ಬೆಂಗಳೂರು: ಅರಣ್ಯ ಭೂಮಿ ಹಾಗೂ ಕಂದಾಯ ಭೂಮಿ ವ್ಯಾಪ್ತಿಯ ಜಂಟಿ ಸಮೀಕ್ಷೆ, 1978ಕ್ಕಿಂತ ಮೊದಲು ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡವರಿಗೆ ಹಕ್ಕುಪತ್ರಕ್ಕೆ ಕ್ರಮ, ಕಸ್ತೂರಿ ರಂಗನ್ ವರದಿ ಬಗ್ಗೆ ವಿರೋಧ, ಡಿ ಗ್ರೂಪ್ ನೌಕರರಿಗೆ ನಿಗದಿತ ಸಮಯಕ್ಕೆ ವೇತನ ನೀಡುವುದು ಸೇರಿದಂತೆ ಹಲವು ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರೋಪಾಯಗಳನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಸೂಚಿಸಿದ್ದಾರೆ. ವಿಸ್ತಾರ ನ್ಯೂಸ್ ಆಯೋಜಿಸಿದ್ದ “ಹಲೋ ಸಚಿವರೇ” ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ಅವರು ಜನರಿಗೆ ದನಿಯಾಗಿದ್ದಾರೆ.
ಅರಣ್ಯ ಭೂಮಿ ಒತ್ತುವರಿಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಜಂಟಿ ಸಮೀಕ್ಷೆಯನ್ನು ನಡೆಸಲಿದೆ. ಇಲ್ಲಿ ಆಯಾ ಇಲಾಖೆ ವ್ಯಾಪ್ತಿಗೆ ಬರುವ ಭೂಮಿಯನ್ನು ಪ್ರತ್ಯೇಕಿಸಿ ಸುಪ್ರೀಂ ಕೋರ್ಟ್ ಹಾಗೂ ಮುಂದಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಆದರೆ, 1978ಕ್ಕಿಂತ ಮುಂಚಿತವಾಗಿ ಒತ್ತುವರಿ ಮಾಡಿಕೊಂಡವರಲ್ಲಿ ಮೂರು ಎಕರೆ ಜಮೀನು ಹೊಂದಿದವರಿಗೆ ಹಕ್ಕುಪತ್ರ ನೀಡಲು ಕಾನೂನು ರೀತ್ಯಾ ಅವಕಾಶಗಳನ್ನು ನೋಡಿಕೊಂಡು ಕ್ರಮ ವಹಿಸಲಾಗುವುದು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
1978ರಿಂದ ಮುಂಚಿತವಾಗಿ ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡಿಕೊಂಡು ಇರುವವರಿಗೆ ಡಿ ರಿಸರ್ವೇಶನ್ ಮಾಡಲು ಕಾಯ್ದೆಯಲ್ಲಿ ಅವಕಾಶ ಇದೆ. ನಾನು ಈ ಸಂಬಂಧ ಸೂಚನೆ ನೀಡಿದ್ದೇನೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಅನುಮತಿ ಸಹ ಬೇಕಿದೆ. ನಾವು ಯಾವುದೇ ರೀತಿಯ ದೌರ್ಜನ್ಯ ಆಗದಂತೆ ಕ್ರಮ ವಹಿಸುತ್ತೇವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸಚಿವ ಈಶ್ವರ ಖಂಡ್ರೆ ಹೇಳಿದರು.
ಒತ್ತುವರಿ ತೆರವು ಸಂಬಂಧ ಅರಣ್ಯ ಇಲಾಖೆ ಮಾತ್ರ ಏಕಮುಖ ನಿರ್ಧಾರ ತೆಗೆದುಕೊಳ್ಳಲು ಆಗುವುದಿಲ್ಲ. ಹೀಗಾಗಿ ಆ ಇಲಾಖೆಯ ಸಚಿವರು, ಅಧಿಕಾರಿಗಳ ಸಮ್ಮುಖದಲ್ಲಿ ಸಭೆ ನಡೆಸಿ ಸಾಧಕ-ಬಾಧಕಗಳನ್ನು ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಮೂರು ಎಕರೆ ಇದ್ದವರಿಗೆ ರಿಲೀಫ್!
1978ರಿಂದ ಮುಂಚಿತವಾಗಿ ಕೆಲವರು ಒತ್ತುವರಿ ಮಾಡಿಕೊಂಡು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ಇವರಿಗೆ ಕಾನೂನಿನಲ್ಲಿ ಸಡಿಲಿಕೆ ಮಾಡಲಾಗಿದ್ದರೂ ಷರತ್ತುಗಳು ಅನ್ವಯವಾಗುತ್ತವೆ. ಅಂದರೆ, ಮೂರು ಎಕರೆಗಿಂತ ಕಡಿಮೆ ಇರುವವರಿಗೆ ಮಾತ್ರ ಹಕ್ಕು ಪತ್ರ ನೀಡಲಾಗುವುದು. ಇದಕ್ಕೆ ಅನುಮತಿ ನೀಡಬೇಕೆಂದರೆ ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್ ಅನುಮತಿ ಬೇಕಾಗಿದೆ. ಆ ನಿಟ್ಟಿನಲ್ಲಿ ನಾವು ಕ್ರಮ ವಹಿಸುತ್ತೇವೆ ಎಂದು ಈಶ್ವರ ಖಂಡ್ರೆ ಹೇಳಿದರು.
ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದ ಹಲವು ಕಡೆ ಈ ಸಮಸ್ಯೆಗಳು ಇವೆ. ಇವುಗಳನ್ನು ಬಗೆಹರಿಸಲು ನಾವು ಕಾನೂನು ರೀತ್ಯಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಾಲಮಿತಿಯಲ್ಲಿ ಯಾವ ರೀತಿ ಮಾಡಬಹುದು ಎಂಬುದನ್ನು ನೋಡಿಕೊಂಡು ನಾವು ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಒತ್ತುವರಿದಾರರ ಮೇಲೆ ದಬ್ಬಾಳಿಕೆ ಮಾಡುವಂತಿಲ್ಲ; ಖಂಡ್ರೆ ಖಡಕ್ ಸೂಚನೆ
ಮಲೆನಾಡಿನಲ್ಲಿ ಸಾವಿರಾರು ಕುಟುಂಬಗಳು ಕಳೆದ 40 ವರ್ಷಗಳಿಂದ ಕಾಡಂಚಿನಲ್ಲಿ ಜೀವನೋಪಾಯಕ್ಕಾಗಿ ಕೃಷಿ ಮಾಡಿಕೊಂಡು, ಮನೆ ಕಟ್ಟಿಕೊಂಡು ಜೀವಿಸುತ್ತಿವೆ. ಆ ನಿವಾಸಿಗಳಿಗೂ ಅರಣ್ಯ ಇಲಾಖೆ ಸಿಬ್ಬಂದಿಗೂ ಆಗಾಗ ಸಂಘರ್ಷ ನಡೆಯುತ್ತಲೇ ಇರುವುದು ನನ್ನ ಗಮನಕ್ಕೆ ಬಂದಿದೆ. ಶಿವಮೊಗ್ಗದಲ್ಲಿ ಕೆಲವು ವಿಶೇಷ ಪ್ರಕರಣಗಳು ಇವೆ ಎಂಬುದನ್ನು ತಿಳಿದುಕೊಂಡಿದ್ದೇನೆ. ಕೆಲವು ಪ್ರಕರಣಗಳಲ್ಲಿ ಒಕ್ಕಲೆಬ್ಬಿಸಿದವರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು ಕೆಲವು ಜನರಿಗೆ ಸಮಸ್ಯೆಯಾಗಿದ್ದು, ಅಂಥವರಿಗೆ ರಾಜ್ಯ ಸರ್ಕಾರವು ಕೂಲಂಕಷವಾಗಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅರಣ್ಯ ಒತ್ತುವರಿದಾರರ ಮೇಲೆ ಅರಣ್ಯ ಅಧಿಕಾರಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಹೊಡೆಯುವುದು, ದೌರ್ಜನ್ಯ ಎಸಗುವುದನ್ನು ಮಾಡುತ್ತಿದ್ದಾರೆ ಎಂಬ ದೂರುಗಳು ಬಂದಿದ್ದು, ನಾನು ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇನೆ. ಹೀಗಾಗಿ ಒತ್ತುವರಿದಾರರಿಗೆ ಕಾನೂನು ಅರಿವನ್ನು ಮೂಡಿಸಲು ಸೂಚಿಸಲಾಗಿದೆ. ಜತೆಗೆ ಯಾವುದೇ ರೀತಿಯ ಅಸಭ್ಯ ವರ್ತನೆ ಮಾಡದಂತೆ ಅರಣ್ಯ ಇಲಾಖೆಯ ಹಿರಿಯ ಮತ್ತು ಕಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ವಿಸ್ತಾರ ನ್ಯೂಸ್ ಮುಖಾಂತರ ರಾಜ್ಯದ ಜನತೆಗೆ ತಿಳಿಸುತ್ತಿದ್ದೇನೆ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಸರ್ಕಾರದಿಂದ ಅಕೇಶಿಯಾಕ್ಕೆ ನಿಷೇಧ
ನೆಡುತೋಪುಗಳಾದ ಅಕೇಶಿಯಾ, ನೀಲಗಿರಿ ಬೆಳೆಯಲು ಕರ್ನಾಟಕ ಸರ್ಕಾರದ ಅರಣ್ಯ ಇಲಾಖೆಯಿಂದ ಬೆಳೆಯಲು ಅವಕಾಶ ಇಲ್ಲ. ಆದರೆ, ಖಾಸಗಿಯಾಗಿ ಬೆಳಯಬಹುದು ಎಂದು ಸಚಿವ ಈಶ್ವರ ಖಂಡ್ರೆ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
2017ರಲ್ಲೇ ನೀಲಗಿರಿ ಬೆಳೆಯಲು ಬ್ಯಾನ್ ಮಾಡಲಾಗಿದೆ. ಸಸಿಗಳನ್ನು ಬೆಳೆಯುತ್ತಿಲ್ಲ, ವಿತರಣೆಯನ್ನೂ ಮಾಡುತ್ತಿಲ್ಲ. ಒತ್ತುವರಿ ಪ್ರದೇಶಗಳಲ್ಲಿ ಮಾತ್ರ ಅಕೇಶಿಯಾವನ್ನು ನಾವು ಹಾಕುತ್ತಿದ್ದೇವೆ. ಅದು ಸಹ 8 ವರ್ಷಗಳು ಮಾತ್ರ. ಬಳಿಕ ಅಲ್ಲಿ ಬೇರೆ ಸಸಿಗಳನ್ನು ನೆಡಲಾಗುವುದು ಎಂದು ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳೊಬ್ಬರು ಉತ್ತರಿಸಿದರು.
ಮಲೆನಾಡಿಗರಿಗೆ ಕಸ್ತೂರಿ ರಂಗನ್ ವರದಿಯ ಆತಂಕ ಬೇಡ
ಕಸ್ತೂರಿ ರಂಗನ್ ವರದಿಯ ಶಿಫಾರಸುಗಳು ಪಶ್ಚಿಮ ಘಟ್ಟದ 1553 ಹಳ್ಳಿಗಳ ನಿವಾಸಿಗಳನ್ನು ಭೀತಿಗೊಳಿಸಿದೆ. ಆದರೆ, ಜನರು ಯಾವುದೇ ಕಾರಣಕ್ಕೂ ಭಯಗೊಳ್ಳುವುದು ಬೇಡ. ನಿಮ್ಮೆಲ್ಲರ ಪರವಾಗಿ ನಮ್ಮ ಸರ್ಕಾರ ಇರುತ್ತದೆ. ಅದರ ಜತೆಗೆ ಗ್ರಾಮೀಣ ಭಾಗದಲ್ಲಿರುವ ಜನರ ಸಂರಕ್ಷಣೆಯೂ ಆಗಬೇಕು. ಈ ನಿಟ್ಟಿನಲ್ಲಿ ಸಾಧಕ-ಬಾಧಕ ತಿಳಿಯಲು ಕೇಂದ್ರ ಸರ್ಕಾರ ಒಂದು ಸಮಿತಿಯನ್ನು ರಚನೆ ಮಾಡಿದೆ. ಅದು ನೀಡುವ ವರದಿ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜನತೆ ಮಾತ್ರ ಯಾವುದೇ ಗೊಂದಲಕ್ಕೊಳಗಾಗುವುದು, ಭಯ ಪಡುವುದು ಬೇಡ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು.
ಕಸ್ತೂರಿ ರಂಗನ್ ವರದಿಯನ್ನು ತಿರಸ್ಕಾರ ಮಾಡುವ ನಿರ್ಧಾರಕ್ಕೆ ಈ ಹಿಂದೆಯೇ ಎಲ್ಲ ರಾಜಕೀಯ ಪಕ್ಷಗಳೂ ಬಂದಿವೆ. ಇದರ ಜತೆ ಜತೆಗೆ ಪಶ್ಚಿಮ ಘಟ್ಟಗಳ ರಕ್ಷಣೆಯನ್ನು ಮಾಡುವುದು ನಮ್ಮ ಕರ್ತವ್ಯವೂ ಆಗಿದೆ. ನಾನು ಕಸ್ತೂರಿ ರಂಗನ್ ವರದಿ ಬಗ್ಗೆ ಸಂಪೂರ್ಣ ಅಧ್ಯಯನ ಮಾಡಿಲ್ಲ. ಜುಲೈ 11ರಂದು ನಾವು ಈ ಸಂಬಂಧ ಕಸ್ತೂರಿ ರಂಗನ್ ವರದಿಗೆ ಸಂಬಂಧಪಟ್ಟಂತೆ ಸಭೆಯನ್ನು ಕರೆದಿದ್ದೇವೆ. ಒಟ್ಟಾರೆಯಾಗಿ ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ನಾವು ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತೇವೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಅಕ್ರಮ ಮರಳುಗಾರಿಕೆ ವಿರುದ್ಧ ಕ್ರಮ
ಅಕ್ರಮ ಮರಳು ಗಣಿಗಾರಿಕೆಯನ್ನು ರಾಜ್ಯ ಸರ್ಕಾರ ಪ್ರೋತ್ಸಾಹಿಸುವುದಿಲ್ಲ. ಈ ಸಂಬಂಧ ರಾಜ್ಯ ಸರ್ಕಾರ ಚರ್ಚೆ ನಡೆಸಿ ತೀರ್ಮಾನವನ್ನು ಕೈಗೊಳ್ಳುತ್ತದೆ. ಜತೆಗೆ ಜನರಿಗೆ ಸುಲಭವಾಗಿ ಮರಳು ಪೂರೈಕೆ ಮಾಡುವಂತೆಯೂ ಕ್ರಮ ಕೈಗೊಳ್ಳಲು ಸೂಕ್ತ ಕ್ರಮ ಕೈಗೊಳ್ಳಲು ಚರ್ಚೆ ನಡೆಸಲಾಗುತ್ತದೆ ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಹುದ್ದೆಗಳ ಭರ್ತಿಗೆ ಕ್ರಮ
ಅರಣ್ಯ ಇಲಾಖೆಯಲ್ಲಿ ಹಲವು ಹುದ್ದೆಗಳು ಖಾಲಿ ಇರುವ ಬಗ್ಗೆ ನನ್ನ ಗಮನಕ್ಕೆ ಬಂದಿದೆ. ಈಗಾಗಲೇ ಕರೆಯಲಾಗಿದ್ದ 338 ಹುದ್ದೆಗಳ ಭರ್ತಿಗೆ ಕ್ರಮ ವಹಿಸಲಾಗುವುದು. ಅಲ್ಲದೆ, ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಷ್ಟು ಹುದ್ದೆಗಳು ಖಾಲಿ ಇದೆ ಎಂಬುದರ ಬಗ್ಗೆ ನಾನು ವರದಿ ಕೇಳಿದ್ದೇನೆ. ಅಲ್ಲಿಂದ ವರದಿ ಬಂದ ಬಳಿಕ ತುರ್ತು ಕ್ರಮ ವಹಿಸುತ್ತೇನೆ. ಅಲ್ಲಿ ನೇಮಕಾತಿಗೆ ಯಾವುದೇ ತೊಡಕು ಸಹ ಇರುವುದಿಲ್ಲ. ಹೀಗಾಗಿ ತುರ್ತಾಗಿ ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಈಶ್ವರ ಖಂಡ್ರೆ ತಿಳಿಸಿದರು.
ಹಲೋ ಸಚಿವರೇ ನೇರ ಫೋನ್ ಇನ್ ಕಾರ್ಯಕ್ರಮದ ಸಂಪೂರ್ಣ ವಿಡಿಯೊ ಇಲ್ಲಿದೆ
ಹೊರಗುತ್ತಿಗೆ ನೌಕರರ ಕಾಯಂಗೆ ಹಂತ ಹಂತವಾಗಿ ಕ್ರಮ
ಬಹಳ ವರ್ಷಗಳಿಂದ ಹೊರಗುತ್ತಿಗೆ ನೌಕರಿ ಮಾಡುತ್ತಿರುವವರನ್ನು ಕಾಯಂ ಮಾಡುವ ಬಗ್ಗೆ ಸರ್ಕಾರಕ್ಕೆ ಅದರದ್ದೇ ಆದ ನೀತಿಗಳಿವೆ. ಇದನ್ನು ಹಂತ ಹಂತವಾಗಿ ಮಾಡಬೇಕಿದೆ. ಮುಖ್ಯಮಂತ್ರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಲಾಗುವುದು. ಇನ್ನು ಹೊರಗುತ್ತಿಗೆ ಕೆಲಸ ಮಾಡುವವರಿಗೆ ವೇತನ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳು ಬಂದಿವೆ. ವೇತನ ಸರಿಯಾದ ಸಮಯಕ್ಕೆ ತಲುಪುವಂತೆ ಕ್ರಮ ವಹಿಸಲಾಗುವುದು ಎಂದು ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.
ಸರ್ಕಾರ-ಜನರ ಮಧ್ಯೆ ವಿಸ್ತಾರ ನ್ಯೂಸ್ ಕೊಂಡಿ: ಹರಿಪ್ರಕಾಶ್ ಕೋಣೆಮನೆ
ಜನಪರ ನಿಲುವಿನ ಭಾಗವಾಗಿ ಸರ್ಕಾರವನ್ನು ನಾವು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಸರ್ಕಾರ ಹಾಗೂ ಜನರನ್ನು ಬೆಸೆಯುವ ಕೊಂಡಿಯಾಗಿ ವಿಸ್ತಾರ ನ್ಯೂಸ್ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಒಂದೊಂದು ಇಲಾಖೆಯ ಸಚಿವರ ಫೋನ್ ಇನ್ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ ಎಂದು ವಿಸ್ತಾರ ನ್ಯೂಸ್ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್ ಕೋಣೆಮನೆ ಹೇಳಿದರು.