ಬೆಂಗಳೂರು: ಅಧಿಕಾರಸ್ಥರು ತಮ್ಮ ನಿಷ್ಠಾವಂತರು ಮತ್ತು ಬೆಂಬಲಿಗರಿಗೆ ನಾನಾ ಹುದ್ದೆಗಳ ಹೆಸರಿನಲ್ಲಿ ಸಂಪುಟ ದರ್ಜೆ ಸ್ಥಾನಮಾನ ನೀಡುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿ ಹೈಕೊರ್ಟ್‌ಗೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಅದರಲ್ಲೂ ಮುಖ್ಯವಾಗಿ ತಮ್ಮ ಬೆಂಬಲಿಗರಿಗೆ ಲಾಭದಾಯಕ ಹುದ್ದೆ ಕೊಡಿಸಬೇಕು ಎಂಬ ಪ್ರಯತ್ನದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಸಲಹೆಗಾರ ಮೊದಲಾದ ಹುದ್ದೆಗಳನ್ನು ಸೃಷ್ಟಿಸುತ್ತಿರುವುದನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ.
ಈ ರೀತಿ ಹೊಸ ಹುದ್ದೆ ಸೃಷ್ಟಿಸಿ ಸಂಪುಟ ದರ್ಜೆಯ ಸ್ಥಾನಮಾನ ನೀಡಿರುವ ಕ್ರಮದ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ನೋಟಿಸ್ ನೀಡಲಾಗಿದೆ.
ಸಮಾಜ ಪರಿವರ್ತನಾ ಸಮುದಾಯ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್.ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿದೆ.
ಪ್ರತಿವಾದಿಗಳಾಗಿರುವ ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್, ಬೇಳೂರು ಸುದರ್ಶನ್ ಮತ್ತು ಕೇದಾರನಾಥ ಮುದ್ದಾ ಅವರಿಗೆ ನೋಟಿಸ್ ಜಾರಿಗೊಳಿಸಿ, ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದೆ.
ಯಾರ್ಯಾರಿಗೆ ಹುದ್ದೆ ನೀಡಲಾಗಿದೆ?
ಶಾಸಕ ಎಂ ಪಿ ರೇಣುಕಾಚಾರ್ಯ, ಮಾಜಿ ಶಾಸಕ ಡಿ ಎನ್ ಜೀವರಾಜ್ ಅವರನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದೆ. ಬೇಳೂರು ಸುದರ್ಶನ್ (ಇ-ಆಡಳಿತ ವಿಭಾಗ) ಮತ್ತು ಕೇದಾರನಾಥ ಮುದ್ದಾ (ವಾಣಿಜ್ಯ ಕೈಗಾರಿಕೆ ಇಲಾಖೆಯ) ಅವರನ್ನು ಮುಖ್ಯಮಂತ್ರಿಗಳ ಸಲಹೆಗಾರರನ್ನಾಗಿ ನೇಮಕ ಮಾಡಲಾಗಿದೆ. ಅವರಿಗೆ ಸಚಿವ ಸಂಪುಟ ದರ್ಜೆಯ ಸ್ಥಾನ ಮಾನ ನೀಡಲಾಗಿದೆ. ಈ ರೀತಿ ರಾಜಕೀಯ ಕಾರ್ಯದರ್ಶಿಗಳು ಹಾಗೂ ಸಲಹೆಗಾರರನ್ನಾಗಿ ನೇಮಕ ಮಾಡಿರುವ ಸರ್ಕಾರದ ಕ್ರಮ ಸಂವಿಧಾನಬಾಹಿರವಾಗಿದೆ ಎಂದು ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿದ್ದಾರೆ.
ನಾಲ್ಕು ಹುದ್ದೆ ರದ್ದತಿಗೆ ಕೋರಿಕೆ
ರಾಜ್ಯ ಸರ್ಕಾರ ತನ್ನ ನಿಷ್ಠಾವಂತ ಕಾರ್ಯಕರ್ತರು ಹಾಗೂ ಬೆಂಬಲಿಗರಿಗೆ ಸಚಿವ ಸಂಪುಟ ದರ್ಜೆಗೆ ಸಮಾನವಾದ ಹುದ್ದೆ ಕಲ್ಪಿಸುವುದು ರಾಜಕೀಯ ತಂತ್ರಗಾರಿಕೆ ಭಾಗ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ. ಆದ್ದರಿಂದ, ನೂತನವಾಗಿ ಸೃಷ್ಟಿ ಮಾಡಿರುವ ಈ ನಾಲ್ಕು ಹುದ್ದೆಗಳನ್ನು ರದ್ದುಪಡಿಸಬೇಕು ಎನ್ನುವುದು ಅರ್ಜಿದಾರರ ವಾದವಾಗಿದೆ.
ಇದನ್ನೂ ಓದಿ : Assembly session : ಮಹಿಳಾ ಕಾರ್ಮಿಕರ ಸಹಾಯಧನ 500ರಿಂದ 1000 ರೂ.ಗೆ ಹೆಚ್ಚಳ, ಸ್ಕೂಲ್ ಬಸ್ 1000ದಿಂದ 2000: ಸಿಎಂ