Site icon Vistara News

High Court : ಹೆಣ್ಮಕ್ಕಳಿಗೆ ಮದುವೆ ಆಗೋವರೆಗೂ ಅಪ್ಪನೇ ಜೀವನಾಂಶ ಕೊಡಬೇಕಾಗಿಲ್ಲ ಎಂದ ಹೈಕೋರ್ಟ್; ಏನು ವಿಷಯ?

Family alimony

ಬೆಂಗಳೂರು: ಹೆಣ್ಣು ಮಕ್ಕಳಿಗೆ ಮದುವೆ ಆಗುವವರೆಗೂ ಅಪ್ಪನೇ ಜೀವನಾಂಶ (Family alimony) ಕೊಡಬೇಕಾಗಿಲ್ಲ. ಅವರಿಗೆ 18 ವರ್ಷದವರೆಗೆ ಜೀವನಾಂಶ ಕೊಟ್ಟರೆ ಸಾಕು ಎಂಬ ವಿಶೇಷ ತೀರ್ಪನ್ನು ರಾಜ್ಯ ಹೈಕೋರ್ಟ್‌ (Karnataka High court) ನೀಡಿದೆ. ಇದು ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ (The Protection of Women from Domestic Violence Act, 2005) ಅಡಿ ದಾಖಲಾದ ಪ್ರಕರಣದ ವಿಚಾರಣೆಯ ಬಳಿಕ ನೀಡಿದ ತೀರ್ಪಿನ ಒಂದು ಭಾಗ.

ವ್ಯಕ್ತಿಯೊಬ್ಬರು ತನ್ನ ಹೆಂಡತಿಯಿಂದ ದೂರವಾಗಿದ್ದರು. ಈ ವಿಚ್ಛೇದನ ತೀರ್ಪಿನ ಸಂದರ್ಭದಲ್ಲಿ ಸೆಷನ್ಸ್‌ ನ್ಯಾಯಾಲಯ ಹೆಂಡತಿಗೆ ಮತ್ತು ಇಬ್ಬರು ಪುತ್ರಿಯರಿಗೆ ಜೀವನಾಂಶ ನೀಡುವಂತೆ ಸೂಚಿಸಿತ್ತು. ನಗರದ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯ, ಪುತ್ರಿಯರಿಗೆ ತಿಂಗಳಿಗೆ 4 ಸಾವಿರ ರೂ. ಮತ್ತು ಪತ್ನಿಗೆ ಒಂದು ಲಕ್ಷ ರೂ. ಜೀವನಾಂಶ ನೀಡುವಂತೆ ಪತಿಗೆ ಆದೇಶ ನೀಡಿತ್ತು. ಈ ಜೀವನಾಂಶ ಕಡಿಮೆಯಾಯಿತು ಎಂದು ಪತ್ನಿ ಹೈಕೋರ್ಟ್‌ಗೆ ಕ್ರಿಮಿನಲ್‌ ಮರು ಪರಿಶೀಲನಾ ಅರ್ಜಿ ಸಲ್ಲಿಸಿದ್ದರು. ಇದೀಗ ಹೈಕೋರ್ಟ್‌ ಇದೇ ಆದೇಶವನ್ನು ಕಾಯಂಗೊಳಿಸಿದೆ ಮತ್ತು ಪುತ್ರಿಯರಿಗೆ 18 ವರ್ಷದವರೆಗೆ ಜೀವನಾಂಶ ನೀಡಿದರೆ ಸಾಕಾಗುತ್ತದೆ ಎಂದು ಹೇಳಿದೆ.

ಏನಿದು ಪ್ರಕರಣ? ಏನಾಗಿತ್ತು ಸಂಸಾರದಲ್ಲಿ?

ಬೆಂಗಳೂರಿನ ರವಿಗೌಡ (53) ಮತ್ತು ಉಮಾ (48) ಅವರಿಗೆ 1998ರಲ್ಲಿ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಪುತ್ರಿಯರು. ಮುಂದೆ ರವಿ ವರದಕ್ಷಿಣೆಗೆ ಬೇಡಿಕೆಯಿಟ್ಟು ದೌರ್ಜನ್ಯ ಎಸಗುತ್ತಿದ್ದಾರೆ ಎಂದು ಆರೋಪಿಸಿ ಉಮಾ, ಕ್ರೌರ್ಯ/ಕೌಟುಂಬಿಕ ದೌರ್ಜನ್ಯ ಆರೋಪದಡಿ (ಐಪಿಸಿ ಸೆಕ್ಷನ್‌ 498ಎ) ದೂರು ನೀಡಿದ್ದರು.

ಪತಿ ತನಗೆ ಮತ್ತು ಮಕ್ಕಳಿಗೆ ಜೀವನಾಂಶ ನೀಡಬೇಕು. ಯಾವುದೇ ರೀತಿ ದೌರ್ಜನ್ಯ ಎಸಗಬಾರದು. ಪ್ರತ್ಯೇಕ ಮನೆ ಮಾಡಿಕೊಡಬೇಕು ಮತ್ತು ಜೀವನ ನಿರ್ವಹಣೆಗೆ 10 ಲಕ್ಷ ರು. ಜೀವನಾಂಶ ನೀಡಬೇಕು ಎಂದು ಕೋರಿ ಉಮಾ ಅವರು ‘ಕೌಟುಂಬಿಕ ದೌರ್ಜನ್ಯದಿಂದ ಮಹಿಳಾ ರಕ್ಷಣಾ ಕಾಯ್ದೆ-2005ರ’ ಸೆಕ್ಷನ್‌ 12ರ ಅಡಿಯಲ್ಲಿ ಮ್ಯಾಜಿಸ್ಪ್ರೇಟ್‌ ಕೋರ್ಟ್‌ಗೆ ಅರ್ಜಿ ಹಾಕಿದ್ದರು. ಪತ್ನಿಯ ಎಲ್ಲ ಆರೋಪಗಳನ್ನು ಪತಿ ನಿರಾಕರಿಸಿದ್ದರು.

ವಿಚಾರಣೆ ನಡೆಸಿದ್ದ ನಗರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ, ಹೆಣ್ಣು ಮಕ್ಕಳಿಬ್ಬರಿಗೂ ಮದುವೆಯಾಗುವ ತನಕ ಮಾಸಿಕ ತಲಾ ಐದು ಸಾವಿರ ರು. ಜೀವನಾಂಶ ನೀಡಬೇಕು. ದೌರ್ಜನ್ಯದಿಂದ ಪತ್ನಿಗೆ ಆಗಿರುವ ಹಾನಿಗೆ 5 ಲಕ್ಷ ರು. ಜೀವನಾಂಶ ನೀಡಬೇಕು ಎಂದು ರವಿಗೆ ಆದೇಶಿಸಿತ್ತು. ಇದರ ವಿರುದ್ಧ ರವಿ ಮೇಲ್ಮನವಿ ಸಲ್ಲಿಸಿದ್ದರು. ಆಗ ಕೋರ್ಟ್‌ ಪತ್ನಿಗೆ ನೀಡುವ ಜೀವನಾಂಶವನ್ನು ಒಂದು ಲಕ್ಷಕ್ಕೆ ಇಳಿಸಿತ್ತು. ಇದನ್ನು ಪ್ರಶ್ನಿಸಿ ಉಮಾ ಅವರು ಹೈಕೋರ್ಟ್‌ ಮೆಟ್ಟಿಲು ಹತ್ತಿದ್ದರು. ಕೋರ್ಟ್‌ ಉಮಾ ಅವರ ಅರ್ಜಿಯನ್ನು ವಜಾಗೊಳಿಸಿದೆ.

ಇದನ್ನೂ ಓದಿ: High Court : ಇಬ್ಬರು ಹೆಂಡಿರು, ಮಗುವನ್ನು ಕೊಂದರೂ ಗಲ್ಲು ಶಿಕ್ಷೆಯಿಂದ ಬಚಾವ್‌!; ಹಂತಕ ನೇಣಿಂದ ತಪ್ಪಿಸಿಕೊಂಡಿದ್ದು ಹೇಗೆ?

ಹೈಕೋರ್ಟ್‌ ಈ ಪ್ರಕರಣದಲ್ಲಿ ಹೇಳಿದ್ದೇನು?

  1. ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆಯ ಅಡಿ ಪುತ್ರಿಯರು ವಯಸ್ಕರಾಗುವವರೆಗೆ (18 ವರ್ಷ) ಮಾತ್ರ ತಂದೆ ಜೀವನಾಂಶ ಪಾವತಿಸಲು ಅವಕಾಶವಿದೆಯೇ ಹೊರತು ಮದುವೆ ಆಗುವ ತನಕ ಅಲ್ಲ.
  2. ಮತ್ತು ಉದ್ಯೋಗ ನಿರತ ತಾಯಿ ಸಹ ಮಕ್ಕಳ ಜೀವನ ನಿರ್ವಹಣೆಗೆ ಸಮಾನ ಜವಾಬ್ದಾರಿ ಹೊಂದಿರುತ್ತಾರೆ
  3. ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ ಪ್ರಕಾರ ಅವಿವಾಹಿತ ಹೆಣ್ಣು ಮಕ್ಕಳೆಲ್ಲರೂ ಜೀವನಾಂಶಕ್ಕೆ ಅರ್ಹರಲ್ಲ. ಕೇವಲ ನೊಂದ ವ್ಯಕ್ತಿಗಳು ಅಥವಾ 18 ವರ್ಷದೊಳಗಿನ ಮಕ್ಕಳು ಜೀವನಾಂಶ ಕೋರಬಹುದಾಗಿದೆ.
  4. ಹಿಂದೂ ದತ್ತು ಹಾಗೂ ನಿರ್ವಹಣೆ ಕಾಯ್ದೆ ಸೆಕ್ಷನ್‌ 20(3)ರ ಪ್ರಕಾರ ಒಂದು ವೇಳೆ ವಯಸ್ಕರಾದ ನಂತರವೂ ತಮ್ಮ ಜೀವನ ನಿರ್ವಹಣೆ ಮಾಡಿಕೊಳ್ಳಲು ಅಸಮರ್ಥರಾಗಿರುವ ಸಂದರ್ಭದಲ್ಲಿ ಪುತ್ರಿಯರು ತಂದೆಯಿಂದ ಜೀವನಾಂಶ ಕೋರಲು ಸ್ವತಂತ್ರರಾಗಿರುತ್ತಾರೆ.
  5. ಈ ಪ್ರಕರಣದಲ್ಲಿ ತಂದೆ-ತಾಯಿ ಶಿಕ್ಷಕರಾಗಿ ಉದ್ಯೋಗ ಮಾಡುತ್ತಿದ್ದಾರೆ. ಇದರಿಂದ ತಂದೆ ಮೇಲೆ ಮಾತ್ರ ಮಕ್ಕಳ ಜೀವನ ನಿರ್ವಹಣೆ ಜವಾಬ್ದಾರಿ ಇರುವುದಿಲ್ಲ. ತಾಯಿಯ ಮೇಲೂ ಜವಾಬ್ದಾರಿ ಇರುತ್ತದೆ.
  6. ಸೆಷನ್ಸ್‌ ನ್ಯಾಯಾಲಯದ ಆದೇಶದಂತೆ ತಂದೆ ನಾಲ್ಕು ಸಾವಿರ ನೀಡಿದರೆ, ಉಳಿದ ಮೊತ್ತವನ್ನು ತಾಯಿ ಭರಿಸಬೇಕಾಗುತ್ತದೆ.
  7. ತಂದೆಯು ಅರ್ಜಿ ದಾಖಲಾದ ದಿನದಿಂದ ತೀರ್ಪು ಹೊರಬಿದ್ದ ದಿನದವರೆಗೆ ಪುತ್ರಿಯರಿಗೆ ಮಾಸಿಕ ನಾಲ್ಕು ಸಾವಿರ ರು. ಜೀವನಾಂಶ ಪಾವತಿಸಬೇಕು.
  8. ಒಂದೊಮ್ಮೆ ಹೆಚ್ಚಿನ ಜೀವನಾಂಶ ಬೇಕಾಗಿದ್ದರೆ, ಪುತ್ರಿಯರು ಹಿಂದು ದತ್ತು ಹಾಗೂ ನಿರ್ವಹಣೆ ಕಾಯ್ದೆಯಡಿ ಕೋರಬಹುದು ಎನ್ನುವುದು ಕೋರ್ಟ್‌ ಆದೇಶದ ಸಾರಾಂಶ.
Exit mobile version