ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಮೂರು ದಿನದಿಂದ ಸಂಜೆ ವೇಳೆಗೆ ಸುರಿಯುತ್ತಿರುವ ಭಾರಿ ಮಳೆಗೆ (Heavy Rain) ಬೃಹತ್ ಮರವೊಂದು ಧರೆಗುರುಳಿದೆ. ಚಾಮರಾಜಪೇಟೆ ಆಟದ ಮೈದಾನದ ಪಕ್ಕದಲ್ಲೇ ಬೃಹತ್ ಮರ ಉರುಳಿ ನೇರವಾಗಿ ಆಟೋ ಮೇಲೆ ಬಿದ್ದಿದೆ. ಜತೆಗೆ ಮರ ಬಿದ್ದ ರಭಸಕ್ಕೆ ವಿದ್ಯುತ್ ಕಂಬಗಳು ಉರುಳಿ ಬಿದ್ದಿದೆ.
ಬೆಳಗ್ಗೆ ಸುಮಾರು 5 ಗಂಟೆಗೆ ಈ ಘಟನೆ ನಡೆದಿದ್ದು, ಆಟೋದಲ್ಲಿ ಯಾರೂ ಇಲ್ಲದ ಕಾರಣ ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. 100 ಮೀಟರ್ ಅಂತರದಲ್ಲಿ ಕೆಇಬಿ ಆಫೀಸ್ ಇದ್ದು, ದೂರು ನೀಡಿ ಗಂಟೆಗಳು ಕಳೆದರೂ ಅಧಿಕಾರಿಗಳು ಬಾರದ್ದಕ್ಕೆ ಜನರು ಆಕ್ರೋಶವನ್ನು ವ್ಯಕ್ತಪಡಿಸಿದರು.
ವಿದ್ಯುತ್ ಕಂಬಗಳು ಬಿದ್ದ ಪರಿಣಾಮ ಸುತ್ತಮುತ್ತ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಇದರಿಂದ ಸ್ಥಳೀಯರ ಬೆಳಗಿನ ಕೆಲಸಗಳಿಗೆ ಪರದಾಡುವಂತಾಯಿತು. ಬಿಬಿಎಂಪಿ ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಯಿಂದ ಬೃಹತ್ ಮರದ ತೆರವು ಕಾರ್ಯಾಚಾರಣೆ ನಡೆಸಲಾಯಿತು. ವಿದ್ಯುತ್ ಕಂಬ ಹಾಗೂ ಬೃಹತ್ ಮರ ಬಿದ್ದ ಹಿನ್ನೆಲೆ ತಾತ್ಕಾಲಿಕವಾಗಿ ರಸ್ತೆ ಬಂದ್ ಮಾಡಲಾಗಿದೆ.
ರಾತ್ರಿ ನಿಲ್ಲಿಸಿದ್ದ ಆಟೋ ಬೆಳಗ್ಗೆ ಜಖಂ
ಮರದ ಕೆಳಗೆ ನಿಲ್ಲಿಸಿ ಹೋಗಿದ್ದ ಆಟೋವೊಂದಕ್ಕೆ ಬೃಹತ್ ಮರ ಬಿದ್ದು ಸಂಪೂರ್ಣ ಜಖಂಗೊಂಡಿದೆ. ಜೀವನೋಪಾಯಕ್ಕಾಗಿದ್ದ ಆಟೋ ಈಗ ಪೂರ್ಣ ಹಾಳಾಗಿದ್ದು, ರಾತ್ರಿ ನಿಲ್ಲಿಸಿದ್ದ ಆಟೋ ಬೆಳಗಾಗುವಷ್ಟರಲ್ಲಿ ಜಖಂ ಆಗಿದೆ.
ಇದನ್ನೂ ಓದಿ | Rain News | ರಾಜಧಾನಿಯಲ್ಲಿ ರಾತ್ರಿಯಿಡೀ ಮಳೆ: ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ, ಮನೆಗಳಿಗೆ ನುಗ್ಗಿದ ನೀರು