Site icon Vistara News

Heavy Rain | ಬಿರುಕು ಬಿಟ್ಟ ಕೆಮ್ಮಣ್ಣುಗುಂಡಿ ರಸ್ತೆ; ಆತಂಕದಲ್ಲಿ ಪ್ರವಾಸಿಗರು

heavy rain

ಚಿಕ್ಕಮಗಳೂರು: ಕಾಫಿನಾಡು ಭಾಗದಲ್ಲಿ ಮಳೆ ಅಬ್ಬರ (Heavy Rain) ಕಡಿಮೆಯಾಗಿದ್ದರೂ ಅನಾಹುತಗಳ ಅಬ್ಬರ ಮಾತ್ರ ಕಡಿಮೆಯಾಗಿಲ್ಲ. ಜಿಲ್ಲೆಯಲ್ಲಿ ಶುಕ್ರವಾರ ಶೇಕಡಾ 80ರಷ್ಟು ಮಳೆ ಪ್ರಮಾಣ ಕಡಿಮೆಯಾಗಿದೆ. ಆದರೆ, ಬೆಟ್ಟ-ಗುಡ್ಡ ಕುಸಿಯುವುದು, ರಸ್ತೆ ಬಿರುಕು ಬಿಡುವುದು, ತೋಟಗಳ ಮಣ್ಣು ಜರಿಯುವುದು ಮಾತ್ರ ನಿಂತಿಲ್ಲ. ಈಗ ಕೆಮ್ಮಣ್ಣುಗುಂಡಿ ಸರದಿ ಆರಂಭವಾಗಿದೆ.

ಕಳೆದೊಂದು ವಾರದಿಂದ ಅಬ್ಬರಿಸಿ ಬೊಬ್ಬಿರಿಯುತ್ತಿದ್ದ ವರುಣ ತಕ್ಕಮಟ್ಟಿಗೆ ಶಾಂತನಾಗಿದ್ದರೂ ಸುಮಾರು 40 ಮೀಟರ್ ಕಾಂಕ್ರೀಟ್ ರಸ್ತೆ ಕುಸಿದಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕೆಮ್ಮಣ್ಣುಗುಂಡಿ ಬಳಿ ನಡೆದಿದೆ. ಕಲ್ಲತ್ತಿಗರಿಯಿಂದ ಕೆಮ್ಮಣ್ಣುಗುಂಡಿ ಸಂಪರ್ಕ ಕಲ್ಪಿಸುವ ಮಾರ್ಗದ ಸಿಮೆಂಟ್ ರಸ್ತೆ ಬಿರುಕು ಬಿಟ್ಟಿದ್ದು, ಭೂಮಿಯ ಸುಮಾರು 2 ಅಡಿಯಷ್ಟು ಕುಸಿದಿದೆ. ಇದರಿಂದ ಸ್ಥಳೀಯರು ಆತಂಕಕ್ಕೀಡಾಗಿದ್ದಾರೆ. ಈ ಮಾರ್ಗದಲ್ಲಿ ಸಂಚರಿಸಲು ಪ್ರವಾಸಿಗರು ಕಂಗಾಲಾಗಿದ್ದು, ಕೆಲವರು ಭಯಪಟ್ಟು ವಾಪಸಾಗಿದ್ದಾರೆ.

ಒಂದು ವೇಳೆ ಬಾಯ್ಬಿಟ್ಟಿರುವ ಈ ಮಾರ್ಗ ಕುಸಿದರೆ ಕೆಮ್ಮಣ್ಣುಗುಂಡಿ ಹಾಗೂ ಹೆಬ್ಬೆ ಜಲಪಾತಕ್ಕೆ ಹೋಗುವ ಪರ್ಯಾಯ ಮಾರ್ಗವೂ ಇಲ್ಲದಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ತೀವ್ರ ತೊಂದರೆಯಾಗಿದೆ. ಸ್ಥಳಕ್ಕೆ ಭೇಟಿ ನೀಡಿರುವ ಅಧಿಕಾರಿಗಳು ರಸ್ತೆ ಕುಸಿದಿರುವ ಜಾಗಕ್ಕೆ 10 ಅಡಿ ಅಗಲ ಟೇಪ್ ಕಟ್ಟಿ, ಕೇವಲ 10 ಅಡಿ ಜಾಗದಲ್ಲೇ ವಾಹನಗಳು ಸಂಚರಿಸುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Rain News | ಚಿಕ್ಕಮಗಳೂರಿನಲ್ಲಿ ಮುಂದುವರಿದ ಮಳೆ: ಕೊಚ್ಚಿ ಹೋದ ರಸ್ತೆ, ಶಾಲೆಗಳಿಗೆ ರಜೆ ಘೋಷಣೆ

Exit mobile version