ಮಂಗಳೂರು: ಇಲ್ಲಿನ ಸಂಪಾಜೆ ಕಲ್ಲುಗುಂಡಿ ಪ್ರದೇಶದಲ್ಲಿ ವ್ಯಾಪಕ ಮಳೆ (Heavy Rain) ಆಗುತ್ತಿದ್ದು, ಸಂಪಾಜೆ ಘಾಟ್ ರಸ್ತೆಯಲ್ಲಿ ಬಿರುಕು ಬಿಟ್ಟಿದೆ. ಈ ಕಾರಣದಿಂದ ಸಂಪಾಜೆ ಘಾಟ್‌ನಲ್ಲಿ ಭಾರಿ ವಾಹನಗಳ ಸಂಚಾರವನ್ನು ಸಂಪೂರ್ಣ ಬಂದ್ ಮಾಡಲಾಗಿದೆ.
ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ರಸ್ತೆ ಬಂದ್ ಮಾಡಲಾಗಿದೆ. ರಸ್ತೆ ಬಂದ್ ಬಗ್ಗೆ ಮಾಹಿತಿ ಇಲ್ಲದ ಕಾರಣಕ್ಕೆ ನೂರಾರು ಲಾರಿಗಳು ಸಂಪಾಜೆ ಗೇಟ್‌ನಲ್ಲಿ ಸಾಲುಗಟ್ಟಿ ನಿಂತಿದ್ದ ದೃಶ್ಯ ಕಂಡುಬಂತು.
ಮೇಘ ಸ್ಫೋಟಕ್ಕೆ ಜನ ತತ್ತರ
ಕೆಲವೊಮ್ಮೆ ಈ ಭಾಗದ ಅಲ್ಲಲ್ಲಿ ಸ್ಫೋಟದ ಸದ್ದು ಸಹ ಕೇಳಿಬರುತ್ತಿದ್ದು, ಅದಾಗಿ ಕೆಲವು ಸಮಯದಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಇದು ಜನತೆಯನ್ನು ಆತಂಕಕ್ಕೆ ದೂಡಿದೆ. ಅರೆಕಲ್ಲು ಹೊಳೆಯಲ್ಲಿ ಉಂಟಾಗುವ ಪ್ರವಾಹದಿಂದ ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿರುವ ಸಂಪಾಜೆ ಹಾಗೂ ಕಲ್ಲುಗುಂಡಿ ಗ್ರಾಮಸ್ಥರು ಜೀವವನ್ನು ಕೈಯಲ್ಲಿ ಹಿಡಿದು ಬದುಕುವಂತಾಗಿದೆ.
ಒಂದು ಕಡೆ ಮಳೆ ಮತ್ತೊಂದು ಕಡೆ ಪ್ರವಾಹದ ಭೀತಿ ಜತೆಗೆ ಅರೆಕಲ್ಲು ಅರಣ್ಯ ಪ್ರದೇಶದಲ್ಲಿ ಭೂ ಕುಸಿತವಾದ ಹಿನ್ನೆಲೆಯಲ್ಲಿ ಗುಡ್ಡದಿಂದ ಭಾರಿ ಗಾತ್ರದ ಮರಗಳು ನೆಲಕ್ಕುರುಳುತ್ತಿವೆ. ಮಳೆ ನೀರಿನ ಪ್ರವಾಹದಿಂದ ಹತ್ತಾರು ಮನೆಗಳಿಗೆ ಹಾನಿಯಾಗಿದ್ದು, ಜನರು ಬೇರೆ ಕಡೆಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ.
ಇದನ್ನೂ ಓದಿ | Heavy Rain | ಧಾರಾಕಾರ ಮಳೆಗೆ ಹಳ್ಳದಲ್ಲಿ ಕೊಚ್ಚಿ ಹೋದ ರೈತ