Site icon Vistara News

ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ : ರಾಘವೇಶ್ವರ ಶ್ರೀ, ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧದ ಚಾರ್ಜ್‌ಶೀಟ್‌ ವಜಾಗೊಳಿಸಿದ ಹೈಕೋರ್ಟ್‌

high court

#image_title

ಬೆಂಗಳೂರು: ಭಾರಿ ಸುದ್ದಿ ಮಾಡಿದ್ದ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆ ಪ್ರಕರಣದಲ್ಲಿ (Suicide case) ಹೊಸನಗರ ರಾಮಚಂದ್ರಾಪುರ ಮಠದ ಪೀಠಾಧಿಪತಿ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ವಿರುದ್ಧ ಸಲ್ಲಿಸಲಾಗಿದ್ದ ಚಾರ್ಜ್‌ಶೀಟನ್ನು ರಾಜ್ಯ ಹೈಕೋರ್ಟ್‌ ರದ್ದುಪಡಿಸಿದೆ.

ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಅವರು ರಾಘವೇಂದ್ರ ಶ್ರೀಗಳು ನಡೆಸುತ್ತಿದ್ದ ರಾಮಕಥಾದ ಗಾಯಕಿಯಾಗಿದ್ದ ಮಹಿಳೆಯೊಬ್ಬರ ಪತಿಯ ಸಹೋದರನಾಗಿದ್ದರು. ರಾಮಕಥಾ ಗಾಯಕಿಯ ಮೇಲೆ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದಲ್ಲಿ ಶ್ರೀಗಳೂ ಆರೋಪಿಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಸಂತ್ರಸ್ತೆಯ ಪತಿಯ ಸಹೋದರರಾಗಿರುವ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಲಾಗಿದೆ ಎಂಬ ಆರೋಪಕ್ಕೆ ಶ್ರೀಗಳು ಮತ್ತು ಆರೆಸ್ಸೆಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಗುರಿಯಾಗಿದ್ದರು.

ರಾಮಕಥಾ ಗಾಯಕಿಯ ಮೇಲಿನ ಅತ್ಯಾಚಾರ ಪ್ರಕರಣದ ಆರೋಪ ಎದುರಿಸುತ್ತಿದ್ದ ರಾಘವೇಶ್ವರ ಸ್ವಾಮೀಜಿ ಪರ ವಹಿಸುವಂತೆ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಮೇಲೆ ಒತ್ತಡ ಹೇರಲಾಗಿತ್ತು ಎನ್ನುವ ಆರೋಪ ಈ ಇಬ್ಬರ ಮೇಲೆ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿದ್ದ ಸಿಐಡಿ ಈ ಇಬ್ಬರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು.

ಪುತ್ತೂರು ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಈ ಆರೋಪ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ಕೋರಿ ರಾಘವೇಶ್ವರ ಸ್ವಾಮೀಜಿ ಮತ್ತು ಕಲ್ಲಡ್ಕ ಪ್ರಭಾಕರ ಭಟ್‌ ಸಲ್ಲಿಸಿದ್ದ ಪ್ರತ್ಯೇಕ ಅರ್ಜಿಗಳನ್ನು ನ್ಯಾಯಮೂರ್ತಿ ಹೇಮಂತ ಚಂದನಗೌಡರ್ ಅವರ ನೇತೃತ್ವದ ಏಕಸದಸ್ಯ ಪೀಠವು ಮಾನ್ಯ ಮಾಡಿ ಚಾರ್ಜ್‌ಶೀಟ್‌ ರದ್ದುಪಡಿಸಿದೆ.

ಆತ್ಮಹತ್ಯೆ ಪ್ರಚೋದನೆಗೆ ಸಾಕ್ಷ್ಯಾಧಾರ ಇಲ್ಲ ಎಂದ ವಕೀಲರು

ರಾಘವೇಶ್ವರ ಸ್ವಾಮೀಜಿ ಅವರನ್ನು ಪ್ರತಿನಿಧಿಸಿದ್ದ ವಕೀಲ ಪಿ ಎನ್‌ ಮನಮೋಹನ್‌ ಮತ್ತು ಕಲ್ಲಡ್ಕ ಪ್ರಭಾಕರ ಭಟ್‌ ಪ್ರತಿನಿಧಿಸಿದ್ದ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು ಅರ್ಜಿದಾರರು ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಸಾಕ್ಷ್ಯಾಧಾರ ಇಲ್ಲ. ಶಾಮ್‌ ಪ್ರಸಾದ್‌ ಶಾಸ್ತ್ರಿ ಹತಾಶರಾಗಿ ಆತ್ಮಹತ್ಯೆಗೆ ಶರಣಾದಂತಿದೆ. ಅವರು ಬರೆದಿಟ್ಟಿದ್ದ ಮರಣ ಪತ್ರದಲ್ಲಿ ಅರ್ಜಿದಾರರ ಹೆಸರುಗಳ ಉಲ್ಲೇಖವೇ ಇಲ್ಲ. ಅಂತೆಯೇ, ತನಿಖಾಧಿಕಾರಿಗಳು ಶಾಮ್‌ ಪ್ರಸಾದ್ ಶಾಸ್ತ್ರಿ ಮೃತಪಟ್ಟ ಒಂದು ತಿಂಗಳ ನಂತರ ಸುಳ್ಳು ಹೇಳಿಕೆ ತಯಾರಿಸಿ ವಿಚಾರಣಾಧೀನ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದಾರೆ ಎಂದು ಆಕ್ಷೇಪಿಸಿದ್ದರು.

ಏನಿದು ಆತ್ಮಹತ್ಯೆ ಪ್ರಕರಣ?

ರಾಮಕಥಾ ಗಾಯಕಿಯ ಪತಿ ದಿವಾಕರ ಶಾಸ್ತ್ರಿ ಅವರ ಸಹೋದರ ಶ್ಯಾಮ್‌ ಪ್ರಸಾದ್ ಶಾಸ್ತ್ರಿ ಪುತ್ತೂರಿನ ಕೆದಿಲ ಗ್ರಾಮದಲ್ಲಿ 2014, ಸೆಪ್ಟೆಂಬರ್ 1ರಂದು ತಮ್ಮ ಬಳಿಯಿದ್ದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದರು. ಆಗ ಇದೊಂದು ಸೆನ್ಸೇಷನಲ್‌ ಕೇಸ್‌ ಆಗಿ ಗಮನ ಸೆಳೆದಿತ್ತು.

ರಾಘವೇಶ್ವರ ಸ್ವಾಮೀಜಿ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣವನ್ನು ಹಿಂಪಡೆಯುವಂತೆ ಸಂತ್ರಸ್ತೆಗೆ ಹೇಳಬೇಕು. ನೀವು ಸ್ವಾಮೀಜಿ ಪರ ನಿಲ್ಲಬೇಕು ಎಂದು ಸ್ವಾಮೀಜಿ ಕಡೆಯವರು ದೂರವಾಣಿ ಮೂಲಕ ಒತ್ತಡ ಹಾಕಿದ್ದರು ಮತ್ತು ಈ ಒತ್ತಡ ಹೇರುವ ಹಿಂದೆ ಕಲ್ಲಡ್ಕ ಪ್ರಭಾಕರ ಭಟ್‌ ಮತ್ತಿತರರು ಇದ್ದರು ಎಂದು ಆರೋಪಿಸಿ ಶ್ಯಾಮ್‌ ಪ್ರಸಾದ್‌ ಶಾಸ್ತ್ರಿ ಅವರ ಪತ್ನಿ ಸಂಧ್ಯಾಲಕ್ಷ್ಮಿ ಪೊಲೀಸರಿಗೆ ದೂರು ನೀಡಿದ್ದರು. ಈ ಪ್ರಕರಣದ ತನಿಖೆ ನಡೆಸಿದ್ದ ಸಿಐಡಿ ಪುತ್ತೂರು ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿತ್ತು.

ಇದನ್ನೂ ಓದಿ : Ram Navami 2023: ಹೊಸನಗರ, ಚೆನ್ನಗಿರಿ, ಹೊನ್ನಾಳಿಯಲ್ಲಿ ಸಂಭ್ರಮದ ರಾಮನವಮಿ; ರಾಮನ ಹೆಸರೇ ಸ್ಫೂರ್ತಿ ಎಂದರು ರಾಘವೇಶ್ವರ ಶ್ರೀ

Exit mobile version