ಬೆಂಗಳೂರು: ಮಂಗಳವಾರ ಸಂಜೆಯಿಂದಲೇ ಕರ್ನಾಟಕದಾದ್ಯಂತ ಹಲವು ಜಿಲ್ಲೆಗಳಲ್ಲಿ ಮಳೆ ಎಡಬಿಡದೆ ಸುರಿದಿದೆ. ಉತ್ತರ ಕರ್ನಾಟಕ ದಕ್ಷಿಣ ಕರ್ನಾಟಕವೆನ್ನದೆ ಎಲ್ಲೆಡೆ ಆರ್ಭಟಿಸಿದ ಮಳೆರಾಯನ ಕಾರಣಕ್ಕೆ ಪ್ರಮುಖವಾಗಿ ನಗರ ಪ್ರದೇಶಗಳ ಜನಜೀವನ ಅಸ್ತವ್ಯಸ್ತವಾಗಿದೆ. ರಾಜಧಾನಿ ಬೆಂಗಳೂರು, ಮಂಡ್ಯ, ಸೇರಿ ಅನೇಕ ನಗರಗಳ ಜನರು ತೊಂದರೆ ಅನುಭವಿಸಿದ್ದಾರೆ. ಅನೇಕ ಹಳ್ಳಿಗಳ ಕೆರೆ ಕಟ್ಟೆ ತುಂಬಿ ರೈತಾಪಿ ವರ್ಗ ಸಂತಸದಲ್ಲಿದ್ದರೆ, ಹೆದ್ದಾರಿಗಳಲ್ಲಿ ಮಳೆಯ ಕಾರಣಕ್ಕೆ ಅಪಘಾತಗಳು ಸಂಭವಿಸಿವೆ.
ಮಂಡ್ಯದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಹಣೆ ಚೆನ್ನಾಪುರ ಗ್ರಾಮದ ಹೊಸಕೆರೆ ಭರ್ತಿ ಆಗಿದೆ. ಇನ್ನೂ ವಿಶೇಷ ಅಂದರೆ 3 ದಶಕಗಳ ಬಳಿಕ ಭರ್ತಿಯಾದ ಕೆರೆಗೆ ಹಣೆಚೆನ್ನಾಪುರ ಗ್ರಾಮಸ್ಥರಿಂದ ಕೆರೆಗೆ ಬಾಗೀನ ಸಮರ್ಪಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಮುಂಜಾನೆಯಿಂದಲೆ ಸೋನೆ ಮಳೆ ಆರಂಭವಾಗಿದೆ. ಮಡಿಕೇರಿ, ನಾಪೋಕ್ಲು, ಮೂರ್ನಾಡು, ವಿರಾಜಪೇಟೆ, ಕಕ್ಕಬ್ಬೆ, ಸೋಮವಾರಪೇಟೆ ಸೇರಿ ಹಲವೆಡೆ ಮಳೆಯಾಗಿದ್ದು, ನಿರಂತರ ವಾಗಿ ಮಳೆ ಮುಂದುವರಿದಿದೆ.
ಮಳೆ ಮತ್ತು ಇಬ್ಬನಿಯಲ್ಲಿ ರಸ್ತೆ ಕಾಣಿಸದೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಅಪಘಾತದಲ್ಲಿ ಸುಂಟಿಕೊಪ್ಪ ನಿವಾಸಿ ಮುಸ್ತಫಾ ಬಲಿಯಾಗಿದ್ದಾರೆ. ಕೊಡಗು ಜಿಲ್ಲೆ ಸುಂಟಿಕೊಪ್ಪ ಸಮೀಪದ ಕೊಡಗರ ಹಳ್ಳಿ ಬಳಿ ಘಟನೆ ಸಂಭಂದಿಸಿದ್ದು, ಎರಡು ಕಾರುಗಳು ಸಂಪೂರ್ಣ ಹಾನಿಗೊಂಡಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತ ದೇಹ ಸುಂಟಿಕೊಪ್ಪ ಆಸ್ಪತ್ರೆಗೆ ರವಾನೆ ಆಗಿದ್ದು, ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ | Bengaluru Rain | ಅಬ್ಬರಿಸಿದ ಮಳೆ-ತತ್ತರಿಸಿದ ಬೆಂಗಳೂರು: ಇಬ್ಬರು ಕಾರ್ಮಿಕರ ಸಾವು
ಬಾಗಲಕೋಟೆಯಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಗೂಡಂಗಡಿಗಳು ಉರುಳಿ ಬಿದ್ದಿವೆ. ಜಮಖಂಡಿ ನಗರದ ಹೊರವಲಯದ ಕಟ್ಟೆಕೆರೆ ಬಳಿ ಘಟನೆ ಸಂಭಂದಿಸಿದ್ದು, ನಗರದ ಪಿ.ಬಿ. ಹೈಸ್ಕೂಲ್ ಮುಂದೆ ನೀರು ನುಗ್ಗಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.
ಬೆಂಗಳೂರಿನ ಬಸವನಗರದಲ್ಲಿ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ದೊಡ್ಡನೆಕ್ಕುಂದಿ ಕೆರೆ ಹಾಗೂ ರಾಜಕಾಲುವೆ ನೀರು ನುಗ್ಗಿದೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಯಾರೂ ಇವರೆಗೆ ಗಮನ ಹರಿಸಿಲ್ಲ. ಬಿಬಿಎಂಪಿಯವರು ಬೆಳಗ್ಗೆ ಬಂದು ನೋಡುತ್ತಾರೆ. ಎರಡು ಮಾತು ಹೇಳಿ ತೆರಳುತ್ತಾರೆ. ಇದಕ್ಕೆ ಶಾಶ್ವತ ಪರಿಹಾರ ಮಾತ್ರ ಮಾಡುತ್ತಾ ಇಲ್ಲ. ಕೊಳಚೆ, ನೀರು ಎಲ್ಲ ಮನೆಗಳಲ್ಲೂ ತುಂಬಿದೆ. ಕ್ಲೀನ್ ಮಾಡೋಕೆ ಎರಡು ಮೂರು ದಿನ ಬೇಕು ಎಂದು ನಿವಾಸಿಗಳು ಅಳಲು ತೋಡಿಕೊಂಡರು.
ಮಲ್ಲೇಶ್ವರ 18 ನೇ ಅಡ್ಡರಸ್ತೆಯಲ್ಲಿ ಮರ ನೆಲಕ್ಕೆ ಉರುಳಿದೆ. ಮಲ್ಲೇಶ್ವರ ಕಡೆಯಿಂದ ಸದಾಶಿವನಗರ ಕಡೆ ತೆರಳುವ ರಸ್ತೆ ಬಂದ್ ಆಗಿದ್ದು, ಮರ ಬಿದ್ದ ಪರಿಣಾಮ ಕಾಂಪೌಂಡ್ ಗೋಡೆ ಕುಸಿತಗೊಂಡಿದೆ. ಸದ್ಯ ಬಿಬಿಎಂಪಿ ಮರ ತೆರವುಗೊಳಿಸಿದೆ.
ಮಳೆಯಿಂದ ತೊಂದರೆಗೊಳಗಾದ ಪ್ರದೇಶಗಳಿಗೆ ಗೋಪಾಲಯ್ಯ ಭೇಟಿ
ಮಳೆಯಿಂದ ತೊಂದರೆಗೊಳಗಾಗಿರುವವರಿಗೆ ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 800ಕ್ಕೂ ಅಧಿಕ ಕುಟುಂಬಗಳಿಗೆ ಸರ್ಕಾರದಿಂದ ಪರಿಹಾರ ಕೊಡಿಸುವ ಸಂಬಂಧ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸಲಾಗುವುದು ಎಂದು ಅಬಕಾರಿ ಸಚಿವ ಕೆ. ಗೋಪಾಲಯ್ಯ ಹೇಳಿದರು.
ಮಂಗಳವಾರ ಇಡೀ ರಾತ್ರಿ ಸುರಿದ ಧಾರಾಕಾರ ಮಳೆಯಿಂದ ನೀರು ನುಗ್ಗಿ ತೊಂದರೆಗೊಳಗಾದ ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರದ ಅನೇಕ ಬಡಾವಣೆಗಳ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕ್ಷೇತ್ರ ವ್ಯಾಪ್ತಿಯ ಕಮಲಾನಗರ, ನಂದಿನಿ ಬಡಾವಣೆ, ಕಂಠೀರವ ನಗರ ಸೇರಿದಂತೆ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ ಸುದ್ದಿ ನಿನ್ನೆ ಮಧ್ಯರಾತ್ರಿಯೇ ತಿಳಿಯಿತು. ತಕ್ಷಣವೇ ಬಿಬಿಎಂಪಿ ಇಂಜಿನಿಯರ್ ಗಳು ಮತ್ತು ಅಧಿಕಾರಿಗಳ ಜೊತೆ ಆಗಮಿಸಿ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಇಂದು ಮುಖ್ಯಮಂತ್ರಿಗಳು ಬಡಾವಣೆಗೆ ಆಗಮಿಸಿ ಪರಿಸ್ಥಿತಿಯನ್ನು ಅವಲೋಕಿಸಲಿದ್ದಾರೆ. ಈ ವೇಳೆ ಸಂತ್ರಸ್ತರ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗುವುದಲ್ಲದೇ ನಿರಾಶ್ರಿತರಿಗೆ ಪರಿಹಾರ ಕೊಡಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು. ಕ್ಷೇತ್ರ ವ್ಯಾಪ್ತಿಯ ಹಲವೆಡೆ ಕೈಗೊಂಡಿರುವ ಒಳಚರಂಡಿ ತಡೆಗೋಡೆ ನಿರ್ಮಾಣ ಕಾಮಗಾರಿಯನ್ನು ತ್ವರಿತವಾಗಿ ಮುಗಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ, ಆದಷ್ಟು ಶೀಘ್ರವೇ ತಡಗೋಡೆ ನಿರ್ಮಾಣ ಕಾಮಗಾರಿ ಮುಗಿಯಲಿದೆ ಎಂದರು.
ಮಳೆಯಿಂದಾಗಿ ಉಂಟಾಗಿರುವ ಅವಾಂತರಗಳನ್ನು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ | ಭಾರೀ ಮಳೆ-ಬಿರುಗಾಳಿಗೆ ಕೊಪ್ಪಳದಲ್ಲಿ 5,599 ಪ್ರದೇಶದ ಕೃಷಿ ಬೆಳೆ ಹಾನಿ