Site icon Vistara News

ತ್ರಿವಳಿ ಕೊಲೆ ಹಂತಕರ ಬಂಧನಕ್ಕೆ ಆಗಸ್ಟ್‌ 5ರ ಗಡುವು ನೀಡಿದ ಎಚ್‌ಡಿಕೆ, ಇಲ್ಲದಿದ್ದರೆ ಸತ್ಯಾಗ್ರಹ ಬೆದರಿಕೆ

HDK fAZIL

ಮಂಗಳೂರು: ಪ್ರವೀಣ್ ನೆಟ್ಟಾರು, ಕಳಂಜದ ಮಸೂದ್ ಹಾಗೂ ಸುರತ್ಕಲ್‌ನ ಮೊಹಮ್ಮದ್‌ ಫಾಝಿಲ್ ಕೊಲೆ ಪ್ರಕರಣದಲ್ಲಿ ಸರಿಯಾದ ರೀತಿ ತನಿಖೆ ಆಗದಿದ್ದರೆ, ಮೂರು ಪ್ರಕರಣಗಳಲ್ಲಿ ನೈಜ ಆರೋಪಿಗಳನ್ನು ಆಗಸ್ಟ್ 5 ರೊಳಗೆ ಬಂಧಿಸದಿದ್ದರೆ ಮರುದಿನದಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಶಾಂತಿಯುತ ಸತ್ಯಾಗ್ರಹ ಕೂರುವುದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ರಾಜ್ಯ ಸರ್ಕಾರಕ್ಕೆ ಗಡುವು ನೀಡಿದ್ದಾರೆ.

ಇತ್ತೀಚೆಗೆ ಹತ್ಯೆಯಾದ ಈ ಮೂವರು ಯುವಕರ ಮನೆಗಳಿಗೆ ಇಂದು ಭೇಟಿ ನೀಡಿ ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ ನಂತರ ಮಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಹೆಚ್ ಡಿಕೆ, ಮೂವರ ಮನೆಗಳಿಗೂ ಹೋಗಿ ಸಾಕಷ್ಟು ಮಾಹಿತಿ ಪಡೆದಿದ್ದೇನೆ‌. ಅಲ್ಲೇ ಹೆಚ್ಚು ಹೊತ್ತು ಇದ್ದು ನಾನು ಸಾಂತ್ವಾನ ಹೇಳಿದ್ದೇನೆ. ನನ್ನದು ಫ್ಲೈಯಿಂಗ್ ವಿಸಿಟ್ ಅಲ್ಲ ಎಂದರು.

ʻʻಸರ್ಕಾರದಿಂದ ನ್ಯಾಯ ಸಿಗುವ ಬಗ್ಗೆ ಮೃತರ ಮನೆಯವರಿಗೆ ಅನುಮಾನ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳೂರಿಗೆ ಬಂದು ಏನು ಸಾಧಿಸಿದರು? ಎರಡು ಸಮುದಾಯದ ಜನರಿಗೆ ಒಂದು ಒಳ್ಳೆಯ ಸಂದೇಶ ಕೊಡುತ್ತಾರೆ ಎಂದು ನಾನು ನಿರೀಕ್ಷೆ ಇಟ್ಟಿದ್ದೆ. ಮೃತ ಪ್ರವೀಣ್ ನೆಟ್ಟಾರು ಮನೆಗೆ ಸಿಎಂ ಭೇಟಿ ಮಾಡಿದರು. ಮಸೂದ್ ಮನೆಗೆ ಭೇಟಿ ನೀಡಲಿಲ್ಲ. ಅವತ್ತೇ ಸುರತ್ಕಲ್ ನಲ್ಲೂ ಕೊಲೆಯಾಗಿತ್ತು. ಆದರೆ, ಅಲ್ಲಿಗೂ ಹೋಗಲಿಲ್ಲʼʼ ಎಂದರು.

ಡಿಜಿಪಿ ವಿರುದ್ಧ ವಾಗ್ದಾಳಿ
ʻʻರಾಜ್ಯದ ಡಿಜಿಪಿ ಪ್ರವೀಣ್ ಸೂದ್ ಇಂದು ಬಂದಿದ್ದು ನೋಡಿ ನಾನು ಏನೋ ಮಹಾನ್ ಸಂದೇಶ ಕೊಡಲು ಬಂದಿದ್ದಾರೆಂದು ಅಂದುಕೊಂಡಿದ್ದೆ. ಘಟನೆ ನಡೆದ ದಿನ ಡಿಜಿಪಿ ಇಲ್ಲಿಗೆ ಬರಬೇಕಿತ್ತು. ಬೆಂಗಳೂರಿನಲ್ಲಿ ಅಂತಹ ಘನಂಧಾರಿ ಕೆಲಸ ಏನಿತ್ತು? ವರ್ಗಾವಣೆ ದಂಧೆಯ ಹಣ ಎಣಿಸುವ ಕೆಲಸ ಇತ್ತಾ?ʼʼ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಸಿಎಂ ಬಂದಾಗ ಕೂಡ ಡಿಜಿಪಿ ಬರಲಿಲ್ಲ
ʻʻಡಿಜಿಪಿ ಅವರು ಇವತ್ತು ನಾನು ಬಂದ ವಿಮಾನದಲ್ಲೇ ಡಿಜಿಪಿ ಅವರು ಬಂದರು. ಅವರು ಮೂರು ಕುಟುಂಬದ ಸದಸ್ಯರನ್ನು ಭೇಟಿ ಮಾಡಿ, ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡುತ್ತಾರೆ ಅಂತಾ ಅಂದುಕೊಂಡಿದ್ದೆ. ಆದರೆ ಇವರು ಬಂದು ಸಭೆ ಮಾಡಿ ಹೋಗಿದ್ದಾರೆ. ಆರ್.ಎಸ್.ಎಸ್ ಸೂಚನೆಯನ್ನು ಪೊಲೀಸ್ ಅಧಿಕಾರಿಗಳಿಗೆ ಹೇಳಲು ಬಂದಿದ್ದರೆಂದು ನನಗನ್ನಿಸುತ್ತದೆ. ಡಿಜಿಪಿ ಅವರು ಮುಖ್ಯಮಂತ್ರಿ ಗಿಂತ ದೊಡ್ಡವರಾ? ಆವತ್ತು ಸಿಎಂ ಬಂದಾಗ ಯಾಕೆ ಬರಲಿಲ್ಲʼʼ ಎಂದು ಡಿಜಿಪಿ ವಿರುದ್ಧ ಹರಿಹಾಯ್ದರು.

ಸಂಧಾನಕ್ಕೆ ಕರೆದು ಕೊಂದರು
ʻʻಕಳಂಜದ ಮಸೂದ್ ಕುಟುಂಬವನ್ನು ಭೇಟಿ ಮಾಡಿದ್ದೆ. ಒಂದು ಕರುವನ್ನು ಯಾರೊ ಒಬ್ಬರು ಸಾಕುವುದಕ್ಕೆ ಕೊಟ್ಟಿದ್ದರು ಎಂದು ಮನೆಯವರು ಹೇಳಿದ್ದಾರೆ. ಮಸೂದ್ ಆ ಕರುವನ್ನು ಮೇಯಿಸಲು ಕರೆದೊಯ್ಯುತ್ತಿದ್ದ. ಕೆಲ ಯುವಕರು ಈತನನ್ನು ಗುರಾಯಿಸುತ್ತಿದ್ದರು. ಘರ್ಷಣೆ ನಡೆದು ಸಂಧಾನಕ್ಕೆ ಕರೆದಿದ್ದರು. ಆದರೆ ಸಂಧಾನಕ್ಕೆ ಕರೆದವರು ಮಸೂದ್ ಹತ್ಯೆ ಮಾಡಿದ್ದಾರೆ. ಹತ್ಯೆ ನಡೆದ ದಿನವೇ ಕರುವೂ ಸತ್ತು ಹೋಗಿದೆ ಎಂದು ತಿಳಿಸಿದರುʼʼ ಎಂದರು ಎಚ್‌ಡಿಕೆ.

ʻʻಇನ್ನು ಪ್ರವೀಣ್​ ಹಂತಕರಿಗೆ ಶಿಕ್ಷೆ ವಿಧಿಸಬೇಕು ಎಂಬುದು ಕುಟುಂಬ ಸದಸ್ಯರ ಆಗ್ರಹವಾಗಿದೆ. ಈ ಅಂಶವನ್ನು ಸರ್ಕಾರದ ಗಮನಕ್ಕೆ ತರುತ್ತೇನೆ. ಕಾಟಾಚಾರಕ್ಕೆ ತನಿಖೆ ಮಾಡುವುದು ಬೇಡ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಸರ್ಕಾರ ಕಾಟಾಚಾರಕ್ಕೆ ಎನ್​ಐಎ ತನಿಖೆಗೆ ವಹಿಸಿದೆ. ಇವರು ತಮ್ಮ ಜವಾಬ್ದಾರಿ ಕಳೆದುಕೊಳ್ಳಲು ರಾಷ್ಟ್ರೀಯ ತನಿಖಾ ದಳಕ್ಕೆ ತನಿಖೆಯ ಜವಾಬ್ದಾರಿ ವಹಿಸಿದ್ದಾರೆʼʼ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ʻʻಎರಡು ರಾಷ್ಟ್ರೀಯ ಪಕ್ಷಗಳು ಅವರ ಸ್ವಾರ್ಥದ ರಾಜಕಾರಣಕ್ಕೆ ಜಿಲ್ಲೆಯ ಶಾಂತಿಯನ್ನು ಬಲಿ ಕೊಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಷ್ಟೆಲ್ಲಾ ಪ್ರಕರಣ ನಡೆದಿವೆ. ಬಿಜೆಪಿ ಅಥವಾ ಕಾಂಗ್ರೆಸ್​ನ ಮಂತ್ರಿಗಳ ಮಕ್ಕಳು ಅಥವಾ ಶಾಸಕರ ಮಕ್ಕಳು ಬಲಿಯಾಗಿದ್ದಾರಾ? ಪ್ರಮುಖ ನಾಯಕರ ಮಕ್ಕಳು ಬಲಿಯಾಗಿದ್ದಾರಾ?ʼʼ ಎಂದು ಪ್ರಶ್ನಿಸಿದ ಅವರು, ʻʻಮೃತಪಟ್ಟವರು ಎಲ್ಲರೂ ಬಡ ಕುಟುಂಬದ ಮಕ್ಕಳೇ ಆಗಿದ್ದಾರೆ. ಕಳೆದ 15 ವರ್ಷಗಳಿಂದ ರಾಜಕೀಯ ಮುಖಂಡರು ತಮ್ಮ ಶಕ್ತಿಯನ್ನ ಬೆಳೆಸಿಕೊಳ್ಳಲು ಇಂಥ ವಾತಾವರಣ ಸೃಷ್ಟಿ ಮಾಡಿದ್ದಾರೆ. ಇದು ಇಲ್ಲಿಗೆ ಕೊನೆಯಾಗಬೇಕು ಎಂದು ಎಲ್ಲರಿಗೂ ಮನವಿ ಮಾಡುತ್ತೇನೆ. ಚುನಾವಣೆಯಲ್ಲಿ ಗೆಲಲ್ಲು ನಾನು ಇಲ್ಲಿಗೆ ಬಂದಿಲ್ಲ. ಶಾಂತಿ ಸೌಹಾರ್ದತೆ ಕಾಪಾಡಬೇಕುʼʼ ಎಂದು ಮನವಿ ಮಾಡಿದರು.

ʻʻಕಾಂಗ್ರೆಸ್ ಸರ್ಕಾರ ಇದ್ದಾಗ ಕೂಡ ಇದೇ ರೀತಿ ನಡೆಯಿತು.ಆಗ ನೀವು ಜನರಿಗೆ ಏನನ್ನು ಕೊಟ್ಟಿರಿ, ಆಗ ಇಲ್ಲಿ ರಾಮನಾಥ ರೈ ಮತ್ತು ಯು.ಟಿ.ಖಾದರ್ ಉಸ್ತುವಾರಿ ಸಚಿವರಾಗಿದ್ದರು. ಆಗ ನೀವು ಏನು ಮಾಡಿದಿರಿʼʼ ಎಂದು ಕಾಂಗ್ರೆಸ್ ನಾಯಕರ ವಿರುದ್ಧವೂ ವಾಗ್ದಾಳಿ ನಡೆಸಿದರು.

ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ, ವಿಧಾನ ಪರಿಷತ್ ಸದಸ್ಯರಾದ ಬಿಎಂ ಫಾರೂಕ್, ಭೋಜೆಗೌಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷದ ಮುಖಂಡರು ಹಾಜರಿದ್ದರು.

ಇದನ್ನೂ ಓದಿ| ಹತ್ಯೆಗೊಳಗಾದ ಮೂವರ ಮನೆಗೂ ಎಚ್‌ಡಿಕೆ ಭೇಟಿ, ತಲಾ 5 ಲಕ್ಷ ರೂ. ಪರಿಹಾರ,  ಕುಟುಂಬಗಳಿಗೆ ಸಾಂತ್ವನ

Exit mobile version