ಬೆಂಗಳೂರು: ನಗರದಲ್ಲಿ ಹೆಲ್ಮೆಟ್ ಧರಿಸದ ಬೈಕ್ ಸವಾರರಿಗೆ 500 ರೂ. ದಂಡ ಪಕ್ಕಾ. ಇದರಲ್ಲೇನೂ ಅನುಮಾನವಿಲ್ಲ. ಮೊದಲೆಲ್ಲ, ಒಂದು ಬಾರಿ ಮಾತ್ರ ದಂಡ ಕಟ್ಟಬೇಕಾಗುತ್ತಿತ್ತು. ಆದರೆ, ಈಗ ರೂಲ್ಸ್ ಬದಲಾಗಿದೆ. ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದರೆ, ಹಲವು ಬಾರಿ ದಂಡ ಕಟ್ಟಬೇಕಾಗಬಹುದು. ನಗರದಲ್ಲಿ (Bengaluru) ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಪ್ರತಿಯೊಂದು ಜಂಕ್ಷನ್ ಅನ್ನು ಹಾದುಹೋಗುವಾಗ, ಸವಾರನು ಪ್ರತ್ಯೇಕ ದಂಡವನ್ನು ಪಾವತಿಸಬೇಕಾಗುತ್ತದೆ!
ಇನ್ನೂ ಸರಳವಾಗಿ ಹೇಳಬೇಕು ಎಂದರೆ, ಒಂದು ವೇಳೆ, ಹೆಲ್ಮೆಟ್ ಇಲ್ಲದೇ ಮೂರು ಕ್ಯಾಮೆರಾ-ಸಕ್ರಿಯ ಜಂಕ್ಷನ್‌ಗಳನ್ನು ದಾಟಿದರೆ, ಅವರಿಗೆ ತಲಾ 500 ರೂ. ಮೂರು ದಂಡದ ರಸೀದಿಗಳನ್ನು ಕಳುಹಿಸಿಕೊಡಲಾಗುತ್ತದೆ. ಅಂದರೆ ಒಟ್ಟು 1,500 ರೂ. ದಂಡವನ್ನು ಭರಿಸಬೇಕಾಗುತ್ತದೆ.
ಇದನ್ನೂ ಓದಿ: Viral Video | ಉಚಿತ ಹೆಲ್ಮೆಟ್‌ಗಾಗಿ ಮುಗಿಬಿದ್ದ ಜನ; ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ವೈರಲ್
280 ANPR ಕ್ಯಾಮೆರಾಗಳನ್ನು ಅಳವಡಿಸಲಾಗಿರುವ ಒಟ್ಟು 50 ಜಂಕ್ಷನ್‌ಗಳು ಬೆಂಗಳೂರು ನಗರದಲ್ಲಿವೆ. ಅವು ಬಹುತೇಕ, ಸೆಂಟ್ರಲ್ ಬಿಸಿನೆಸ್ ಡಿಸ್ಟ್ರಿಕ್ಟ್‍ನಲ್ಲಿವೆ. ಈ ಮೊದಲು ಪೊಲೀಸರು, ಹೆಲ್ಮೆಟ್ ಧರಿಸದ ಸವಾರರನ್ನು ಅಡ್ಡಗಟ್ಟಿ ಫೈನ್ ಹಾಕುತ್ತಿದ್ದರು. ಒಮ್ಮೆ ದಂಡ ಕಟ್ಟಿದರೆ ಸಾಕಾಗುತ್ತಿತ್ತು. ಈಗ ನಂಬರ್ ಪ್ಲೇಟ್ ಗುರುತಿಸುವ ಕ್ಯಾಮೆರಾಗಳನ್ನು ಅಳವಡಿಸಿರುವುದರಿಂದ, ಕ್ಯಾಮೆರಾ ಎಷ್ಟು ಬಾರಿ ಸೆರೆ ಹಿಡಿಯುತ್ತದೆಯೋ ಅಷ್ಟು ಬಾರಿ ದಂಡವನ್ನು ಕಟ್ಟಬೇಕಾಗುತ್ತದೆ ಎಂದು ವರದಿಯಾಗಿದೆ.
ಜಾರಿಯಾದ ಹೊಸ ಸಿಸ್ಟಮ್
ಐಟಿಎಂಎಸ್ ಬೆಂಗಳೂರಲ್ಲಿ ಇತ್ತೀಚೆಗೆ ಜಾರಿಯಾದ ಸಿಸ್ಟಮ್. ಐಟಿಎಂಎಸ್ ಅಂದ್ರೇ ಇಂಟಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಂ. ಡಿಜಿಟಲ್ ಕ್ಯಾಮರಾ ಮೂಲಕ ಟ್ರಾಫಿಕ್ ರೂಲ್ಸ್ ಉಲ್ಲಂಘನೆಗೆ ದಂಡ ಹಾಕೋ ವಿಧಾನ ಇದು. ಬೆಂಗಳೂರಿನ ಎಲ್ಲಾ ಜಂಕ್ಷನ್ ಗಳಲ್ಲೂ ಐಟಿಎಂಎಸ್ ವ್ಯವಸ್ಥೆ ಮಾಡಲಾಗುತ್ತಿದೆ. ಈಗ ಇದು ಹೆಲ್ಮೆಟ್ ಹಾಕದವರಿಗೆ ಭಾರಿ ದುಬಾರಿಯಾಗಿ ಪರಿಣಮಿಸುತ್ತಿದೆ. ಈ ಹಿಂದೆ ಹೆಲ್ಮೆಟ್ ಹಾಕದಿದ್ರೆ ಒಮ್ಮೆ ದಂಡ ಕಟ್ಟಿ ರಸೀದಿ ಪಡೆಯಬಹುದಿತ್ತು. ಆನಂತ್ರ ಪೊಲೀಸರು ಹಿಡಿದ್ರೆ ದಂಡದ ರೆಸಿಫ್ಟ್ ತೋರಿಸಿ ಮನೆಗೆ ಹೋಗಬಹುದಿತ್ತು.. ಕೇವಲ ಒಮ್ಮೆ ಮಾತ್ರ ದಂಡಕ್ಕೆ ಅವಕಾಶ ಇತ್ತು.. ಆದ್ರೆ ಹೊಸ ನೀತಿಯಲ್ಲಿ ಪ್ರತಿ ಸಿಗ್ನಲ್ ನಲ್ಲೂ ದಂಡ ಆ್ಯಡ್ ಆಗುತ್ತೆ..ಹೆಲ್ಮೆಟ್ ಹಾಕದೇ ಎಷ್ಟು ಸಿಗ್ನಲ್ ದಾಟುತ್ತೀರೋ ಅಷ್ಟು ಪಟ್ಟು ದಂಡ ಆ್ಯಡ್ ಆಗುತ್ತದೆ.