ಬೆಂಗಳೂರು: ತನ್ನ ಅಕ್ರಮ ಸಂಬಂಧಕ್ಕೆ (Extra marital relationship) ಅಡ್ಡಿಯಾದ ಎಂಬ ಕಾರಣಕ್ಕೆ ಗಂಡನ ಕೊರಳು ಸೀಳಿ ಕೊಲೆ (Husband killed by wife) ಮಾಡಿದ ಡಿಲ್ಲಿ ರಾಣಿಗೆ (Delhi Rani) ಆಕೆ ಮಹಿಳೆ ಎಂಬ ಕಾರಣಕ್ಕಾಗಿ ಜಾಮೀನು ನೀಡಲು ಸಾಧ್ಯವೇ ಎಂದು ಪ್ರಶ್ನಿಸಿದೆ ರಾಜ್ಯ ಹೈಕೋರ್ಟ್ (Karnataka High court). ಜಾಮೀನು ನೀಡುವ ವೇಳೆ ಆಕೆ ಮಹಿಳೆ ಎಂಬ ಕಾರಣವನ್ನು ಪರಿಗಣಿಸಲು ಸಾಧ್ಯವಿಲ್ಲ. ಅದೂ ಆಕೆ ಮಾಡಿರುವುದು ಕೊಲೆ ಎಂದಿದೆ ಹೈಕೋರ್ಟ್ (High court order).
ಆರ್. ಶಂಕರ್ ರೆಡ್ಡಿ ಮತ್ತು ಡಿಲ್ಲಿ ರಾಣಿ ಎಂಬವರಿಗೆ ಕೆಲವು ವರ್ಷದ ಹಿಂದೆ ಮದುವೆಯಾಗಿದ್ದು, ಅವರ ಸಂಸಾರದಲ್ಲಿ ಇಬ್ಬರು ಮಕ್ಕಳಿದ್ದಾರೆ. ಶಂಕರ್ ರೆಡ್ಡಿಗೆ ಬೆಂಗಳೂರಿನಲ್ಲಿ ಉದ್ಯೋಗವಿತ್ತು. ಹಾಗಾಗಿ ಅವರು ಇಲ್ಲಿದ್ದರು. ಡಿಲ್ಲಿ ರಾಣಿ ತನ್ನ ಇಬ್ಬರು ಮಕ್ಕಳೊಂದಿಗೆ ಆಂಧ್ರ ಪ್ರದೇಶದಲ್ಲಿದ್ದರು. ಗಂಡ ಬೆಂಗಳೂರಿನಲ್ಲಿದ್ದಾಗ ಡಿಲ್ಲಿ ರಾಣಿ ಆಂಧ್ರದಲ್ಲಿ ಒಂಟಿಯಾಗಿದ್ದಾಗ ಅಕ್ರಮ ಸಂಬಂಧವೊಂದನ್ನು ಬೆಳೆಸಿಕೊಂಡಿದ್ದರು.
ಈ ನಡುವೆ, 2022ರಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ನೀನು ಮಕ್ಕಳನ್ನು ಕರೆದುಕೊಂಡು ಬೆಂಗಳೂರಿಗೇ ಬಾ.. ಇಲ್ಲೇ ಮನೆ ಮಾಡೋಣ ಎಂದು ಶಂಕರ್ ರೆಡ್ಡಿ ಹೇಳಿದ್ದಾರೆ. ಇದು ಡೆಲ್ಲಿ ರಾಣಿಗೆ ಉರಿಯುವಂತೆ ಮಾಡಿದೆ. ಆದರೆ, ಮಕ್ಕಳ ವಿದ್ಯಾಭ್ಯಾಸದ ಕಾರಣವಾಗಿರುವುದರಿಂದ ಗಂಡನ ಮಾತು ಮೀರುವಂತಿರಲಿಲ್ಲ.
ಹಾಗೆ ಗಂಡನ ಕೋರಿಕೆಯಂತೆ, 2022ರ ಫೆಬ್ರವರಿ 24ರಂದು ಮಕ್ಕಳೊಂದಿಗೆ ಡಿಲ್ಲಿ ರಾಣಿ ಬೆಂಗಳೂರಿಗೆ ಬಂದಿದ್ದಳು. ಆಕೆ ಮತ್ತು ಶಂಕರ್ ರೆಡ್ಡಿ ಯಶವಂತಪುರದ ಮೋಹನ ಕುಮಾರ ನಗರದಲ್ಲಿ ಬಾಡಿಗೆ ಮನೆಯೊಂದರಲ್ಲಿ ಸಂಸಾರ ಆರಂಭಿಸಿದರು.
ಆದರೆ, ಆವತ್ತೇ ರಾತ್ರಿ (ಫೆ. 24) 11.30ರ ಸುಮಾರಿಗೆ ಶಂಕರ್ ರೆಡ್ಡಿ ಕೊಲೆಯಾಗಿ ಹೋಗಿದೆ. ಶಂಕರ ರೆಡ್ಡಿಯ ಕತ್ತನ್ನು ಚಾಕುವಿನಿಂದ ಕೊಯ್ದು ಕೊಲೆ ಮಾಡಿದ್ದರೆ, ಡಿಲ್ಲಿ ರಾಣಿಯ ಕೈಗೂ ಗಾಯಗಳಾಗಿತ್ತು. ಜತೆಗೆ ಆಕೆಯ ಮಾಂಗಲ್ಯ ಸರ ಮತ್ತು ಕಿವಿಯೋಲೆ ನಾಪತ್ತೆಯಾಗಿತ್ತು. ಬೆಂಗಳೂರಿಗೆ ಬಂದು ವಾಸ ಮಾಡಲು ಆರಂಭಿಸಿದ ದಿನವೇ ದುರಂತ ನಡೆದು ಹೋಗಿತ್ತು.
ಪೊಲೀಸರಿಗೆ ಫೋನ್ ಮಾಡಿದ ದಿಲ್ಲಿ ರಾಣಿ ಇದೊಂದು ದರೋಡೆ ಮತ್ತು ಕೊಲೆ ಎಂದು ದೂರು ನೀಡಿದ್ದಳು. ಆದರೆ, ಪೊಲೀಸರಿಗೆ ದರೋಡೆಯ ಯಾವ ಕುರುಹೂ ಸಿಕ್ಕದೆ ಇದ್ದಾಗ ಅವರು ಡಿಲ್ಲಿ ರಾಣಿಯನ್ನು ಚೆನ್ನಾಗಿ ವಿಚಾರಣೆ ನಡೆಸಿದ್ದಾರೆ. ಆಗ ಆಕೆಯೇ ತಾನು ಕೊಲೆ ಮಾಡಿದ್ದಾಗಿ, ಮಾಂಗಲ್ಯ ಸರ, ಕಿವಿಯೋಲೆ ಬಚ್ಚಿಟ್ಟಿದ್ದಾಗಿ ಒಪ್ಪಿಕೊಂಡಿದ್ದಳು. ಆವತ್ತಿನಿಂದ ಇವತ್ತಿನವರೆಗೆ ಆಕೆ ನ್ಯಾಯಾಂಗ ಬಂಧನದಲ್ಲಿದ್ದಾಳೆ.
ಈ ನಡುವೆ ಡಿಲ್ಲಿ ರಾಣಿ ಜಾಮೀನು ಕೋರಿ ಬೆಂಗಳೂರಿನ 63ನೇ ಹೆಚ್ಚುವರಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಆದರೆ ಅದು ಜಾಮೀನು ತಿರಸ್ಕರಿಸಿತ್ತು. ಹೀಗಾಗಿ ಆಕೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಇತ್ತೀಚೆಗೆ ಈ ಅರ್ಜಿ ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರ ನೇತೃತ್ವದ ಏಕಸದಸ್ಯ ಪೀಠದ ಮುಂದೆ ಬಂದಿತ್ತು. ಪೀಠವೂ ಆಕೆಯ ಅರ್ಜಿಯನ್ನು ತಿರಸ್ಕರಿಸಿದೆ ಮತ್ತು ಮಹಿಳೆ ಎಂಬ ಕಾರಣಕ್ಕೆ ಜಾಮೀನು ನೀಡಲಾಗದು ಎಂದಿದೆ.
ಜಾಮೀನು ನಿರಾಕರಣೆಗೆ ಕೋರ್ಟ್ ಕೊಟ್ಟ ಕಾರಣ
- ಡಿಲ್ಲಿ ರಾಣಿ ಮಹಿಳೆಯಾಗಿದ್ದು, ಜಾಮೀನು ನೀಡಬೇಕು ಎಂಬ ಆಕೆಯ ಪರ ವಕೀಲರ ವಾದ ಒಪ್ಪಲಾಗದು. “ಡಿಲ್ಲಿ ರಾಣಿ ಸಹ ಘಟನೆಯಲ್ಲಿ ಗಾಯಗೊಂಡಿರುವ ಕಾರಣ ಆಕೆ ಅಮಾಯಕಳಾಗಿದ್ದಾರೆ ಎಂಬ ವಾದ ಸರಿಯಲ್ಲ.
- ಅರ್ಜಿದಾರೆ ಹಾಗೂ ಆಕೆಯ ಅಪ್ರಾಪ್ತ ಮಕ್ಕಳಿಬ್ಬರು ನೆಲೆಸಿದ್ದ ಮನೆಯಲ್ಲಿ ಪತಿ ಶಂಕರ ರೆಡ್ಡಿ ಕೊಲೆಯಾಗಿದ್ದಾರೆ. ಪ್ರಕರಣದ ಎರಡನೇ ಆರೋಪಿನೊಂದಿಗೆ (ಪ್ರಿಯಕರ) ಡಿಲ್ಲಿರಾಣಿ ಅಕ್ರಮ ಸಂಬಂಧ ಹೊಂದಿರುವುದನ್ನು ಘಟನೆಯ ಮೂವರ ಸಾಕ್ಷಿಗಳ ಹೇಳಿಕೆ ಸ್ಪಷ್ಟಪಡಿಸುತ್ತದೆ.
- ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಕಾರಣಕ್ಕೆ ಪತಿ ಶಂಕರ ರೆಡ್ಡಿಯನ್ನು ಕೊಲೆ ಮಾಡಲಾಗಿದೆ.
- ಡಿಲ್ಲಿ ರಾಣಿ ತನ್ನ ಕೈಗಳಿಗೆ ಗಾಯ ಮಾಡಿಕೊಂಡು, ತನಗೆ ಸೇರಿದ ಮಾಂಗಲ್ಯ ಸರ ಹಾಗೂ ಕಿವಿಯೋಲೆಯನ್ನು ಬಚ್ಚಿಟ್ಟಿದಾರೆ. ಆ ಮೂಲಕ ತನಿಖೆಯ ದಿಕ್ಕು ತಪ್ಪಿಸಲು ಪ್ರಯತ್ನಿಸಿದ್ದಾರೆ.
- ಮಾಂಗಲ್ಯ ಸರ ಮತ್ತು ಕಿವಿಯೋಲೆ, ಡಿಲ್ಲಿ ರಾಣಿಯ ರಕ್ತದ ಕಲೆಗಳಿದ್ದ ನೈಟಿಯನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ.
- ಘಟನೆ ನಡೆದ ರಾತ್ರಿ ಶಂಕರರೆಡ್ಡಿ ಮತ್ತು ಅರ್ಜಿದಾರೆ ಮಧ್ಯೆ ಜಗಳವಾಗಿದೆ. ನಿದ್ದೆಯಿಂದ ಎಚ್ಚರಗೊಂಡು ನೋಡಿದಾಗ ತಂದೆ ರಕ್ತದ ಮಡುವಿನಲ್ಲಿ ಬಿದಿದ್ದರು ಎಂಬುದಾಗಿ ಡಿಲ್ಲಿ ರಾಣಿಯ ಅಪ್ರಾಪ್ತ ಪುತ್ರ ಸಹ ಸಾಕ್ಷ್ಯ ನುಡಿದಿದ್ದಾನೆ.
- ಮೇಲ್ನೋಟಕ್ಕೆ ಡಿಲ್ಲಿರಾಣಿ ವಿರುದ್ಧ ಸಾಕ್ಷ್ಯಗಳಿವೆ. ಅಪರಾಧ ಕೃತ್ಯ ಗಂಭೀರ ಸ್ವರೂಪದ್ದಾಗಿದ್ದು, ಆರೋಪಿ ಮಹಿಳೆ ಎಂಬ ಮಾತ್ರಕ್ಕೆ ಜಾಮೀನು ನೀಡಲಾಗದು.