ಕಲಬುರಗಿ: ಜೇವರ್ಗಿ ತಾಲೂಕಿನ ವಿದ್ಯಾರ್ಥಿನಿಯರ ಮೈನಾರಿಟಿ ಹಾಸ್ಟೆಲ್ (Girls Minority Hostel) ಬಾತ್‌ರೂಮ್‌ನಲ್ಲಿ ಕಿರಾತಕನೊಬ್ಬ ಕ್ಯಾಮರಾ (Hidden Camera) ಇಟ್ಟ ಪ್ರಕರಣ ಬೆಳಕಿಗೆ ಬಂದಿದೆ.
ಜೇವರ್ಗಿ ಪಟ್ಟಣದ ಶಾಂತನಗರದಲ್ಲಿ ಮೈನಾರಿಟಿ ಹಾಸ್ಟೆಲ್ ಇದ್ದು, ಅದೇ ಏರಿಯಾದಲ್ಲಿ ವಾಸವಾಗಿರುವ ಸಲೀಂ ಎಂಬಾತ ಈ ಕೃತ್ಯ ಎಸೆಗಿದ್ದಾನೆ. ವಿದ್ಯಾರ್ಥಿನಿಯರ ಬಾತ್‌ರೂಮ್‌ನಲ್ಲಿ ಸಲೀಂ ಕ್ಯಾಮರಾ ಇಟ್ಟಿದ್ದ. ಈ ವೇಳೆ ಬಾತ್‌ರೂಮ್‌ಗೆ ವಿದ್ಯಾರ್ಥಿನಿಯರು ಹೋಗಿದ್ದಾರೆ. ಅಲ್ಲಿ ಕ್ಯಾಮೆರಾ ಇಟ್ಟಿರುವುದನ್ನು ಗಮನಿಸಿದ್ದಾರೆ.
ಕೂಡಲೇ ಬಾತ್‌ರೂಮ್‌ನಿಂದ ಹೊರಬಂದ ವಿದ್ಯಾರ್ಥಿನಿಯರು ಕಾಮುಕನನ್ನು ಹಿಡಿದಿದ್ದಾರೆ. ಈ ವೇಳೆ ದೊಡ್ಡ ಗಲಾಟೆ ಶುರುವಾಗಿದೆ. ಹಾಗೇ ವಿದ್ಯಾರ್ಥಿನಿಯರೇ ಸೇರಿ ಕಾಮುಕನಿಗೆ ಥಳಿಸಿದ್ದಾರೆ. ಈ ವೇಳೆ ಸ್ಥಳೀಯರು ಮಧ್ಯಪ್ರವೇಶ ಮಾಡಿದ್ದು, ಸಲೀಂನನ್ನು ಬಿಡಿಸಿದ್ದಾರೆ. ಅಲ್ಲಿಂದ ಆತ ಪರಾರಿಯಾಗಲೂ ಸಹಾಯ ಮಾಡಿದ್ದಾರೆ.
ಪೊಲೀಸರಿಗೆ ಮಾಹಿತಿ
ಈ ವೇಳೆ ಸಿಟ್ಟಿಗೆದ್ದ ಯುವತಿಯರು ಹಾಗೂ ಕೆಲವು ಸ್ಥಳೀಯರು ತಹಸೀಲ್ದಾರ್ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಸ್ಥಳಕ್ಕೆ ಬಂದ ಪೊಲೀಸರು ಆರೋಪಿಗಾಗಿ ಹುಡುಕಾಡಿದ್ದಾರೆ. ಆದರೆ, ಆರೋಪಿ ಸಿಗದ ಕಾರಣಕ್ಕೆ ಸಲೀಂ ಮನೆಯವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಆರೋಪಿ ಸಲೀಂ ಮನೆಯವರನ್ನು ವಿಚಾರಣೆ ನಡೆಸಿದ ಬಳಿಕ ಆತನ ಮನೆಯವರೇ ಸ್ಥಳಕ್ಕೆ ಸಲೀಂನನ್ನು ಕರೆಸಿದ್ದಾರೆ. ಸದ್ಯ ಕ್ಯಾಮರಾ ಇಟ್ಟ ಸಲೀಂನನ್ನು ಜೇವರ್ಗಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಆತ ಕ್ಯಾಮೆರಾ ಇಟ್ಟಿದ್ದಾನೆಯೇ? ಅಥವಾ ಈ ಹಿಂದೆಯೂ ಕ್ಯಾಮೆರಾವನ್ನು ಇಟ್ಟಿದ್ದನೇ? ಈ ಹಾಸ್ಟೆಲ್ ಮಾತ್ರವಲ್ಲದೆ ಬೇರೆ ಎಲ್ಲಾದರೂ ಇಟ್ಟಿದ್ದಾನೆಯೇ? ಎಂಬಿತ್ಯಾದಿ ಅಂಶಗಳ ಮೇಲೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Heart Attack: ಚಿಕ್ಕಮಗಳೂರಿನಲ್ಲಿ ಹೃದಯಾಘಾತಕ್ಕೆ 7ನೇ ತರಗತಿ ವಿದ್ಯಾರ್ಥಿನಿ ಬಲಿ
ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ 7ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ (Heart Attack) ಮೃತಪಟ್ಟಿದ್ದಾಳೆ. ಬೆಳಗ್ಗೆ ಶಾಲೆಗೆ ತೆರಳುತ್ತಿದ್ದಾಗ ಕುಸಿದು ಬಿದ್ದ ವಿದ್ಯಾರ್ಥಿನಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ.
13 ವರ್ಷದ ಬಾಲಕಿ ಸೃಷ್ಟಿ ಮೃತಪಟ್ಟ ಬಾಲಕಿಯಾಗಿದ್ದಾಳೆ. ಮೂಡಿಗೆರೆ ತಾಲೂಕಿನ ಕೆಸವಳಲು ಜೋಗಣ್ಣನಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ದಾರದಹಳ್ಳಿ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಸೃಷ್ಟಿ ಶಾಲೆಗೆ ತೆರಳುತ್ತಿದ್ದಾಗ ಹಠಾತ್ ಆಗಿ ಕುಸಿದು ಬಿದ್ದಿದ್ದಾಳೆ. ಹೀಗಾಗಿ ಸೃಷ್ಟಿಯನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಆಕೆ ಮೃತಪಟ್ಟಿದ್ದಾಳೆ. ಬಳಿಕ ಪರೀಕ್ಷೆ ನಡೆಸಿದ ಮೂಡಿಗೆರೆಯ ಎಂಜಿಎಂ ಸರ್ಕಾರಿ ಆಸ್ಪತ್ರೆ ವೈದ್ಯರು ಹೃದಯಾಘಾತವಾಗಿದೆ ಎಂದು ಘೋಷಿಸಿದ್ದಾರೆ.
ಪ್ರಾಥಮಿಕ ಆಸ್ಪತ್ರೆಯಲ್ಲಿ ಇಲ್ಲ ಮೂಲ ಸೌಕರ್ಯ
ದಾರದಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇರಲಿಲ್ಲ. ಅಲ್ಲದೆ, ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯಗಳು ಸಹ ಇಲ್ಲ. ಈ ಕಾರಣದಿಂದ ಬಾಲಕಿಯೊಬ್ಬಳು ಮೃತಪಟ್ಟಂತೆ ಆಗಿದೆ ಎಂದು ಗ್ರಾಮಸ್ಥರು ಜಿಲ್ಲಾಡಳಿತ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶವನ್ನು ಹೊರಹಾಕಿದ್ದಾರೆ.
ಗ್ರಾಮದಲ್ಲೇ ಆಸ್ಪತ್ರೆಯಿದ್ದರೂ ಪ್ರಯೋಜನವಾಗಿಲ್ಲ. ಹೀಗಾಗಿ ಮೂಡಿಗೆರೆ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಸೃಷ್ಟಿ ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಗೋಳಿಡುತ್ತಿದ್ದಾರೆ.
ಇದನ್ನೂ ಓದಿ: COVID Subvariant JN1: ಆರೋಗ್ಯ ಕಾರ್ಯಕರ್ತರಿಗೆ ಮಾಸ್ಕ್ ಕಡ್ಡಾಯ; ಮತ್ತೇನಿದೆ ಕೊರೊನಾ ನಿರ್ಬಂಧ?
ಸೃಷ್ಟಿಗೆ ಆಗಾಗ ಇತ್ತು ತಲೆ ಸುತ್ತುವ ಸಮಸ್ಯೆ
ಸೃಷ್ಟಿಗೆ ಆಗಾಗ ತಲೆ ಸುತ್ತುವ ಸಮಸ್ಯೆ ಇತ್ತು ಎನ್ನಲಾಗಿದೆ. ಆದರೆ, ಈ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಹೇಳಲಾಗುತ್ತಿದೆ. ಇನ್ನು ಈ ಬಗ್ಗೆ ವೈದ್ಯರು ಸಲಹೆ ನೀಡುವುದೇನೆಂದರೆ, ಚಿಕ್ಕ ಮಕ್ಕಳಿಗೆ ತಲೆ ಸುತ್ತುವ ಸಂದರ್ಭ ಇದ್ದರೆ ಅವರನ್ನು ಕೂಡಲೇ ತಜ್ಞ ವೈದ್ಯರಿಗೆ ತೋರಿಸಬೇಕು. ಇದರಿಂದ ಮುಂದಾಗುವ ಅನಾಹುತಗಳನ್ನು ತಪ್ಪಿಸಬಹುದು ಎಂದು ಹೇಳಿದ್ದಾರೆ.