ಬೆಂಗಳೂರು: ಕರ್ತವ್ಯ ಮುಗಿಸಿ ಮನೆಗೆ ಹೋಗುವಾಗ ಸಂಚಾರಿ ಎಎಸ್‌ಐಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟಿರುವ ಪ್ರಕರಣ ಬೆಳಕಿಗೆ ಬಂದಿದೆ. ಇವರ ಸಾವಿಗೆ ಓವರ್ ಟೈಂ ಡ್ಯೂಟಿಯೇ ಕಾರಣ ಎಂಬ ಆರೋಪ ಕೇಳಿಬಂದಿದ್ದು, ಸಿಬ್ಬಂದಿ ಮಾತನಾಡಿರುವ ಆಡಿಯೊ ವೈರಲ್ ಆಗಿದೆ.
ಶಿವಾಜಿನಗರದ ಸಂಚಾರಿ ಎಎಸ್‌ಐ ಸತ್ಯ ಎಂಬುವವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇತ್ತ ಸತ್ಯ ಅವರ ನಿಧನ ಸುದ್ದಿ ತಿಳಿಯುತ್ತಿದ್ದಂತೆ ಸಹ ಸಿಬ್ಬಂದಿಯೊಬ್ಬರ ಆಡಿಯೊ ವೈರಲ್ ಆಗಿದೆ. 24 ಗಂಟೆ ಕಾಲ ಕೆಲಸ ಮಾಡಿ ಒತ್ತಡಕ್ಕೊಳಗಾಗಿಯೇ ಹೃದಯಾಘಾತದಿಂದ ಮೃತಪಟ್ಟಿದ್ದಾರೆಂದು ಹೇಳಿದ್ದಾರೆ. ಬೆಳಗ್ಗೆ 8ಕ್ಕೆ ಕೆಲಸಕ್ಕೆ ಬಂದರೆ ಮಾರನೇ ದಿನ 8 ಗಂಟೆಯವರೆಗೆ ಡ್ಯೂಟಿ ಮಾಡಬೇಕು, ಮಾಡಿಲ್ಲ ಎಂದರೆ ಮೆಮೋ ಕಳುಹಿಸುತ್ತಾರೆ.
ಪೊಲೀಸ್ ಇಲಾಖೆಯ ಹಣೆಬರಹವೇ ಇಷ್ಟು, ಸರ್ಕಾರಕ್ಕೆ ಪೊಲೀಸರ ಬಗ್ಗೆ ಕಿಂಚಿತ್ತೂ ಕರುಣೆಯಾಗಲಿ ಇಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಎಲ್ಲ ಇಲಾಖೆಯಲ್ಲಿಯೂ 8 ಗಂಟೆಗಳ ಡ್ಯೂಟಿ ಇದ್ದರೆ ಪೊಲೀಸ್ ಇಲಾಖೆಯಲ್ಲಿ 24 ಗಂಟೆಗಳ ಡ್ಯೂಟಿ ಮಾಡುವಂತೆ ಹೇಳುತ್ತಾರೆ. ಕೆಲಸದಲ್ಲಿ ಸ್ವಲ್ಪವೂ ಬಿಡುವು ಇರುವುದಿಲ್ಲ. ಓವರ್ ಡ್ಯೂಟಿ ಮಾಡಿಲ್ಲವೆಂದರೆ ಟಾರ್ಗೆಟ್ ಮಾಡುತ್ತಾರೆ. ಇದರಿಂದ ಕಷ್ಟಪಟ್ಟಾದರೂ ಓವರ್ ಟೈಂ ಕೆಲಸ ಮಾಡುತ್ತಾರೆ. ಕೊನೆಗೆ ಒತ್ತಡಕ್ಕೆ ಸಿಲುಕಿ ಹೃದಯಾಘಾತದಿಂದ ಮೃತಪಡುತ್ತಾರೆ. ಇಲಾಖೆಯಲ್ಲಿ ಒತ್ತಡದ ಕೆಲಸ ಹೆಚ್ಚಾಗುತ್ತಿದ್ದು, ಹಲವರು ಹೃದಯಾಘಾತಕ್ಕೆ ಒಳಗಾಗುತ್ತಿದ್ದಾರೆ. ಗೃಹ ಇಲಾಖೆ ಈ ಸಂಬಂಧ ಹೆಚ್ಚಿನ ಗಮನಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಸತ್ಯ ಅವರ ನಿಧನಕ್ಕೆ ಸಹ ಸಿಬ್ಬಂದಿ ಸಂತಾಪ ಸೂಚಿಸಿದ್ದಾರೆ.
ಇದನ್ನೂ ಓದಿ | Bus Service: ಜ.24ರಂದು ಬಸ್ ಸೇವೆಯಲ್ಲಿ ವ್ಯತ್ಯಯ; ಸರ್ಕಾರದ ವಿರುದ್ಧ ಮತ್ತೆ ಸಿಡಿದೆದ್ದ ಸಾರಿಗೆ ನೌಕರರು