Site icon Vistara News

Election Affidavit: ಚುನಾವಣಾ ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆಯೇ ಸಚಿವ ಪ್ರಿಯಾಂಕ್‌ ಖರ್ಗೆ?

Priyank Kharge Education Qualifications as mentioned in Election Affidavits

#image_title

ಬೆಂಗಳೂರು: ಚುನಾವಣಾ ನಾಮಪತ್ರದಲ್ಲಿ ಸತ್ಯಾಂಶವನ್ನೇ ಹೇಳಬೇಕು ಎಂದು ನಿಯಮವಿದ್ದರೂ ಕೆಲವೊಮ್ಮೆ ರಾಜಕಾರಣಿಗಳು ತಪ್ಪು ಮಾಹಿತಿ ನೀಡಿ ಪೇಚಿಗೆ ಸಿಲುಕಿದ್ದುಂಟು. ಇದೀಗ ಐಟಿಬಿಟಿ ಸಚಿವ ಪ್ರಿಯಾಂಕ್‌ ಖರ್ಗೆ ಅವರ ಶಿಕ್ಷಣ ಕುರಿತಾಗಿ ಚರ್ಚೆಗಳು ನಡೆದಿದ್ದು, ಅಫಿಡವಿಟ್‌ನಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ ಎನ್ನಲಾಗುತ್ತಿದೆ.

ಪ್ರಿಯಾಂಕ್‌ ಖರ್ಗೆ ಅವರು ಮೊದಲಿಗೆ 2009ರ ವಿಧಾನಸಭೆ ಉಪಚುನಾವಣೆ ಮೂಲಕ ಚುನಾವಣಾ ರಾಜಕೀಯ ಪ್ರವೇಶಿಸಿದರು. ಆದರೆ ಚಿತ್ತಾಪುರ ಕ್ಷೇತ್ರಕ್ಕೆ ನಡೆದ ಆ ಚುನಾವಣೆಯಲ್ಲಿ ಸೋಲುಂಡರು. ನಂತರ 2013ರಲ್ಲಿ ಅದೇ ಕ್ಷೇತ್ರದಿಂದ ಜಯಗಳಿಸಿದರು. 2016ರಲ್ಲಿ ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಅತ್ಯಂತ ಕಿರಿಯ ಸಚಿವರಾಗಿದ್ದರು. ನಂತರ 2018ರಲ್ಲಿ ಹಾಗೂ 2023ರಲ್ಲಿ ಗೆಲ್ಲುತ್ತಲೇ ಬಂದಿದ್ದಾರೆ.

ವಾಗ್ಮಿ ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಪ್ರಬಲ ಸಮರ್ಥಕ ಚಕ್ರವರ್ತಿ ಸೂಲಿಬೆಲೆ ಅವರ ಕುರಿತು ಹಾಗೂ ಬಿಜೆಪಿ ಸರ್ಕಾರದ ಪಠ್ಯಪುಸ್ತಕ ಪರಿಷ್ಕರಣೆ ಕುರಿತು ಪ್ರತಿಕ್ರಿಯಿಸುತ್ತ, ಶಿಕ್ಷಣದ ಬಗ್ಗೆ ಪ್ರಿಯಾಂಕ್‌ ಖರ್ಗೆ ಮಾತನಾಡಿದ್ದರು. ಚಕ್ರವರ್ತಿ ಸೂಲಿಬೆಲೆ ಅವರ ಬರೆಹವನ್ನು ಶಾಲಾ ಪಠ್ಯದಲ್ಲಿ ಸೇರಿಸಲು ಅವರೇನು ಡಾಕ್ಟರೇಟ್‌ ಮಾಡಿದ್ದಾರೆಯೇ ಎಂದು ಪ್ರಶ್ನಿಸಿದ್ದರು. ಆನಂತರ ಬಿಜೆಪಿ ವಲಯದಲ್ಲಿ ಪ್ರಿಯಾಂಕ್‌ ಖರ್ಗೆ ಶಿಕ್ಷಣದ ಕುರಿತು ಭಾರೀ ಚರ್ಚೆಗಳು ಆರಂಭವಾಗಿವೆ.

2023ರ ಚುನಾವಣೆ ಅಫಿಡವಿಟ್‌ನಲ್ಲಿ ಪ್ರಿಯಾಂಕ್‌ ಖರ್ಗೆ ಅವರು ತಮ್ಮ ಶಿಕ್ಷಣವನ್ನು ನಮೂದಿಸಿದ್ದಾರೆ. ಅದರಲ್ಲಿ, 1995ರಲ್ಲಿ ಪೂರ್ಣ ಪ್ರಜ್ಞ ಎಜುಕೇಷನ್‌ ಸೊಸೈಟಿ ಹೈಸ್ಕೂಲ್‌ನಲ್ಲಿ ಎಸ್‌ಎಸ್‌ಎಲ್‌ಸಿ, ಮಲ್ಲೇಶ್ವರದ ಎಂಇಎಸ್‌ ಕಾಲೇಜಿನಲ್ಲಿ (1996) ಮೊದಲ ಪಿಯುಸಿ, ಕಂಪ್ಯೂಟರ್‌ ಆರ್ಟ್ಸ್‌ ಮತ್ತು ಅನಿಮೇಷನ್‌ನಲ್ಲಿ(1999) ಪ್ರಮಾಣೀಕೃತ ವೃತ್ತಿಪರ ಎಂದು ನಮೂದಿಸಿದ್ದಾರೆ.

ಆದರೆ 2018ರಲ್ಲಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ 1996-1998ರವರೆಗೆ ಪಿಯುಸಿ ಎಂದಷ್ಟೆ ನಮೂದಿಸಿದ್ದಾರೆ. ಉಳಿದೆಲ್ಲ ಮಾಹಿತಿ 2023ಕ್ಕೆ ಹೋಲಿಕೆಯಾಗುತ್ತವೆ. ಅಂದರೆ ಸಾಮಾನ್ಯವಾಗಿ ಎಲ್ಲರೂ ಅಫಿಡವಿಟ್‌ನಲ್ಲಿ ನಮೂದಿಸುವಂತೆ, ಪಿಯುಸಿ ತೇರ್ಗಡೆ ಎಂಬ ಅರ್ಥವನ್ನು ಇದು ನೀಡುತ್ತಿದೆ.

2013ರ ಚುನಾವಣಾ ಅಫಿಡವಿಟ್‌, ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ಲಭ್ಯವಿಲ್ಲ. ಹಾಗಾಗಿ ಅಭ್ಯರ್ಥಿಗಳ ಚುನಾವಣಾ ಅಫಿಡವಿಟ್‌ ಪ್ರಕಟಿಸುವ myneta.info ವೆಬ್‌ಸೈಟ್‌ನಲ್ಲಿ ನಮೂದಿಸಿರುವುದನ್ನು ಪರಿಗಣಿಸಿದರೆ, 12th ಅಂದರೆ ದ್ವಿತೀಯ ಪಿಯು ತೇರ್ಗಡೆ ಎಂದಿದ್ದಾರೆ. PUC from MES College Malleswaram in 1996 ಎಂದು ನಮೂದಿಸಿರುವುದಾಗಿ ವೆಬ್‌ಸೈಟ್‌ ತಿಳಿಸಿದೆ.

ಅದೇ ರೀತಿ 2009ರ ಉಪಚುನಾವಣೆ ಅಫಿಡವಿಟ್‌ ಕುರಿತು myneta.info ವೆಬ್‌ಸೈಟ್‌ನಲ್ಲಿ 10th Pass ಎಂದು ತಿಳಿಸಲಾಗಿದೆ. ಅಂದರೆ ಪ್ರಿಯಾಂಕ್‌ ಖರ್ಗೆಯವರು ಸಲ್ಲಿಸಿರುವ ಒಟ್ಟು ನಾಲ್ಕು ಅಫಿಡವಿಟ್‌ ಪೈಕಿ ಎರಡರಲ್ಲಿ ಪ್ರಥಮ ಪಿಯು ಎಂದು, ಎರಡರಲ್ಲಿ ದ್ವಿತೀಯ ಪಿಯು ಎಂದೂ ನಮೂದಿಸಿದ್ದಾರೆ. ಇದು ಸಾಕಷ್ಟು ಗೊಂದಲಕ್ಕೆ ಕಾರಣವಾಗಿದೆ. ಇದಿಷ್ಟೆ ಅಲ್ಲದೆ ಭಾನುವಾರ ಕಲಬುರಗಿಯಲ್ಲಿ ಪ್ರಿಯಾಂಕ್‌ ಖರ್ಗೆ ಅವರು ನೀಡಿರುವ ಹೇಳಿಕೆ ಯಾವುದೇ ಅಫಿಡವಿಟ್‌ನಲ್ಲಿ ಉಲ್ಲೇಖವಾಗಿಲ್ಲ.

ಲಾ ಸ್ಕೂಲ್‌ನಲ್ಲಿ ಓದಿದ್ದೇನೆ!
ಶಿಕ್ಷಣ ಬಗೆಗಿನ ವಿವಾದದ ಕುರಿತು ಕಲಬುರಗಿಯಲ್ಲಿ ಭಾನುವಾರ ಪ್ರಿಯಾಂಕ್‌ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ನನ್ನ ವಿದ್ಯಾರ್ಹತೆ ನನ್ನ ಅಫಿಡವಿಟ್‌ನಲ್ಲೇ ಇದೆ. ಅದನ್ನ ನೋಡಿಕೊಳ್ಳೋದಕ್ಕೆ ಹೇಳಿ. ನ್ಯಾಷನಲ್ ಲಾ ಸ್ಕೂಲ್‌ನಲ್ಲಿ ಹೋಗಿ ಅದನ್ನೂ ನೋಡಿಕೊಳ್ಳಲು ಹೇಳಿ. ನ್ಯಾಷನಲ್ ಲಾ ಸ್ಕೂಲ್‌ನಲ್ಲೂ ನಾನು ಪಾಸಾಗಿದ್ದೇನೆ. ನಾನು ಮಾಡಿದ ವಿದ್ಯಾಭ್ಯಾಸ ಇವರಿಗೆ ತಿಳಿಯದೇ ಇರಬಹುದು. ಅದಕ್ಕೆ ನಾನೇನು ಉತ್ತರ ಕೊಡೋದಕ್ಕೆ ಆಗಲ್ಲ.

ನನ್ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಅವರ ಸುಪ್ರೀಂ ಲೀಡರ್ ಇದ್ದಾರಲ್ಲ (ನರೇಂದ್ರ ಮೋದಿ) ಅವರ ಅರ್ಹತೆ ಏನಿದೆ ಅನ್ನೋದನ್ನ ತಿಳ್ಕೋದಕ್ಕೆ ಹೇಳಿ. ಯಾರಾದ್ರೂ ಪ್ರಧಾನ ಮಂತ್ರಿ ಅವರ ಡಿಗ್ರಿ ತಿಳ್ಕೋಳ್ಳೋಕೆ ಹೋದ್ರೆ ಆರ್‌ಟಿಐನಲ್ಲಿ ಕೊಡಬೇಡಿ ಅಂತಾ ಹೇಳಿಬಿಟ್ಟಿದ್ದಾರೆ. ಅದಕ್ಕಾಗಿ ಅರವಿಂದ್ ಕೇಜ್ರಿವಾಲ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಮೊದಲು ಅದಕ್ಕೆಲ್ಲಾ ಉತ್ತರ ಕೊಡಲಿ. ನಾನು ಚುನಾಯಿತ ಪ್ರತಿನಿಧಿ, ಜನರು ಆಯ್ಕೆ ಮಾಡಿರೋದು. ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ, ಅದನ್ನೂ ನೋಡ್ತಿದ್ದೇವೆ. ಮಾಹಿತಿ ತಂತ್ರಜ್ಞಾನ ಕಾಯ್ದೆ ಅಡಿಯಲ್ಲಿ ಬರುತ್ತದೆ. ಸ್ವಲ್ಪ ಟೈಮ್ ಕೊಡಿ, ಆರನೆಯದ್ದಲ್ಲ, ಏಳನೇ ಗ್ಯಾರಂಟಿಯೂ ಬರುತ್ತೆ. ಎಲ್ಲವನ್ನೂ ಲೀಗಲ್ ಆಗಿಯೇ ಮಾಡುತ್ತೇವೆ ಎಂದು, ಪ್ರಕರಣ ದಾಖಲಿಸುವ ಎಚ್ಚರಿಕೆಯನ್ನು ಪರೋಕ್ಷವಾಗಿ ನೀಡಿದ್ದರು.

ಆದರೆ ಇಲ್ಲಿವರೆಗೆ ಲಭ್ಯ ಅಫಿಡವಿಟ್‌ಗಳಲ್ಲಿ ಎಲ್ಲಿಯೂ ಕಾನೂನು ಪದವಿಯ ಬಗ್ಗೆಯಾಗಲಿ, ನ್ಯಾಷನಲ್‌ ಲಾ ಸ್ಕೂಲ್‌ ಬಗೆಗಿನ ಹೆಸರನ್ನಾಗಲಿ ನಮೂದಿಸಿರುವುದು ಕಂಡುಬಂದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಪ್ರಿಯಾಂಕ್‌ ಖರ್ಗೆ ಅವರ ಶಿಕ್ಷಣದ ಕುರಿತು ಬಿರುಸಿನ ಚರ್ಚೆಗಳು ನಡೆಯುತ್ತಿವೆ.

ಇದನ್ನೂ ಓದಿ: KKRDB Scam: ಕೆಕೆಆರ್‌ಡಿಬಿ ಎಂದರೆ ಕಳ್ಳಕಾಕರ ಅಭಿವೃದ್ಧಿ ಮಂಡಳಿ ಎಂದು ಪ್ರಿಯಾಂಕ್‌ ಖರ್ಗೆ ಹೇಳಿದ್ದೇಕೆ?

Exit mobile version