Site icon Vistara News

Bharat jodo ಯಾತ್ರೆಯ ಹಾಡಿನಿಂದ ಕೆಜಿಎಫ್‌-2 ಸಂಗೀತ ತೆಗೆಯದೆ ನ್ಯಾಯಾಂಗ ನಿಂದನೆ: ರಾಹುಲ್‌, ಇತರರಿಗೆ ನೋಟಿಸ್‌

ಭಾರತ್‌ ಜೋಡೊ ಯಾತ್ರೆಯಲ್ಲಿ ರಾಹುಲ್‌ ಗಾಂಧಿ, ಸ್ವರ ಭಾಸ್ಕರ್‌

ಬೆಂಗಳೂರು: ಕಾಂಗ್ರೆಸ್‌ನ ಭಾರತ್‌ ಜೋಡೊ ಯಾತ್ರೆಗೆ (Bharat jodo) ಸಂಬಂಧಿಸಿ ರೂಪಿಸಲಾದ ಹಾಡಿನಲ್ಲಿ ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತವನ್ನು ಬಳಸಿರುವ ವಿವಾದಕ್ಕೆ ಸಂಬಂಧಿಸಿ ಸಂಗೀತವನ್ನು ತೆಗೆಯುವಂತೆ ಕೋರ್ಟ್‌ ಆದೇಶಿಸಿತ್ತು. ಆದರೆ, ಹೈಕೋರ್ಟ್‌ನ ವಿಭಾಗೀಯ ಪೀಠದ ಆದೇಶವನ್ನು ಪಾಲಿಸಿಲ್ಲ ಎಂದು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಅರ್ಜಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಹಾಗೂ ಪಕ್ಷದ ಮುಖಂಡರಿಗೆ ಶುಕ್ರವಾರ ನೋಟಿಸ್‌ ಜಾರಿ ಮಾಡಿದೆ.

ಕಾಂಗ್ರೆಸ್‌ ಪಕ್ಷವು ನ್ಯಾಯಾಲಯದ ಆದೇಶವನ್ನು ಪಾಲಿಸಿಲ್ಲ. ತನ್ನ ಎಲ್ಲಾ ಸಾಮಾಜಿಕ ಜಾಲತಾಣಗಳ ಖಾತೆಯಿಂದ ಕೆಜಿಎಫ್‌-2 ಸಿನಿಮಾದ ಮುದ್ರಿತ ಸಂಗೀತ ತೆರವು ಮಾಡಿಲ್ಲ. ಬದಲಿಗೆ ಹೆಚ್ಚುವರಿಯಾಗಿ ಸಂಗೀತ ಬಳಸಿದೆ ಎಂದು ಆಕ್ಷೇಪಿಸಿ ಎಆರ್‌ಟಿ ಮ್ಯೂಸಿಕ್‌ ನ್ಯಾಯಾಂಗ ನಿಂದನೆಗೆ ಅರ್ಜಿ ಸಲ್ಲಿಸಿತ್ತು.

ಈ ಸಂಬಂಧ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಲ್ಲದೆ ಪಕ್ಷದ ಪ್ರಧಾನ ಕಾರ್ಯದರ್ಶಿ ಮತ್ತು ಮಾಧ್ಯಮ ವಿಭಾಗದ ಮುಖ್ಯಸ್ಥ ಜೈರಾಮ್‌ ರಮೇಶ್‌ ಮತ್ತು ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ಸುಪ್ರಿಯಾ ಶ್ರೀನಾಥೆ ಅವರಿಗೆ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನೋಟಿಸ್‌ ಜಾರಿ ಮಾಡಿದೆ.

ಎಆರ್‌ಟಿ ಮ್ಯೂಸಿಕ್‌ ಪರ ವಕೀಲ ಎಂ ಪ್ರಣವ್‌ ಕುಮಾರ್‌ ಅವರ ವಾದ ಆಲಿಸಿದ ಪೀಠವು ಪ್ರತಿವಾದಿಗಳಿಗೆ ನೋಟಿಸ್‌ ಜಾರಿ ಮಾಡಿತು. ಅಲ್ಲದೇ, ಅರ್ಜಿಯ ವಿಚಾರಣೆಯನ್ನು ೨೦೨೩ರ ಜನವರಿ 12ಕ್ಕೆ ಮುಂದೂಡಿತು.

ಇದನ್ನೂ ಓದಿ | Bharat Jodo Yatra| ಭಾರತ್​ ಜೋಡೋ ಯಾತ್ರೆಯಲ್ಲಿ ಕಾಲ್ತುಳಿತ; ಕೆ ಸಿ ವೇಣುಗೋಪಾಲ್​​ಗೆ ಗಾಯ

Exit mobile version