ಹಾಸನ: 60 ವರ್ಷದ ಡಕೋಟಾ ಬಸ್ ಹತ್ತಲಿ ಎಂದು ಎರಡು ವರ್ಷದಿಂದ ಕಾಂಗ್ರೆಸ್‌ನವರು ಕಾಯುತ್ತಿದ್ದರು. ಅದನ್ನು ಅಪ್ಪಿ ತಪ್ಪಿ ಆ ಶಿವಲಿಂಗೇಗೌಡ ಹತ್ತಿದ್ದಾನೆ. ಅದು ಎಲ್ಲಿಗೆ ಹೋಗಿ ನಿಂತ್ಕೊಳ್ಳುತ್ತೋ ಗೊತ್ತಿಲ್ಲ. ಈ ಕಡೆ ಅರಕಲಗೂಡಿನಲ್ಲಿ ಒಬ್ಬರನ್ನು ಡಕೋಟ ಬಸ್ ಹತ್ತಿ ಎಂದಿದ್ದರು. ಇಲ್ಲ ಇದು ಕೆಟ್ಟು ಹೋಗಿರುವ ಬಸ್ಸು ಎಂದು ಅವರು ಹತ್ತಲಿಲ್ಲ ಎಂದು ಎ.ಟಿ.ರಾಮಸ್ವಾಮಿ ವಿರುದ್ಧ ಮಾಜಿ ಸಚಿವ ಎಚ್.ಡಿ.ರೇವಣ್ಣ ಕಿಡಿಕಾರಿದರು.
ಬೇಲೂರಿನಲ್ಲಿ ಐತಿಹಾಸಿಕ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವದ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಬೆಳಗ್ಗೆ ಎದ್ದರೆ ನಮ್ಮ 60 ವರ್ಷದ ಬಸ್ ಖಾಲಿಯಾಗಿದೆ ಬನ್ನಿ ಎನ್ನುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿಯವರು ಉತ್ತರ ಭಾರತದಿಂದ ದಕ್ಷಿಣ ಭಾರತದವರಿಗೂ ಬಸ್ ಖಾಲಿ ಮಾಡಿಸಿದ್ದಾರೆ. ಅಂತಹ ಡಕೋಟ ಬಸ್ ಹತ್ತಿ ಎಂದು 20 ವರ್ಷದಿಂದ ಕೇಳುತ್ತಿದ್ದಾರೆ ಎಂದು ಹೇಳಿದರು.
ಪಾಪ ಒಬ್ಬ ಗಿರಾಕಿ ನಿಂಬೆಹಣ್ಣಿನ ವಿಚಾರ ಹೇಳುತ್ತಾನೆ. ನಿಂಬೆಹಣ್ಣು ಹಿಂಡಿಕೊಂಡು ನಾನು ಬೇಲ್ ಕ್ಯಾನ್ಸಲ್ ಮಾಡಲಿಕ್ಕೆ ಹೋಗಬೇಕಾಗಿಲ್ಲ ಎಂದು ಹೆಸರು ಹೇಳದೆ ಸಂಸದ ಡಿ.ಕೆ. ಸುರೇಶ್ ವಿರುದ್ಧ ಕಿಡಿಕಾರಿದ ಅವರು, ನಿಮ್ಮ ದಬ್ಬಾಳಿಕೆಗೆ ನಾನು ಹೆದರುವುದಿಲ್ಲ, ನಿಮ್ಮ ಚರಿತ್ರೆ ಬಿಚ್ಚಬೇಕು ಎಂದರೆ ನಾನು ಬಿಚ್ಚುತ್ತೇನೆ. ಭೂ ಅಕ್ರಮಕ್ಕೆ ಸಂಬಂಧಿಸಿದಂತೆ ಲಿಂಗೇಶ್ ಪಾತ್ರ ಇರುವ ಒಂದೇ ಒಂದು ಆರ್ಡರ್ ಕಾಪಿಯನ್ನು ಕೊಡಲಿ ನೋಡೋಣ ಎಂದು ಹೇಳಿದರು.
ಇದನ್ನೂ ಓದಿ | Karnataka Election 2023: ಕಾಂಗ್ರೆಸ್ ಟಿಕೆಟ್ ಪಡೆದಾಗ ನಿಮ್ಮ ಗಂಡಸ್ತನ ಎಲ್ಲಿತ್ತು?; ಆನಂದ್ ಸಿಂಗ್‌ಗೆ ಶೈಲಜಾ ಹಿರೇಮಠ ಪ್ರಶ್ನೆ
ಬೇಲೂರು ಶಾಸಕ ಕೆ.ಎಸ್. ಲಿಂಗೇಶ ವಿರುದ್ಧ ಭೂ ಅಕ್ರಮ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ತೇಜೋವಧೆ ಮಾಡಲು ಹೀಗೆ ಮಾಡಿದ್ದಾರೆ. ತಪ್ಪಿದ್ದರೆ ಕ್ರಮ ತೆಗೆದುಕೊಳ್ಳುತ್ತಾರೆ ಬಿಡಿ, ಅದಕ್ಕೆ ಯಾಕೆ ವರಿ ಮಾಡುತ್ತೀರಿ. ಕಾಂಗ್ರೆಸ್‌ನಲ್ಲಿ ಎಂತೆಂಥವರಿದ್ದಾರೆ. ನಾವು ಅವರ ರೀತಿ ಬೇಲ್ ಪಡೆಯಲು ಹೋಗಿದ್ದೆವಾ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರನ್ನು ಕುಟುಕಿದರು.
15 ವರ್ಷ ಗಿಣಿಯಂತೆ ಸಾಕಿದ್ದೆ
ಅರಸೀಕೆರೆ ಮಾಜಿ ಶಾಸಕ ಶಿವಲಿಂಗೇಗೌಡ ವಿರುದ್ಧ ಹರಿಹಾಯ್ದ ರೇವಣ್ಣ, ಕಳೆದ 15 ವರ್ಷ ಈ ಪಕ್ಷದಿಂದ ಕೆಲವು ಅನುಕೂಲ ಪಡೆದಿದ್ದಾರೆ. ದೇವೇಗೌಡರು, ಕುಮಾರಣ್ಣನ 15 ವರ್ಷ ಉಪಯೋಗಿಸಿಕೊಂಡಿದ್ದಾರೆ. ನಾಟಕ ಎಷ್ಟು ದಿನ ನಡೆಯುತ್ತದೆ. ಇವತ್ತು ಚನ್ನಕೇಶವ ಸ್ವಾಮಿಗೆ ಪೂಜೆ ಮಾಡಿದ್ದೇನೆ, ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ. ಅವನನ್ನು 15 ವರ್ಷ ಗಿಣಿ ಸಾಕಿದ ಹಾಗೆ ಸಾಕಿದ್ದೇನೆ. ಶ್ರೀನಾಥ್ ಚಿತ್ರದಲ್ಲಿ ಹೇಳುವಂತೆ “ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ” ಎಂಬಂತೆ ಆಗಿ ಹೋಗಿದೆ ಎಂದು ಅಸಮಾಧಾನ ಹೊರಹಾಕಿದರು.
ಶಿವಲಿಂಗೇಗೌಡ ಎರಡು ವರ್ಷದ ಹಿಂದೆಯೇ ರಾಜೀನಾಮೆ ಕೊಡಬೇಕಿತ್ತು, ಯಾರಾದರೂ ಅವರನ್ನು ಹಿಡಿದುಕೊಂಡಿದ್ದರಾ? ಇವರಿಗೆ ವೋಟ್ ಹಾಕಲು 15 ವರ್ಷ ಕುರುಬರು ಬೇಕಾಗಿತ್ತು, ಈಗ ಕುರುಬರು ವೋಟ್ ಹಾಕಲ್ಲ, ಒಕ್ಕಲಿಗರು ವೋಟ್ ಹಾಕಲ್ಲ. ಅದಕ್ಕೋಸ್ಕರ ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳುತ್ತಾರೆ, ಕಾಂಗ್ರೆಸ್‌ನವರು ಹಾಸನದಲ್ಲಿ ಸಾಬರಿಗೆ ಟೋಪಿ ಹಾಕಿ ಬಿಜೆಪಿಯನ್ನು ಗೆಲ್ಲಿಸಿದ್ದಾಯ್ತು, ಇನ್ಯಾರಿಗೆ ಟೋಪಿ ಹಾಕಲಿಕ್ಕೆ ಹೋಗುತ್ತಿದ್ದಾರೋ ಗೊತ್ತಿಲ್ಲ ಎಂದು ಕಿಡಿಕಾರಿದರು.
ಅಲ್ಪಸಂಖ್ಯಾತರಿಗೆ 2ಬಿ ಮೀಸಲಾತಿ ಮರು ಜಾರಿ ಮಾಡುತ್ತೇವೆ
ಅಲ್ಪಸಂಖ್ಯಾತರಿಗೆ 1994ರಲ್ಲಿ ದೇವೇಗೌಡರು 2b ಮೀಸಲಾತಿ ಕೊಟ್ಟರು. ಇದನ್ನು ದುರುದ್ದೇಶ ಪೂರಿತವಾಗಿ ತೆಗೆದು ಹಾಕಿದ್ದಾರೆ. ಅವರ ಶಾಪ ತಟ್ಟುತ್ತೆ, ಮುಂದೆ ಇದನ್ನು ನಾವು ಜಾರಿ ಮಾಡುತ್ತೇವೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಹಾಕಿಸಿಕೊಂಡಿತ್ತು, ಆದರೆ, ಮೀಸಲಾತಿ ಕೊಟ್ಟಿರಲಿಲ್ಲ. ಎರಡು ವರ್ಷ ಪಂಚಮಸಾಲಿ ಸ್ವಾಮೀಜಿಗಳು ಹೋರಾಟ ಮಾಡಿದರೆ ಈಗ ಅದನ್ನು ಜಾರಿ ಮಾಡಿದ್ದಾರೆ. ಅದು ಜಾರಿ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಜನರು ಎಚ್ಚರಿಕೆಯಿಂದ ಇರಬೇಕು, ಜಾತಿ ಜಾತಿ ನಡುವೆ ಸಂಘರ್ಷ ಮಾಡಿಸುತ್ತಿದ್ದಾರೆ ಎಂದರು.
ದೇವೇಗೌಡರ ಕುಟುಂಬವನ್ನು ಯಾರಿಂದಲೂ ಒಡೆಯಲು ಆಗಲ್ಲ, ಯಾರು ತಲೆ ಕೆಡಿಸಿಕೊಳ್ಳಬೇಡಿ, ದುಡ್ಡಿಲ್ಲದೆ ಜಾಹೀರಾತು ಬರುತ್ತಿದೆ. ಟಿವಿ ಮಾಲೀಕರಿಗೆ ನಮಸ್ಕಾರ ಹೇಳುತ್ತೇನೆ ಎಂದು ಕೈ ಮುಗಿದ ಅವರು, ರಾಜ್ಯದಲ್ಲಿ ಬೇರೆ ಯಾರು ಇಲ್ಲವೇ, ಅದೇನೊ ದೇವೇಗೌಡರನ್ನೇ ತೋರಿಸಬೇಕು, ದೇವೇಗೌಡರ ಕುಟುಂಬವನ್ನು ಯಾರೂ ಒಡೆಯಲಿಕ್ಕೆ ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ಎಷ್ಟೇ ಸುದ್ದಿ ಮಾಡಿದರೂ ಸಾಧ್ಯವಾಗುವುದಿಲ್ಲ. ಕುಮಾರಸ್ವಾಮಿ ಮತ್ತು ನಾನು ಹೊಡೆದಾಡಿಕೊಳ್ಳುತ್ತೇವೆ ಅಂದುಕೊಂಡರೆ ಅದು ಮೂರ್ಖತನ ಎಂದು ಹೇಳಿದರು.
ದುಡ್ಡಿಲ್ಲದೆ ಅಡ್ವರ್ಟೈಸ್‌ಮೆಂಟ್ ಸಿಗುತ್ತಿದೆ
ಮೈಸೂರು ಮಹಾರಾಜರು ಅದು, ಇದು ಎಂದು ತೋರಿಸುತ್ತಿದ್ದೀರಿ, ತೋರಿಸ್ತಿರಿ ನೀವು. ನಮಗೆ ದುಡ್ಡಿಲ್ಲದೆ ಅಡ್ವರ್ಟೈಸ್‌ಮೆಂಟ್ ಸಿಗುತ್ತಿದೆ, ಅದಕ್ಕೆ ಧನ್ಯವಾದಗಳು. ಪ್ರತಿದಿನ ಬೆಳಗ್ಗೆ ಅರ್ಧ ಗಂಟೆ ಸ್ಟೋರಿ ಮಾಡುತ್ತಿದ್ದೀರಿ. ಎಲ್ಲ ಮಾಧ್ಯಮದವರಿಗೂ ಧನ್ಯವಾದಗಳು. ದೇವೇಗೌಡರ ಕುಟುಂಬ ಬಿಟ್ಟರೆ ರಾಜ್ಯದಲ್ಲಿ ಯಾರು ಇಲ್ಲವೇ? ಅದೇನೋ ದೇವೇಗೌಡರು ಕುಟುಂಬದ ಮೇಲೆ ಹೆಚ್ಚು ಪ್ರೀತಿನಾ, ನಿಮ್ಮ ಆಶೀರ್ವಾದದಿಂದ ನಮಗೆ 123 ಸೀಟು ಬರಲಿ, ಮಾಧ್ಯಮದವರಿಗೆ ಚೆನ್ನಕೇಶವ ಸ್ವಾಮಿ ಒಳ್ಳೇದು ಮಾಡಲಿ ಎಂದು ವ್ಯಂಗ್ಯವಾಡಿದರು.
ಎರಡೂ ರಾಷ್ಟ್ರೀಯ ಪಕ್ಷಗಳ ವಿರುದ್ಧ ಕುಮಾರಸ್ವಾಮಿ ಏಕಾಂಗಿಯಾಗಿ ಹೋರಾಟ ಮಾಡುತ್ತಿದ್ದಾರೆ. ಎರಡೂ ಪಕ್ಷಗಳ ಆಡಳಿತವನ್ನು ಜನರು ನೋಡಿದ್ದಾರೆ. ಕುಮಾರಸ್ವಾಮಿ ಅವರ 14 ತಿಂಗಳ ಆಡಳಿತ ಕೂಡ ನೋಡಿದ್ದಾರೆ. ಕೊಟ್ಟ ಮಾತು ಉಳಿಸಿಕೊಳ್ಳೋ ನಾಯಕ ಕುಮಾರಸ್ವಾಮಿ. 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದಾರೆ. ಅವರು ಮತ್ತೆ ರಾಜ್ಯದ ಮುಖ್ಯಮಂತ್ರಿ ಆಗಬೇಕು ಎಂದು ದೇವರಲ್ಲಿ ಬೇಡಿದ್ದೇನೆ ಎಂದರು.
ಇದನ್ನೂ ಓದಿ | Inside Story: ನಕಲಿ ಅಭ್ಯರ್ಥಿ ಪಟ್ಟಿಗೆ ಬಿಜೆಪಿ ಸಭೆ ಗಲಿಬಿಲಿ: ಘಟಾನುಘಟಿಗಳಿಗೇ ಶಾಕ್ ನೀಡಿದ ಕಿಲಾಡಿಗಳು
ಹಾಸನ ಟಿಕೆಟ್ ಯಾವಾಗ ಘೋಷಣೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ ಅವರು, ಎಲ್ಲ ಆಗುತ್ತೆ ನಡಿಯಿರಿ, ಎಲ್ಲವೂ ಪರದೆ ಮೇಲೆ ಬರುತ್ತೆ ಎಂದು ನಗುತ್ತಾ ನಿರ್ಗಮಿಸಿದರು.