Site icon Vistara News

Rain News | ರಾಜ್ಯದಲ್ಲಿ ವರುಣನ ಅಬ್ಬರ; ಮುಂದುವರಿದ ಹಾನಿ, ಪ್ರವಾಹ ಭೀತಿ

Rain News

ಬೆಂಗಳೂರು: ರಾಜ್ಯದಲ್ಲಿ ಭಾರಿ ಮಳೆ ಮುಂದುವರಿದ ಹಿನ್ನೆಲೆಯಲ್ಲಿ ಹಾನಿ ಪ್ರಮಾಣವೂ ಹೆಚ್ಚಾಗುತ್ತಿದೆ. ವಿವಿಧೆಡೆ ಮಳೆಯ (Rain News) ಅಬ್ಬರದಿಂದ ರಸ್ತೆಗಳು, ಸೇತುವೆಗಳು ಜಲಾವೃತವಾಗಿ ವಾಹನ ಸಂಚಾರಕ್ಕೆ ತೊಂದರೆಯಾಗಿದ್ದು, ಕೆಲವೆಡೆ ಶಾಲೆಗಳಿಗೂ ರಜೆ ಘೋಷಿಸಲಾಗಿದೆ. ನದಿ ಹಾಗೂ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿ ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.

ಕಾಪಾಡು ಕಾವೇರಿ!
ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಕಾವೇರಿ ನದಿ ಪಾತ್ರದಲ್ಲಿ ಪ್ರವಾಹ ಆತಂಕ ಶುರುವಾಗಿದೆ. ಕೆಆರ್‌ಎಸ್ ಜಲಾಶಯದಿಂದ 99 ಸಾವಿರ ಕ್ಯೂಸೆಕ್‌ಗೂ ಹೆಚ್ಚು ನೀರು ಬಿಡುಗಡೆ ಮಾಡಲಾಗಿದೆ. ಶ್ರೀರಂಗಪಟ್ಟಣದ ನಿಮಿಷಾಂಬ ದೇವಸ್ಥಾನದ ಸ್ನಾನಘಟ್ಟ ಜಲಾವೃತವಾಗಿರುವ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧಿಸಲಾಗಿದೆ. ಮತ್ತೊಂದೆಡೆ 200 ವರ್ಷಗಳ ಇತಿಹಾಸವಿರುವ ವೆಲ್ಲೆಸ್ಲಿ ಸೇತುವೆ ಸಹ ಮುಳುಗಡೆ ಭೀತಿ ಎದುರಿಸುತ್ತಿದೆ.

ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಏರಿಕೆಯಾಗಿದೆ.

ಇದನ್ನೂ ಓದಿ | Rain News | ಮಳೆ ಅಬ್ಬರಕ್ಕೆ ಅಪಘಾತ ಸರಮಾಲೆ, ಕೊಟ್ಟಿಗೆಹಾರ ಬಳಿ 48 ಗಂಟೆಯಲ್ಲಿ‌ 10 ಆ್ಯಕ್ಸಿಡೆಂಟ್

ಧಾರಕಾರ ಮಳೆಗೆ ಮನೆ ಧರಾಶಾಹಿ!
ಕೊಡಗು: ಮಂಜಿನ ನಗರಿ ಕೊಡಗಿನಲ್ಲಿ ಅಬ್ಬರಿಸುತ್ತಿರುವ ವರುಣ ಹಲವು ಅವಾಂತರಗಳನ್ನು ಸೃಷ್ಟಿಸಿದ್ದಾನೆ. ಧಾರಕಾರ ಮಳೆಗೆ ಭಾಗಮಂಡಲದ ರಸ್ತೆ ಬದಿಯಲ್ಲಿ ಶಾರದಾ ಎಂಬುವವರ ಮನೆಯೊಂದು ಧರಾಶಾಹಿಯಾಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇಲ್ಲದ ಕಾರಣ ಕುಟುಂಬಸ್ಥರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ತ್ರಿವೇಣಿ ಸಂಗಮಕ್ಕೆ ಜಲಧಿಗ್ಬಂಧನ!
ಮಡಿಕೇರಿಯಲ್ಲಿ ಮಳೆ ಆರ್ಭಟ ಮುಂದುವರಿದಿದ್ದು, ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತವಾಗಿದೆ. ನಾಪೋಕ್ಲು ಭಾಗಮಂಡಲದಲ್ಲಿ ರಸ್ತೆ ಮೇಲೆ 2 ಅಡಿ ನೀರು ನಿಂತಿದೆ. ಕುಶಾಲನಗರ ಭಾಗದಲ್ಲಿ ಮಳೆ ಕೊಂಚ ಕಡಿಮೆಯಾಗಿದೆ. ಆದರೆ ಸಾಯಿ‌ ಬಡಾವಣೆಯಲ್ಲಿ ಮಾತ್ರ ನೀರು ಇಳಿಮುಖವಾಗಿಲ್ಲ. ಹಾರಂಗಿ ಜಲಾಶಯದಿಂದ 16000 ಕ್ಯೂಸೆಕ್ ನೀರು ಹೊರಕ್ಕೆ ಬಿಡಲಾಗುತ್ತಿದ್ದು, ನೀರು ಹೆಚ್ಚಾದಲ್ಲಿ ಸಾಯಿ ಬಡಾವಣೆ ಮತ್ತೆ ಜಲಾವೃತವಾಗುವ ಸಾಧ್ಯತೆ ಇದೆ.

ಕೊಡಗು ಜಿಲ್ಲೆಯ ಕುಶಾಲನಗರದ ಸಾಯಿ ಬಡಾವಣೆ ಜಲಾವೃತವಾಗಿದೆ.

ಸಕಲೇಶಪುರ ಶಾಲೆಗಳಿಗೆ ರಜೆ
ಹಾಸನ: ಜಿಲ್ಲೆಯಲ್ಲಿ ವ್ಯಾಪಕ‌ ಮಳೆ ಹಿನ್ನೆಲೆಯಲ್ಲಿ ಸಕಲೇಶಪುರ ತಾಲೂಕಿನ ಶಾಲೆಗಳಿಗೆ ಸೋಮವಾರ ರಜೆ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಅಂಗನವಾಡಿಯಿಂದ 10ನೇ ತರಗತಿಯವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿ ತಹಸೀಲ್ದಾರ್ ಜೈಕುಮಾರ್ ಆದೇಶ ಹೊರಡಿಸಿದ್ದಾರೆ.

ಮುಳುಗಿದ ಭತ್ತದ ಗದ್ದೆಗಳು
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಳೆಯ ಅವಾಂತರ ನಿಂತಿಲ್ಲ. ಬಿರುಗಾಳಿ ಸಹಿತ ಮಳೆಗೆ ಮೂಡಿಗೆರೆ ಪಟ್ಟಣ ಜೂನಿಯರ್ ಕಾಲೇಜಿನಲ್ಲಿ ತಲೆ ಮೇಲೆ ಹೆಂಚುಗಳು ಬಿದ್ದು ವಿದ್ಯಾರ್ಥಿನಿ ಗಾಯಗೊಂಡಿದ್ದಾಳೆ. ಹೀಗಾಗಿ
ಶಾಲಾ-ಕಾಲೇಜುಗಳಲ್ಲಿ ಕುಳಿತುಕೊಳ್ಳಲು ವಿದ್ಯಾರ್ಥಿಗಳು ಭಯಪಡುತ್ತಿದ್ದಾರೆ. ಇನ್ನು ಮೂಡಿಗೆರೆ ತಾಲೂಕಿನ ದೇವನಗೂಲ್ ಗ್ರಾಮದಲ್ಲಿ ಮಳೆಯಿಂದ ಏಲಿಯಮ್ಮ ಮತ್ತು ಬಾಬು ಎಂಬುವವರ ಮನೆ ಮೇಲೆ ಬೃಹತ್ ಮರ ಉರುಳಿಬಿದ್ದಿದೆ. ಭಾರಿ ಮಳೆಯಿಂದ ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಇಲ್ಲಿನ ಹೊಸಕೆರೆ-ಬೈರಾಪುರ ಗ್ರಾಮದಲ್ಲಿ ಧಾರಾಕಾರ ಮಳೆಗೆ ನೂರಾರು ಎಕರೆ ಗದ್ದೆಗಳು ಮುಳುಗಡೆಯಾಗಿದ್ದು, ರೈತರು ಕಂಗಾಲಾಗಿದ್ದಾರೆ.

ಮೂಡಿಗೆರೆ ತಾಲೂಕಿನ ಹೊಸಕೆರೆ-ಬೈರಾಪುರ ಗ್ರಾಮದಲ್ಲಿ ಭತ್ತದ ಗದ್ದೆ ಮುಳುಗಡೆಯಾಗಿದೆ.

ಕುಂದಾನಗರಿಯಲ್ಲಿ ರಸ್ತೆಗಳು ಜಲಾವೃತ
ಬೆಳಗಾವಿ: ಕಳೆದ ರಾತ್ರಿಯಿಂದ ಸುರಿಯುತ್ತಿರುವ ಮಳೆಗೆ ಕುಂದಾನಗರಿ ತತ್ತರಿಸಿದೆ. ಹಿಂಡಲಗಾ ಬಳಿ ಜಯನಗರ ಬಡಾವಣೆ, ಅಶೋಕ ನಗರ, ಅಸಾದ್ ಕಾಲನಿ, ಭಾಗ್ಯ ನಗರ ಒಂದನೇ ಕ್ರಾಸ್‌ನಲ್ಲಿ ರಸ್ತೆಗಳು ಜಲಾವೃತವಾಗಿವೆ. ಮಳೆ ಹಿನ್ನೆಲೆಯಲ್ಲಿ ಬೆಳಗಾವಿ ನಗರ, ಖಾನಾಪುರ ತಾಲೂಕಿನ ಪ್ರಾಥಮಿಕ ಪ್ರೌಢ ಶಾಲೆ, ಅಂಗನವಾಡಿಗಳಿಗೆ ಸೋಮವಾರ ರಜೆ ಘೋಷಣೆ ಮಾಡಲಾಗಿತ್ತು.

ಮಹಾರಾಷ್ಟ್ರ ಘಟ್ಟ ಪ್ರದೇಶದಲ್ಲಿ ಮಳೆ ಹಿನ್ನೆಲೆಯಲ್ಲಿ ನದಿಯ ನೀರಿನ ಮಟ್ಟ ಹೆಚ್ಚಳವಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ನಾಲ್ಕು ಕೆಳಹಂತದ ಸೇತುವೆಗಳು ಮುಳುಗಡೆಯಾಗಿವೆ. ಕಾರದಗಾ- ಭೋಜ, ಭೋಜವಾಡಿ ಕುನ್ನೂರ,
ಸಿದ್ನಾಳ- ಅಕ್ಕೋಳ, ಜತ್ರಾಟ- ಭೀವಶಿ ಸಂಪರ್ಕ ಕಲ್ಪಿಸುವ ಸೇತುವೆಗಳು ಮುಳುಗಡೆಯಾಗಿವೆ.

ಬೆಳಗಾವಿಯಲ್ಲಿ ಮುಖ್ಯ ರಸ್ತೆ ಜಲಾವೃತವಾಗಿರುವುದು.

ಇದನ್ನೂ ಓದಿ | Heavy Rain | ಮಳೆ ಅಬ್ಬರಕ್ಕೆ ಕೆಳಹಂತದ 4 ಸೇತುವೆಗಳು ಮುಳುಗಡೆ

Exit mobile version