Site icon Vistara News

Heavy Rain | ಮಳೆಯಿಂದ ಮುಂದುವರಿದ ಸಾವು-ನೋವು; ಪ್ರತ್ಯೇಕ ಕಡೆ ನಾಲ್ವರ ಸಾವು

ವಿಜಯಪುರ: ಇಲ್ಲಿನ ದೇವರ ಹಿಪ್ಪರಗಿ ತಾಲೂಕಿನ ಹುಣಶ್ಯಾಳ ಗ್ರಾಮದ ವ್ಯಾಪ್ತಿಯಲ್ಲಿ ಮಳೆ (Heavy Rain) ಅವಾಂತರಕ್ಕೆ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ. ಜೈನೂಬಿ ನಜೀರ ಅಹ್ಮದ ಸಿಪಾಯಿ (55) ಎಂಬ ಮಹಿಳೆ ಹೊಲದಲ್ಲಿ ಕಳೆ ಕೀಳುತ್ತಿದ್ದರು. ಈ ವೇಳೆ ಭಾರಿ ಮಳೆಗೆ ಮರದ ಆಸರೆ ಪಡೆದ ಮಹಿಳೆಗೆ ಸಿಡಿಲು ಬಡಿದಿದೆ. ಸೊಸೆಯ ಕಣ್ಣೆದುರೇ ದುರ್ಘಟನೆ ನಡೆದಿದ್ದು, ಮಹಿಳೆಯೊಂದಿಗೆ ಎಮ್ಮೆ ಸಹ ಮೃತಪಟ್ಟಿದೆ. ಕಲಕೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗದಲ್ಲಿ ಕುರಿ ತೊಳೆಯಲು ಹೋಗಿ ನೀರುಪಾಲು

ಚಿತ್ರದುರ್ಗ: ಇಲ್ಲಿನ ಚೌಳೂರು ಬಳಿ ವೇದಾವತಿ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿ ಶವವಾಗಿ ಪತ್ತೆಯಾಗಿದ್ದಾನೆ. ವೇದಾವತಿ ನದಿಯಲ್ಲಿ ಕುರಿ ತೊಳೆಯುವಾಗ ಚೌಳೂರು ನಿವಾಸಿ ಕುಮಾರ್ (35) ಎಂಬುವವರು ನದಿಯ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾನೆ. ಸ್ಥಳಕ್ಕೆ ತಹಸೀಲ್ದಾರ್ ರಘುಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಶುರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಮೀನು ಹಿಡಿಯಲು ಹೋದ ತಂದೆ ಮಗ ಶವವಾಗಿ ಪತ್ತೆ

ಕಲಬುರಗಿ: ಜಿಲ್ಲೆ ಚಂದ್ರಂಪಳ್ಳಿ ಜಲಾಶಯದ ಕಾಲುವೆಯಲ್ಲಿ ಮಂಗಳವಾರ ಕೊಚ್ಚಿಕೊಂಡು ಹೋಗಿದ್ದ ತಂದೆ, ಮಗನ ಶವ ಪತ್ತೆಯಾಗಿದೆ. ಜಲಾಶಯದ ಮುಖ್ಯ ಕಾಲುವೆಯಲ್ಲಿ ಮೀನು ಹಿಡಿಯಲು ಹೋದಾಗ ಮಹೇಶ್‌ ಕಾಲು ಜಾರಿ ಬಿದ್ದಿದ್ದ, ಮಗನನ್ನು ರಕ್ಷಿಸಲು ಹೋಗಿ ತಂದೆ ರಾಜಪ್ಪ ಕೂಡಾ ನೀರು ಪಾಲಾಗಿದ್ದಾರೆ. ಚಂದ್ರಂಪಳ್ಳಿ ಗ್ರಾಮದ ರಾಜಪ್ಪ (45) ಮತ್ತು ಮಹೇಶ್ (12) ನೀರಿನ ರಭಸಕ್ಕೆ ಕೊಚ್ಚಿ ಹೋಗಿದರು. ಅಗ್ನಿಶಾಮಕ ಸಿಬ್ಬಂದಿಯ ಸತತ ಕಾರ್ಯಾಚರಣೆ ಬಳಿಕ ಬುಧವಾರ ಮೃತದೇಹ ಪತ್ತೆಯಾಗಿದೆ.

Exit mobile version