Site icon Vistara News

JDS BJP alliance : ಜೆಡಿಎಸ್ – ಬಿಜೆಪಿ ಮೈತ್ರಿಗೆ ರಾಮನಗರ ಮುಖಂಡರ ಸಮ್ಮತಿ; ಡಿವಿಜನ್‌ ಮಟ್ಟದ ಸಭೆಗೆ ಎಚ್‌ಡಿಕೆ ಮುಂದು

JDS Ramanagara Meeting

ರಾಮನಗರ: ಬಿಜೆಪಿ ಜತೆ ಜೆಡಿಎಸ್ ಮೈತ್ರಿಯ (JDS BJP alliance) ಬಗ್ಗೆ ಪಕ್ಷದ ವರಿಷ್ಠರು ಕೈಗೊಂಡಿರುವ ನಿರ್ಧಾರಕ್ಕೆ ಪೂರ್ಣ ಸಹಮತ ವ್ಯಕ್ತಪಡಿಸಿದ ರಾಮನಗರ ಜಿಲ್ಲೆಯ ಜೆಡಿಎಸ್ ಮುಖಂಡರು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಆದೇಶಕ್ಕೆ ತಕ್ಕಂತೆ ಕೆಲಸ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಅಲ್ಲದೆ, ಇದೇ ಸಂದರ್ಭದಲ್ಲಿ ಮಾತನಾಡಿದ ಮಾಜಿ ಸಿಎಂ, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (Former CM and JDS legislature party leader HD Kumaraswamy), ಮುಂದಿನ ದಿನಗಳಲ್ಲಿ ಡಿವಿಜನ್ ಮಟ್ಟದಲ್ಲಿ ಸಭೆ (JDS meeting at divisional level) ನಡೆಸಲಾಗುವುದು. 11 ಡಿವಿಜನ್‌ಗಳಲ್ಲಿ ಕೋರ್ ಕಮಿಟಿ ಸಭೆ (JDS core committee meeting) ಮಾಡಲಾಗುವುದು. ಆ ಮೂಲಕ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿದ್ದಾರೆ.

ಬಿಡದಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ತೋಟದಲ್ಲಿ ರಾಮನಗರ ಜಿಲ್ಲಾ ಮುಖಂಡರ ಸಭೆ ನಡೆಯಿತು. ಅಲ್ಲಿ ಮುಂದಿನ ರಾಜಕೀಯ ಬೆಳವಣಿಗೆ (Political Development) ಹಾಗೂ ಲೋಕಸಭೆ ಚುನಾವಣೆಗೆ (Lok Sabha Election 2024) ಸಂಬಂಧಿಸಿದಂತೆ ವಿಸ್ತೃತ ಸಮಾಲೋಚನೆ ನಡೆಸಲಾಯಿತು.

JDS Ramanagara Meeting

ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ, ಪಕ್ಷದ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎ.ಮಂಜುನಾಥ್ ಅವರು ಜಿಲ್ಲೆಯ ಹಿರಿಯ ಮುಖಂಡರ ಜತೆ ಚರ್ಚೆ ನಡೆಸಿದರು. ಸಭೆಯಲ್ಲಿ ಮಾಗಡಿ, ಚನ್ನಪಟ್ಟಣ, ಕನಕಪುರ ಹಾಗೂ ರಾಮನಗರ ವಿಧಾನಸಭೆ ಕ್ಷೇತ್ರಗಳ ನೂರಾರು ಮುಖಂಡರು ಭಾಗಿಯಾಗಿ ತಮ್ಮ ಅಭಿಪ್ರಾಯ ಮಂಡಿಸಿದರಲ್ಲದೆ, ಪಕ್ಷ ಕೈಗೊಳ್ಳುವ ಯಾವುದೇ ನಿರ್ಧಾರಕ್ಕೆ ತಾವೆಲ್ಲರೂ ಬದ್ಧ ಎಂದು ಹೇಳಿದ್ದಾರೆ. ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಅವರು ಜಿಲ್ಲೆಯ ಮುಖಂಡರ ಜತೆ ತಮ್ಮ ಭಾವನೆಗಳನ್ನು ಹಂಚಿಕೊಂಡರು.

ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿದೆ

ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎ.ಮಂಜುನಾಥ್ ಅವರು ಮಾತನಾಡಿ; ನಮ್ಮ ವಿರೋಧಿಗಳೂ ಪಿತೂರಿ ಮಾಡಿದರು. ರಾತ್ರೋರಾತ್ರಿ ಕೂಪನ್‌ಗಳನ್ನು ಹಂಚಿ ಮುಗ್ಧ ಮತದಾರರನ್ನು ಯಾಮಾರಿಸಿ ಚುನಾವಣೆ ಗೆದ್ದಿದ್ದಾರೆ. ಈಗ ಮೆರೆಯುತ್ತಿದ್ದಾರೆ. ಇದು ಬಹಳ ದಿನ ನಡೆಯಲ್ಲ. ಕಾಂಗ್ರೆಸ್ ಮೊದಲಿನಿಂದಲೂ ನಮ್ಮ ಪಕ್ಷಕ್ಕೆ ಬೆನ್ನಿಗೆ ಚೂರಿ ಹಾಕುತ್ತಲೇ ಇದೆ. ಒಂದು ಕಡೆ ಜಾತ್ಯತೀತ ತತ್ವಗಳ ಬಗ್ಗೆ ಮಾತನಾಡುವ ಆ ಪಕ್ಷ, ಇನ್ನೊಂದೆಡೆ ಆ ತತ್ವದ ಪಕ್ಷಗಳನ್ನು ಹತ್ತಿಕ್ಕುತ್ತಿದೆ. ಜೆಡಿಎಸ್ – ಬಿಜೆಪಿ ಮೈತ್ರಿ ಬಗ್ಗೆ ಕಾಂಗ್ರೆಸ್ ವ್ಯವಸ್ಥಿತವಾಗಿ ಅಪಪ್ರಚಾರ ಮಾಡುತ್ತಿದೆ. ಅಲ್ಪಸಂಖ್ಯಾತರಿಗೆ ಜೆಡಿಎಸ್ ಅನ್ಯಾಯ ಮಾಡುತ್ತಿದೆ ಎಂದು ಕೈ ಪಕ್ಷ ಹೊಸ ಸುಳ್ಳು ಹಬ್ಬಿಸುತ್ತಿದೆ. ಹಿಂದೆ ಈ ಸಮುದಾಯ ಕಷ್ಟಕ್ಕೆ ಸಿಲುಕಿದಾಗ ಕುಮಾರಸ್ವಾಮಿ ಒಬ್ಬರೇ ದನಿ ಎತ್ತಿದ್ದು. ಇವತ್ತು ಅಲ್ಪಸಂಖ್ಯಾತರನ್ನು ಓಲೈಸುವ ಕಾಂಗ್ರೆಸ್‌ನವರಿಗೆ ಎದ್ದು ನಿಂತು ಮಾತನಾಡುವ ಯೋಗ್ಯತೆ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

2018ರಲ್ಲಿ ಕುಮಾರಸ್ವಾಮಿ ಅವರು ಅಧಿಕಾರಕ್ಕೆ ಬಂದ ಹನ್ನೊಂದನೇ ದಿನಕ್ಕೆ ರಾಮನಗರ ಜಿಲ್ಲೆಗೆ 540 ಕೋಟಿ ರೂ. ಅನುದಾನ ಕೊಟ್ಟು ಸತ್ತೆಗಾಲ ಯೋಜನೆಗೆ ಚಾಲನೆ ಕೊಟ್ಟರು. ಇವರು ಅಧಿಕಾರಕ್ಕೆ ಬಂದು ನಾಲ್ಕೈದು ತಿಂಗಳು ಆಯಿತು. ಇನ್ನು ಜಿಲ್ಲೆಗೆ ಒಂದು ಬಿಡಿಗಾಸು ಅನುದಾನ ಬಂದಿಲ್ಲ ಎಂದು ಅವರು ಟೀಕಿಸಿದರು.

ಕಾರ್ಯಕರ್ತರಿಗೆ ಬೆದರಿಕೆ

ಪೊಲೀಸ್ ಠಾಣೆಗಳ ಮೂಲಕ ನಮ್ಮ ಮುಖಂಡರು, ಕಾರ್ಯಕರ್ತರಿಗೆ ಹೆದರಿಸಿ ಕಾಂಗ್ರೆಸ್ ಪಕ್ಷಕ್ಕೆ ಸೇರಿಸಿಕೊಳ್ಳುವ ನೀಚ ಕೆಲಸ ಮಾಡುತ್ತಿದ್ದಾರೆ. ಆಮಿಷ ಒಡ್ಡುವ ಹೀನ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಲೋಕಸಭೆ ಚುನಾವಣೆಯಲ್ಲಿ ನಾವು ತಕ್ಕ ಉತ್ತರ ಕೊಡಬೇಕಿದೆ. ಸಂಸದರು ಕ್ಷುಲ್ಲಕ ರಾಜಕೀಯ ಮಾಡುತ್ತಿದ್ದಾರೆ. ಲೋಕಲ್ ರಾಜಕೀಯ ಮಾಡಿಕೊಂಡು ಪುಢಾರಿ ಕೆಲಸ ಮಾಡುತ್ತಿದ್ದಾರೆ. ಮೂರು ಸಲ ಗೆದ್ದು ಏನು ಮಾಡಿದರು? ಕೇಸ್ ಹಾಕಿಸುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಮಂಜುನಾಥ್ ಹೇಳಿದರು.

ಇದನ್ನೂ ಓದಿ: Namma Metro : ನಾಳೆಯಿಂದಲೇ ಸಂಪೂರ್ಣ ನೇರಳೆ ಮಾರ್ಗಕ್ಕೆ ಚಾಲನೆ; ಖಡಕ್‌ ವಾರ್ನಿಂಗ್‌ ಕೊಟ್ಟರು ಮೋದಿ!

ಪೊಲೀಸರನ್ನು ಬಳಕೆ ಮಾಡಿಕೊಂಡು ನಾವು ರಾಜಕೀಯ ಮಾಡಿಲ್ಲ, ಅದನ್ನು ಕುಮಾರಣ್ಣ ಕಲಿಸಲಿಲ್ಲ. ಆದರೆ, ಪೊಲೀಸರು ಎಚ್ಚರಿಕೆಯಿಂದ ಕೆಲಸ ಮಾಡಬೇಕು. ನಮ್ಮ ಮುಖಂಡರು, ಕಾರ್ಯಕರ್ತರಿಗೆ ತೊಂದರೆ ಕೊಟ್ಟರೆ ನಿಮ್ಮ ವಿರುದ್ಧ ಹೋರಾಟ ಮಾಡುತ್ತೇವೆ. ಆಯಾ ಪೊಲೀಸ್ ಠಾಣೆಗಳ ಮುಂದೆ ಹೋರಾಟ ಮಾಡುತ್ತೇವೆ ಎಂದು ಮಂಜುನಾಥ್‌ ಎಚ್ಚರಿಕೆ ನೀಡಿದರು.

Exit mobile version