Site icon Vistara News

Praveen thogadia | ಪ್ರವೀಣ್‌ ತೊಗಾಡಿಯಾ ಉಡುಪಿ ಪ್ರವೇಶ ನಿರ್ಬಂಧ ಪ್ರಶ್ನಿಸಿದ ಅರ್ಜಿ ಏಳು ವರ್ಷಗಳ ಬಳಿಕ ವಜಾ!

praveen thogadia

ಬೆಂಗಳೂರು: ವಿಶ್ವ ಪರಿಷತ್‌ ನಾಯಕ ಪ್ರವೀಣ್‌ ತೊಗಾಡಿಯಾ ಅವರಿಗೆ ೨೦೧೫ರಲ್ಲಿ ಉಡುಪಿ ಪ್ರವೇಶಕ್ಕೆ ನಿರ್ಬಂಧ ವಿಧಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯೊಂದನ್ನು ಏಳು ವರ್ಷಗಳ ಬಳಿಕ ವಜಾ ಮಾಡಲಾಗಿದೆ!

೨೦೧೫ರ ಕಾಲದಲ್ಲಿ ಪ್ರವೀಣ್‌ ಭಾಯ್‌ ತೊಗಾಡಿಯಾ ಅವರು ಪ್ರಖರ ಹಿಂದು ಭಾಷಣಕಾರರಾಗಿದ್ದು, ಅವರಿಗೆ ದೇಶಾದ್ಯಂತ ಭಾರಿ ಬೇಡಿಕೆ ಇತ್ತು. ಅದರಂತೆ ಉಡುಪಿಯಲ್ಲಿ ಆಯೋಜಿಸಲಾದ ಹಿಂದೂ ಸಮಾಜೋತ್ಸವಕ್ಕೂ ಆಹ್ವಾನ ನೀಡಲಾಗಿತ್ತು. ಆದರೆ, ಅವರ ಬೆಂಕಿಯುಗುಳುವ ಭಾಷಣದ ಹಿನ್ನೆಲೆಯಲ್ಲಿ ಮತ್ತು ಅವರ ಭಾಷಣದಿಂದ ಸಾಮಾಜಿಕ ಸ್ವಾಸ್ಥ್ಯ ಹಾಳಾಗಬಹುದು ಎಂಬ ಆತಂಕದಿಂದ ಉಡುಪಿ ಜಿಲ್ಲಾಡಳಿತ ಅವರ ಪ್ರವೇಶವನ್ನು ನಿರ್ಬಂಧಿಸಿತ್ತು. ಏಳು ದಿನಗಳ ಕಾಲ ಉಡುಪಿ ಜಿಲ್ಲೆಯ ವ್ಯಾಪ್ತಿಗೆ ಪ್ರವೇಶಿಸದಂತೆ ಹಾಗೂ ಸಾರ್ವಜನಿಕ ಸಭೆ ಅಥವಾ ಸಮಾರಂಭದಲ್ಲಿ ಭಾಗವಹಿಸದಂತೆ ತಡೆಯಲಾಗಿತ್ತು. ಇದನ್ನು ಪ್ರಶ್ನಿಸಿ ಪ್ರವೀಣ್‌ ಭಾಯ್‌ ತೊಗಾಡಿಯಾ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್‌ನಲ್ಲಿ ವಜಾಗೊಂಡಿದೆ.

ತೊಗಾಡಿಯಾ ಮತ್ತು ಉಡುಪಿಯ ಬೈಕಾಡಿ ಸುಪ್ರಸಾದ್‌ ಶೆಟ್ಟಿ ಅವರು ಸಲ್ಲಿಸಿರುವ ಅರ್ಜಿಯು ನಿರರ್ಥವಾಗಿದೆ ಎಂದು ಹೇಳಿ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರ ನೇತೃತ್ವದ ಏಕಸದಸ್ಯ ಪೀಠವು ಅರ್ಜಿ ವಜಾ ಮಾಡಿದೆ.

ಸಿಆರ್‌ಪಿಸಿ ಸೆಕ್ಷನ್‌ 144(3)ರ ಅಡಿ ಉಡುಪಿಯ ಜಿಲ್ಲಾ ದಂಡಾಧಿಕಾರಿ ಹಾಗೂ ಜಿಲ್ಲಾಧಿಕಾರಿಯವರು  2015ರ ಮಾರ್ಚ್‌ 7-13ರವರೆಗೆ ತೊಗಾಡಿಯಾ ಜಿಲ್ಲೆಗೆ ಪ್ರವೇಶಿಸುವುದಕ್ಕೆ ನಿಷೇಧ ವಿಧಿಸಿ ಮಾರ್ಚ್‌ 6ರಂದು ಆದೇಶ ಮಾಡಿದ್ದರು. 2015ರ ಮಾರ್ಚ್‌ 9ರಂದು ನಿಗದಿಯಾಗಿದ್ದ ಹಿಂದೂ ಸಮಾಜೋತ್ಸವದಲ್ಲಿ ಭಾಗಿಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ತೊಗಾಡಿಯಾಗೆ ನಿರ್ಬಂಧ ವಿಧಿಸಲಾಗಿತ್ತು. ಪ್ರಚೋದನಾಕಾರಿ ಭಾಷಣದ ಮೂಲಕ ಕೋಮು ಶಾಂತಿಗೆ ಧಕ್ಕೆ ಉಂಟು ಮಾಡಿ, ಕಾನೂನು ಮತ್ತು ಸುವ್ಯವಸ್ಥೆ ಕದಡುವ ಸಾಧ್ಯತೆಯಿಂದ ಭೇಟಿಗೆ ನಿರ್ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದರು.

ಇದನ್ನು ಪ್ರಶ್ನಿಸಿ ತೊಗಾಡಿಯಾ ಸಲ್ಲಿಸಿದ್ದ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಿದ್ದ ಪೀಠವು ಆದೇಶಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಈಗ “ಉಡುಪಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ದಂಡಾಧಿಕಾರಿಯವರು 2015ರಲ್ಲಿ ಆದೇಶ ಮಾಡಿದ್ದು, ಅದು ಮುಗಿದು ಹೋಗಿದೆ. ಹೀಗಾಗಿ, ಈ ಅರ್ಜಿಯನ್ನು ಪರಿಗಣಿಸುವ ಅಗತ್ಯವಿಲ್ಲ” ಎಂದು ಪೀಠ ಹೇಳಿದೆ.

ಇದನ್ನೂ ಓದಿ | Shaurya Yatra | ಶಿವಮೊಗ್ಗದಲ್ಲಿ ಅದ್ಧೂರಿ ಶೌರ್ಯ ಯಾತ್ರೆ; ಸಾವಿರಾರು ಹಿಂದು ಕಾರ್ಯಕರ್ತರು ಭಾಗಿ

Exit mobile version