ಬೆಂಗಳೂರು: ಅವನು ಗೆಳತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದ. ಆಕೆ ಅವನ ಮೇಲೆ ಕೇಸು ದಾಖಲಿಸಿದಳು. ಮುಂದೆ ಆತ ಅವಳನ್ನೇ ಮದುವೆಯಾದ. ಆದರೆ, ಕೇಸು ಹಾಗೇ ಇತ್ತು. ಇದೀಗ ಕೋರ್ಟ್ ಅವರಿಬ್ಬರ ಅಫಿಡವಿಟ್‌ನ ಆಧಾರದಲ್ಲಿ ಪ್ರಕರಣಕ್ಕೆ ತೆರೆ ಎಳೆದಿದೆ. ಅವಳಿಗೆ ಏನಾದರೂ ತೊಂದರೆ ಕೊಟ್ಟರೆ ಹುಷಾರು ಎಂಬ ಎಚ್ಚರಿಕೆಯ ಸಂದೇಶವನ್ನೂ ನೀಡಿದೆ. ಇದು ಕರ್ನಾಟಕ ಹೈಕೋರ್ಟ್‌ನಲ್ಲಿ (High court) ನಡೆದ ವಿದ್ಯಮಾನ.
ಸಂತ್ರಸ್ತೆ ಮತ್ತು ಆರೋಪಿಯ ಅಫಿಡವಿಟ್‌ಗಳನ್ನು ಪುರಸ್ಕರಿಸಿದ ನ್ಯಾಯಮೂರ್ತಿ ಕೆ ನಟರಾಜನ್ ಅವರ ನೇತೃತ್ವದ ಏಕಸದಸ್ಯ ಪೀಠವು ಪ್ರಕರಣ ರದ್ದುಪಡಿಸಿದೆ.
ಹುಟ್ಟುಹಬ್ಬದ ದಿನ ಅವನು ಅತ್ಯಾಚಾರ ಮಾಡಿದ್ದ!
ಬೆಂಗಳೂರಿನ ಯುವತಿಯೊಬ್ಬರು 2022ರ ಅಕ್ಟೋಬರ್‌ನಲ್ಲಿ ಪೊಲೀಸರಿಗೆ ಒಂದು ದೂರು ನೀಡಿದ್ದರು. ಗೆಳೆಯನೊಬ್ಬ ನನ್ನನ್ನು ಅವನ ಹುಟ್ಟುಹಬ್ಬದ ಆಚರಣೆಗಾಗಿ ಮನೆಗೆ ಆಹ್ವಾನಿಸಿದ್ದ. ಮದ್ಯ ಸೇವಿಸಿದ್ದ ಆತ, ನನ್ನ ಮೇಲೆ ಅತ್ಯಾಚಾರವೆಸಗಿದ್ದ ಎಂದು ಆರೋಪಿಸಿದ್ದರು. ಪೊಲೀಸರು ಆರೋಪಿ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಮತ್ತು ಹಣ ವಸೂಲಿ ಮತ್ತಿತರ ಆರೋಪಗಳಡಿ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣ ರದ್ದುಕೋರಿ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ, ಆತ ಆಕೆಯನ್ನು ಮದುವೆಯಾಗಲು ಒಪ್ಪಿದ್ದ. ಆದರೆ, ಪೊಲೀಸರು ಕಾನೂನಿನಂತೆ ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಮುಂದಿನ ಕ್ರಮಗಳು ಯಥಾಸ್ಥಿತಿಯಲ್ಲಿ ಮುಂದುವರಿದಿದ್ದವು.
ಸಂತ್ರಸ್ತೆಯನ್ನು ವಿವಾಹವಾದ ಬಳಿಕವೂ ಬಂಧಿಸಿ ಜೈಲಿಗೆ ಕಳುಹಿಸಿದ್ದ ಪೊಲೀಸರ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಆರೋಪಿಯು ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿದ್ದ. ಅರ್ಜಿ ವಿಚಾರಣೆಗೆ ಹಾಜರಾಗಿದ್ದ ಸಂತ್ರಸ್ತೆ ದೂರು ಹಿಂಪಡೆಯುವುದಾಗಿ ತಿಳಿಸಿದ್ದರು. ಆರೋಪಿ ಸಹ, ಸಂತ್ರಸ್ತೆಯನ್ನು ವಿವಾಹವಾಗಿದ್ದೇನೆ. ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ವಾಗ್ದಾನ ನೀಡಿ ಅಫಿಡವಿಟ್ ಸಲ್ಲಿಸಿದ್ದನು. ಇದನ್ನು ಪರಿಗಣಿಸಿದ ಪೀಠವು ಅರ್ಜಿದಾರನ ವಿರುದ್ಧದ ಅತ್ಯಾಚಾರ, ಹಣ ವಸೂಲಿ ಮತ್ತು ಜೀವ ಬೆದರಿಕೆ ಪ್ರಕರಣವನ್ನು ರದ್ದುಪಡಿಸಿತಲ್ಲದೆ, ಸಂತ್ರಸ್ತೆಯನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಯಾವುದೇ ರೀತಿ ತೊಂದರೆ ನೀಡಬಾರದು ಎಂದು ಸೂಚಿಸಿತು.
ಅರ್ಜಿದಾರರ ಪರ ವಕೀಲ ಸಿ ಎನ್ ರಾಜು ಅವರು “ಸಂತ್ರಸ್ತೆ ಮತ್ತು ಅರ್ಜಿದಾರ ಪರಸ್ಪರ ಪ್ರೀತಿಸುತ್ತಿದ್ದರು. ಭಿನ್ನಾಭಿಪ್ರಾಯದಿಂದ ಸಂತ್ರಸ್ತೆ ದೂರು ದಾಖಲಿಸಿದ್ದಾರೆ. ಆಕೆಗೆ 32 ವರ್ಷವಾಗಿದ್ದು, ದೂರು ದಾಖಲಿಸಿದ ನಂತರ ಪೊಲೀಸರ ಮುಂದೆ ಹಾಜರಾಗಿ ದೂರು ಹಿಂಪಡೆಯುವುದಾಗಿ ತಿಳಿಸಿದ್ದರು. ಆದರೆ, ಪೊಲೀಸರು ಅದಕ್ಕೆ ಒಪ್ಪಿರಲಿಲ್ಲ” ಎಂದು ವಿವರಿಸಿದರು.
“ಆ ನಂತರ ಸಂತ್ರಸ್ತೆ ಹಾಗೂ ಆರೋಪಿ ಮದುವೆಯಾಗಿದ್ದು, ಠಾಣೆಗೆ ತೆರಳಿ ದೂರು ಹಿಂಪಡೆಯುವುದಾಗಿ ತಿಳಿಸಿದ್ದರು. ಹೀಗಿದ್ದರೂ, ಪೊಲೀಸರು ದೂರುದಾರೆಯ ಹೇಳಿಕೆ ದಾಖಲಿಸದೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸದ್ಯ ಇಬ್ಬರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಮದುವೆಯಾಗಿ ನೆಮ್ಮದಿಯ ಸಂಸಾರ ನಡೆಸುತ್ತಿದ್ದಾರೆ. ಪ್ರಕರಣ ಹಿಂಪಡೆಯಲು ಇಬ್ಬರೂ ಜಂಟಿ ಅಫಿಡವಿಟ್ ಸಲ್ಲಿಸಿದ್ದು, ಅದನ್ನು ಮಾನ್ಯ ಮಾಡಿ ಪ್ರಕರಣ ರದ್ದುಪಡಿಸಬೇಕು” ಎಂದು ಕೋರಿದರು. ಇದನ್ನು ಪರಿಗಣಿಸಿದ ಹೈಕೋರ್ಟ್, ಆರೋಪಿ ವಿರುದ್ಧದ ಪ್ರಕರಣ ರದ್ದುಪಡಿಸಿತು.
ಇದನ್ನೂ ಓದಿ | High court order | ಅಶ್ಲೀಲ ವಿಡಿಯೊ ಅಪ್‌ಲೋಡ್: ಮೊಬೈಲ್ ಸಿಮ್ ನನ್ನದಲ್ಲ ಎಂದರೂ ಎಫ್‌ಐಆರ್ ರದ್ದಾಗಲ್ಲ!