ಹಾಸನ: ಇಲ್ಲಿನ ಸಕಲೇಶಪುರ ತಾಲೂಕಿನ ವೆಂಕಟಹಳ್ಳಿ- ಜಂಬರಡಿ ಗ್ರಾಮದ ಸಮೀಪದ ಶಾಲಾ ಮಕ್ಕಳು, ಸ್ಥಳೀಯರು ತಮ್ಮ ಜೀವ ಪಣಕ್ಕಿಟ್ಟು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಸನ ಜಿಲ್ಲೆಯಲ್ಲಿ ಮಳೆಯ ಅಬ್ಬರ (Heavy Rain) ಮುಂದುವರಿದಿದ್ದು, ಕೆರೆಕಟ್ಟೆ – ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ.
ಪರಿಣಾಮ ಮಲೆನಾಡಿನ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಮಳೆಯಿಂದ ಸೇತುವೆಯ ರಸ್ತೆ ಜಲಾವೃತವಾಗಿದ್ದು, ಒಂದೆಡೆಯಿಂದ ಮತ್ತೊಂದೆಡೆ ಜನರು ಹಾಗೂ ಮಕ್ಕಳ ಓಡಾಟಕ್ಕೆ ತೊಂದರೆ ಆಗಿದೆ.
ಸೇತುವೆ ಮೇಲೆ ರಭಸವಾಗಿ ಹರಿಯುತ್ತಿರುವ ನೀರನ್ನು ಲೆಕ್ಕಿಸದೇ ಜೆಸಿಬಿ ಬಕೆಟ್ ಮೇಲೆ ಶಾಲಾ ಮಕ್ಕಳು ನಿಂತು ಸೇತುವೆ ದಾಟುತ್ತಿದ್ದಾರೆ. ಈ ಮೂಲಕ ಶಾಲೆಗೆ ಹೋಗುವ ಮಾರ್ಗವನ್ನು ಕಂಡುಕೊಂಡಿದ್ದಾರೆ. ಆದರೆ, ಇದು ಮಕ್ಕಳ, ಜನರ ಜೀವಕ್ಕೆ ಅಪಾಯವಾಗಿದ್ದರೂ ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ವೆಂಕಟಹಳ್ಳಿ-ಜಂಬರಡಿ ಗ್ರಾಮಗಳ ಮಧ್ಯೆ ಇರುವ ಚಿತ್ತನಹಳ್ಳ ಸೇತುವೆಯನ್ನು ಎತ್ತರ ಮಾಡಿ ಕೊಡಿ ಎಂದು ಗ್ರಾಮಸ್ಥರು ಮನವಿ ಮಾಡಿದ್ದರೂ, ಇಲ್ಲಿಯವರೆಗೂ ಯಾವ ಅಧಿಕಾರಿಗಳು ಗಮನಹರಿಸಿಲ್ಲ.
ಪ್ರತಿ ಬಾರಿ ಮಳೆ ಬಂದಾಗಲೆಲ್ಲ ವೆಂಕಟಹಳ್ಳಿ-ಜಂಬರಡಿ ನಡುವಿನ ಸೇತುವೆ ಮೇಲೆ ನೀರು ನಿಂತು, ಶಾಲೆಗೆ ಹೋಗಲು ಮಕ್ಕಳು ಪರದಾಟ ಅನುಭವಿಸುತ್ತಿದ್ದಾರೆ. ಈ ಸಂಬಂಧ ಸುರಕ್ಷತಾ ಕ್ರಮ ಕೈಗೊಳ್ಳಬೇಕಾದ ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ.
ಇದನ್ನೂ ಓದಿ | Heavy Rain | ತುಂಗಾಭದ್ರಾ, ಘಟಪ್ರಭಾ ಪ್ರವಾಹ; ಸೇತುವೆಗಳು ಜಲಾವೃತ