Site icon Vistara News

Heavy Rain | ಕಾಲು ಸಂಕ ದಾಟುವಾಗ ಜಾರಿ ಬಿದ್ದು ಶಾಲಾ ಬಾಲಕಿ ನೀರು ಪಾಲು

heavy rain

ಉಡುಪಿ: ಇಲ್ಲಿನ ಬೈಂದೂರು ತಾಲೂಕಿನ ಕಾಲ್ತೋಡು ಗ್ರಾಮದ ಬಿಜಮಕ್ಕಿಯಲ್ಲಿ ಶಾಲೆಯಿಂದ ಮನೆಗೆ ಬರುವಾಗ ಕಾಲುಸಂಕದಿಂದ ಬಿದ್ದು 7 ವರ್ಷದ ಬಾಲಕಿ ನೀರಿನಲ್ಲಿ ಕೊಚ್ಚಿ ಹೋಗಿದ್ದಾಳೆ.

ಸತತ ಮಳೆಯಿಂದ (Heavy Rain) ಕಾಲು ಸಂಕದಲ್ಲಿ ನೀರು ತುಂಬಿದೆ. ಶಾಲೆಯಿಂದ ಮನೆಗೆ ಬರುವಾಗ ಸನ್ನಿಧಿ (7) ಎಂಬ ಬಾಲಕಿ ಕಾಲು ಸಂಕ ದಾಟುವಾಗ ಕಾಲು ಜಾರಿ ನೀರು ಪಾಲಾಗಿದ್ದಾಳೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಚಪ್ಪರಿಕೆಯಲ್ಲಿ ಎರಡನೇ ತರಗತಿಯಲ್ಲಿ ಓದುತ್ತಿದ್ದಳು. ಶಾಲೆಯಿಂದ ಬಾಲಕಿ ವಾಪಸ್‌ ಆಗುವ ವೇಳೆ ಘಟನೆ ನಡೆದಿದೆ. ಕುಟುಂಬವರು ಜತೆಗೆ ಊರಿನವರು ಸನ್ನಿಧಿ ಹುಡುಕಾಟ ನಡೆಸುತ್ತಿದ್ದಾರೆ.

ಸೇತುವೆ ನಿರ್ಮಾಣ ಮಾಡದೆ ಇರುವುದೇ ಈ ಅವಘಡಕ್ಕೆ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಸದ್ಯ ಬಾಲಕಿಯ ಶೋಧ ಕಾರ್ಯ ನಡೆಯುತ್ತಿದೆ.

ಬಾಲಕಿ ಕುಟುಂಬಸ್ಥರಿಗೆ ಶಾಸಕ ಸುಕುಮಾರ್ ಶೆಟ್ಟಿ ಸಾಂತ್ವನ
ಕಾಲು ಸೇತುವೆ ದಾಟುವ ವೇಳೆ ಕಾಲುಜಾರಿ ಹೊಳೆಗೆ ಬಿದ್ದು ಬಾಲಕಿ ಕೊಚ್ಚಿ ಹೋದ ಹಿನ್ನೆಲೆಯಲ್ಲಿ ಬೈಂದೂರಿನ ಕಾಲ್ತೋಡು ಗ್ರಾಮಕ್ಕೆ ಶಾಸಕ ಸುಕುಮಾರ್ ಶೆಟ್ಟಿ ಭೇಟಿ ನೀಡಿ ಬಾಲಕಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.

ಬಾಲಕಿ ಸಾವಿಗೆ ಶಾಸಕ ಸುಕುಮಾರ್ ಶೆಟ್ಟಿ ವಿಷಾದ ವ್ಯಕ್ತಪಡಿಸಿ, ಐವರು ಮಕ್ಕಳನ್ನು ಸೇತುವೆ ದಾಟಿಸುವ ವೇಳೆ ಮಗು ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದಿದೆ. ಬಾಲಕಿ ಮನೆಗೆ ಭೇಟಿ ಕೊಟ್ಟು ಸಂತಾಪ ಸೂಚಿಸುವುದರೊಂದಿಗೆ ಧೈರ್ಯ ತುಂಬಿದ್ದೇನೆ. ಘಟನೆ ನಡೆದ ಕಾಲ್ತೋಡು ಕಾಲು ಸೇತುವೆ ಸ್ಥಳದಲ್ಲಿ ಕಿರು ಸೇತುವೆ ನಿರ್ಮಿಸಲು ಸೂಚನೆ ನೀಡಲಾಗಿದೆ. ಹತ್ತು ಲಕ್ಷ ರೂಪಾಯಿ ಕಾಮಗಾರಿಗೆ ಅನುಮೋದನೆ ಸಿಕ್ಕಿದ್ದು ಕೂಡಲೇ ಕಿರು ಸೇತುವೆ ನಿರ್ಮಿಸಲಿ ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.

ಇದನ್ನೂ ಓದಿ | Talikot Protest | ಮಳೆ ಲೆಕ್ಕಿಸದೆ ತಲೆ ಮೇಲೆ ಕಲ್ಲು ಹೊತ್ತು ಪ್ರತಿಭಟನೆ

Exit mobile version