Site icon Vistara News

Grave yard : ಸತ್ತವರಿಗೆ ದೊಡ್ಡ ಪುತ್ಥಳಿ ಮಾಡ್ತೀರಿ, ಊರಿಗೊಂದು ಸ್ಮಶಾನ ಮಾಡಕಾಗಲ್ವಾ?; ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

High court

#image_title

ಬೆಂಗಳೂರು: ಸತ್ತವರಿಗಾದರೆ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸುತ್ತೀರಿ. ಆದರೆ, ಗ್ರಾಮಕ್ಕೊಂದು ಸ್ಮಶಾನ (ವ) ನಿರ್ಮಿಸುವ ವಿಚಾರದಲ್ಲಿ ನಿಮಗೆ ಯಾವುದೇ ಕಾಳಜಿ ಇಲ್ಲ ಎಂದು ರಾಜ್ಯ ಹೈಕೋರ್ಟ್‌ (Karnataka Highcourt) ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ರಾಜ್ಯದಲ್ಲಿ ಸ್ಮಶಾನ ಜಾಗ ಇಲ್ಲದ ಗ್ರಾಮ ಮತ್ತು ಪಟ್ಟಣ ಪ್ರದೇಶಗಳಿಗೆ ಅಗತ್ಯ ಜಮೀನು ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಿ ಹೈಕೋರ್ಟ್ ಹೊರಡಿಸಿದ ಆದೇಶ ಜಾರಿಯಾಗದ ಹಿನ್ನೆಲೆಯಲ್ಲಿ ಬೆಂಗಳೂರು ನಿವಾಸಿ ಮಹಮ್ಮದ್ ಇಕ್ಬಾಲ್ ಎಂಬುವರು ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ ವೀರಪ್ಪ ಮತ್ತು ನ್ಯಾ. ಟಿ ವೆಂಕಟೇಶ್ ನಾಯ್ಕ್ ಅವರಿದ್ದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಧೀಶರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

“ಕಳೆದ 75 ವರ್ಷಗಳಿಂದ ನಾವು ನಾಟಕ ಮಾಡುತ್ತಿದ್ದೇವೆ. ಜನರಿಗೆ ಮೊದಲು ಮೂಲಸೌಲಭ್ಯ ಕಲ್ಪಿಸಿ. ಅಭಿವೃದ್ಧಿ ಎನ್ನುವುದು ಇಲ್ಲಿ ಯಾರಿಗೂ ಬೇಕಿಲ್ಲವಾಗಿದೆ. ಸತ್ತವರಿಗಾದರೆ ದೊಡ್ಡ ದೊಡ್ಡ ಪುತ್ಥಳಿ ನಿರ್ಮಿಸುತ್ತೀರಿ…” ಎಂದು ನ್ಯಾಯಾಧೀಶರು ಹೇಳಿದರು.

“ನ್ಯಾಯಾಲಯದ ಈ ಹಿಂದಿನ ಆದೇಶದ ಅನ್ವಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್‌ ಜಯರಾಂ ಅವರ ಅಫಿಡವಿಟ್‌ ಅನ್ನು ಸರ್ಕಾರದ ವಕೀಲರು ಸಲ್ಲಿಸಿದ್ದಾರೆ. ವಾದ ಮಂಡನೆಯ ಸಂದರ್ಭದಲ್ಲಿ ಸರ್ಕಾರದ ವಕೀಲರು ರಾಜ್ಯದ ಎಲ್ಲಾ ಗ್ರಾಮಗಳಲ್ಲಿಯೂ ಸ್ಮಶಾನ ಭೂಮಿ ನೀಡುವುದಕ್ಕೆ ಸಂಬಂಧಿಸಿದಂತೆ ಎಲ್ಲಾ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ, ಜನರಿಂದ ಮಾಹಿತಿ ಪಡೆಯಲಾಗುವುದು. ಆನಂತರ ಸ್ಮಶಾನಕ್ಕೆ ಜಾಗ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ. ಈ ಹೇಳಿಕೆಯನ್ನು ದಾಖಲಿಸಲಾಗಿದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ. ಅಲ್ಲದೇ, ಸ್ಮಶಾನ ಭೂಮಿ ಇಲ್ಲದ ಗ್ರಾಮದ ಮಾಹಿತಿಯನ್ನು ತಾಲ್ಲೂಕು ಕಾನೂನು ಸೇವಾ ಸಮಿತಿಯಿಂದ ಸಂಗ್ರಹಿಸಲು ಕೆಎಸ್‌ಎಲ್‌ಎಸ್‌ಎಗೆ ನ್ಯಾಯಾಲಯವು ನಿರ್ದೇಶಿಸಿದೆ.

ತಪ್ಪು ಮಾಹಿತಿ ನೀಡಿತೇ ಸರ್ಕಾರ?

ಈ ನಡುವೆ ರಾಜ್ಯದಲ್ಲಿ ಕೇವ ಮೂರು ಸಾವಿರ ಗ್ರಾಮಗಳಲ್ಲಿ ಮಾತ್ರವೇ ಸ್ಮಶಾನ ಭೂಮಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ನೀಡಿದ ವರದಿಯಲ್ಲಿ ತಿಳಿಸಲಾಗಿದೆ. ಹಾಗಿದ್ದರೆ ಇಷ್ಟೇ ಗ್ರಾಮದಲ್ಲಿ ಸ್ಮಶಾನ ಇಲ್ಲದಿರುವುದಾ? ಜಿಲ್ಲಾಧಿಕಾರಿಗಳು ಜಿಲ್ಲೆಯ ಪಾಲಕರಾಗಿದು ಅವರು ಜನರು ಮತ್ತು ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಬಾರದು ಎಂದು ಕೋರ್ಟ್‌ ಗರಂ ಆಗಿ ಹೇಳಿತು.

ಸರಿಯಾದ ಸಮೀಕ್ಷೆ ಮಾಡಲಾಗುತ್ತಿಲ್ಲ ಎಂದರೆ ಹೇಳಿಬಿಡಿ..

“ಯಾವೆಲ್ಲಾ ಗ್ರಾಮಗಳಲ್ಲಿ ಸ್ಮಶಾನಕ್ಕೆ ಜಾಗ ಇಲ್ಲ ಎಂಬುದರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಸಂಗ್ರಹ ಮಾಡಿದ್ದಾರೆಯೇ? ಇಲ್ಲ. ನಾವು ಅದನ್ನು ಮಾಡುತ್ತೇವೆ. ಕೆಎಸ್‌ಎಲ್‌ಎಸ್‌ಎ ಸದಸ್ಯ ಕಾರ್ಯದರ್ಶಿ ಅವರನ್ನು ಎಲ್ಲೆಲ್ಲಿ ಸ್ಮಶಾನಕ್ಕೆ ಜಾಗವಿಲ್ಲ ಎಂಬ ಮಾಹಿತಿಯನ್ನು ಪಡೆಯಲು ಜಾಹೀರಾತು ನೀಡಲು ಸೂಚಿಸುತ್ತೇವೆ. ಮಾಡುವುದಕ್ಕಾಗಲ್ಲ ಎಂದರೆ ಹೇಳಿ ಬಿಡಿ. ಕಾಗದದ ಮೇಲಿನ ನ್ಯಾಯಾಲಯದ ಆದೇಶದ ಅನುಪಾಲನೆ ಬೇಡ, ಪ್ರಾಯೋಗಿಕವಾಗಿ ಪಾಲನೆಯಾಗಬೇಕು. ಇಲ್ಲವಾದಲ್ಲಿ ನ್ಯಾಯಾಲಯದ ಆದೇಶ, ಸರ್ಕಾರ, ನಾವು ಮತ್ತು ನೀವೆಲ್ಲರೂ ನಿಷ್ಟ್ರಯೋಜಕವಾಗುತ್ತೇವೆ” ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

ಎಲ್ಲರೂ ಮತ ಕೇಳುತ್ತಾರೆ, ಸ್ಮಶಾನ ಇದೆಯಾ ಎಂದು ಕೇಳುತ್ತೀರಾ?

“ಕಂದಾಯ ಇಲಾಖೆ ಕಾರ್ಯದರ್ಶಿ ಉಪಸ್ಥಿತರಿರುವುದರಿಂದ ಒಂದು ಮಾತು ಕೇಳುತ್ತೇವೆ. ಯಾವೊಂದು ಗ್ರಾಮದಲ್ಲೂ ಒಂದು ಮತ ಬಿಡುವುದಿಲ್ಲ. ಎಲ್ಲರೂ ಮತ ಹಾಕಲೇಬೇಕು ಎನ್ನುತ್ತೀರಿ. ಆದರೆ, ಆ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇದೆಯಾ ಎಂದು ಯಾರಾದರೂ ಕೇಳುತ್ತೀರಾ? ಯಾರೂ ಕೇಳುವುದಿಲ್ಲ” ಎಂದು ಪೀಠ ಬೇಸರ ವ್ಯಕ್ತಪಡಿಸಿತು. ಜತೆಗೆ ಸುಳ್ಳು ಮಾಹಿತಿ ನೀಡಿದ ಅಧಿಕಾರಿಗಳ ಖುದ್ದು ಹಾಜರಿಗೆ ಆದೇಶಿಸಿತು.

ಇದನ್ನೂ ಓದಿ : High court observation : 5 ವರ್ಷ ಸಹಮತದ ಸಂಬಂಧ ಇಟ್ಕೊಂಡು ನಂತ್ರ ರೇಪ್‌ ಅಂದ್ರೆ ಆಗುತ್ತಾ?; ಹೈಕೋರ್ಟ್‌ ಪ್ರಶ್ನೆ

Exit mobile version