ಬೆಂಗಳೂರು: ಅವನು ಇಬ್ಬರು ಹೆಂಡಿರು ಮತ್ತು ಒಂದು ಮಗುವನ್ನು (He killed two wives and a daughter) ಕೊಂದ ಕಟುಕ. ಆದರೆ, ನ್ಯಾಯದಾನದಲ್ಲಿ, ಅರ್ಜಿ ವಿಲೇವಾರಿಯಲ್ಲಿ ಆದ ವಿಳಂಬದಿಂದಾಗಿ ಆತ ಗಲ್ಲುಶಿಕ್ಷೆಯಿಂದ ಪಾರಾಗಿದ್ದಾನೆ (Survived from Hanging). ಈಗ ಅವನಿಗೆ 70 ವರ್ಷ ದಾಟಿದೆ, ಸಾಕಷ್ಟು ಶಿಕ್ಷೆ ಅನುಭವಿಸಿದ್ದಾನೆ ಎಂಬ ನೆಲೆಯಲ್ಲಿ ಹೈಕೋರ್ಟ್ (Karnataka High court) ಅವನಿಗೆ ಈ ಹಿಂದೆ ವಿಧಿಸಲಾದ ಗಲ್ಲು ಶಿಕ್ಷೆಯನ್ನು (death sentence) ಬದಲಿಸಿ ಜೀವನ ಪರ್ಯಂತ ಜೈಲಿನಲ್ಲಿ ಇರುವಂತೆ ಜೀವಾವಧಿ ಶಿಕ್ಷೆ ವಿಧಿಸಿದೆ.
ಹಾಗಿದ್ದರೆ ಯಾರೀ ಪಾತಕಿ? ಅವನು ಗಲ್ಲು ತಪ್ಪಿಸಿಕೊಂಡಿದ್ದು ಹೇಗೆ?
ಅವನ ಹೆಸರು ಸಾಯಿಬಣ್ಣ. ಕಲಬುರಗಿಯ ಅಫ್ಜಲ್‌ಪುರದವನು. ಇವನು ಮೂರು ಕೊಲೆಗಳನ್ನು ಮಾಡಿಯೂ ಅದನ್ನು ದಕ್ಕಿಸಿಕೊಂಡು ಈಗ ಗಲ್ಲಿನ ಬದಲು ಸಾದಾ ಜೈಲು ಶಿಕ್ಷೆಯ ನಿರ್ಣಯ ಪಡೆದಿದ್ದಾನೆ. ಈತನ ಕ್ಷಮಾದಾನ ಅರ್ಜಿ ವಿಲೇವಾರಿಯಲ್ಲಿ 7 ವರ್ಷ 8 ತಿಂಗಳು ವಿಳಂಬವಾಗಿದೆ ಜೊತೆಗೆ 70 ವರ್ಷದ ಸಾಯಿಬಣ್ಣ 30 ವರ್ಷದಿಂದ ಜೈಲಿನಲ್ಲಿರುವ ಹಿನ್ನೆಲೆಯಲ್ಲಿ ಕರ್ನಾಟಕ ಹೈಕೋರ್ಟ್ ಜೀವದಾನ ನೀಡಿದೆ. ಆರೋಪಿಗೆ ಗಲ್ಲು ಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸಿ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚರಿದ್ದ ಹೈಕೋರ್ಟ್ ವಿಭಾಗೀಯ ಪೀಠ ತೀರ್ಪು ನೀಡಿದೆ.
ಸಾಯಿಬಣ್ಣ ಮೊದಲ ಕೊಲೆ ಮಾಡಿದ್ದು 1988ರ ಜನವರಿ 9ರಂದು. ಸದಾ ತನ್ನ ಪತ್ನಿಯ ಶೀಲವನ್ನು ಶಂಕಿಸುತ್ತಿದ್ದ ಆತ ಅಂದು ಕೊಲೆಯನ್ನೇ ಮಾಡಿಬಿಟ್ಟ. ಅಫ್ಜಲ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಪತ್ನಿ ಕೊಲೆ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಸೇರಿದ.
ಆ ಜೈಲಿನಲ್ಲಿ ಅವನಿಗೆ ಮತ್ತೊಬ್ಬ ಕೈದಿ ದತ್ತು ಎಂಬಾತನ ಪರಿಚಯವಾಗುತ್ತದೆ. ಎದುರಿಗೆ ಭಾರಿ ಒಳ್ಳೆಯವನಂತೆ ನಟಿಸಲು ಗೊತ್ತಿರುವ ಸಾಯಿಬಣ್ಣ ದತ್ತುವಿನ ಸ್ನೇಹ ಸಂಪಾದಿಸುತ್ತಾನೆ. ಅದೇನಾಯಿತೋ ಈ ದತ್ತುವಿಗೆ, ತನ್ನ ಮಗಳನ್ನೇ ಸಾಯಿಬಣ್ಣನಿಗೆ ಮದುವೆ ಮಾಡಿಕೊಡುವುದಾಗಿ ಭರವಸೆ ಕೊಡುತ್ತಾನೆ.
ಪತ್ನಿಯ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರಬಂದ ಸಾಯಿಬಣ್ಣ 1988ರ ಜುಲೈನಲ್ಲೇ (ಮೊದಲ ಪತ್ನಿಯನ್ನು ಕೊಂದು ಇನ್ನೂ ಆರು ತಿಂಗಳಾಗಿಲ್ಲ) ಸಹ ಕೈದಿ ದತ್ತು ಎಂಬಾತನ ಪುತ್ರಿ ನಾಗಮ್ಮಳನ್ನು ಮದುವೆಯಾಗುತ್ತಾನೆ. ಅವರಿಬ್ಬರ ದಾಂಪತ್ಯದಲ್ಲಿ ಒಬ್ಬ ಮಗಳೂ ಜನಿಸುತ್ತಾಳೆ.
1993ರ ಫೆಬ್ರವರಿ 2ರಂದು ಸಾಯಿಬಣ್ಣನ ವಿರುದ್ಧದ ಪತ್ನಿಯ ಕೊಲೆ ಆರೋಪ ಸಾಬೀತಾಗಿ ಅವನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ. ಹೀಗಾಗಿ ಅವನು ಮತ್ತೆ ಜೈಲು ಸೇರುತ್ತಾನೆ. ಆಗಸ್ಟ್ 19, 1994ರಂದು ಕೋರ್ಟ್ ಅವನಿಗೆ ಒಂದು ತಿಂಗಳ ಪೆರೋಲ್ ಜಾಮೀನು ನೀಡುತ್ತದೆ. ಪೆರೋಲ್ ಪಡೆದು ಬಿಡುಗಡೆಯಾದ ಸಾಯಿಬಣ್ಣ ಊರಿಗೆ ಬರುತ್ತಾನೆ. ಹಾಗೆ ಬಂದವನು ಇನ್ನೇನು ಪೆರೋಲ್ ಅವಧಿ ಮುಗಿಯಬೇಕೆನ್ನುವಷ್ಟರಲ್ಲಿ ಅಂದರೆ 1994ರ ಸೆಪ್ಟೆಂಬರ್ 13ರಂದು ಎರಡನೇ ಪತ್ನಿ ನಾಗಮ್ಮ ಹಾಗೂ ಪುತ್ರಿಯನ್ನೂ ಕೊಲೆ ಮಾಡುತ್ತಾನೆ!
ಪೆರೋಲ್‌ನಲ್ಲಿರುವಾಗಲೇ ಮತ್ತೆರಡು ಕೊಲೆ ಮಾಡಿದ ಪಾತಕಿ ಸಾಯಿಬಣ್ಣನಿಗೆ ಕಲಬುರಗಿಯ ವಿಚಾರಣಾ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸುತ್ತದೆ. ಆದರೆ, ಹೈಕೋರ್ಟ್ ವಿಭಾಗೀಯ ಪೀಠ ಗಲ್ಲು ಶಿಕ್ಷೆ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಮಂಡಿಸುತ್ತದೆ. ಹೀಗಾಗಿ ಕೇಸು 3ನೇ ನ್ಯಾಯಮೂರ್ತಿ ಅವರಿಗೆ ಹೋಗುತ್ತದೆ. 2003ರ ಅಕ್ಟೋಬರ್ 10ರಂದು ಹೈಕೋರ್ಟ್ ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದು ಸಾಯಿಬಣ್ಣನಿಗೆ ಗಲ್ಲು ಶಿಕ್ಷೆಯನ್ನು ಕಾಯಂ ಮಾಡುತ್ತದೆ. ಸಾಯಿಬಣ್ಣ ಇದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತಾನೆ. ಸುಪ್ರೀಂಕೋರ್ಟ್ 2005ರಲ್ಲಿ ಸಾಯಿಬಣ್ಣನ ಅರ್ಜಿಯನ್ನು ಕಿತ್ತೆಸೆಯುತ್ತದೆ.
ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ ಸಾಯಿಬಣ್ಣ
ಅತ್ತ ಸುಪ್ರೀಂಕೋರ್ಟ್ ತನ್ನ ಅರ್ಜಿಯನ್ನು ವಜಾ ಮಾಡುತ್ತಲೇ ಇತ್ತ ಸಾಯಿಬಣ್ಣ ತಕ್ಷಣ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿದ್ದ. ರಾಜ್ಯಪಾಲರು 1 ವರ್ಷ 7 ತಿಂಗಳ ನಂತರ ಅರ್ಜಿಯನ್ನು ವಜಾಗೊಳಿಸಿದ್ದರು. 2011ರಲ್ಲಿ ಒಂದು ಎನ್‌ಜಿಒ ಮತ್ತು ಸ್ವಯಂ ಸಾಯಿಬಣ್ಣ ರಾಷ್ಟ್ರಪತಿಗಳಿಗೆ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದ್ದ. 2013ರ ಜನವರಿ 4ರಂದು ರಾಷ್ಟ್ರಪತಿಗಳು ಈತನ ಅರ್ಜಿ ತಿರಸ್ಕರಿಸಿದ್ದರು. ನಂತರ ಮತ್ತೆ ಹೈಕೋರ್ಟ್ ಮೆಟ್ಟಿಲೇರಿದ್ದ ಸಾಯಿಬಣ್ಣ ಗಲ್ಲು ಶಿಕ್ಷೆಯಿಂದ ಕ್ಷಮಾದಾನ ಕೋರಿದ್ದ ಅರ್ಜಿ ಇತ್ಯರ್ಥಪಡಿಸಲು 7 ವರ್ಷ 8 ತಿಂಗಳು ವಿಳಂಬವಾಗಿತ್ತು.
ಅಂತಿಮವಾಗಿ ಸಾಯಿಬಣ್ಣ ಇನ್ನೊಂದು ವರಸೆ ತೆಗೆದ! ನನ್ನನ್ನು ಬೆಳಗಾವಿಯ ಅಂಧೇರಿ ಬ್ಲಾಕ್ ನ ಜೈಲುಕೋಣೆಯಲ್ಲಿ ಒಂಟಿಯಾಗಿ 16 ವರ್ಷಗಳ ಕಾಲ ಕೂಡಿಹಾಕಲಾಗಿದೆ. ಇದರಿಂದಾಗಿ ಮಾನಸಿಕ, ದೈಹಿಕ ಒತ್ತಡಗಳನ್ನು ಅನುಭವಿಸಿದ್ದೇನೆ. 70 ವರ್ಷದ ತಾನು ಇಲ್ಲಿಯವರೆಗೆ ಒಟ್ಟಾರೆಯಾಗಿ 30 ವರ್ಷಗಳ ಕಾಲ ಸೆರೆವಾಸ ಅನುಭವಿಸಿದ್ದೇನೆ. ಹೀಗಾಗಿ ನ್ಯಾಯದಾನ ವಿಳಂಬದಿಂದ ನೊಂದಿರುವ ತನಗೆ ಕ್ಷಮಾದಾನ ಕೊಡಿ ಎಂದು ಮನವಿ ಮಾಡಿದ್ದ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದರ್ ಹಾಗೂ ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರ ಹೈಕೋರ್ಟ್ ವಿಭಾಗೀಯ ಪೀಠ ಸಾಯಿಬಣ್ಣ 30 ವರ್ಷಗಳಿಂದ ಸೆರೆಮನೆಯಲ್ಲಿದ್ದಾನೆ, 2003ರಿಂದಲೂ ಒಂಟಿಯಾಗಿದ್ದಾನೆ. ವಯಸ್ಸೂ 70 ದಾಟಿದೆ. ಹೀಗಾಗಿ ಅವನ ಗಲ್ಲುಶಿಕ್ಷೆಯನ್ನು ಜೀವಾವಧಿ ಶಿಕ್ಷೆಯಾಗಿ ಪರಿವರ್ತಿಸುವುದು ಸೂಕ್ತವೆಂದಿದೆ. ಇಷ್ಟು ಮಾತ್ರವಲ್ಲ ಒಂದು ವೇಳೆ ಅವನು ಜೀವಾವಧಿ ಶಿಕ್ಷೆಯಿಂದ ಕ್ಷಮಾದಾನ ಕೋರಿ ಅರ್ಜಿ ಸಲ್ಲಿಸಿದರೆ ಅದನ್ನು ಅರ್ಹತೆ ಆಧರಿಸಿ ಪರಿಗಣಿಸಬಹುದು ಎಂದು ಸಲಹೆ ನೀಡಿದೆ. ಒಟ್ಟಿನಲ್ಲಿ ಸಾಯಿಬಣ್ಣ ಗಲ್ಲಿನಿಂದ ಬಚಾವಾಗಿದ್ದಾನೆ!
ಇದನ್ನೂ ಓದಿ: High court : 6 ವರ್ಷ ಲೈಂಗಿಕ ಸಂಬಂಧ ಹೊಂದಿ ಬಳಿಕ ಅತ್ಯಾಚಾರ ಎಂದರೆ ನಂಬಬೇಕಾ?; ಹೈಕೋರ್ಟ್ ಗರಂ!
ಸಾಯಿಬಣ್ಣನಿಗೆ ಪೂರಕವಾದ ಅಂಶಗಳೇನು?
- ಸಾಯಿಬಣ್ಣ ಸಲ್ಲಿಸಿದ್ದ ಕ್ಷಮಾದಾನದ ಅರ್ಜಿ 2005ರ ಮೇ 31ರಿಂದ 2007ರ ಜ.9ರವರೆಗೆ ಸರ್ಕಾರದ ಮುಂದಿತ್ತು. ಅಂದರೆ ಒಂದು ವರ್ಷ 9 ತಿಂಗಳು ಮತ್ತು 9 ದಿನ ವಿಳಂಬ
- ರಾಜ್ಯಪಾಲರ ಸಚಿವಾಲಯದಲ್ಲಿ ಅರ್ಜಿ ವಿಚಾರಣೆ 2007ರ ಜ.12ರಿಂದ 2007ರ ಫೆ.2ರವರೆಗೆ ವಿಳಂಬವಾಗಿದೆ.
- ಕೇಂದ್ರ ಸರ್ಕಾರಕ್ಕೆ ಸಂವಹನ ಕಳುಹಿಸಿಕೊಡುವಲ್ಲಿ 24 ದಿನ ವಿಳಂಬವಾಗಿದೆ.
- ರಾಷ್ಟ್ರಪತಿ ಬಳಿ ಅರ್ಜಿ 2007ರ ಫೆ.28ರಿಂದ 2013ರ ಜ.3ರವರೆಗೆ ಇತ್ಯರ್ಥವಾಗದೆ ಉಳಿದಿದೆ. ಅಂದರೆ ಒಟ್ಟಾರೆ ನಾಲ್ಕು ಹಂತಗಳಲ್ಲಿ 7 ವರ್ಷ 8 ತಿಂಗಳು ವಿಳಂಬವಾಗಿದೆ. ಇದಕ್ಕೆ ಯಾವುದಕ್ಕೂ ಕಾರಣ ನೀಡಲಾಗಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
- ಸಾಯಿಬಣ್ಣನನ್ನು 2003ರ ಜ.10ರಿಂದ 2019ರ ಮೇ 20ರವರೆಗೆ ಬೆಳಗಾವಿಯ ಒಂದೇ ಕೋಣೆಯಲ್ಲಿ ಏಕಾಂಗಿಯಾಗಿ ಇರಿಸಲಾಗಿದೆ. ಅದರಂತೆ ಆತ 16 ವರ್ಷ ಏಕಾಂಗಿ ಸೆರೆವಾಸ ಅನುಭವಿಸಿದಂತಾಗಿದೆ.
- ಕಾರಾಗೃಹ ಅಧಿಕಾರಿಗಳ ವರದಿ ಪ್ರಕಾರ ಸಾಯಿಬಣ್ಣನಿಗೆ ಎದೆಯ ಎರಡೂ ಭಾಗಗಳಲ್ಲಿ ನೋವು ಇದೆ. ಭಯದಿಂದ ತತ್ತರಿಸಿದ್ದಾನೆ ಮತ್ತು ಬೇಧಿಯಿಂದ ಬಳಲುತ್ತಿದ್ದು, ಆರೋಗ್ಯ ತೀವ್ರ ಹದಗೆಟ್ಟಿದೆ!