಾರೆ ಅದೇ ನಮಗೆ ಅಂತಿಮʼʼ ಎಂದ ಅವರು, ದೇವೇಗೌಡರ ಕಣ್ಣಮುಂದೆ ಸರ್ಕಾರ ತರಬೇಕು ಎಂದು ಕುಮಾರಸ್ವಾಮಿ ಹೋರಾಟ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಇದನ್ನೂ ಓದಿ | B.S. Yediyurappa : ಮತ್ತೆ ಚುನಾವಣೆಗೆ ಸ್ಪರ್ಧೆ ಮಾಡುವ ಕುರಿತು ಬಿ.ಎಸ್‌. ಯಡಿಯೂರಪ್ಪ ಮಹತ್ವದ ಘೋಷಣೆ

ಕೊಟ್ಟ ಮಾತಿನಂತೆ ನಡೆಯುವ ರಾಜಕಾರಣಿ ಇದ್ದರೆ ಅದು ಕುಮಾರಸ್ವಾಮಿ ಮಾತ್ರ. ಕೊಟ್ಡ ಮಾತಿನಂತೆ ರೈತರ ಸಾಲ ಮನ್ನಾ ಮಾಡಿದರು. ನಮಗೆ ಬಹುಮತ ಬಂದಿಲ್ಲ, ಸಾಲ ಮನ್ನಾ ಮಾಡಲು ಆಗಲ್ಲ ಎನ್ನಬಹುದಿತ್ತು. ಆದರೆ ಕೊಟ್ಟ ಮಾತಿನಂತೆ ಕುಮಾರಸ್ವಾಮಿ ನಡೆದುಕೊಡಿದ್ದಾರೆ. ಹೊಸ ಶಾಲೆ, ಕಾಲೇಜುಗಳನ್ನು ಮಾಡಲು ಕುಮಾರಸ್ವಾಮಿ ಬರಬೇಕಾಯಿತು ಎಂದು ವಿರೋಧಿಗಳ ವಿರುದ್ಧ ಹರಿಹಾಯ್ದರು.

ಬಿಜೆಪಿಯ ಎಲ್ಲ ನಾಯಕರು ಬಂದು ಬಂದು ಜೆಡಿಎಸ್ ಬಗ್ಗೆ ಮಾತನಾಡುತ್ತಾರೆ. ನಮಗೆ ಶಕ್ತಿ ಇಲ್ಲ ಎಂದ ಮೇಲೆ ನಮ್ಮ ಹೆಸರು ಯಾಕೆ ಹೇಳುತ್ತಾರೆ. ಕಾಂಗ್ರೆಸ್ ನಾಯಕರಿಗೆ ಮಾನ ಮರ್ಯಾದೆ ಇದ್ದರೆ ಬಿಜೆಪಿ ಜತೆ ವಿಲೀನ ಮಾಡಲಿ ಎಂದರು.

ʻʻಹಾಸನ ಜಿಲ್ಲೆಗೆ ಸಂಬಂಧಪಟ್ಟಂತೆ ಕಳೆದ ಹತ್ತು ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳು ಈ ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕಿದ್ದಾರೆ ಎಂದು ಘಂಟಾಘೋಷವಾಗಿ ಹೇಳುತ್ತಿದ್ದೇನೆ. ಈ ಜಿಲ್ಲೆಯ ಜನರು ರಾಜಕೀಯವಾಗಿ ದೇವೇಗೌಡರಿಗೆ, ನನಗೆ, ಪ್ರಜ್ವಲ್‌ಗೆ ಶಕ್ತಿ ತುಂಬಿದ್ದಾರೆ. ಜಿಲ್ಲೆಯ ಜನತೆ, ನಾಯಕರ ಆಶೀರ್ವಾದದಿಂದ ನನೆಗುದಿಗೆ ಬಿದ್ದಿದ್ದ ಕೆಲಸಗಳು ಆಗಿವೆ. ಕೆಲ ಬಿಜೆಪಿ ಮುಖಂಡರು ಹಾಸನ ಬಜೆಟ್ ಎನ್ನುತ್ತಿದ್ದರು. ಈಗ ಬೇರೆ ಬೇರೆ ಜಿಲ್ಲೆಗೆ ಏನು ಅನುದಾನ ಕೊಟ್ಟಿದಾರೆ. ಹಾಗಿದ್ದರೆ ಅದು ಬಿಜೆಪಿ ಬಜೆಟ್ಟಾ? ಏನು ನನಗೆ ಗೊತ್ತಿಲ್ಲʼʼ ಎಂದರು ರೇವಣ್ಣ.

Exit mobile version