Site icon Vistara News

108 ತಾಂತ್ರಿಕ ಸಮಸ್ಯೆ | ರಾಜ್ಯದ ಜನರ ಕ್ಷಮೆ ಯಾಚಿಸಿದ ಆರೋಗ್ಯ ಸಚಿವ ಸುಧಾಕರ್‌

Chikkaballapur Lok Sabha Constituency BJP Candidate Dr K Sudhakar is campaigning in various places today

ಬೆಂಗಳೂರು: 108 ಆಂಬ್ಯುಲೆನ್ಸ್ ಸೇವೆಗಳ ಸಹಾಯವಾಣಿಯಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳು ಸೃಷ್ಟಿಯಾಗಿದ್ದು, ಅದಕ್ಕೆ ಪೂರಕವಾಗಿ ಕ್ರಮ ತೆಗೆದುಕೊಳ್ಳಲಾಗಿದೆ. ರಾಜ್ಯದ ಜನರು ಈ ಕುರಿತು ಯಾವುದೇ ಆತಂಕಕ್ಕೊಳಗಾಗುವುದು ಬೇಡ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐಟಿ ಹಾರ್ಡ್‌ವೇರ್‌ನಲ್ಲಿ ಸಮಸ್ಯೆ ಸೃಷ್ಟಿಯಾಗಿದ್ದು, ಅದನ್ನು ಗುತ್ತಿಗೆ ಪಡೆದುಕೊಂಡಿರುವ ಜಿವಿಕೆ-ಇಎಂಆರ್‌ಐ(GVK-EMRI) ಸಂಸ್ಥೆ ಎಲ್ಲವನ್ನೂ ಬಗೆಹರಿಸಿದೆ. 15 ವರ್ಷ ಹಳೆಯ ತಾಂತ್ರಿಕ ವ್ಯವಸ್ಥೆ ಇದಾಗಿರುವುದರಿಂದ ಸರ್ವರ್‌ಗೆ ವೈರಸ್‌ ಸಮಸ್ಯೆಯಾಗಿದೆ. ಎಂಜಿನಿಯರ್‌ಗಳು ಮದರ್‌ ಬೋರ್ಡ್‌ ಸಮಸ್ಯೆಯನ್ನು ಸರಿಪಡಿಸಿದ್ದಾರೆ. ಇಲಾಖೆ ಎಲ್ಲಾ ಜಿಲ್ಲಾ ಆರೋಗ್ಯಾಧಿಕಾರಿಗಳ ಜತೆಗೆ ವಿಡಿಯೋ ಕಾನ್ಫರೆನ್ಸ್‌ ನಡೆಸಿಕೊಂಡು ಇದು ಕೆಲಸ ಮಾಡುತ್ತಿರುವ ಬಗ್ಗೆ ಖಚಿತ ಪಡಿಸಿಕೊಳ್ಳಲಾಗಿದೆ. ಈಗ ಕರೆಗಳನ್ನು ಸ್ವೀಕಾರ ಮಾಡಲಾಗುತ್ತಿದ್ದು, ಪ್ರತಿ ಜಿಲ್ಲೆಯಲ್ಲೂ 4-5 ಜನರಿರುವ ಬ್ಯಾಕ್‌ ಅಪ್‌ ಕಾಲ್‌ ಸೆಂಟರ್‌ ಅನ್ನು ತೆರೆಯಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗಬಾರದು ಎಂಬ ನಿಟ್ಟಿನಲ್ಲಿ ಇಲಾಖೆ ಹಲವು ಕ್ರಮಗಳನ್ನು ತೆಗೆದುಕೊಂಡಿದೆ. 108 ಸಹಾಯವಾಣಿ ಕರೆಗಳು ಆಟೋಮ್ಯಾಟಿಕ್ ಆಗಿ ಕರೆಗಳನ್ನು ಸ್ವೀಕರಿಸಿ 2 ನಿಮಿಷಗಳಲ್ಲಿ ಆಂಬ್ಯುಲೆನ್ಸ್ ವಾಹನ ಹಂಚಿಕೆ ಕಾರ್ಯ ಮಾಡುತ್ತಿತ್ತು. ತಾಂತ್ರಿಕ ಸಮಸ್ಯೆಯಿಂದ ಈಗ ಈ ಪ್ರಕ್ರಿಯೆಗೆ 6 ರಿಂದ 7 ನಿಮಿಷಗಳ ಕಾಲ ತೆಗೆದುಕೊಳ್ಳಲಾಗುತ್ತಿದೆ. ಪ್ರತಿದಿನ 7 ರಿಂದ 8 ಸಾವಿರ ಕರೆಗಳ ಬದಲು 2 ರಿಂದ 2.5 ಸಾವಿರ ಕರೆಗಳನ್ನು ಮಾತ್ರ ಸ್ವೀಕರಿಸಲು ಸಾಧ್ಯವಾಗುತ್ತಿದೆ ಎಂದರು.

ಆಂಬ್ಯುಲೆನ್ಸ್‌ ಸೇವೆ ತುರ್ತು ಸೇವೆಯಾಗಿರುವುದರಿಂದ ಬ್ಯಾಕ್‌ ಅಪ್‌ ಸರ್ವರ್‌ ಅನ್ನು ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಇದು ತಾಂತ್ರಿಕ ಸಮಸ್ಯೆ ಆಗಿದ್ದರೂ, ರಾಜ್ಯದ ಜನರಿಗೆ ತೊಂದರೆಯಾಗಿರುವುದಕ್ಕೆ ಕ್ಷಮೆ ಕೇಳುತ್ತೇನೆ. ಎಲ್ಲಾ ಜಿಲ್ಲೆಗಳಲ್ಲೂ ಅಧಿಕಾರಿಗಳು ವ್ಯವಸ್ಥಿತವಾಗಿ ಎಲ್ಲವನ್ನೂ ನಿಭಾಯಿಸಿದ್ದಾರೆ. ಜಿಲ್ಲಾ ಮಟ್ಟದ ಕಾಲ್‌ಸೆಂಟರ್‌ಗಳು ಬ್ಯಾಕ್‌ ಅಪ್‌ ಆಗಿ ಆ್ಯಕ್ಟೀವೇಟ್‌ ಆಗಿದೆ. ಇನ್ನೊಂದು ವಾರ ಈ ಬಗ್ಗೆ ಎಚ್ಚರಿಕೆಯಿಂದ ಇರುತ್ತೇವೆ. ಎಲ್ಲಿಯೂ ಲೋಪವಾಗದಂತೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಈಗಾಗಲೇ ಎಲ್ಲಾ ಆಸ್ಪತ್ರೆಗಳಿಗೆ ಇಂಟರ್ ಫೆಸಿಲಿಟಿ ಟ್ರಾನ್ಸ್‌ಫರ್‌ಗಳಿಗೆ ಮೊದಲ ಆದ್ಯತೆ ನೀಡಬೇಕೆಂದು ಸೂಚಿಸಲಾಗಿದೆ. ಆಂಬ್ಯುಲೆನ್ಸ್‌ನಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ತಮ್ಮ ವೈಯಕ್ತಿಕ ಮೊಬೈಲ್ ಸಂಖ್ಯೆಗಳಿಗೂ ಕರೆ ಬಂದರೆ ಸ್ವೀಕರಿಸಿ ಅಗತ್ಯ ಸೇವೆಗಳನ್ನು ಮಾಡಬೇಕೆಂದು ಸೂಚಿಸಲಾಗಿದೆ. ಮ್ಯಾನ್ಯುವಲ್ ಐಡಿಗಳನ್ನು ಕ್ರಿಯೇಟ್ ಮಾಡಿ ಆ ಮೂಲಕವೂ ಜನರಿಗೆ ತುರ್ತು ಸೇವೆ ಒದಗಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ತುರ್ತು ಸೇವೆ ಒದಗಿಸುವ 112 ಸಹಾಯವಾಣಿಯಲ್ಲಿರುವ 2-3 ಸಿಬ್ಬಂದಿ ಬದಲು ಅಲ್ಲಿಗೆ 7-8 ಸಿಬ್ಬಂದಿ ನಿಯೋಜನೆ ಮಾಡಲು ಸೂಚಿಸಲಾಗಿದೆ. ಈ ಮೂಲಕ 108 ಸಹಾಯವಾಣಿಯ ತಂಡದ ಮುಖ್ಯಸ್ಥರಿಗೆ ಕರೆಗಳನ್ನು ಡೈವರ್ಟ್‌ ಮಾಡಿ ಆ ಮೂಲಕ ಮ್ಯಾನ್ಯುವಲ್ ಐಡಿ ಜನರೇಟ್ ಮಾಡಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗುತ್ತಿದೆ. ಇದರ ಜತೆಗೆ 104- ಸಹಾಯವಾಣಿಯನ್ನು ಕೂಡ ಬಳಸಿಕೊಂಡು 108 -ಸಹಾಯವಾಣಿ ಮೇಲಿನ ಒತ್ತಡ ಕಡಿಮೆ ಮಾಡಲಾಗುತ್ತಿದೆ. ಮಿಸ್ಡ್ ಕಾಲ್‌ಗಳನ್ನು ಕೂಡ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದ್ದು, 108 ಸಹಾಯವಾಣಿಯಲ್ಲಿರುವ ಏಜೆಂಟ್‌ಗಳ ಸಂಖ್ಯೆಯನ್ನು ಕೂಡ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದು ತಿಳಿಸಿದರು.

ಹೊಸ ಆಂಬ್ಯುಲೆನ್ಸ್‌
ಸದ್ಯ ಆಂಬ್ಯುಲೆನ್ಸ್‌ ಸೇವೆ ನೀಡುತ್ತಿರುವ ಜಿವಿಕೆ ಕಾನೂನಾತ್ಮಕ ಹೋರಾಟ ಮಾಡಿದೆ. ಆದರೆ, ಅವರ ಸೇವೆ ಸರ್ಕಾರಕ್ಕೆ ಸಮಾಧಾನ ತಂದಿಲ್ಲ. ಈಗಾಗಲೇ ಕೋರ್ಟ್‌ ಮಾರ್ಗಸೂಚಿಯಂತೆ ಹೊಸ ಟೆಂಡರ್‌ ಆಗಿದೆ. ಒಳ್ಳೆಯ ಸೇವೆ ನೀಡುವ ಸಂಸ್ಥೆ ಇನ್ನೊಂದು ತಿಂಗಳಲ್ಲಿ 108 ಆರೋಗ್ಯ ಸೇವೆ ನೀಡಲಿದೆ. ಇದು ತಾಂತ್ರಿಕವಾಗಿ ಉತ್ಕೃಷ್ಟ ಸೇವೆಯಾಗಿರಲಿದ್ದು, ದೇಶದಲ್ಲೇ ಮಾದರಿ ಸೇವೆಯಾಗಿರಲಿದೆ ಎಂದು ತಿಳಿಸಿದರು.

ಕಾಮಾಲೆ ಕಣ್ಣಿನಿಂದ ನೋಡಬಾರದು
ಮಾಜಿ ಸಿಎಂ ಸಿದ್ದರಾಮಯ್ಯ ಆಂಬ್ಯುಲೆನ್ಸ್‌ ಸಮಸ್ಯೆಗೆ ಭ್ರಷ್ಟಾಚಾರ ಮೂಲ ಕಾರಣ ಎಂದು ಹೇಳಿರುವುದಕ್ಕೆ ಪ್ರತಿಕ್ರಿಯೆ ನೀಡಿರುವ ಸಚಿವರು, ತಾಂತ್ರಿಕವಾಗಿ ಅವರಿಗೆ ಏನೂ ಗೊತ್ತಿಲ್ಲ. ಸ್ವಲ್ಪ ತಿಳಿದುಕೊಂಡು ಮಾತನಾಡಬೇಕು. ಕಾಮಾಲೆ ಕಣ್ಣಿಂದ ಎಲ್ಲವನ್ನೂ ನೋಡಬಾರದು ಎಂದು ಹೇಳಿದರು.

ಲಿಂಗಾಯತರೇ ಕಾಂಗ್ರೆಸ್‌ ಟಾರ್ಗೆಟ್‌
ಕಾಂಗ್ರೆಸ್‌ ಲಿಂಗಾಯತ ಸಮುದಾಯವನ್ನು ಸಾಕಷ್ಟು ಟಾರ್ಗೆಟ್‌ ಮಾಡಿದೆ. 173 ಸ್ಥಾನ ತಂದುಕೊಟ್ಟ ವೀರೇಂದ್ರ ಪಾಟೀಲ್‌ರನ್ನೇ ಕುಂಟುನೆಪ ಹೇಳಿ ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕಿತ್ತು. ವಿಧಾನಸೌಧ ಕಟ್ಟಿಸಿದ್ದ ಕೆಂಗಲ್‌ ಹನುಮಂತಯ್ಯರನ್ನು ಅದರ ಉದ್ಘಾಟನೆಗೂ ಬಿಡಲಿಲ್ಲ. ಅಷ್ಟೇ ಅಲ್ಲ ಒಕ್ಕಲಿಗರಾದ ಎಸ್‌.ಎಂ.ಕೃಷ್ಣ ಅವರನ್ನು ಉತ್ತಮ ಆಡಳಿತ ನೀಡಿದರೂ ಚೆನ್ನಾಗಿ ನಡೆಸಿಕೊಳ್ಳಲಿಲ್ಲ. ಕಾಂಗ್ರೆಸ್‌ ಕೆಲವೇ ಕೆಲವು ಸಮುದಾಯವನ್ನು ಟಾರ್ಗೆಟ್‌ ಮಾಡುತ್ತಿದೆ ಎಂದು ಮತ್ತೊಮ್ಮೆ ಹೇಳಿದರು.

ಇದನ್ನೂ ಓದಿ | 108 ಆ್ಯಂಬುಲೆನ್ಸ್ ಸ್ಥಗಿತಕ್ಕೆ ಕಾರಣ ತಿಳಿಸಿದ ಆರೋಗ್ಯ ಸಚಿವ ಸುಧಾಕರ್‌: ಸಿಎಂ ಬೊಮ್ಮಾಯಿ ಜತೆ ಚರ್ಚೆ

Exit mobile version