ಬೆಂಗಳೂರು: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ (ZP TP Elections) ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಪರಿಶೀಲನೆ ಮಾಡಿ ಇನ್ನು 10 ವಾರಗಳ ಒಳಗೆ ಅಧಿಸೂಚನೆ ಹೊರಡಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ (High Court) ನಿರ್ದೇಶನ ನೀಡಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿಯಲು ಇನ್ನೂ ಎರಡೂವರೆ ತಿಂಗಳು ಕಾಲಾವಕಾಶ ಬೇಕಿದೆ. ಹೀಗಾಗಿ ಸದ್ಯಕ್ಕೆ ಈ ಎರಡು ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸೂಚನೆ ಇಲ್ಲ.
ರಾಜ್ಯ ಚುನಾವಣಾ ಆಯೋಗ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠವು, ಕ್ಷೇತ್ರ ಮರುವಿಂಗಡಣೆ ಹಾಗೂ ಮೀಸಲಾತಿ ನಿಗದಿ ಪ್ರಕ್ರಿಯೆಯನ್ನು ಪುನರ್ ಪರಿಶೀಲನೆ ಮಾಡಬೇಕು. ಇನ್ನು ಎರಡೂವರೆ ತಿಂಗಳೊಳಗೆ ಅಧಿಸೂಚನೆ ಹೊರಡಿಸಬೇಕೆಂದು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿ, ವಿಚಾರಣೆಯನ್ನು 12 ವಾರ ಮುಂದೂಡಿತು.
ಇದನ್ನೂ ಓದಿ: Ambulance Service : ಜುಲೈ 8ಕ್ಕೆ ಆಂಬ್ಯುಲೆನ್ಸ್ ಡೆಡ್‌ಲೈನ್; ವೇತನ ಕೊಡ್ದೇ ಇದ್ರೆ ಸೇವೆ ಸಿಗಲ್ಲ!
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯಿತಿ ಕ್ಷೇತ್ರಗಳ ಗಡಿ ನಿರ್ಣಯ ಮತ್ತು ಮೀಸಲಾತಿ ನಿಗದಿಪಡಿಸುವ ಅಧಿಕಾರವನ್ನು ರಾಜ್ಯ ಚುನಾವಣಾ ಆಯೋಗದಿಂದ ವಾಪಸ್ ಪಡೆದು ಕರ್ನಾಟಕ ಪಂಚಾಯತ್ ರಾಜ್ ಸೀಮಾ ನಿರ್ಣಯ ಆಯೋಗ ರಚಿಸಲು ‘ಕರ್ನಾಟಕ ಪಂಚಾಯತ್ ರಾಜ್ ಮತ್ತು ಗ್ರಾಮ ಸ್ವರಾಜ್ ಕಾಯಿದೆ’ಗೆ ತಿದ್ದುಪಡಿ ತಂದಿರುವುದನ್ನು ಪ್ರಶ್ನಿಸಿ ರಾಜ್ಯ ಚುನಾವಣಾ ಆಯೋಗವು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿತ್ತು.