Site icon Vistara News

High Court order : ಅನಧಿಕೃತವಾಗಿ ಗೈರು ಹಾಜರಾದರೂ ಬಡ್ಡಿಸಹಿತ ವೇತನ ನೀಡಲು ಕೋರ್ಟ್‌ ಆದೇಶ; ಕಾರಣವೇನು?

high court cancels acquttal of rape victim

high court cancels acquttal of rape victim

ಬೆಂಗಳೂರು: ಅವರು ಶಾಲೆಯೊಂದರಲ್ಲಿ ದ್ವಿತೀಯ ದರ್ಜೆ ಸಹಾಯಕ. ಅವರು ಒಂದು ವರ್ಷ ಕಾಲ ಅನಧಿಕೃತವಾಗಿ ಕೆಲಸಕ್ಕೆ ಗೈರು ಹಾಜರಾಗಿದ್ದಾರೆ ಎಂಬ ಆರೋಪವಿತ್ತು. ಆದರೆ, ಹೈಕೋರ್ಟ್‌ (High Court order) ಮಾತ್ರ ಅವರ ವೇತನವನ್ನು ಬಡ್ಡಿಸಹಿತ ಪಾವತಿ ಮಾಡಬೇಕು ಎಂದು ಆದೇಶಿಸಿದೆ. ಏನಿದು ವಿಚಿತ್ರ ಅಂತೀರಾ? ಈ ವರದಿಯನ್ನು ಪೂರ್ತಿಯಾಗಿ ಓದಿ!

ಕಾಂತರಾಜು ಎಂಬವರು ಬೆಂಗಳೂರಿನ ಭಗಿನಿ ನಿವೇದಿತಾ ಪ್ರೌಢಶಾಲೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಶಿಕ್ಷಣ ಇಲಾಖೆಯು 2009ರಲ್ಲಿ ಅವರನ್ನು ಬೊಮ್ಮಸಂದ್ರದ ಶ್ರೀ ರಾಘವೇಂದ್ರ ಆಶ್ರಮ ಶಾಲೆಗೆ ವರ್ಗಾಯಿಸಿತ್ತು. 2009ರ ಫೆಬ್ರವರಿ 2ರ ಒಂದು ದಿನ ಶಾಲೆಗೆ ಹೋಗಿದ್ದ ಕಾಂತರಾಜು ನಂತರ ಒಂದಿಡೀ ವರ್ಷ (2009ರ ಫೆಬ್ರವರಿ 2ರಿಂದ 2010ರ ಫೆಬ್ರವರಿ 15ರವರೆಗೆ) ಶಾಲೆಗೆ ಹೋಗಿರಲೇ ಇಲ್ಲ! ಅದಾದ ಬಳಿಕ ಮತ್ತೆ ಕೆಲಸಕ್ಕೆ ಹೋಗಿದ್ದರು.

ಈ ಒಂದು ವರ್ಷದ ಅವಧಿಯಲ್ಲಿ ಶಿಕ್ಷಣ ಇಲಾಖೆ ಅವರ ಗೈರುಹಾಜರಾತಿಯನ್ನು ಗಮನಿಸಿ ಅನಧಿಕೃತ ಗೈರು ಎಂದು ಪರಿಗಣಿಸಿ ಯಾವುದೇ ವೇತನ ನೀಡಿರಲಿಲ್ಲ. ಇದಾಗಿ ನಾಲ್ಕು ವರ್ಷಗಳು ಕಳೆದ ಮೇಲೆ ಅಂದರೆ 2014ರ ಮಾರ್ಚ್‌ 14 ಮತ್ತು ಸೆಪ್ಟೆಂಬರ್‌ 30ರಂದು ಕಾಂತರಾಜು ಅವರು ಬೆಂಗಳೂರು ಉತ್ತರ ತಾಲೂಕಿನ ಡಿಡಿಪಿಐ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗೆ ಒಂದು ಮನವಿ ಪತ್ರ ಸಲ್ಲಿಸುತ್ತಾರೆ.

ಅದರಲ್ಲಿ, ನಾನು 2009ರ ಫೆಬ್ರವರಿ 2ರಿಂದ 2020ರ ಫೆಬ್ರವರಿ 15ರವರೆಗೆ ರಜೆಯ ಮೇಲೆ ತೆರಳಿದ್ದೆ. ಆದರೆ, ನಾನು ಅನಧಿಕೃತವಾಗಿ ಗೈರಾಗಿದ್ದೇನೆ ಎಂದು ಪರಿಗಣಿಸಿ ವೇತನ ನೀಡಿಲ್ಲ. ಆದ್ದರಿಂದ, ವೇತನ ಮತ್ತು ಭತ್ಯೆ ಪಾವತಿಸಲು ಆದೇಶಿಸಬೇಕು ಎಂದು ಮನವಿ ಮಾಡಿದ್ದರು. ಆದರೆ, ಶಿಕ್ಷಣಾಧಿಕಾರಿ ಇದನ್ನು ಪರಿಗಣಿಸುವುದಿಲ್ಲ. ಆಗ ಕಾಂತರಾಜು 2015ರಲ್ಲಿ ಹೈಕೋರ್ಟ್‌ ಮೆಟ್ಟಿಲೇರಿದ್ದರು!

ಮುಖ್ಯ ಶಿಕ್ಷಕರದೇ ತಪ್ಪು ಎಂದ ಕೋರ್ಟ್

‌ಕಾಂತರಾಜು ಅವರ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಮೂರ್ತಿ ಅಲೋಕ್ ಅರಾಧೆ ಅವರ ನೇತೃತ್ವದ ವಿಭಾಗೀಯ ಪೀಠವು ಈ ಪ್ರಕರಣದಲ್ಲಿ ಮುಖ್ಯ ಶಿಕ್ಷಕರದೇ ತಪ್ಪು ಎಂದಿತು. ಒಂದು ವೇಳೆ ಕಾಂತರಾಜು ನಿರ್ದಿಷ್ಟ ಸಮಯದಲ್ಲಿ ಅನಧಿಕೃತವಾಗಿ ಕರ್ತವ್ಯಕ್ಕೆ ಹಾಜರಾಗಿದ್ದರೆ ಆಶ್ರಮ ಶಾಲೆಯ ಮುಖ್ಯ ಶಿಕ್ಷಕರು ಶಿಸ್ತುಕ್ರಮ ಜರುಗಿಸಬೇಕಿತ್ತು. ಆದರೆ, ಅವರು ಈ ಕೆಲಸ ಮಾಡಿಲ್ಲ. ಮುಖ್ಯ ಶಿಕ್ಷಕರು ಕಾಂತರಾಜು ಗೈರಾಗಿದ್ದ ದಿನಗಳ ವಿಚಾರದಲ್ಲಿ ಕೇವಲ ಎರಡು ತಿಂಗಳಿಗಷ್ಟೇ ಬಿಲ್ ನೀಡಿದ್ದಾರೆ. ಉಳಿದ ದಿನಗಳಿಗೆ ಬಿಲ್ ಸೃಜನೆ ಮತ್ತು ರಜೆ ಮಂಜೂರಾತಿ ವಿಚಾರದಲ್ಲಿ ಏನು ಮಾಡಬೇಕು ಎಂದು ಶಿಕ್ಷಣಾಧಿಕಾರಿ ಬಳಿಯೂ ಕೇಳಿಲ್ಲ. ಇಲ್ಲಿ ಮುಖ್ಯ ಶಿಕ್ಷಕರ ಕಡೆಯಿಂದ ಲೋಪವಾಗಿದೆ ಎಂದು ಕೋರ್ಟ್‌ ಅಭಿಪ್ರಾಯಪಟ್ಟಿತು.

ಹೀಗಾಗಿ ಕಾಂತರಾಜು ಅವರಿಗೆ ಬಾಕಿ ಉಳಿದ ಎಲ್ಲ ವೇತನವನ್ನು ನೀಡಬೇಕು ಮತ್ತು ಶೇ.8ರಷ್ಟು ಬಡ್ಡಿಯನ್ನೂ ನೀಡಬೇಕು ಎಂದು ಮುಖ್ಯ ಶಿಕ್ಷಕರಿಗೆ 2020ರ ಡಿಸೆಂಬರ್‌ 2ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮುಖ್ಯ ಶಿಕ್ಷಕರು ಮೇಲ್ಮನವಿ ಸಲ್ಲಿಸಿದ್ದರು.

ಆದರೆ ಹೈಕೋರ್ಟ್‌ ಮುಖ್ಯ ಶಿಕ್ಷಕರ ಮೇಲ್ಮನವಿಯನ್ನೇ ವಜಾ ಮಾಡಿತು. ಕಾಂತರಾಜು ಅನಧಿಕೃತವಾಗಿ ಗೈರಾಗಿದ್ದರು ಎಂದು ನೀವು ಹೇಳುವುದಾದರೆ ಆ ಅವಧಿಗೆ ಸಂಬಂಧಿಸಿ ನೀವು ಶಿಸ್ತುಕ್ರಮ ಜರುಗಿಸಬೇಕಿತ್ತು. ನೀವು ಯಾವುದೇ ಕ್ರಮ ಜರುಗಿಸದ ಹಿನ್ನೆಲೆಯಲ್ಲಿ ಅನಧಿಕೃತವಾಗಿ ಗೈರಾಗಿದ್ದಾರೆ ಎಂದು ಹೇಗೆ ಹೇಳುವುದು ಎಂದು ಪ್ರಶ್ನಿಸಿತು ಮತ್ತು ಉದ್ಯೋಗಿಯು ಸೇವೆಯಲ್ಲಿ ಮುಂದುವರಿಯುವವರೆಗೆ, ವೇತನ ಪಡೆಯಲು ಅರ್ಹರಾಗಿರುತ್ತಾರೆ, ಹೀಗಾಗಿ ಕಾಂತರಾಜುಗೆ ವೇತನ ಪಾವತಿಸಬೇಕು ಎಂದು ನಿರ್ದೇಶಿಸಿತು. ಹೀಗೆ ಸಣ್ಣ ಪುಟ್ಟ ದೋಷಗಳು ಹೇಗೆ ಕಾನೂನಿನ ಸಿಕ್ಕಿನಲ್ಲಿ ಸಿಕ್ಕಿಬೀಳುತ್ತವೆ ಎನ್ನುವುದು ತಿಳಿಯಿತು.

ಇದನ್ನೂ ಓದಿ : ವೃತ್ತಿಪರ ಭಿಕ್ಷುಕನಾಗಿದ್ದರೂ ಹೆಂಡತಿಗೆ ಜೀವನಾಂಶ ನೀಡಲೇಬೇಕು: ಹೈಕೋರ್ಟ್

Exit mobile version