ಬೆಂಗಳೂರು: ನೀವು ಏನೇನೋ ಉತ್ಸವಗಳನ್ನು ಮಾಡುತ್ತೀರಿ. ಯಾವ್ಯಾವುದಕ್ಕೋ ಕೋಟಿಗಟ್ಟಲೆ ಹಣ ಖರ್ಚು ಮಾಡುತ್ತೀರಿ. ಆದರೆ, ನಿಮಗೆ ಮಕ್ಕಳಿಗೆ ಸರಿಯಾದ ಸಮವಸ್ತ್ರ, ಶೂ ಕೊಡ್ಲಿಕ್ಕೆ ದುಡ್ಡಿಲ್ಲ ಅಲ್ವಾ? ಅಧಿಕಾರಿಗಳಿಗೆ ನಾಚಿಕೆ ಆಗಬೇಕು, ಅವರಿಗೆ ಮಾನ ಮರ್ಯಾದೆಯೂ ಇಲ್ಲ, ಆತ್ಮಸಾಕ್ಷಿಯೂ ಇಲ್ಲ: ಹೀಗೆ ರಾಜ್ಯ ಹೈಕೋರ್ಟ್ ಮಂಗಳವಾರ ಸರ್ಕಾರವನ್ನು ಕಟುವಾಗಿ ಟೀಕಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳ ಮಕ್ಕಳಿಗೆ ಎರಡು ಜೊತೆ ಸಮವಸ್ತ್ರ, ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡಬೇಕು ಎಂಬ ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಸಲ್ಲಿಸಲಾದ ನ್ಯಾಯಾಂಗ ನಿಂದನೆ ಅರ್ಜಿಯೊಂದರ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು. ನ್ಯಾಯಮೂರ್ತಿಗಳಾದ ಬಿ. ವೀರಪ್ಪ ಮತ್ತು ಕೆ.ಎಸ್ ಹೇಮಲೇಖಾ ಅವರ ನೇತೃತ್ವದ ವಿಭಾಗೀಯ ಪೀಠವು ಸರ್ಕಾರ ಮತ್ತು ಅಧಿಕಾರಿಗಳನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.
ಕೋರ್ಟ್‌ನ ಮೂಲ ಆದೇಶ ಏನಿತ್ತು?
ಆರ್‌ಟಿಇ ಕಾಯಿದೆ ಸೆಕ್ಷನ್ 3ರ ಅಡಿ ಸರ್ಕಾರಿ ಶಾಲೆಗಳಲ್ಲಿ ಪ್ರಾಥಮಿಕ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಎರಡು ಜೊತೆ ಸಮವಸ್ತ್ರ ನೀಡುವುದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಹೊಣೆಗಾರಿಕೆಯಾಗಿದೆ. ಶೂ ಧರಿಸುವ ನಿಯಮ ಯಾವ ಶಾಲೆಗಳಲ್ಲಿ ಇದೆಯೋ ಅಲ್ಲಿ ಒಂದು ಜೊತೆ ಶೂ ಮತ್ತು ಎರಡು ಜೊತೆ ಕಾಲು ಚೀಲ ನೀಡುವ ಹೊಣೆಗಾರಿಕೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮೇಲಿದೆ ಎಂದು ನ್ಯಾಯಾಲಯ ಹೇಳಿತ್ತು. ಆದರೆ, ಈ ಆದೇಶ ಪಾಲನೆಯಾಗಿಲ್ಲ ಎನ್ನುವುದು ನ್ಯಾಯಾಂಗ ನಿಂದನೆ ಅರ್ಜಿಯ ವಾದವಾಗಿತ್ತು.
ಅರ್ಜಿಯನ್ನು ಗಂಭೀರವಾಗಿ ಪರಿಗಣಿಸಿದ ಕೋರ್ಟ್ ಸರ್ಕಾರವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿತು. “ಅಧಿಕಾರಿಗಳಿಗೆ ಮಾನ ಮರ್ಯಾದೆ ಇದ್ದರೆ, ಆತ್ಮಸಾಕ್ಷಿ ಇದ್ದರೆ ಸಮವಸ್ತ್ರ, ಶೂ ಹಾಗೂ ಕಾಲು ಚೀಲ ವಿತರಿಸಲು ಹೇಳಿ. ಆರ್‌ಟಿಇ ಕಾಯಿದೆ ಮತ್ತು ಸಂವಿಧಾನದ ಅಡಿ ಅದನ್ನು ಜಾರಿ ಮಾಡಬೇಕು. ಇದಕ್ಕಾಗಿ ಮೊದಲಿಗೆ ರಿಟ್ ಅರ್ಜಿ, ಆನಂತರ ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳಿಗೆ ಮಾನ ಮರ್ಯಾದೆ ಇಲ್ಲವೇ? ಏನೇನಕ್ಕೋ ಕೋಟಿ ಗಟ್ಟಲೇ ಖರ್ಚು ಮಾಡುತ್ತೀರಿ. ಮಕ್ಕಳ ಹಕ್ಕು, ಶಿಕ್ಷಣ ವಿಚಾರದಲ್ಲಿ ನಾವು ಇದನ್ನು ಸಹಿಸುವುದಿಲ್ಲ. ಅಂಥ ಅಧಿಕಾರಿಗೆ ಹುದ್ದೆಗೆ ಸಿಗಬಾರದು. ಮಕ್ಕಳ ರಕ್ತ ಹೀರುತ್ತೀರಿ, ಮಕ್ಕಳ ರಕ್ತ ಮತ್ತು ಚರ್ಮ ಕಿತ್ತು ತಿನ್ನುವುದು ಮಾತ್ರ ಬಾಕಿ ಉಳಿಸಿದ್ದೀರಿ. ಇದನ್ನು ನೋಡಿದರೆ ನಮಗೆ ನೋವಾಗುತ್ತದೆ. ರಿಟ್ ಅರ್ಜಿಯಿಂದ ಆದೇಶ, ಆನಂತರ ನ್ಯಾಯಾಂಗ ನಿಂದನೆ ಅರ್ಜಿ ದಾಖಲಾಗಿದೆ. ಇದಕ್ಕಿಂತ ನಾಚಿಕೆ ಏನಿದೆ. ಇದು ಸರ್ಕಾರಕ್ಕೆ ನಾಚಿಕೆ ಉಂಟು ಮಾಡುವುದಿಲ್ಲವೇ? ಸಮವಸ್ತ್ರ ಕೊಟ್ಟರೆ ಕೊಡಿ, ಇಲ್ಲ ಆಗಲ್ಲ ಎಂದು ಹೇಳಿ. ನ್ಯಾಯಾಲಯದ ಆದೇಶವನ್ನು ನೀವು (ಸರ್ಕಾರ) ಪ್ರಶ್ನಿಸಬೇಕು. ಸಾಂವಿಧಾನಿಕ ಹೊಣೆಗಾರಿಕೆ, ಆರ್‌ಟಿಇ ಕಾಯಿದೆ ಜಾರಿ ಮಾಡಲ್ಲ ಎಂದು ಅಫಿಡವಿಟ್ ಹಾಕಿ. ಇದು ದುರದೃಷ್ಟಕರ” ಎಂದು ಪೀಠವು ಮೌಖಿಕವಾಗಿ ಹೇಳಿತು.
ವಿಚಾರಣೆಯ ವೇಳೆ ನ್ಯಾಯಾಲಯ ಹೇಳಿದ್ದೇನು?
-ಕಿರಣ್ ಕುಮಾರ್ ಅವರು ಸರ್ಕಾರದ ವಕೀಲರು. ಆದರೆ, ತಮ್ಮ ಮಕ್ಕಳನ್ನು ಸರ್ಕಾರದ ಶಾಲೆ ಕಳುಹಿಸುವುದಿಲ್ಲ. ಖಾಸಗಿ ಕಳುಹಿಸುತ್ತಾರೆ. ನಾವೆಲ್ಲರೂ ಸರ್ಕಾರದ ಶಾಲೆಗಳಲ್ಲೇ ಓದಿದ್ದು.
-ನೀವು (ಸರ್ಕಾರ) ಎರಡು ಜೊತೆ ಸಮವಸ್ತ್ರಕ್ಕೆ ಹಣ ಕಳುಹಿಸಿರುವುದಾಗಿ ಹೇಳುತ್ತೀರಿ. ಇಲ್ಲಿ ಒಂದು ಜೊತೆಗೆ ಮಾತ್ರ ಇದೆ. ಬಹುಶಃ ಒಂದು ಜತೆಯಲ್ಲಿ ಒಂದು ಬಟ್ಟೆಯಿರುವುದಿಲ್ಲ. ಇನ್ನೊಂದರಲ್ಲಿ ಮತ್ತೊಂದಿರುವುದಿಲ್ಲ. ಹೀಗಾಗಿರಬಹುದು. ಒಂದು ಸಾಕ್ಸ್ ಮತ್ತು ಒಂದು ಶೂಗೆ ಹಣ ಕಳುಹಿಸಿರಬೇಕು ಎಂದು ವ್ಯಂಗ್ಯ.
-ಸಮವಸ್ತ್ರ, ಶೂ-ಕಾಲುಚೀಲ ವಿತರಣೆಗೆ ಸಂಬಂಧಿಸಿದ ಅಧಿಕಾರಿ ಯಾರು? ಕಾವೇರಿ ಅವರೇ? ನಾವು ಅವರ ವಿರುದ್ಧ ಆರೋಪ ನಿಗದಿ ಮಾಡುತ್ತೇವೆ.
-ಸಮವಸ್ತ್ರ ವಿತರಿಸಲು, ಶೂ-ಕಾಲು ಚೀಲ ನೀಡಲು ಶಾಲೆಯ ಮುಖ್ಯ ಶಿಕ್ಷಕರಿಗೆ ಹಣ ವರ್ಗಾವಣೆ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ. ಸರ್ಕಾರ ಸುತ್ತೋಲೆ ಹೊರಡಿಸಿದೆ. ಈಗ ಕೊಟ್ಟರೆ ಕೊಟ್ಟರು, ಬಿಟ್ಟರೆ ಬಿಟ್ಟರು. ಇದರ ಮೇಲೆ ನಿಗಾ ಇಡುವವರು ಯಾರು? ಇದರ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಅಥವಾ ತಹಶೀಲ್ದಾರ್‌ಗೆ ಜವಾಬ್ದಾರಿ ನೀಡಿದ್ದೀರಾ? ಈ ಯೋಜನೆಯ ರಾಜ್ಯ ನಿರ್ದೇಶಕರು ಯಾರು? ಪ್ರತಿ ತಾಲ್ಲೂಕಿನಲ್ಲಿ ಇದ್ದಾರೆಯೇ? ಒಂದು ಜೊತೆ ಸಮವಸ್ತ್ರದಂತೆ ರಾಜ್ಯದಲ್ಲಿ ಅಂದಾಜು 126 ಲಕ್ಷ ಮೀಟರ್ ಬಟ್ಟೆ ಬೇಕಾಗುತ್ತದೆ ಎಂದು ಹೇಳಲಾಗಿದೆ. ಬಟ್ಟೆ ಹೊಲಿಯಲು ಹಣ ಯಾರು ಕೊಡುತ್ತಾರೆ? ಮಕ್ಕಳ ಪೋಷಕರೇ ಕೊಡಬೇಕೆ? ಕೊಟ್ಟರೆ ಕೊಡಬೇಕು ಇಲ್ಲವಾದರೆ ಬೇಡ. ಅರ್ಧಂಬರ್ಧ ಸಾಯಿಸಬೇಡಿ. ಪೂರ್ತಿಯಾಗಿ ಸಾಯಿಸಿಬಿಡಿ. ಮಕ್ಕಳ ಶೈಕ್ಷಣಿಕ ಬದುಕನ್ನು ಹೀಗೆ ಮಾಡಿದರೆ ಏನು ಕತೆ?
-ಮಕ್ಕಳ ಮಧ್ಯೆ ತಾರತಮ್ಯ ಉಂಟು ಮಾಡಬಾರದು. ಒಂದು ಬಾರಿ ಅವರ ಮನಸ್ಸು ಹಾಳಾದರೆ ಜೀವನಪೂರ್ತಿ ಅವರು ಯಾತನೆಗೆ ಸಿಲುಕುತ್ತಾರೆ. ಏಕೆ ಸರಿಯಾದ ರೀತಿಯಲ್ಲಿ ಸಮವಸ್ತ್ರ ನೀಡಿಲ್ಲ ಎಂದು ಆಕೆಯನ್ನು (ಅಧಿಕಾರಿ ಕಾವೇರಿ) ಕೇಳಿ. ಅವರ ವಿರುದ್ಧ ಆರೋಪ ನಿಗದಿ ಮಾಡುತ್ತೇವೆ.
-ಈಚೆಗೆ 520 ಮಕ್ಕಳು ಕಲಿಯುವ ಸರ್ಕಾರಿ ಶಾಲೆಗೆ ಭೇಟಿ ನೀಡಿದ್ದೆ. ಅಲ್ಲಿ ಒಂದೇ ಒಂದು ಶೌಚಾಲಯ ಇತ್ತು. ಅದರಲ್ಲೂ ಗಿಡ-ಗಂಟಿ ಬೆಳೆದು ಮಕ್ಕಳು ಅದನ್ನು ಬಳಸಲು ಹೆದರುತ್ತಿದ್ದರು. ಹಾವು ಬರುತ್ತದೆ ಎಂದು. ಕೊನೆಗೆ ನಾವೇ ಅದನ್ನು ಸ್ವಚ್ಛಗೊಳಿಸಿದೆವು. ಈ ಕೆಲಸ ಮಾಡಿ 40 ವರ್ಷಗಳಾಗಿತ್ತು. ಇದನ್ನು ನಾವು ಮಾಡಿದೆವು. ಇವರಿಗೆ ನಾಚಿಕೆ ಆಗಬೇಕು. ಮಾನ-ಮಾರ್ಯಾದೆ ಏನೂ ಇಲ್ಲ. ಉತ್ಸವಗಳನ್ನು, ಎಲ್ಲವನ್ನೂ ಮಾಡುತ್ತಾರೆ.
ಇದನ್ನೂ ಓದಿ : Bombay High court : ಅರ್ಜಿ ವರ್ಗಾವಣೆ ಮಾಡುವಾಗ ಪತ್ನಿಯ ಅನುಕೂಲತೆಯೇ ಪ್ರಮುಖ ಎಂದ ಬಾಂಬೆ ಹೈಕೋರ್ಟ್