Site icon Vistara News

ಹಲೋ ಸಚಿವರೇ: ರೈತರಿಗೆ ಗುಡ್‌ ನ್ಯೂಸ್!‌ ಬೆಳಗ್ಗೆಯೂ ಸಿಗಲಿದೆ ತ್ರಿ‌ ಫೇಸ್ ವಿದ್ಯುತ್‌: ಚಲುವರಾಯಸ್ವಾಮಿ

chaluvarayaswamy in vistara news Hello minister

ಬೆಂಗಳೂರು: ಬೆಳಗ್ಗೆ ಹೊತ್ತಿನಲ್ಲಿಯೂ ರೈತರಿಗೆ ತ್ರಿ ಫೇಸ್‌ ವಿದ್ಯುತ್‌ (Three Phase Electricity) ಶೀಘ್ರದಲ್ಲಿಯೇ ಕೊಡುತ್ತೇವೆ. ಈ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆಗಳೂ ನಡೆದಿವೆ. ಕನಿಷ್ಠ ಪಕ್ಷ 7-8 ಗಂಟೆ ನೀರು ಒದಗಿಸಲು ವಿದ್ಯುತ್‌ ಪೂರೈಸುವ ಗುರಿ ಇಟ್ಟುಕೊಂಡಿದ್ದು, ಆದ್ಯತೆ ಮೇರೆಗೆ ಕ್ರಮ ತೆಗೆದುಕೊಳ್ಳುತ್ತೇವೆ. ಅಧಿವೇಶನ ಮುಗಿದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರ ಜತೆ ಚರ್ಚೆ ಮಾಡಿ ಕ್ರಮ ಕೈಗೊಳ್ಳಲಾಗುವುದು ಎಂದು ಕೃಷಿ ಸಚಿವ ಎನ್.‌ ಚಲುವರಾಯಸ್ವಾಮಿ (Agriculture Minister N Chaluvarayaswamy) ಅವರು ವಿಸ್ತಾರ ನ್ಯೂಸ್‌ (Vistara News) ಆಯೋಜಿಸಿದ್ದ “ಹಲೋ ಸಚಿವರೇ” (Hello Minister) ನೇರ ಫೋನ್‌ ಇನ್‌ (Phone in Programme) ಕಾರ್ಯಕ್ರಮದಲ್ಲಿ ವಾಗ್ದಾನ ನೀಡಿದರು.

ಸಾರ್ವಜನಿಕರ ಕುಂದುಕೊರತೆಗೆ ಸ್ಥಳದಲ್ಲಿಯೇ ಪರಿಹಾರ ಕಂಡುಕೊಳ್ಳುವ ಸಲುವಾಗಿ ವಿಸ್ತಾರ ನ್ಯೂಸ್‌ ವಿನೂತನವಾಗಿ ಆರಂಭಿಸಿರುವ “ಹಲೋ ಸಚಿವರೇ” ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ, ಬಯಲು ಸೀಮೆ, ಕಾಡು ಪ್ರದೇಶಗಳು ಸೇರಿದಂತೆ ರಾಜ್ಯದ ಹಲವು ಕಡೆ ಸಮಸ್ಯೆಗಳು ಇವೆ. ಇನ್ನು ಮಲೆನಾಡು ಪ್ರದೇಶಗಳಲ್ಲಿ ರಾತ್ರಿ ಹೊತ್ತು ರೈತರು ತೋಟಗಳಿಗೆ ನೀರು ಹಾಯಿಸಲು ಹೋದಾಗ ಹಾವುಗಳು ಕಡಿದು, ಇಲ್ಲವೇ ವನ್ಯಪ್ರಾಣಿಗಳ ದಾಳಿಗೆ (Wildlife attacks) ತುತ್ತಾಗಿ ಜೀವ ಬಿಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಬೆಳಗ್ಗೆ ಸಮಯದಲ್ಲಿಯೇ ಹೆಚ್ಚು ಹೊತ್ತು ತ್ರಿ ಫೇಸ್‌ ನೀಡುವ ಕುರಿತು ನಾವು ಕ್ರಮ ಕೈಗೊಳ್ಳುತೇವೆ. ಅಧಿವೇಶನ ಮುಗಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಇದನ್ನೂ ಓದಿ: Uddhav Thackeray: ಭಾರತೀಯ ರಾಜಕಾರಣ ಐಪಿಎಲ್ ರೀತಿಯಾಗಿದೆ! ಬಿಜೆಪಿ ವಿರುದ್ದ ಉದ್ಧವ್ ಠಾಕ್ರೆ ಟೀಕೆ

ಶೀಘ್ರ ಕೃಷಿ ಸಹಾಯಕರ ನೇಮಕ

ಕೃಷಿ ವಿವಿ ಮತ್ತು ತೋಟಗಾರಿಕೆ ವಿವಿಯಿಂದ 6 ಸಾವಿರಕ್ಕೂ ಹೆಚ್ಚು ಮಂದಿಗೆ ಉದ್ಯೋಗ ಕೊಡುವ ಪ್ರಸ್ತಾಪ ಇತ್ತು. ಇದರ ಬಗ್ಗೆ ನಿಮ್ಮ ಸರ್ಕಾರ ಏನಾದರೂ ಕ್ರಮ ಕೈಗೊಳ್ಳುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ವರ್ಷ ಕೃಷಿ ಇಲಾಖೆಗೆ ಕೃಷಿ ಸಹಾಯಕರ ನೇಮಕ (Appointment of Agricultural Assistants) ಮಾಡಿಕೊಳ್ಳುವ ಬಗ್ಗೆ ಚಿಂತನೆ ಇದೆ. ಸರ್ಕಾರದಲ್ಲಿ ಚರ್ಚಿಸಿ ಶೀಘ್ರದಲ್ಲಿಯೇ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.

ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನಿದೆ

ನಾವು ಮುಂಗಾರು ಕೃಷಿಗೋಸ್ಕರ (Kharif Agriculture) ಈಗಾಗಲೇ ಸಿದ್ಧತೆಯನ್ನು ಮಾಡಿಕೊಂಡಿದ್ದೇವೆ. ಇನ್ನೊಂದು 2-3 ದಿನಗಳಲ್ಲಿ ಸಂಪೂರ್ಣ ಮಳೆಯಾಗುವ ವಿಶ್ವಾಸವಿದೆ. ಅಲ್ಲದೆ, ಬಿತ್ತನೆ ಬೀಜ, ರಸಗೊಬ್ಬರದ (Seed and fertilizer stock) ಕೊರತೆ ಇಲ್ಲ. ನಾವು ಪೂರೈಸಲು ಸಿದ್ಧವಿದ್ದೇವೆ. ಮಳೆ ನಮ್ಮ ಕೈಯಲ್ಲಿಲ್ಲ. ಹಾಗಾಗಿ ನಾನು ರೈತರ ಪರವಾಗಿ ದೇವರಲ್ಲಿ ಮಳೆಯಾಗಲಿ ಎಂದು ಪ್ರಾರ್ಥನೆ ಮಾಡಿಕೊಂಡಿದ್ದೇನೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.

ಬೆಳೆಗಳಿಗೆ ಸಿಂಪಡನೆ ಮಾಡುವ ರಾಸಾಯನಿಕ ಔಷಧವನ್ನು (Chemical Fertilizer) ಸರ್ಕಾರಿ ಮಳಿಗೆಯಲ್ಲಿ ಸಿಗುವ ರೀತಿ ಮಾಡುವಂತೆ ರೈತರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಖಾಸಗಿ ಮಳಿಗೆಗಳಲ್ಲಿ ಸಮಸ್ಯೆಗಳು ಆದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ. ಅಲ್ಲದೆ, ಈ ಬಗ್ಗೆ ಕೃಷಿ ಸಹಾಯವಾಣಿ (Agriculture Helpline) 18004253553 ಗೆ ಕರೆ ಮಾಡಿ ದೂರು ನೀಡಬಹುದು. ಇಲ್ಲವೇ, ಕೃಷಿ ಇಲಾಖೆಯ (Agriculture Department) ಜಿಲ್ಲಾ ನಿರ್ದೇಶಕರು ಸೇರಿದಂತೆ ಇಲಾಖೆಯಲ್ಲಿ ದೂರು ನೀಡಿದರೆ ಕ್ರಮ ವಹಿಸುತ್ತೇವೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ಇದನ್ನೂ ಓದಿ: Rahul Gandhi : ರಾಹುಲ್ ಗಾಂಧಿಯ ಬಳಿಯಿದೆ ಕೆಟಿಎಂ 390 ಬೈಕ್​; ಅದರ ವಿಶೇಷತೆಗಳೇನು?

ಆತ್ಮಹತ್ಯೆ ಮಾಡಿಕೊಳ್ಳದಂತೆ ರೈತರು ಆತ್ಮಸ್ಥೈರ್ಯ ಬೆಳೆಸಿಕೊಳ್ಳಲಿ

ರೈತರು ಆತ್ಮಹತ್ಯೆ (Farmers commit suicide) ಮಾಡಿಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಮಾತನಾಡಿದ ಚಲುವರಾಯಸ್ವಾಮಿ ಅವರು, ವಾಸ್ತವವಾಗಿ ರೈತರು ಸಾಲ ಮಾಡಿರುತ್ತಾರೆ. ಕೆಲವೊಮ್ಮೆ ಅವರು ಸಾಲದ ಶೂಲವೇ ಆತ್ಮಹತ್ಯೆಗೆ ಕಾರಣವಾಗುವುದು ಸುಳ್ಳಲ್ಲ. ಆದರೆ, ಇದರ ಹೊರತಾಗಿಯೂ ಕುಟುಂಬ ಕಲಹ ಸೇರಿದಂತೆ ಹಲವಾರು ಸಮಸ್ಯೆಗಳು ಇರುತ್ತವೆ. ಇಂತಹ ವೇಳೆ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಾರೆ. ಎಲ್ಲರೂ ಆತ್ಮಸ್ಥೈರ್ಯವನ್ನು ಹೊಂದಬೇಕು. ಇನ್ನು ಸರ್ಕಾರ ಸಹ ಇತ್ತೀಚಿನ ವರ್ಷಗಳಲ್ಲಿ ರೈತರ ಬೆನ್ನಿಗೆ ನಿಲ್ಲುತ್ತಿದೆ. ಹಲವಾರು ಯೋಜನೆಗಳನ್ನು ರೂಪಿಸುತ್ತಿದೆ ಎಂದು ಹೇಳಿದರು.

ಕೃಷಿ ಖರೀದಿ ಕೇಂದ್ರಗಳ ಸಮಸ್ಯೆ ನಿವಾರಣೆ

ಕೃಷಿ ಖರೀದಿ ಕೇಂದ್ರಗಳಲ್ಲಿ (Agriculture Procurement Centre) ಇರುವ ಸರ್ವರ್‌ ಸಮಸ್ಯೆ ಸೇರಿದಂತೆ ಹಲವು ಅನನುಕೂಲಗಳು ಇದ್ದು, ಅವುಗಳನ್ನು ನಾವು ಸರಿಪಡಿಸಿಕೊಂಡು ಹೋಗುತ್ತಿದ್ದೇವೆ. ಮುಂದಿನ ದಿನಗಳಲ್ಲಿಯೂ ಈ ಬಗ್ಗೆ ಗಮನಹರಿಸಲಾಗುವುದು ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಹಂತ ಹಂತವಾಗಿ ಹಾಲಿಗೆ ಪ್ರೋತ್ಸಾಹಧನ

ಹಾಲಿಗೆ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕೆಂಬ ಬೇಡಿಕೆ ಇದ್ದು, ನಾವು ಇದನ್ನು ಪ್ರಣಾಳಿಕೆಯಲ್ಲಿಯೇ ಘೋಷಣೆ ಮಾಡಿದ್ದೆವು. ಹೀಗಾಗಿ ಹಾಲಿಗೆ 2 ರೂಪಾಯಿ ಪ್ರೋತ್ಸಾಹಧನ ನೀಡುವ ಬಗ್ಗೆ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುಷ್ಠಾನಕ್ಕೆ ತರುತ್ತೇವೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ರೈತರಿಗಾಗಿ ಕೃಷಿ ಭಾಗ್ಯವನ್ನು ಮತ್ತೆ ತಂದೆವು

ನಮ್ಮದು ರೈತಪರವಾದ ಸರ್ಕಾರವಾಗಿದೆ. 2013-18ರ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿದ್ದರು. ಇದರಿಂದ ಒಣ ಪ್ರದೇಶ ಇರುವಲ್ಲಿ ರೈತರಿಗೆ ಅನುಕೂಲವಾಗಿತ್ತು. ಇದರಿಂದ ಸಣ್ಣ ಭೂಪ್ರದೇಶದಲ್ಲಿ 6 ತಿಂಗಳಲ್ಲಿ ಬೆಳೆ ತಗೆಯಲು ಅನುಕೂಲವಾಗುತ್ತಿತ್ತು. ಆದರೆ, ಹಿಂದಿನ ಸರ್ಕಾರ ಇದನ್ನು ನಿಲ್ಲಿಸಿತ್ತು. ನಾವು ಇದನ್ನು ಪುನಃ ಜಾರಿಗೆ ತಂದೆವು ಎಂದು ಹೇಳಿದ ಸಚಿವ ಚಲುವರಾಯಸ್ವಾಮಿ, ರೈತರಿಗೆ ಬೇಕಾದ ಮಾರುಕಟ್ಟೆ ದರ, ಕರೆಂಟ್‌ ಅನ್ನು ನಾವು ಸರಿಯಾಗಿ ಕೊಟ್ಟರೆ, ಸಾಲವೂ ಬೇಡ, ಸಬ್ಸಿಡಿಯೂ ಬೇಡ, ನಾವು ಸ್ವತಂತ್ರವಾಗಿ ಬದುಕುತ್ತೇವೆ ಎಂದು ರೈತರು ಹೇಳುತ್ತಾರೆ. ಈಗ ನಮ್ಮ ಸರ್ಕಾರ ಬಂದು ಒಂದೂವರೆ ತಿಂಗಳಾಗಿದೆ. ಹೀಗಾಗಿ ರೈತರ ಅಭ್ಯುದಯಕ್ಕೆ ಒಂದೊಂದೇ ಕಾರ್ಯಗಳನ್ನು ನಾವು ಅನುಷ್ಠಾನಕ್ಕೆ ತರುತ್ತೇವೆ ಎಂದು ತಿಳಿಸಿದರು.

ಗ್ಯಾರಂಟಿಯಿಂದ ಪ್ರತಿ ಮನೆಗೆ 4-5 ಸಾವಿರ ರೂಪಾಯಿ!

ಕಾಂಗ್ರೆಸ್‌ ಗ್ಯಾರಂಟಿ (Congress Guarantee Scheme) ಜಾರಿ ಮಾಡಲು ಸಾಧ್ಯವೇ ಇಲ್ಲ ಎಂದು ಬಿಜೆಪಿ, ಜೆಡಿಎಸ್‌ ಹೇಳಿತು. ಅದು ಸತ್ಯವೂ ಹೌದು. ನಾವೇ ಅದನ್ನು ಜಾರಿ ಮಾಡುವುದು ಹೇಗೆ ಎಂಬ ಬಗ್ಗೆ ತಲೆಕೆಡಿಸಿಕೊಂಡಿದ್ದೆವು. ಆದರೆ, ಸಿಎಂ ಸಿದ್ದರಾಮಯ್ಯ ಅವರು 14ನೇ ಬಜೆಟ್‌ನಲ್ಲಿ (Karnataka Budget 2023) ಸುಲಲಿತವಾಗಿ ಅದನ್ನು ಜಾರಿ ಮಾಡಿದರು. ಒಟ್ಟಾರೆಯಾಗಿ ಈ ವರ್ಷ 35 ಸಾವಿರ ಕೋಟಿ ರೂಪಾಯಿಯನ್ನು ಜನರಿಗಾಗಿ ಮೀಸಲಿಟ್ಟಿದ್ದಾರೆ. ಇದರಿಂದ ಪ್ರತಿ ಮನೆಗೆ ಸುಮಾರು 4 ರಿಂದ 5 ಸಾವಿರ ರೂಪಾಯಿಯು ತಿಂಗಳಿಗೆ ಸಿಗುತ್ತದೆ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು.

ಇದನ್ನೂ ಓದಿ: Murder Case : ನನ್ನ ಗಂಡ ಹುಲಿ ಥರ ಇದ್ದ ಸರ್‌, ಮುಖ ಮತ್ತು ತಲೆಗೆ ಸಾಬನಿಂದ ಚುಚ್ಚಿಸಿ ಕೊಂದ್ರು; ವೇಣುಗೋಪಾಲ್‌ ಪತ್ನಿ

ಎಲ್ಲ ರೈತರಿಗೂ ವಿಮೆ ಪರಿಹಾರ ಸಿಕ್ಕಿದೆ

ಕೃಷಿ ವಿಮೆ (Agriculture Insurance) ಮರೀಚಿಕೆಯಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಕೃಷಿ ಸಚಿವ ಚಲುವರಾಯಸ್ವಾಮಿ, ಕೃಷಿ ವಿಮೆ ಎಂಬುದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಸೇರಿ ಮಾಡುವುದಾಗಿದೆ. ಇನ್ನು ದಿನಾಂಕ ವಿಸ್ತರಣೆ ನಮ್ಮ ಕೈಯಲ್ಲಿ ಇಲ್ಲ. ಈ ಬಾರಿ ಕೊನೇ ದಿನಾಂಕವನ್ನು ನಾವು ಕೇಂದ್ರದ ಮೇಲೆ ಒತ್ತಡ ಹೇರಿ ಒಂದು ದಿನ ಹೆಚ್ಚಳ ಮಾಡಲಾಯಿತು. ಅಲ್ಲದೆ, 98 ಪರ್ಸೆಂಟ್‌ ವಿಮಾ ಪರಿಹಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರ ಕೊಡುತ್ತದೆ. ರೈತರು ಶೇಕಡಾ 2ರಷ್ಟು ಹಣವನ್ನು ಮಾತ್ರವೇ ಕಟ್ಟಬೇಕು. ಉದಾಹರಣೆಗೆ ಹೇಳಬೇಕೆಂದರೆ ನಮ್ಮ ಕಡೆಯ ಒಬ್ಬರ ರೈತ ಕಟ್ಟಿದ್ದು 290 ರೂಪಾಯಿ. ಆದರೆ, ಅವರಿಗೆ ಬಂದಿದ್ದು 15 ಸಾವಿರ ರೂಪಾಯಿಯಾಗಿದೆ. ಯಾವುದೇ ರೈತರಿಗೆ ಪರಿಹಾರ ಬಂದಿಲ್ಲ ಎಂಬುದು ಎಲ್ಲಿಯೂ ಇಲ್ಲ, ಎಲ್ಲರಿಗೂ ಹಣ ಬಂದಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದರು.

ರಾಗಿ ಬೆಂಬಲ ಬೆಲೆ ಸಮಸ್ಯೆ ಪರಿಹರಿಸುವೆ

ರಾಗಿಗೆ ಬೆಂಬಲ ಬೆಲೆಯು 6 ತಿಂಗಳಿಂದ ಬಂದಿಲ್ಲ ಎಂದು ಚಿತ್ರದುರ್ಗದ ರೈತರೊಬ್ಬರು ಸಚಿವರ ಗಮನಕ್ಕೆ ತಂದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಚಲುವರಾಯಸ್ವಾಮಿ, ಇದು ಫೆಡರೇಷನ್‌ ಅಡಿ ಬರುತ್ತದೆ. ಈ ವಿಷಯ ತಮ್ಮ ಗಮನಕ್ಕೆ ಇದುವರೆಗೆ ಬಂದಿರಲಿಲ್ಲ. ಕೂಡಲೇ ನಾನು ಸಂಬಂಧಪಟ್ಟವರ ಬಳಿ ಮಾತನಾಡಿ ಕ್ರಮ ವಹಿಸುತ್ತೇನೆ ಎಂದು ಹೇಳಿದರು.

ಉಪ ಉತ್ಪನ್ನಗಳ ಮೂಲಕ ಹೈನುಗಾರಿಕೆಗೆ ಉತ್ತೇಜನ

ಹೈನುಗಾರಿಕೆಗೆ ಉತ್ತೇಜನ (Promotion of dairy farming) ನೀಡಬೇಕು. ಹಾಗಾಗಿ ಹಾಲು ಉತ್ಪನ್ನಗಳನ್ನು ಹೆಚ್ಚು ಮಾಡಿ ಮಾರಾಟ ಮಾಡಬೇಕು. ಪೌಡರ್‌ ಮಾಡುವುದು ಸೇರಿದಂತೆ ಇನ್ನಿತರ ಉಪ ಉತ್ಪನ್ನಗಳನ್ನು ಮಾಡಬೇಕು. ಇದಕ್ಕೆ ಉದಾಹರಣೆಯಾಗಿ ನಂದಿನಿ (Nandini Brand) ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಅಮುಲ್‌ಗೆ (Amul Brand) ಬೇಡಿಕೆ ಕುಸಿದಿದೆ. ಈ ಬಗ್ಗೆ ಗೃಹ ಸಚಿವ ಅಮಿತ್‌ ಶಾ ಅವರು ಚುನಾವಣೆ ವೇಳೆ ಬಂದಾಗ ವಿವಾದಾತ್ಮಕವಾಗಿ ಮಾತನಾಡಿದ್ದರು. ಆದರೆ, ಗುಜರಾತ್‌ನ ಅಮುಲ್‌ಗಿಂತ ನಮ್ಮ ನಂದಿನಿಯೇ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

ರೈತರ ಉತ್ಪನ್ನಗಳಿಗೆ ಬ್ರಾಂಡಿಂಗ್‌ ಮಳಿಗೆ

ನಂದಿನಿ ಉತ್ಪನ್ನದಂತೆ ರೈತರು ತಯಾರಿಸಿದ ಇತರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸಲು ಬ್ರಾಂಡಿಂಗ್‌ ಮಳಿಗೆಯನ್ನು (Branding store for farmers products) ತೆರೆಯುವ ಉದ್ದೇಶವನ್ನು ಹೊಂದಿದ್ದೇವೆ. ಇದು ನಂದಿನಿ ಉತ್ಪನ್ನಗಳಿಗೆ ಪೂರಕವಾಗಿರಲಿದೆ. ಈ ನಿಟ್ಟಿನಲ್ಲಿ ಬ್ರಾಂಡಿಂಗ್‌ ಮಳಿಗೆಯನ್ನು ತೆರೆಯುತ್ತೇವೆ. ಇದು ಪೈಲೆಟ್‌ ಪ್ರಾಜೆಕ್ಟ್‌ ಆಗಿದ್ದು, ನಂದಿನಿ ಮಳಿಗೆಗಳ ಪಕ್ಕದಲ್ಲಿ ನಡೆಸುವ ಚಿಂತನೆ ಇದೆ. ಇನ್ನೂ ಸಿದ್ಧತಾ ಹಂತದಲ್ಲಿ ಈ ಯೋಜನೆ ಇದೆ ಎಂದು ಸಚಿವ ಚಲುವರಾಯಸ್ವಾಮಿ ಉತ್ತರಿಸಿದರು.

ಹಲೋ ಸಚಿವರೇ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಚಿವ ಚಲುವರಾಯಸ್ವಾಮಿ ಮಾತು

ಇದನ್ನೂ ಓದಿ: OM Beach : ಗೋಕರ್ಣದಲ್ಲಿ ಮಿಸ್‌ ಮಾಡದೆ ನೋಡಬೇಕಾದ ಬೀಚ್‌ ಇದು

ಸರ್ಕಾರ-ಜನರ ಮಧ್ಯೆ ವಿಸ್ತಾರ ನ್ಯೂಸ್‌ ಕೊಂಡಿ: ಹರಿಪ್ರಕಾಶ್‌ ಕೋಣೆಮನೆ

ಜನಪರ ನಿಲುವಿನ ಭಾಗವಾಗಿ ಸರ್ಕಾರವನ್ನು ನಾವು ಜನರ ಬಳಿಗೆ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಸರ್ಕಾರ ಹಾಗೂ ಜನರನ್ನು ಬೆಸೆಯುವ ಕೊಂಡಿಯಾಗಿ ವಿಸ್ತಾರ ನ್ಯೂಸ್‌ ಕೆಲಸ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರತಿ ಮಂಗಳವಾರ ಒಂದೊಂದು ಇಲಾಖೆಯ ಸಚಿವರ ಫೋನ್‌ ಇನ್‌ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬರುತ್ತಿದ್ದೇವೆ ಎಂದು ವಿಸ್ತಾರ ನ್ಯೂಸ್‌ ಸಿಇಒ, ಪ್ರಧಾನ ಸಂಪಾದಕರಾದ ಹರಿಪ್ರಕಾಶ್‌ ಕೋಣೆಮನೆ ಹೇಳಿದರು.

Exit mobile version