ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದ ಸಂತ್ರಸ್ತೆಯನ್ನು ಅಪಹರಿಸಿದ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ (A 1) ಮಾಜಿ ಸಚಿವ ಎಚ್.ಡಿ.ರೇವಣ್ಣ (HD Revanna) ಅವರನ್ನು ಎಸ್‌ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ತಡರಾತ್ರಿವರೆಗೂ ರೇವಣ್ಣ ಅವರನ್ನು ವಿಚಾರಣೆ ನಡೆಸಿದ್ದಾರೆ. ಈ ವೇಳೆ ರೇವಣ್ಣ ಅವರು ಮಹಿಳೆಯ ಅಪಹರಣಕ್ಕೆ ಸಂಬಂಧಿಸಿದಂತೆ ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ.
ಆತಂಕದಲ್ಲಿ ರೇವಣ್ಣ
ಎಸ್‌ಐಟಿ ವಶದಲ್ಲಿರುವ ರೇವಣ್ಣ ಒತ್ತಡದಲ್ಲಿರುವಂತೆ ಕಂಡು ಬಂತು. ಮುಂದೇನಾಗುತ್ತೋ ಎನ್ನುವ ಆತಂಕದಲ್ಲಿ ಅವರು ತಡರಾತ್ರಿಯವರೆಗೂ ನಿದ್ದೆ ಮಾಡಲಿಲ್ಲ ಎಂದು ಮೂಲಗಳು ತಿಳಿಸಿವೆ. ಇಂದು (ಭಾನುವಾರ) ಬೆಳಗ್ಗೆ ಎಚ್.ಡಿ.ರೇವಣ್ಣ ಅವರನ್ನು ಎಸ್‌ಐಟಿ ಅಧಿಕಾರಿಗಳು ನ್ಯಾಯಾಧೀಶರ ಎದುರು ಹಾಜರುಪಡಿಸಲಿದ್ದಾರೆ. ಕೋರಮಂಗಲದಲ್ಲಿರುವ ನ್ಯಾಯಾಧೀಶರ ಎದುರು ಹಾಜರುಪಡಿಸಲಿರುವ ಅಧಿಕಾರಿಗಳು, ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ. ನ್ಯಾಯಾಧೀಶರು ರೇವಣ್ಣ ಅವರನ್ನು ನ್ಯಾಯಾಂಗ ಬಂಧನಕ್ಕೆ ವಹಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದಾಗ್ಯೂ, ರೇವಣ್ಣ ಅವರನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲು ಎಸ್‌ಐಟಿ ಅಧಿಕಾರಿಗಳಿಗೆ ಭಾನುವಾರ ಸಂಜೆವರೆಗೆ ಸಮಯವಿದೆ.
ಈ ರೀತಿ ಹಾಜರುಪಡಿಸಿದಾಗ ನ್ಯಾಯಾಧೀಶರಿಗೆ ಪಿಸಿ ಕಸ್ಟಡಿಗೆ ನೀಡಲು ಅವಕಾಶವಿಲ್ಲ. ಹೀಗಾಗಿ ರೇವಣ್ಣ ಅವರು ಪರಪ್ಪನ ಅಗ್ರಹಾರ ಜೈಲು ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ. ಇತ್ತ ರೆಗ್ಯುಲರ್ ಬೇಲ್‌ಗೆ ಅರ್ಜಿ ರೇವಣ್ಣ ಪರ ವಕೀಲರು ಅರ್ಜಿ ಸಲ್ಲಿಸಲಿದ್ದಾರೆ. ಬೇಲ್ ಅರ್ಜಿಗೆ ಆಕ್ಷೇಪಣೆ ಸಲ್ಲಿಸಿ ಎಸ್‌ಐಟಿ ಪರ ವಕೀಲರೂ ಕಸ್ಟಡಿಗೆ ಕೇಳಲಿದ್ದಾರೆ ಎನ್ನಲಾಗಿದೆ.
ಎಸ್‌ಐಟಿ ಸೆಲ್‌ನಲ್ಲಿ ಗಳಗಳನೆ ಅತ್ತ ರೇವಣ್ಣ
ಶಿನಿವಾರ ಎಚ್.ಡಿ.ರೇವಣ್ಣ ಅವರನ್ನು ವಶಕ್ಕೆ ಪಡೆದುಕೊಂಡಿರುವ ಎಸ್‌ಐಟಿ ಅಧಿಕಾರಿಗಳು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಿದ್ದಾರೆ. ಇದಾದ ಬಳಿಕ ಎಚ್.ಡಿ.ರೇವಣ್ಣ ಅವರನ್ನು ಅಧಿಕಾರಿಗಳು ಸಿಐಡಿ ಕಚೇರಿಗೆ ಕರೆದುಕೊಂಡು ಹೋಗಿದ್ದು, ಇಡೀ ರಾತ್ರಿ ಎಸ್‌ಐಟಿ ಸೆಲ್‌ನಲ್ಲಿಯೇ ಮಾಜಿ ಸಚಿವ ಕಳೆದಿದ್ದಾರೆ. ಇನ್ನು, ಎಸ್‌ಐಟಿ ಸೆಲ್‌ನಲ್ಲಿ ಎಚ್.ಡಿ.ರೇವಣ್ಣ ಅವರು ಗಳಗಳನೆ ಅತ್ತಿದ್ದಾರೆ ಎನ್ನಲಾಗಿದೆ. ಮಗ ವಿದೇಶಕ್ಕೆ ಪರಾರಿಯಾಗಿದ್ದಾನೆ. ಪ್ರಕರಣ ರಾಜ್ಯಾದ್ಯಂತ ಸುದ್ದಿಯಾಗಿದೆ. ಈಗ ನಾನು ಸೆಲ್‌ನಲ್ಲಿ ಇರಬೇಕಾಯಿತಲ್ಲ ಎಂಬುದನ್ನು ನೆನೆದು ರೇವಣ್ಣ ಕಣ್ಣೀರು ಹಾಕಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: HD Revanna: ಫಲಿಸಲಿಲ್ಲ ಜ್ಯೋತಿಷಿ ಭವಿಷ್ಯ, ಹೋಮ; ರೇವಣ್ಣರನ್ನು ‘ನಿಂಬೆಹಣ್ಣೂ’ ಕಾಪಾಡಲಿಲ್ಲ!
ಈ ಮಧ್ಯೆ ಮೈಸೂರಿನ ತೋಟದ ಮನೆಯಿಂದ ರಕ್ಷಿಸಲ್ಪಟ್ಟ ಸಂತ್ರಸ್ತ ಮಹಿಳೆಯು ಎಸ್‌ಐಟಿ ಅಧಿಕಾರಿಗಳ ಕಸ್ಟಡಿಯಲ್ಲಿದ್ದರೂ ರೇವಣ್ಣ ಕುಟುಂಬದ ಭಯದಲ್ಲಿದ್ದಾರೆ. “ನಮ್ಮನ್ನೆಲ್ಲ ಅವರು ಸಾಯಿಸಿಬಿಡ್ತಾರೆ. ನನಗೆ ಭಯವಾಗುತ್ತಿದೆ” ಎಂದಷ್ಟೇ ಮಹಿಳೆಯು ಹೇಳುತ್ತಿದ್ದಾರೆ ಎನ್ನಲಾಗಿದೆ. ಎಸ್‌ಐಟಿ ಅಧಿಕಾರಿಗಳು ಭದ್ರತೆ ಕುರಿತು ಎಷ್ಟು ಹೇಳಿದರೂ ಮಹಿಳೆಯು ಮಾನಸಿಕವಾಗಿ ಕುಗ್ಗಿದ್ದಾರೆ. ಅವರಿಗೆ ಎಚ್.ಡಿ.ರೇವಣ್ಣ ಕುಟುಂಬಸ್ಥರು ಏನಾದರೂ ಮಾಡಿಬಿಡುತ್ತಾರೆ ಎಂಬ ಭಯ ಕಾಡುತ್ತಿದೆ. ಇದರ ಬೆನ್ನಲ್ಲೇ, ಕೆ.ಆರ್.ನಗರ ಪೊಲೀಸ್ ಠಾಣೆಯಲ್ಲಿ ಅಪಹರಣದ ಕುರಿತು ಕೇಸ್ ದಾಖಲಿಸಿದ ಪುತ್ರನಿಗೂ ಜೀವ ಭಯ ಕಾಡುತ್ತಿದೆ ಎಂದು ಹೇಳಲಾಗುತ್ತಿದೆ. ಪ್ರಕರಣದಲ್ಲಿ ಮಹತ್ತರ ಮುನ್ನಡೆ ಸಾಧಿಸಲು ಎಸ್‌ಐಟಿ ಅಧಿಕಾರಿಗಳು ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ, ಸೂಕ್ತ ಭದ್ರತೆ ಒದಗಿಸುವ ಕುರಿತು ಭರವಸೆ ನೀಡುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.