ಬೆಂಗಳೂರು: ಕಳೆದ ಒಂದು ವಾರದಿಂದ ಶಿವಮೊಗ್ಗ, ಕೊಡಗು, ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುತ್ತಿವೆ. ಶನಿವಾರ (ಜು.೯) ಧಾರಾಕಾರ ಮಳೆಯಾಗಿದ್ದು, ವಾಡಿಕೆಗಿಂತ ಶೇ.88ರಷ್ಟು ಹೆಚ್ಚುವರಿ ಮಳೆ (Rain News) ಆಗಿದೆ. ಶಿವಮೊಗ್ಗ ಜಿಲ್ಲೆಯಲ್ಲಿ 12 ಕೆರೆಗಳು ಒಡೆದಿದ್ದು, ಅಪಾರ ಪ್ರಮಾಣದಲ್ಲಿ ನೀರು ಹರಿದುಹೋಗಿವೆ.
ಅತಿವೃಷ್ಟಿಯಿಂದ ಶಿವಮೊಗ್ಗ ಜಿಲ್ಲೆಯಲ್ಲಿ 58 ಮನೆಗಳಿಗೆ ಭಾಗಶಃ ಹಾನಿ ಆಗಿದ್ದು, 4 ಮನೆಗಳಿಗೆ ಪೂರ್ಣ ಹಾನಿ ಆಗಿದೆ. ಒಂದು ಜಾನುವಾರು, 265 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಮತ್ತು 20 ಹೆಕ್ಟೇರ್ ಪ್ರದೇಶದಲ್ಲಿ ಮುಸುಕಿನ ಜೋಳದ ಬೆಳೆಗೆ ಹಾನಿ ಆಗಿದೆ. 12 ರಸ್ತೆ, 6 ಸೇತುವೆಗಳು ಹಾಗೂ 210 ವಿದ್ಯುತ್ ಕಂಬಗಳು ಹಾಗೂ 44 ಟ್ರಾನ್ಸ್‌ಫಾರ್ಮರ್‌ಗಳು ಹಾನಿಗೊಳಪಟ್ಟಿವೆ.
ತುರ್ತು ಸಂದರ್ಭಗಳಲ್ಲಿ ನೆರವಾಗಲು ಕಾಳಜಿ ಕೇಂದ್ರ ಸ್ಥಾಪನೆಗೆ ಸಿದ್ಧತೆ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ 73, ನಗರ ಪ್ರದೇಶಗಳಲ್ಲಿ 98 ಕಾಳಜಿ ಕೇಂದ್ರವನ್ನು ಗುರುತು ಮಾಡುವ ಕಾರ್ಯ ಜಾರಿಯಲ್ಲಿದೆ. 67 ಗ್ರಾಮ ಪಂಚಾಯತ್‍ಗಳ 163 ಗ್ರಾಮಗಳಲ್ಲಿ ಕಟ್ಟೆಚ್ಚರ ಘೋಷಿಸಿದೆ. ನೆರೆ ಸಂದರ್ಭದಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ 5 ಬೋಟುಗಳು ಸನ್ನದ್ಧ ಸ್ಥಿತಿಯಲ್ಲಿವೆ ಎಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಮನೆಯೊಳಗೆ ನೀರು ನುಗ್ಗಿದರೆ ₹10 ಸಾವಿರ ಪರಿಹಾರ: ಮಳೆ ಹಾನಿ ಕುರಿತು ಸಿಎಂ ಬೊಮ್ಮಾಯಿ ಸಭೆ
ಮಳೆಯ ಅಬ್ಬರಕ್ಕೆ ಕಾಫಿ ಬೆಳೆ ನಷ್ಟ
ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರಿದ್ದಿದ್ದು, ಮಳೆಯ ಅಬ್ಬರಕ್ಕೆ ಕಾಫಿ ಬೆಳೆ ನಷ್ಟವಾಗಿದೆ. ಮೂಡಿಗೆರೆ ತಾಲೂಕಿನಲ್ಲಿ ಗಾಳಿ-ಮಳೆ ಆರ್ಭಟಕ್ಕೆ ಕಾಫಿ ಬೀಜಗಳು ಉದುರುತ್ತಿದ್ದು, ಕಾಫಿ ಬೆಳೆಗಾರರನ್ನು ಕಂಗಾಲಾಗಿಸಿದೆ. ನೂರಾರು ಎಕರೆಯಲ್ಲಿ ಬೆಳೆದು ನಿಂತಿದ್ದ ಕಾಫಿ ಕೊಯ್ಲು ಮಣ್ಣು ಪಾಲಾಗಿದೆ. ಮೂಡಿಗೆರೆ, ಚಿಕ್ಕಮಗಳೂರು, ಶೃಂಗೇರಿ ಭಾಗದ ಕಾಫಿ ಬೆಳೆಗಾರರು ಅತಿ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಬಸರಿಕಟ್ಟೆಯ ಮಣಬೂರಿನಲ್ಲಿ ಭಾರಿ ಮಳೆಗೆ ಕಿರು ಸೇತುವೆ ಕುಸಿತಗೊಂಡಿದೆ. ಏಕಾಏಕಿ ರಸ್ತೆ ಕುಸಿತದಿಂದ ಜನಸಾಮಾನ್ಯರಲ್ಲಿ ಆತಂಕ ಮನೆ ಮಾಡಿದೆ.
ಮನೆ ಕುಸಿತ
ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದುರ್ಗದ ಹಳ್ಳಿ ಗ್ರಾಮದಲ್ಲಿ ಸತತ ಮಳೆಯಿಂದ ಮಣ್ಣು ಸಡಿಲಗೊಂಡು ಮನೆಯೊಂದು ಬೆಳಗಿನ ಜಾವದಲ್ಲಿ ಕುಸಿದಿದೆ. ಸುನೀಲ್ ಎಂಬುವವರಿಗೆ ಸೇರಿದ ಮನೆ ಇದಾಗಿದ್ದು, ಎಲ್ಲರೂ ನಿದ್ದೆ ಮಂಪರಿನಲ್ಲಿದ್ದಾಗ ಮನೆ ಕುಸಿತ ಕಂಡಿದೆ. ಅದೃಷ್ಟವಶಾತ್ ಕೂದಳೆಲೆ ಅಂತರದಲ್ಲಿ ಎಲ್ಲರೂ ಪಾರಾಗಿದ್ದಾರೆ. ಮನೆ ಒಳಗಿನ ಪೀಠೋಪಕರಣಗಳು, ಸಾಮಗ್ರಿಗಳು ಜಖಂಗೊಂಡಿದೆ. ಮನೆ ಕುಸಿತದಿಂದ ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಕೊಡಗಿನಲ್ಲಿ ಮಳೆಯ ಅಬ್ಬರಕ್ಕೆ ನಡುಗಿದ ಭೂಮಿ
ಕೊಡಗಿನಲ್ಲಿ ಮಳೆಯ ಅಬ್ಬರಕ್ಕೆ ಚೆಂಬುವಿನಲ್ಲಿ ನಸುಕಿನ ಜಾವ 4.30ರ ಸಮಯಕ್ಕೆ ಕಂಪನದ ಸದ್ದು ಕೇಳಿ ಬಂದಿದೆ. ಭೂ ಕಂಪನ ಹಾಗೂ ಮಳೆಯ ಅಬ್ಬರಕ್ಕೆ ಜನತೆಯಲ್ಲಿ ಆತಂಕ ಮನೆ ಮಾಡಿದೆ. ಭೂಮಿಯಲ್ಲಾಗುವ ಭೌಗೋಳಿಕ ಬದಲಾವಣೆ ಭಾರಿ ಶಬ್ದಕ್ಕೆ ಜನತೆ ಭಯ ಪಡುವ ಅಗತ್ಯ ಇಲ್ಲ ಎಂದು ವಿಪತ್ತು ನಿರ್ವಹಣಾ ಪರಿಣಿತ ಅನನ್ಯ ವಾಸುದೇವ್ ಸ್ಪಷ್ಟನೆ ನೀಡಿದ್ದಾರೆ. ಜಿಲ್ಲೆಯ ಕೆಲವು ಭಾಗದಲ್ಲಿ ರಸ್ತೆಗಳ ಮೇಲೆ ಮಣ್ಣು ಕುಸಿಯುತ್ತಿದ್ದು, ಮಳೆಯ ಮುಂಜಾಗ್ರತೆ ಕ್ರಮವಾಗಿ ಜಿಲ್ಲಾಡಳಿತ ಶಾಲೆ ಕಾಲೇಜಿಗೆ ರಜೆ ಘೋಷಣೆ ಮಾಡಿದೆ.
ಮಡಿಕೇರಿ ತಾಲೂಕಿನ ಚೇರಂಬಾಣೆಯಲ್ಲಿ ಚೆಲುವರಾಜು ಎಂಬವವರಿಗೆ ಸೇರಿದ ಮನೆ ಮುಂಭಾಗ ಕುಸಿದಿದ್ದು, ಅಪಾಯ ಸ್ಥಿತಿಯಲ್ಲಿ ಮನೆ ಇದೆ. ಈ ಕಾರಣದಿಂದಾಗಿ ಕುಟುಂಬದವರನ್ನು ಸುರಕ್ಷಿತ ಕಡೆಗೆ ಅಧಿಕಾರಿಗಳು ಸ್ಥಳಾಂತರ ಮಾಡಿದ್ದಾರೆ.
ತುಂಗಾ ನದಿಯ ಪ್ರವಾಹ ಆತಂಕ ದೂರ
ಭಾರಿ ಮಳೆಯಿಂದಾಗಿ ವಾರದಿಂದ ತುಂಗಾ ಜಲಾಶಯಕ್ಕೆ ಒಳಹರಿವು ಹೆಚ್ಚಿತ್ತು. ಆದರೆ, ಈಗ ಇಳಿಮುಖವಾಗಿದ್ದರಿಂದ ನಗರಕ್ಕೆ ಪ್ರವಾಹ ಆತಂಕ ದೂರವಾಗಿದೆ. ಒಳಹರಿವಿನ ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ನೀರನ್ನು ಹೊರಕ್ಕೆ ಬಿಡಲಾಗಿದೆ. 55,770 ಕ್ಯೂಸೆಕ್ ನೀರನ್ನು ಜಲಾಶಯದಿಂದ ಹೊರಕ್ಕೆ ಬಿಡಲಾಗಿದೆ.
ಇದನ್ನೂ ಓದಿ | Rain News | ನಿಲ್ಲದ ಧಾರಾಕಾರ ಮಳೆ; ನದಿ ಪಾತ್ರದಲ್ಲಿ ಪ್ರವಾಹ ಪರಿಸ್ಥಿತಿ, ನೂರಾರು ಎಕರೆ ಬೆಳೆ ಜಲಾವೃತ
ತೀರ್ಥಹಳ್ಳಿ ಪ್ರವಾಸದಲ್ಲಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಶುಕ್ರವಾರ (ಜು.೮) ಸಂಜೆ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಳೆಹಾನಿ ಪ್ರದೇಶಗಳನ್ನು ವೀಕ್ಷಣೆ ಮಾಡಿದರು. ಆರಗ ಕಡೆಗದ್ದೆಯಲ್ಲಿ ಮನೆಯೊಂದರ ಮೇಲೆ ಮರ ಬಿದ್ದು ಹಾನಿಯಾಗಿರುವುದನ್ನು ವೀಕ್ಷಿಸಿದ ಸಚಿವರು, ಕುಟುಂಬದವರಿಗೆ ಧೈರ್ಯ ಹೇಳಿ ಪರಿಹಾರದ ಭರವಸೆ ನೀಡಿದ್ದಾರೆ. ಈ ವೇಳೆ ವಿವಿಧ ಕಡೆ ಮಳೆ ಹಾನಿ ಪ್ರದೇಶಗಳನ್ನು ವೀಕ್ಷಿಸಿದರು. ಇದಕ್ಕೂ ಮೊದಲು ತೀರ್ಥಹಳ್ಳಿ ತಾಲೂಕು ಕಚೇರಿಯಲ್ಲಿ ಮುಖ್ಯಮಂತ್ರಿಗಳ ಜತೆ ಮಳೆಹಾನಿ ಕುರಿತಾದ ವಿಡಿಯೊ ಸಂವಾದದಲ್ಲಿ ಪಾಲ್ಗೊಂಡಿದ್ದರು. ಬೆಳಗ್ಗೆ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಮಳೆಹಾನಿ ಸಭೆ ನಡೆಸಿ ಮಾಹಿತಿ ಪಡೆದುಕೊಂಡರು.
ರಾಯಚೂರಿನಲ್ಲಿ ವರುಣನ ಅಬ್ಬರ ಹಿನ್ನೆಲೆಯಲ್ಲಿ ನಾರಾಯಣಪುರ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದುಬರುತ್ತಿದೆ. ಶನಿವಾರ (ಜು.೯) ಜಲಾಶಯದಲ್ಲಿ 1586 ಕ್ಯೂಸೆಕ್ ಒಳ ಹರಿವು ಇತ್ತು.
ಮೈಸೂರಿನಲ್ಲಿ ರೆಂಬೆ-ಕೊಂಬೆಗಳ ತೆರವು ಕಾರ್ಯ
ಮೈಸೂರಿನಲ್ಲಿ ಜಿಟಿ ಜಿಟಿ ಮಳೆಯಾದ ಹಿನ್ನೆಲೆಯಲ್ಲಿ ಅಪಾಯವೊಡ್ಡುವ ಮರದ ರೆಂಬೆ-ಕೊಂಬೆಗಳನ್ನು ಮೈಸೂರು ಮಹಾನಗರ ಪಾಲಿಕೆ ಸಿಬ್ಬಂದಿಯಿಂದ ತೆರವು ಕಾರ್ಯ ಮಾಡಲಾಗುತ್ತಿದೆ. ವಿದ್ಯುತ್ ತಂತಿಗೆ ತಗುಲುವ ಮರದ ರೆಂಬೆ-ಕೊಂಬೆಗಳ ತೆರವು ಕಾರ್ಯ ಶುರುವಾಗಿದ್ದು, ಮೈಸೂರು-ಹುಣಸೂರು ರಸ್ತೆ ಸೇರಿದಂತೆ ಹಲವೆಡೆ ಈ ಕಾರ್ಯಕ್ಕೆ ಚುರುಕು ನೀಡಲಾಗಿದೆ. ಮೈಸೂರು-ಹುಣಸೂರು ರಸ್ತೆಯ ಜಲದರ್ಶಿನಿ ಕಚೇರಿಯ ಮುಂಭಾಗ ಪಾಲಿಕೆ ಸಿಬ್ಬಂದಿ ಕಾರ್ಯಾಚರಣೆ ನಡೆಸಿದೆ.
ಉಡುಪಿಯಲ್ಲಿ ರೆಡ್ ಅಲರ್ಟ್ ಘೋಷಣೆ
ಉಡುಪಿಯಲ್ಲಿ ಕೋಟ ಪರಿಸರದ ಬನ್ನಾಡಿ, ಉಪ್ಲಾಡಿ, ಬೆಟ್ಲಕ್ಕಿಯಲ್ಲಿ ಮಳೆಯಿಂದಾಗಿ ನೆರೆ ಬಂದಿದೆ. ಮಳೆಯ ಮುನ್ಸೂಚನೆ ದೊರತ ಕೂಡಲೇ ಸ್ಥಳೀಯರು ಮುಂಜಾಗ್ರತೆ ವಹಿಸಿದ್ದಾರೆ. ಸದ್ಯ ನಿಧಾನ ಗತಿಯಲ್ಲಿ ಏರುತ್ತಿರುವ ನೆರೆ ನೀರಿನ ಮಟ್ಟದಿಂದ ಆತಂಕ ಮನೆ ಮಾಡಿದೆ. ಜಿಲ್ಲೆಯಾದ್ಯಂತ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಇದನ್ನೂ ಓದಿ | ಮಳೆಗೆ ಸಂಪೂರ್ಣ ಮನೆ ಹಾನಿಯಾದರೆ ₹5 ಲಕ್ಷ, ಭಾಗಶಃ ಹಾನಿಯಾದರೆ ₹50 ಸಾವಿರ ಪರಿಹಾರ: ಸಚಿವ ಆರ್.ಅಶೋಕ್