Site icon Vistara News

Heavy Rain | ಮ್ಯಾನ್‌ಹೋಲ್‌ಗೆ ಬಿದ್ದ 14 ವರ್ಷದ ವಿದ್ಯಾರ್ಥಿನಿ; ಪ್ರಾಣಾಪಾಯದಿಂದ ಪಾರು

rain

ಬೆಂಗಳೂರು: ಇಲ್ಲಿನ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ (Heavy Rain) ಮ್ಯಾನ್‌ಹೋಲ್‌ಗೆ 14 ವರ್ಷದ ಬಾಲಕಿಯೊಬ್ಬಳು ಬಿದ್ದಿದ್ದು, ಸ್ಥಳೀಯರ ಸಮಯ ಪ್ರಜ್ಞೆಯಿಂದ ಬಾಲಕಿಯನ್ನು ಪಾರು ಮಾಡಲಾಗಿದೆ.

ನಾರಾಯಣ ಟೆಕ್ನೋ ಶಾಲೆಯಲ್ಲಿ 9ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯು ಶಾಲೆ ಮುಂದೆ ಇದ್ದ ಮ್ಯಾನ್‌ಹೋಲ್‌ಗೆ ಬಿದ್ದಿದ್ದಾಳೆ. ಎಡಭಾಗಕ್ಕೆ ಬೈಕ್ ಅಡ್ಡ ಬಂದ ಕಾರಣ ರಸ್ತೆಯ ಮಧ್ಯ ಭಾಗಕ್ಕೆ ಸರಿದಿದ್ದಾಳೆ. ಈ ವೇಳೆ ಪಕ್ಕದಲ್ಲಿದ್ದ ತೆರೆದಿದ್ದ ಮ್ಯಾನ್‌ಹೋಲ್ ಕಾಣದೇ ಎಡವಿ ಬಿದ್ದಿದ್ದಾಳೆ.

ಈ ವೇಳೆ ಬಾಲಕಿಯ ಚೀರಾಟ ಕೇಳಿ ಸ್ಥಳೀಯರು ಅಲ್ಲಿಗೆ ಓಡಿ ಬಂದು ಮೇಲಕ್ಕೆತ್ತಿದ್ದಾರೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ಸಂಭವಿಸಬಹುದಾದ ಅನಾಹುತವೊಂದು ತಪ್ಪಿದೆ. ಬಾಲಕಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಬಳಿಕ ಪೋಷಕರು ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ.

ಮಳೆಯಿಂದ ಬಾಯಿತೆರೆದ ಮ್ಯಾನ್‌ಹೋಲ್‌

ಮಂಗಳವಾರ ತಡರಾತ್ರಿ ಹೆಬ್ಬಾಳದ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಧಾರಾಕಾರವಾಗಿ ಸುರಿದ ಮಳೆ ಪರಿಣಾಮದಿಂದ ರಸ್ತೆ ಮೇಲೆ ಮೂರರಿಂದ ನಾಲ್ಕು ಅಡಿಯಷ್ಟು ನೀರು ನಿಂತಿದೆ. ಇದರಿಂದ ಮ್ಯಾನ್‌ಹೋಲ್‌ ಮುಚ್ಚುಳ ತೆರೆದುಕೊಂಡಿದ್ದೇ ಇಂತಹದ್ದೊಂದು ಅವಘಡ ಸಂಭವಿಸಲು ಕಾರಣವಾಗಿದೆ ಎಂದು ಹೇಳಲಾಗಿದೆ.

ಸಾರ್ವಜನಿಕರ ಆಕ್ರೋಶ

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಸಿಬ್ಬಂದಿ ಹಾಗೂ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಮಳೆ ಬಂದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದೇ ಈ ಎಲ್ಲ ಅವಘಡಗಳಿಗೆ ಕಾರಣವಾಗುತ್ತಿದೆ. ಇಂತಹ ನಿರ್ಲಕ್ಷ್ಯದಿಂದ ಸಾರ್ವಜನಿಕರ ಪ್ರಾಣಹಾನಿ ಆದರೆ ಹೊಣೆ ಯಾರು? ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ | Heavy Rain | ಮಳೆ ಅನಾಹುತಕ್ಕೆ ಪ್ರತ್ಯೇಕ ಕಡೆ ವೃದ್ಧೆಯರಿಬ್ಬರು ಸಾವು

Exit mobile version