ಬೆಂಗಳೂರು: ಕೋವಿಡ್ ಮತ್ತು ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸಾರ್ವಜನಿಕರು ಆತಂಕ ಪಡುವ ಅಗತ್ಯವಿಲ್ಲ. ಈಗ ಶುರುವಾಗಿರುವುದು ಕೊರೊನಾ ನಾಲ್ಕನೇ ಅಲೆ ಅಲ್ಲ. ಆದರೆ ಮುಂಜಾಗ್ರತಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಕೊರೊನಾ ಸೋಂಕು ಪ್ರಕರಣಗಳ ಹೆಚ್ಚಳದ ಹಿನ್ನೆಲೆಯಲ್ಲಿ ಸೋಮವಾರ ನಡೆಸಿದ ತಾಂತ್ರಿಕ ಸಲಹಾ ಸಮಿತಿ ಹಾಗೂ ಹಿರಿಯ ಅಧಿಕಾರಿಗಳ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿವೆ. ಆದರೆ ರೋಗದ ತೀವ್ರತೆ ಅಥವಾ ಸಾವಿನ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿಲ್ಲ. ಪರಿಸ್ಥಿತಿಯನ್ನು ಗಂಭೀರವಾಗಿ ಅವಲೋಕಿಸಲಾಗುತ್ತಿದ್ದು, ಸದ್ಯದ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಇದನ್ನೂ ಓದಿ | ದೇಶದಲ್ಲಿ ಶುರುವಾಯ್ತಾ ಕೊರೊನಾ 4ನೇ ಅಲೆ?; ಇಂದು 8 ಸಾವಿರಕ್ಕೂ ಹೆಚ್ಚು ಕೇಸ್‌ಗಳು ದಾಖಲು
ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕು. ಹಾಗೆಯೇ ಮಕ್ಕಳು ಕೂಡ ಲಸಿಕೆ ಹಾಕಿಸಿಕೊಳ್ಳಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು, ಭೌತಿಕ ಅಂತರ ಕಾಪಾಡುವುದು ಸೇರಿ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದರಿಂದ ಸೋಂಕು ನಿಯಂತ್ರಣ ಮಾಡಲು ಸಾಧ್ಯ. ಎಂದರು.
ಇಲಾಖೆಯು ಟೆಸ್ಟ್‌ಗಳ ಸಂಖ್ಯೆಯನ್ನು ಹೆಚ್ಚಿಸಿದೆ. ಇದು ಸಹ ಬೆಂಗಳೂರಿನಲ್ಲಿ ಪ್ರಕರಣಗಳ ಸಂಖ್ಯೆ ಹೆಚ್ಚಾಗಲು ಕಾರಣವಿರಬಹುದು. ಆದರೆ ರೋಗ ಲಕ್ಷಣ ಉಲ್ಬಣಗೊಂಡು ಆಸ್ಪತ್ರೆಗೆ ದಾಖಲು ಆಗುವ ಪ್ರಕರಣಗಳು ತೀರಾ ಕಡಿಮೆ. ಇದನ್ನು ನಾಲ್ಕನೇ ಅಲೆ ಎಂದು ಹೇಳಲು ಆಗುವುದಿಲ್ಲ, ಸದ್ಯ ಅಲೆಗಳ ಪ್ರಶ್ನೆ ಉದ್ಭವಿಸಿಲ್ಲ ಎಂದರು.
ರಾಜ್ಯದ ಇತರೆ ಭಾಗಗಳಿಗೆ ಹೋಲಿಸಿದರೆ ಬೆಂಗಳೂರಿನಲ್ಲಿ ಮಾತ್ರ ಸೋಂಕಿನ ಪ್ರಮಾಣ ಹೆಚ್ಚಿದೆ. ಅದರ ಜತೆ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಕೂಡ ಉಲ್ಬಣಿಸಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳ ಪ್ರತ್ಯೇಕ ಸಭೆ ನಡೆಸಲಾಗುವುದು. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಜಿನೋಮಿಕ್ ಸೀಕ್ವೆನ್ಸಿಂಗ್ ಲ್ಯಾಬ್ ಆರಂಭಿಸಲು ತಕ್ಷಣವೇ ಕ್ರಮ ಕೈಗೊಳ್ಳುವಂತೆ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹೊಸ ರೂಪಾಂತರಿ ತಳಿಗಳ ಪತ್ತೆಗೆ ಲ್ಯಾಬ್‌ನಿಂದ ಸಹಾಯವಾಗುತ್ತದೆ. ಉಳಿದಂತೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಸಾಕಷ್ಟು ಕ್ರಮಗಳನ್ನು ಇಲಾಖೆ ತೆಗೆದುಕೊಂಡಿದೆ ಎಂದು ವಿವರಿಸಿದರು.
ನಮ್ಮ ಕ್ಲಿನಿಕ್‌ಗಳ ಆರಂಭ
ತಾಂತ್ರಿಕ ಸಲಹಾ ಸಮಿತಿ ಸಭೆ ನಂತರ ಇಲಾಖೆಯ ಪರಿಶೀಲನಾ ಸಭೆಯನ್ನೂ ನಡೆಸಲಾಗಿದೆ. ವಿಶೇಷವಾಗಿ ನಮ್ಮ ಕ್ಲಿನಿಕ್‌ಗಳ ಆರಂಭಕ್ಕೆ ಕಾಲಮಿತಿಯಲ್ಲಿ ತ್ವರಿತ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಮಂಗಳವಾರ ಮೈಸೂರಿಗೆ ಭೇಟಿ ನೀಡಲಾಗುತ್ತಿದೆ. ಯೋಗ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರು ಮೈಸೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಇಲಾಖೆ ಸಂಬಂಧಿಸಿದಂತೆ ಸಿದ್ಧತಾ ಕ್ರಮಗಳ ಬಗ್ಗೆ ಉಸ್ತುವಾರಿ ಸಚಿವ ಸೋಮಶೇಖರ್ ಅವರ ಜತೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.
ಇದನ್ನೂ ಓದಿ | ರಾಜ್ಯದಲ್ಲಿ ಏರುಗತಿಯಲ್ಲಿ ಕೋವಿಡ್: ತಾಂತ್ರಿಕ ಸಲಹಾ ಸಮಿತಿ ಸಭೆ ಕರೆದ ಸುಧಾಕರ್