Site icon Vistara News

SDPI office raid : ಎಸ್‌ಡಿಪಿಐ ಕಚೇರಿ ದಾಳಿಗೆ ಕೇಂದ್ರ ಸರ್ಕಾರದ ನಿರ್ದೇಶನವಿತ್ತೇ?: ಸರ್ಕಾರಕ್ಕೆ ಹೈಕೋರ್ಟ್‌ ಪ್ರಶ್ನೆ

SDPI High court

#image_title

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾಗೆ (ಎಸ್‌ಡಿಪಿಐ) ಸೇರಿದ ಸ್ಥಳಗಳ ಮೇಲೆ ನಡೆಸಿದ ದಾಳಿಗೆ (SDPI office raid) ಪೂರಕವಾಗಿ ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ ಕುರಿತಾದ ದಾಖಲೆಗಳನ್ನು ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ದಾಳಿ ನಡೆಸಿ, ಜಪ್ತಿ ಮಾಡಿರುವ ಸ್ವತ್ತುಗಳಿಗೆ ಹಾಕಲಾಗಿರುವ ಮೊಹರು ತೆರವುಗೊಳಿಸಲು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ನಿರ್ದೇಶಿಸುವಂತೆ ಕೋರಿ ಎಸ್‌ಡಿಪಿಐನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.

ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲರು, ಮುಂಚಿತವಾಗಿ ನೋಟಿಸ್ ನೀಡದೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕಡೆ ಇರುವ ಎಸ್‌ಡಿಪಿಐನ 17 ಕಚೇರಿಗಳನ್ನು ಸೀಲ್ ಮಾಡಿದ್ದಾರೆ. ಸೀಲ್ ಹಾಕಿದ್ದರೂ ಕಚೇರಿಗಳಿದ್ದ ಜಾಗಗಳಿಗೆ ಬಾಡಿಗೆ ಕಟ್ಟುತ್ತಿದ್ದೇವೆ. ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಎಸ್‌ಡಿಪಿಐ ಸಿದ್ಧತೆ ನಡೆಸಬೇಕಿದ್ದು, ಕಚೇರಿಗಳನ್ನು ಬಂದ್ ಮಾಡಿರುವುದರಿಂದ ಯಾವುದೇ ರಾಜಕೀಯ ಕಾರ್ಯಕ್ರಮ ನಡೆಸಲಾಗುತ್ತಿಲ್ಲ. ಆದ್ದರಿಂದ, ಸೀಲ್‌ಗಳನ್ನು ತೆರವು ಮಾಡಲು ಜಿಲ್ಲಾಡಳಿತಕ್ಕೆ ನಿರ್ದೇಶಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು.

ಅರ್ಜಿಗೆ ಪ್ರಾಥಮಿಕ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರದ ಪರ ವಕೀಲ ವಿನೋದ್ ಕುಮಾರ್ ಅವರು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವನ್ನು (ಪಿಎಫ್‌ಐ) ಕೇಂದ್ರ ಸರ್ಕಾರ ನಿಷೇಧಿಸಿದೆ. ಪಿಎಫ್‌ಐನ ಸಾಮಗ್ರಿಗಳು ಎಸ್‌ಡಿಪಿಐ ಕಚೇರಿಯಲ್ಲಿ ದೊರೆತಿವೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗಿದೆ. ಆದರೆ, ಅರ್ಜಿಯಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿವಾದಿಯನ್ನಾಗಿಸಲಾಗಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ವಾದ-ಪ್ರತಿವಾದ ಆಲಿಸಿದ ಪೀಠವು ಕೇಂದ್ರ ಸರ್ಕಾರ ನೀಡಿರುವ ನಿರ್ದೇಶನ ಕುರಿತ ದಾಖಲೆಗಳನ್ನು ಮುಂದಿನ ವಿಚಾರಣೆ ವೇಳೆ ನ್ಯಾಯಾಲಯಕ್ಕೆ ಒದಗಿಸುವಂತೆ ಸರ್ಕಾರದ ಪರ ವಕೀಲರಿಗೆ ಸೂಚಿಸಿ, ಅರ್ಜಿ ವಿಚಾರಣೆಯನ್ನು ಫೆಬ್ರವರಿ 16ಕ್ಕೆ ಮುಂದೂಡಿತು.

ಇದನ್ನೂ ಓದಿ : Madras High court : ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವುದಕ್ಕೆ ಫ್ಯಾಮಿಲಿ ಕೋರ್ಟ್‌ಗೇ ಬರಬೇಕು; ಮದ್ರಾಸ್‌ ಹೈಕೋರ್ಟ್‌

Exit mobile version