Site icon Vistara News

Heavy Rain | ಮಂಗಳೂರಲ್ಲೊಂದು ಮಾನವೀಯ ಧರ್ಮ; ನದಿಗೆ ಬಿದ್ದವನ ರಕ್ಷಿಸಿದ ಹಿಂದು ಯುವಕ

rain

ಮಂಗಳೂರು: ಮನುಷ್ಯತ್ವಕ್ಕೆ, ಜೀವಕ್ಕೆ ಯಾವ ಜಾತಿ-ಧರ್ಮದ ಹಂಗಿಲ್ಲವೆಂಬುದು ಮತ್ತೆ ಸಾಬೀತಾಗಿದೆ. ದಕ್ಷಿಣ ಕನ್ನಡದಲ್ಲಿ ಧರ್ಮ ಧರ್ಮಗಳ ನಡುವಿನ ಸರಣಿ ಕೊಲೆಗಳ ಮಧ್ಯೆಯೂ ಧರ್ಮಾಂದತೆ ಮೀರಿ ಮಾನವೀಯ ಧರ್ಮ ಎತ್ತಿಹಿಡಿಯುವಂತಹ ಪ್ರಕರಣವೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ. ಮಳೆ ಕಾರ್ಯಾಚರಣೆ (Heavy Rain) ವೇಳೆ ಆಯತಪ್ಪಿ ನದಿಗೆ ಬಿದ್ದ ಮುಸ್ಲಿಂ ಯುವಕನನ್ನು ಹಿಂದು ಯುವಕನೊಬ್ಬ ಕಾಪಾಡಿದ್ದಾನೆ.

ಇಲ್ಲಿನ ಸುಳ್ಯ ತಾಲೂಕಿನ ಹರಿಹರದಲ್ಲಿ ಸತತ ಭಾರಿ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿದೆ. ಹರಿಹರದಲ್ಲಿ ರಕ್ಷಣಾ ಕಾರ್ಯ‌ದಲ್ಲಿ ಗ್ರಾಮದ ಜನರು ಒಟ್ಟಾಗಿ ತೊಡಗಿಸಿಕೊಂಡಿದ್ದು, ಸಂತ್ರಸ್ತರಿಗೆ ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಮಧ್ಯೆ ಸೇತುವೆಯಲ್ಲಿ ಸಿಕ್ಕಿ ಹಾಕಿಕೊಂಡ ಮರಗಳ ತೆರವು ಕಾರ್ಯಾಚರಣೆ ಮಾಡುವಾಗ ಕ್ರೇನ್ ಆಪರೇಟರ್‌ ಶರೀಫ್ ಎಂಬುವವರು ಆಯತಪ್ಪಿ ರಭಸವಾಗಿ ಹರಿಯುತ್ತಿದ್ದ ನದಿಗೆ ಬಿದ್ದಿದ್ದಾರೆ.

ನೀರಿನಲ್ಲಿ ಕೊಚ್ಚಿ ಹೋಗುತ್ತಿರುವುದನ್ನು ಗಮನಿಸಿದ ಸೋಮಶೇಖರ ಕಟ್ಟೆಮನೆ ಎಂಬುವರು ಪ್ರಾಣದ ಹಂಗು ತೊರೆದು ನದಿಗೆ ಹಾರಿದ್ದಾರೆ. ಬಹುದೂರ ಕೊಚ್ಚಿ ಹೋಗಿದ್ದ ಶರೀಫ್‌ನನ್ನು ರಕ್ಷಿಸಿಕೊಂಡು ಬರುವಲ್ಲಿ ಯಶಸ್ವಿಯಾಗಿದ್ದಾರೆ. ದಡದ ಸಮೀಪ ಬರುತ್ತಿದ್ದಂತೆ ಜೆಸಿಬಿ ಸಹಾಯದ ಮೂಲಕ ಅವರನ್ನು ಮೇಲೆತ್ತಿ ರಕ್ಷಣೆ ಮಾಡಲಾಗಿದೆ. ಸೋಮಶೇಖರ ಕಟ್ಟೆಮನೆಯವರ ಕಾರ್ಯಕ್ಕೆ ಗ್ರಾಮದ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  

ಧರ್ಮ ಧರ್ಮಗಳ ನಡುವೆ ಗದ್ದಲ ಗಲಾಟೆ ನಡೆಯುತ್ತಿರುವ ಈ ಹೊತ್ತಿನಲ್ಲಿ ಇಂಥ ಸನ್ನಿವೇಶಗಳು ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ. ಧರ್ಮಕ್ಕಿಂತ ಮನುಷ್ಯನಲ್ಲಿನ ಮಾನವೀಯತೆ ಮೊದಲು ಎಂಬುದನ್ನು ಸಾಬೀತು ಪಡಿಸಿದೆ ಎಂದು ಹಲವರು ಪ್ರಶಂಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ | ಮಾನವೀಯತೆ ಮರೆತ ಮಗ-ಸೊಸೆ; 70 ವರ್ಷದ ವೃದ್ಧೆಯ ಶೌಚಾಲಯದಲ್ಲಿಟ್ಟರು!

Exit mobile version