ಬೆಂಗಳೂರು: ತುಮಕೂರಿನಲ್ಲಿ ಸೂಕ್ತ ಕಾಲದಲ್ಲಿ ಚಿಕಿತ್ಸೆ ಲಭಿಸದೆ ಗರ್ಭಿಣಿ ಹಾಗೂ ಅವಳಿ ಮಕ್ಕಳು ಪ್ರಾಣ ಕಳೆದುಕೊಂಡ ಬೆನ್ನಲ್ಲೇ, ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೂ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ತುರ್ತು ಪರಿಸ್ಥಿತಿಯಲ್ಲಿ ಚಿಕಿತ್ಸೆ ನಿರಾಕರಿಸಿದೆ ಕೆಲಸದಿಂದ ವಜಾ ಮಾಡುವುದರ ಜತೆಗೆ ಕ್ರಿಮಿನಲ್ ಮೊಕದ್ದಮೆಯನ್ನೂ ಹೂಡಲಾಗುತ್ತದೆ ಎಂದು ತಿಳಿಸಲಾಗಿದೆ.
ಭಾರತಿನಗರದ ಅಭಯ ಆಂಜನೇಯನ ಸ್ವಾಮಿ ದೇವಸ್ಥಾನದ ಬಳಿ ಮನೆಯೊಂದರಲ್ಲಿ ಅವಳಿ ಮಕ್ಕಳ ಸಹಿತ 30 ವರ್ಷದ ಕಸ್ತೂರಿ ಮೃತಪಟ್ಟ ಹೃದಯವಿದ್ರಾವಕ ಘಟನೆ ನವೆಂಬರ್ 3ರಂದು ವರದಿಯಾಗಿತ್ತು. ತುಂಬ ಗರ್ಭಿಣಿಯಾಗಿದ್ದ ಕಸ್ತೂರಿ, ತುಮಕೂರು ಜಿಲ್ಲಾ ಆಸ್ಪತ್ರೆಗೆ ತೆರಳಿದಾಗ ತಾಯಿ ಕಾರ್ಡ್ ಬೇಕು ಎಂದು ಸಿಬ್ಬಂದಿ ಕೇಳಿದ್ದರು, ತಾಯಿ ಕಾರ್ಡ್ ಇಲ್ಲದ್ದರಿಂದ ಚಿಕಿತ್ಸೆ ನಿರಾಕರಿಸಲಾಗಿತ್ತು ಎಂದು ಆರೋಪಿಸಲಾಗಿತ್ತು. ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ವೈದ್ಯರು ಸೇರಿ ನಾಲ್ವರನ್ನು ರಾಜ್ಯ ಸರ್ಕಾರ ಅಮಾನತು ಮಾಡಿತ್ತು.
ಈ ಕುರಿತು ಸಭೆ ನಡೆಸಿದ್ದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್, ಯಾವುದೇ ರೋಗಿಯ ತುರ್ತು ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಎಂದು ಮೌಖಿಕ ಸೂಚನೆ ನೀಡಿದ್ದರು. ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ನಿರ್ದೇಶಕರು ಅಧಿಕೃತವಾಗಿ ಸುತ್ತೋಲೆ ಮೂಲಕ ಎಲ್ಲ ಆಸ್ಪತ್ರೆಗಳಿಗೂ ತಿಳಿಸಿದ್ದಾರೆ.
1. ತುರ್ತು ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬರುವ ರೋಗಿಗಳ ಬಳಿ ಯಾವುದೇ ದಾಖಲೆಗಳಿಲ್ಲದಿದ್ದರೂ ಚಿಕಿತ್ಸೆ ನೀಡಬೇಕು.
2. ರೋಗಿಯು ತನ್ನ ಬಳಿ ತಾಯಿ ಕಾರ್ಡ್, ಪಡಿತರ ಚೀಟಿ, ಆಧಾರ್ ಕಾರ್ಡ್‌ನಂತಹ ದಾಖಲೆಗಳನ್ನು ಹೊಂದಿಲ್ಲದಿದ್ದರೂ ತುರ್ತು ಚಿಕಿತ್ಸೆ ನೀಡಬೇಕು.
3. ಆರೋಗ್ಯ ಸೇವೆಯನ್ನು ನೀಡುವಾಗ ರೋಗಿಯ ರಾಷ್ಟ್ರೀಯತೆ, ಜಾತಿ, ವರ್ಗ, ಆರ್ಥಿಕ ಸ್ಥಿತಿಯನ್ನು ಅವಲಂಬಿಸಬಾರದು
4. ರೋಗಿಗೆ ತುರ್ತುಚಿಯ್ಸೆ ಬೇಕಿದ್ದರೆ ಆ ಸಂದರ್ಭದಲ್ಲಿ ವೈದ್ಯರು, ಶುಶ್ರೂಶಕರು ಮತ್ತು ಇತರೆ ಎಲ್ಲ ಸಿಬ್ಬಂದಿಯೂ ಸಹಕರಿಸಬೇಕು.
ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸಿದಲ್ಲಿ ಸಂಬಂಧಪಟ್ಟ ಅಧಿಕಾರಿ, ನೌಕರರನ್ನು ಸರ್ಕಾರಿ ಸೇವೆಯಿಂದ ವಜಾಗೊಳಿಸಲಾಗುವುದು ಹಾಗೂ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.