Site icon Vistara News

High court order : 81 ವರ್ಷದ ಹಲ್ಲೆ ಆರೋಪಿಗೆ ಒಂದು ವರ್ಷ ಅಂಗನವಾಡಿ ಸ್ವಯಂಸೇವಕನಾಗಿ ಕೆಲಸ ಮಾಡುವ ಶಿಕ್ಷೆ!

Education News Let the mindset of schools change HC refuses to quash student suicide case

ಬೆಂಗಳೂರು: ವಯೋವೃದ್ಧ ಹಲ್ಲೆ ಆರೋಪಿಗೆ ರಾಜ್ಯ ಹೈಕೋರ್ಟ್‌ ಅತ್ಯಂತ ಕುತೂಹಲಕಾರಿಯಾದ ಶಿಕ್ಷೆಯೊಂದನ್ನು ವಿಧಿಸಿದೆ. ಅಪರಾಧಿ ಒಂದು ವರ್ಷ ಕಾಲದ ಅಂಗನವಾಡಿಯಲ್ಲಿ ಸ್ವಯಂಸೇವಕನಾಡಿ ಕೆಲಸ ಮಾಡಬೇಕು ಎಂದು ಅದು ಸೂಚಿಸಿದೆ!

ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲ್ಲೂಕಿನ ಕರೋಪಾಡಿ ಗ್ರಾಮದ ೮೧ ವರ್ಷದ ಐತಪ್ಪ ನಾಯ್ಕರೇ ಈ ಶಿಕ್ಷೆಗೆ ಒಳಗಾದವರು. ೨೦೦೮ರಲ್ಲಿ ಅವರು ಇನ್ನೊಬ್ಬ ವ್ಯಕ್ತಿಗೆ ಹಲ್ಲೆ ಮಾಡಿದ್ದರು. ಅದರ ವಿಚಾರಣೆ ನಡೆಯುತ್ತಾ ಇತ್ತೀಚೆಗೆ ಅವರಿಗೆ ವಿಚಾರಣಾಧೀನ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಮತ್ತು ಮೂರು ದಿನ ಅಂಗನವಾಡಿಯಲ್ಲಿ ಸ್ವಯಂಸೇವೆ ಮಾಡುವಂತೆ ಸೂಚಿಸಿತ್ತು. ಅದನ್ನೀಗ ಬದಲಿಸಿ, ಅಂಗನವಾಡಿಯಲ್ಲಿ ಒಂದು ವರ್ಷ ಸೇವೆ ಮಾಡುವ ಶಿಕ್ಷೆಯಾಗಿ ಪರಿವರ್ತಿಸಲಾಗಿದೆ.

ಏನಿದು ಘಟನೆ, ಯಾಕಿಂಥ ಶಿಕ್ಷೆ?

ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ, ಅವರ ಜೀವಕ್ಕೆ ಅಪಾಯವಾಗುಂತೆ ಗಾಯಗೊಳಿಸಿದ್ದ ಆರೋಪದಲ್ಲಿ 2008ರಲ್ಲಿ ಐತಪ್ಪ ನಾಯ್ಕ ವಿರುದ್ಧ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ್ದ ಬಂಟ್ವಾಳದ ಹೆಚ್ಚುವರಿ ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಾಧೀಶರು ಐತಪ್ಪ ನಾಯ್ಕನನ್ನು ದೋಷಿ ಎಂದು ತೀರ್ಮಾನಿಸಿ, 2012ರ ಜುಲೈ 7ರಂದು ತೀರ್ಪು ನೀಡಿತ್ತಲ್ಲದೆ, ಆತನಿಗೆ ಮೂರು ದಿನ ಜೈಲು ಶಿಕ್ಷೆ ಹಾಗೂ 10 ಸಾವಿರ ರೂಪಾಯಿ ದಂಡ ವಿಧಿಸಿತ್ತು. ಇದರ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ್ದ ದಕ್ಷಿಣ ಕನ್ನಡದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಐತಪ್ಪ ನಾಯ್ಕನ ಶಿಕ್ಷೆಯ ಪ್ರಮಾಣವನ್ನು ಎರಡು ವರ್ಷಕ್ಕೆ ಹೆಚ್ಚಳ ಮಾಡಿ, ಐದು ಸಾವಿರ ರೂಪಾಯಿ ದಂಡ ವಿಧಿಸಿ, 2014ರ ಜುಲೈ 21ರಂದು ಆದೇಶಿಸಿತ್ತು.

ಈ ಆದೇಶವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಪ್ರಕರಣದಲ್ಲಿ ಅರ್ಜಿದಾರನ ವಯಸ್ಸನ್ನು ಪ್ರಮುಖವಾಗಿ ಪರಿಗಣಿಸಬೇಕಿದೆ. ಜತೆಗೆ, ಮಕ್ಕಳಿಲ್ಲದ ವೃದ್ದನೇ ತನ್ನ ಪತ್ನಿಯನ್ನೂ ನೋಡಿಕೊಳ್ಳಬೇಕಿದೆ. ಸಿವಿಲ್ ನ್ಯಾಯಾಲಯ ನೀಡಿದ್ದ ಮೂರು ದಿನ ಜೈಲು ಶಿಕ್ಷೆಯನ್ನು ಆತ ಈಗಾಗಲೇ ಅನುಭವಿಸಿದ್ದು, ದಂಡವನ್ನೂ ಪಾವತಿಸಿದ್ದಾರೆ. ತಪ್ಪು ಒಪ್ಪಿಕೊಂಡು ಸಾಮಾಜಿಕ ಸೇವೆ ಸಲ್ಲಿಸುವುದಕ್ಕೂ ಸಿದ್ಧರಿದ್ದಾರೆ. ಆದ್ದರಿಂದ, ಶಿಕ್ಷೆ ರದ್ದುಪಡಿಸಬೇಕು ಎಂದು ಐತಪ್ಪ ನಾಯ್ಕ ಪರ ವಕೀಲರು ಮನವಿ ಮಾಡಿದ್ದರು.

ಅರ್ಜಿದಾರನ ಆಧಾರ್ ಪ್ರತಿಯಲ್ಲಿರುವ ಜನ್ಮ ದಿನಾಂಕದಿಂದ ಅವರು 1942ರ ಏಪ್ರಿಲ್‌ 1ರಂದು ಜನಿಸಿದ್ದಾರೆ ಎನ್ನುವುದು ತಿಳಿದುಬಂದಿದೆ. ಅಪರಾಧಿ ತನ್ನ ತಪ್ಪನ್ನು ಒಪ್ಪಿಕೊಂಡು ಈಗಾಗಲೇ ಮೂರು ದಿನ ಸಾಧಾರಣ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಮಕ್ಕಳಿಲ್ಲದ 81 ವರ್ಷದ ಆತ ತನ್ನ ಪತ್ನಿಯನ್ನೂ ನೋಡಿಕೊಳ್ಳಬೇಕಿದೆ. ಸಾಮಾಜಿಕ ಸೇವೆ ಸಲ್ಲಿಸಲು ಸಿದ್ಧವಿರುವುದಾಗಿ ಆತನೇ ಒಪ್ಪಿಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನು ಪರಿಗಣಿಸಿ, ವಿಚಾರಣಾಧೀನ ನ್ಯಾಯಾಲಯ ನೀಡಿದ್ದ ಶಿಕ್ಷೆಯ ಪ್ರಮಾಣವನ್ನು ಮಾರ್ಪಾಡು ಮಾಡಲಾಗುತ್ತಿದೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.

ಐತಪ್ಪ ನಾಯ್ಕನಿಗೆ ಎರಡು ವರ್ಷ ಜೈಲು ಶಿಕ್ಷೆ ಹಾಗೂ ಐದು ಸಾವಿರ ರೂಪಾಯಿ ದಂಡ ವಿಧಿಸಿ 2014ರ ಜುಲೈ 21ರಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹೊರಡಿಸಿದ್ದ ಆದೇಶ ರದ್ದುಪಡಿಸಿದ ಹೈಕೋರ್ಟ್, ಶಿಕ್ಷೆಯ ಪ್ರಮಾಣವನ್ನು ಮೂರು ದಿನಕ್ಕೆ ಇಳಿಕೆ ಮಾಡಿದೆ. ಅರ್ಜಿದಾರ ಈಗಾಗಲೇ ಮೂರು ದಿನ ಶಿಕ್ಷೆ ಅನುಭವಿಸಿರುವ ಹಿನ್ನೆಲೆಯಲ್ಲಿ, ಶಿಕ್ಷೆ ಪ್ರಮಾಣ ಹೊಂದಾಣಿಕೆಯಾಗಲಿದೆ ಎಂದಿರುವ ನ್ಯಾಯಾಲಯವು ಅರ್ಜಿದಾರ ಒಪ್ಪಿಕೊಂಡಿರುವಂತೆ ಅಂಗನವಾಡಿ ಕೇಂದ್ರದಲ್ಲಿ ಒಂದು ವರ್ಷ ಸ್ವಯಂಸೇವಕನಾಗಿ ಕೆಲಸ ಮಾಡಬೇಕು ಎಂದು ಸೂಚನೆ ನೀಡಿದೆ.

ಇದನ್ನೂ ಓದಿ : Madras High court : ಮುಸ್ಲಿಂ ಮಹಿಳೆಯರು ವಿಚ್ಛೇದನ ಪಡೆಯುವುದಕ್ಕೆ ಫ್ಯಾಮಿಲಿ ಕೋರ್ಟ್‌ಗೇ ಬರಬೇಕು; ಮದ್ರಾಸ್‌ ಹೈಕೋರ್ಟ್‌

Exit mobile version