ಬೆಳಗಾವಿ: ಮಹಾರಾಷ್ಟ್ರ ಜತೆಗೆ ಬೆಳಗಾವಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು (Heavy Rain) ಜನಜೀವನ ಅಸ್ತವ್ಯಸ್ತವಾಗಿದೆ. ಜಿಲ್ಲೆಯ ಸವದತ್ತಿ ತಾಲೂಕಿನ ಏಣಗಿ ಗ್ರಾಮದಲ್ಲಿ ಭಾರಿ ಮಳೆಗೆ ಮನೆಗಳು ಕುಸಿಯುತ್ತಿವೆ. ನಬಿಸಾಬ ಸುತಗಟ್ಟಿ ಎಂಬುವರಿಗೆ ಸೇರಿದ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕಳೆದ ಎರಡು ದಿನಗಳಲ್ಲಿ ಬೆಳಗಾವಿ ಜಿಲ್ಲೆಯಲ್ಲಿ 5 ಮನೆಗಳು ಕುಸಿತಗೊಂಡಿದ್ದು, ಜೂನ್ 1 ರಿಂದ ಈವರೆಗೆ 990 ಮನೆಗಳಿಗೆ ಹಾನಿಯಾಗಿದ್ದು, 40 ಮನೆಗಳು ಸಂಪೂರ್ಣ ಕುಸಿದಿದೆ. 1,000 ಕಿಮೀ ರಸ್ತೆ ಹಾಳಾಗಿದ್ದು, 1300 ವಿದ್ಯುತ್ ಕಂಬಗಳು ಧರೆಗುರುಳಿವೆ. 18 ಸೇತುವೆಗಳಿಗೆ ಹಾನಿಯಾಗಿರುವ ವರದಿಯಾಗಿದೆ. ಕಳೆದೆರಡು ತಿಂಗಳಲ್ಲಿ ಇಬ್ಬರಿಗೆ ಜೀವ ಹಾನಿ ಪರಿಹಾರ ವಿತರಣೆ ಮಾಡಲಾಗಿದೆ.
ಸೇತುವೆಗಳು ಮುಳುಗಡೆ
ಘಟಪ್ರಭಾ ನದಿಗೆ ನೀರಿನ ಹರಿವು ಹೆಚ್ಚಿದ್ದು, ಮೂಡಲಗಿ ತಾಲೂಕಿನ ನಾಲ್ಕು ಕೆಳಹಂತದ ಸೇತುವೆಗಳು ಜಲಾವೃತಗೊಂಡಿವೆ. ಅವರಾಧಿ ಹಾಗೂ ಮಹಾಲಿಂಗಪೂರಕ್ಕೆ, ಸುಣಧೋಳ ಹಾಗೂ ಮೂಡಲಗಿಗೆ, ವಡೇರಹಟ್ಟಿ ಹಾಗೂ ಉದಗಟ್ಟಿಗೆ ಸಂಪರ್ಕ ಕಲ್ಪಿಸುವ ಮೂರು ಸೇತುವೆಗಳು ಜಲಾವೃತವಾಗಿ ಸಂಚಾರ ಸ್ಥಗಿತಗೊಂಡಿದೆ.
ಮಾರ್ಕಂಡೇಯ ನದಿ ನೀರಿನಿಂದ ಅಪಾರ ಹಾನಿಯಾಗಿದೆ. ಬೆಳಗಾವಿ ತಾಲೂಕಿನ ಅಂಬೇವಾಡಿಯ ಮಣ್ಣೂರು ಗ್ರಾಮದಲ್ಲಿ ಅಪಾರ ಬೆಳೆ ಹಾನಿಯಾಗಿದ್ದು, ಸಾವಿರಾರು ಹೆಕ್ಟೇರ್ ಭತ್ತ, ಕಬ್ಬು ಗದ್ದೆಗಳು ಜಲಾವೃತವಾಗಿವೆ. ಕಳೆದ ಮೂರು ವರ್ಷಗಳಿಂದ ಪ್ರವಾಹಕ್ಕೆ ಇಲ್ಲಿನ ರೈತರು ತತ್ತರಿಸಿ ಹೋಗಿದ್ದು, ಈ ಸಲವೂ ಮಳೆಯ ಅಬ್ಬರಕ್ಕೆ ಬೆಳೆಹಾನಿ ಭೀತಿಯಲ್ಲಿ ಅಂಬೇವಾಡಿ, ಮಣ್ಣೂರು ರೈತರು ಇದ್ದಾರೆ.
ಇದನ್ನೂ ಓದಿ | ಮಳೆಗೆ ಮನೆ ಕುಸಿದು ಮಹಿಳೆ ಸಾವು