ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆರಂಭಗೊಂಡ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರ ರೋಡ್ ಶೋ ಸಂದರ್ಭದಲ್ಲಿ ಬಾಲಕನೊಬ್ಬ ಪೊಲೀಸ್ ತಡೆಗೋಡೆಯನ್ನು ಬೇಧಿಸಿ (Security lapse) ಮೋದಿ ಅವರಿಗೆ ಹೂ ಹಾರ ಹಾಕಲು ಬಂದ ಪ್ರಕರಣವನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.
ಇದನ್ನೊಂದು ಗಂಭೀರ ಭದ್ರತಾ ಲೋಪ ಎಂದು ಪರಿಗಣಿಸಿ ತನಿಖೆಗೆ ಸೂಚಿಸಲಾಗಿದೆ. ಇದರ ಮೊದಲ ಭಾಗವಾಗಿ ಬಾಲಕನ ಪೋಷಕರನ್ನು ಪೊಲೀಸ್ ಠಾಣೆಗೆ ಕರೆಸಲಾಗಿದೆ. ಬಾಲಕನ ಹಿನ್ನೆಲೆಯ ಬಗ್ಗೆ ಕೂಡಾ ಅಧ್ಯಯನ ಮಾಡಲು ಪೊಲೀಸರು ನಿರ್ಧರಿಸಿದ್ದಾರೆ.
ಹುಬ್ಬಳ್ಳಿಯ ವಿಮಾನ ನಿಲ್ದಾಣದಿಂದ ಕಾರ್ಯಕ್ರಮ ನಡೆಯುವ ವೇದಿಕೆವರೆಗಿನ ಸುಮಾರು ೮ ಕಿ.ಮೀ. ಮಾರ್ಗದಲ್ಲಿ ಮೋದಿ ಸುದೀರ್ಘ ರೋಡ್ ಶೋ ನಡೆಸಿದರು. ಈ ವೇಳೆ ಮಾರ್ಗ ಮಧ್ಯೆ ಕುನಾಲ್ ಸುರೇಶ್ (೧೧) ಎಂಬ ಬಾಲಕ ಭದ್ರತೆಯನ್ನು ಭೇದಿಸಿ ಮೋದಿ ಅವರು ಪ್ರಯಾಣಿಸುತ್ತಿದ್ದ ವಾಹನದ ಕಡೆಗೆ ಧಾವಿಸಿದ್ದ.
ಹುಬ್ಬಳ್ಳಿಯ ತೊರವಿಹಕ್ಕಲದ ನಿವಾಸಿ ಕುನಾಲ್ ಸುರೇಶ್ (11) ಮಾಲೆ ಹಾಕಲು ಯತ್ನಿಸಿದ್ದು, ಕೂಡಲೇ ಪೊಲೀಸರು ಆತನನ್ನು ಹಿಡಿದು ಬ್ಯಾರಿಕೇಡ್‌ನ ಆಚೆಗೆ ತಳ್ಳಿದರು. ಮೋದಿ ಅವರು ಆತನ ಕೈಯಿಂದ ಮಾಲೆಯನ್ನು ಸ್ವೀಕರಿಸಿದರು.
ಕುನಾಲ್ ಸುರೇಶ ಹೆತ್ತವರ ನಿವಾಸ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿದೆ. ಈಗ ಘಟನೆ ನಡೆದಿರುವ ಗೋಕುಲ ನಗರ ಠಾಣೆಯ ಪೊಲೀಸರು ಕುನಾಲ್‌ನ ಪೋಷಕರನ್ನು ಕರೆಸಿಕೊಂಡಿದ್ದಾರೆ.
ಮರಳುವ ವೇಳೆ ಬಿಗಿ ಭದ್ರತೆ
ನರೇಂದ್ರ ಮೋದಿ ಅವರಿಗೆ ಹೂಮಾಲೆ ಹಾಕಲು ಬಾಲಕ ಬ್ಯಾರಿಕೇಡ್ ಜಿಗಿದು ಬಂದ ಹಿನ್ನೆಲೆಯಲ್ಲಿ ಮೋದಿ ಅವರು ಮರಳಿ ವಿಮಾನ ನಿಲ್ದಾಣಕ್ಕೆ ಸಾಗುವ ದಾರಿಯಲ್ಲಿ ಭದ್ರತೆಯನ್ನು ಇನ್ನಷ್ಟು ಹೆಚ್ಚಿಸಲಾಗಿದೆ.
ಬ್ಯಾರಿಕೇಡ್ ದಾಟಿ ಯಾರೂ ಒಳ ಬರದಂತೆ ಕಟ್ಟುನಿಟ್ಟಿನ ನಿಗಾ ವಹಿಸಲಾಗಿದೆ. ಸಾರ್ವಜನಿಕರಿಗೆ ಬ್ಯಾರಿಕೇಡ್ ದಾಟಿ ಬರದಂತೆ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ. ಹೆಜ್ಜೆ ಹೆಜ್ಜೆಗೂ ಪೊಲೀಸರ ಕಣ್ಗಾವಲು ಇಡಲಾಗಿದ್ದು ತೀವ್ರ ಭದ್ರತೆ ನಿಯೋಜಿಸಲಾಗಿದೆ.
ರೈಲ್ವೆ ಮೈದಾನದಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಾಗಿ ಅಲ್ಲಿಂದ ದಿಲ್ಲಿಗೆ ವಿಮಾನದಲ್ಲಿ ತೆರಳಿದರು.
ಇದನ್ನೂ ಓದಿ | National Youth Festival : ಪ್ರಧಾನಿಗೆ ಅದ್ಧೂರಿ ಸ್ವಾಗತ; ಹೂಮಳೆಯಲ್ಲಿ ಮಿಂದೆದ್ದ ನರೇಂದ್ರ, ಮುಗಿಲು ತಾಕಿದ ಮೋದಿ ಜಯಘೋಷ