ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನಲ್ಲಿ ವಿಧಾನಸಭೆ ಚುನಾವಣೆ (Karnataka Election) ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಪಕ್ಷಗಳ ಪ್ರಚಾರ ಜೋರಾಗಿಯೇ ಸಾಗುತ್ತಿದೆ. ಏತನ್ಮಧ್ಯೆ ಅಭ್ಯರ್ಥಿಗಳ ಆಯ್ಕೆ ಬಗ್ಗೆಯೂ ಭಾರಿ ಚರ್ಚೆ ನಡೆಯುತ್ತಿದೆ. ಈ ನಡುವೆ ಹೈಕೋರ್ಟ್ ವಕೀಲ ನಾಗೇಂದ್ರ ನಾಯ್ಕ್ ಅವರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಲಿದ್ದಾರೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಮಾತ್ರ ಈವರೆಗೆ ತನ್ನ ಅಭ್ಯರ್ಥಿಯನ್ನು ಘೋಷಣೆ ಮಾಡಿತ್ತು. ಇನ್ನು ಬಿಜೆಪಿಯಿಂದ ಹಾಲಿ ಶಾಸಕ ಸುನಿಲ್ ನಾಯ್ಕರೇ ಸ್ಪರ್ಧಿಸುತ್ತಾರೆ ಎನ್ನುವ ಮಾತುಗಳಿದ್ದರೂ ಬಿಜೆಪಿಯ ಅಂತಿಮ ಪಟ್ಟಿ ಇನ್ನೂ ಬಿಡುಗಡೆ ಆಗಿಲ್ಲ. ಜೆಡಿಎಸ್‌ನಿಂದ ಇನಾಯತ್ ಉಲ್ಲಾ ಶಾಬಂದ್ರಿಯವರೇ ಫೈನಲ್ ಎಂದು ಹೇಳುತ್ತಿರುವಾಗಲೇ ತಂಜೀಂ ಸಂಸ್ಥೆಯ ಮುಸ್ಲಿಂ ಅಭ್ಯರ್ಥಿ ಕಣಕ್ಕಿಳಿಸದಿರುವ ನಿರ್ಣಯ ಈ ಎಲ್ಲಾ ಬೆಳವಣಿಗೆಗಳ ಬುಡಮೇಲು ಮಾಡಿದೆ. ಇದೀಗ ಜೆಡಿಎಸ್ ಪಕ್ಷದಿಂದ ಹೊಸ ಅಭ್ಯರ್ಥಿಯ ಹುಡುಕಾಟವಾಗಿದೆ.
ಇದನ್ನೂ ಓದಿ | Congress Guarantee: ಕಾಂಗ್ರೆಸ್ ಗ್ಯಾರಂಟಿ ಯೋಜನೆಗೆ ಜಾರ್ಜ್ ಸೊರೊಸ್ ಹಣ ಕೊಡುತ್ತಾರೆಯೇ ಎಂದು ಪ್ರಶ್ನಿಸಿದ ಶೋಭಾ ಕರಂದ್ಲಾಜೆ
ಭಟ್ಕಳ ತಾಲೂಕಿನ ಸರ್ಪನಕಟ್ಟೆಯ ನಿವಾಸಿಯಾಗಿರುವ ಪ್ರಸ್ತುತ ಬೆಂಗಳೂರು ಹೈಕೋರ್ಟ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಖ್ಯಾತ ನ್ಯಾಯವಾದಿ ನಾಗೇಂದ್ರ ನಾಯ್ಕ್ ಅವರು ಜೆಡಿಎಸ್‌ನಿಂದ ಸ್ಪರ್ಧಿಸುತ್ತಿದ್ದಾರೆ ಎಂಬ ಮಾಹಿತಿ ದೊರಕಿದ್ದು, ಇನ್ನೇನು ಘೋಷಣೆ ಮಾತ್ರ ಬಾಕಿ ಉಳಿದಿದೆ ಎನ್ನಲಾಗಿದೆ.
ಹೈಕೋರ್ಟ್ ನ್ಯಾಯಮೂರ್ತಿಯಾಗಿ 3 ಬಾರಿ ಪುನರುಚ್ಛಾರ
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ವಕೀಲ ನಾಗೇಂದ್ರ ರಾಮಚಂದ್ರ ನಾಯ್ಕ್ ಅವರ ಹೆಸರನ್ನು ಸುಪ್ರೀಂ ಕೋರ್ಟ್ ಕೊಲಿಜಿಯಂ ಮೂರು ಬಾರಿ ಪುನರುಚ್ಚರಿಸಿತ್ತು. ಅವರ ಹೆಸರನ್ನು ಮೊದಲು 2019ರಲ್ಲಿ ಶಿಫಾರಸು ಮಾಡಲಾಗಿತ್ತು. ಬಳಿಕ 2021ರ ಮಾರ್ಚ್ ಮತ್ತು 2021ರ ಸೆಪ್ಟೆಂಬರ್‌ನಲ್ಲಿ ಅವರ ಹೆಸರನ್ನು ಎರಡು ಬಾರಿ ಪುನರುಚ್ಚರಿಸಲಾಗಿತ್ತು. ಇದಾದ ನಂತರ ಕಳೆದ ಜ.10ರಂದು ನಡೆದ ಸಭೆಯಲ್ಲಿ ಮರುಪರಿಶೀಲಿಸಿ, ವಕೀಲ ನಾಗೇಂದ್ರ ನಾಯ್ಕ್ ಅವರನ್ನು ನ್ಯಾಯಮೂರ್ತಿಯನ್ನಾಗಿ ಮಾಡುವ ಹಿಂದಿನ ಶಿಫಾರಸ್ಸನ್ನು ಪುನರುಚ್ಚರಿಸಲು ಸುಪ್ರೀಂ ಕೋರ್ಟ್ ಕೊಲಿಜಿಯಂ ನಿರ್ಧರಿಸಿತ್ತು.
ಇದನ್ನೂ ಓದಿ | Karnataka Election: ಸಿಎಂ ಬೊಮ್ಮಾಯಿಗೇ ಟಿಕೆಟ್ ಸಿಗುವುದು ಡೌಟು ಎಂದ ಕಾಂಗ್ರೆಸ್
ರಾಜ್ಯದಲ್ಲಿ ಹಲವು ವರ್ಷಗಳ ಕಾಲ ಸಿಬಿಐ ಪರ ವಕಾಲತ್ತು ವಹಿಸಿರುವ ನಾಗೇಂದ್ರ ಆರ್. ನಾಯ್ಕ್ ಅವರು ಸಿವಿಲ್, ಕ್ರಿಮಿನಲ್, ಭೂ ವಿವಾದ, ಬ್ಯಾಂಕಿಂಗ್ ಕಾನೂನು ಸೇರಿ ಹಲವು ವಿಷಯಗಳಲ್ಲಿ ಪರಿಣತಿ ಹೊಂದಿದ್ದಾರೆ. ಭಟ್ಕಳ ಮೂಲದ ನಾಗೇಂದ್ರ ನಾಯ್ಕ್ ಅವರು, ಬೆಂಗಳೂರು ವಿವಿಯಿಂದ ಕಾನೂನು ಪದವಿ ಪಡೆದಿದ್ದು, 1993ರಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ತೋಟಗಾರಿಕೆ ಮತ್ತು ಕೃಷಿಯಲ್ಲೂ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದು, ಬೆಂಗಳೂರಲ್ಲಿ ಯಶಸ್ವಿಯಾಗಿ ಪುಷ್ಪ ಕೃಷಿ ನಡೆಸುತ್ತಿದ್ದಾರೆ.